ಗುರುವಾರ, ಮಾರ್ಚ್ 8, 2012

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಪ್ರತಿ ವರ್ಷವೂ ಜಗತ್ತಿನಾದ್ಯಂತ ಮಾರ್ಚಿ ೮ ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.  ಈ ವರ್ಷದ ಘೊಷವಾಕ್ಯ "ಗ್ರಾಮೀಣ ಮಹಿಳೆಯರ ಸಬಲೀಕರಣ - ಹಸಿವು ಮತ್ತು ಬಡತನ ನಿವಾರಣೆ".  ಇದರ ಪ್ರಯುಕ್ತ ಅರಸೀಕೆರೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸ್ವಂತ ಉದ್ಯಮಗಳನ್ನು ನಡೆಸುತ್ತಾ ತಮ್ಮನ್ನಷ್ಟೇ ಅಲ್ಲದೆ, ಗ್ರಾಮೀಣ ಜನತೆಗೆ ಉದ್ಯೋಗದ ಅವಕಾಶಗಳನ್ನು ನೀಡಿ ಅವರುಗಳನ್ನೂ ಸಹ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುತ್ತಿರುವ ಕೆಲವು ಮಹಿಳೆಯರ ಕುರಿತಾದ ವಿಶೇಷ ಲೇಖನ.



ಶ್ರೀಮತಿ. ರಾಜಲಕ್ಷ್ಮಿ ವೆಂಕಟವರದ : ಅರಸೀಕೆರೆ ಕಲ್ಪವೃಕ್ಷದ ಬೀಡು, ತಾಲ್ಲೂಕಿನ ಪ್ರಮುಖ ಬೆಳೆ ತೆಂಗು, ಇಂತಹ ತೆಂಗಿನ ಉತ್ಪನ್ನವಾದ ಕೊಬ್ಬರಿ ಚಿಪ್ಪನ್ನು ಬಳಸಿ ಉದ್ಯಮ ನಡೆಸುತ್ತಿರುವ ೫೬ ವರ್ಷದ ಮಹಿಳೆ ಶ್ರೀಮತಿ. ರಾಜಲಕ್ಷ್ಮಿ ವೆಂಕಟವರದ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ (ಫಿಲಾಸಫಿ)ಯಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ. ಅರಸೀಕೆರೆ ತಾಲ್ಲೂಕು ಬಾಣಾವರ ಹೋಬಳಿಯ ಭೈರಗೊಂಡನಹಳ್ಳಿಯಲ್ಲಿ ಸಹಾರಾ ಇಂಡಸ್ಟ್ರೀಸ್ ಹೆಸರಿನಲ್ಲಿ ೧೯೮೯ ರಲ್ಲಿ ಪ್ರಾರಂಭಗೊಂಡ ಇವರ ಕೈಗಾರಿಕಾ ಘಟಕದಲ್ಲಿ, ಕೊಬ್ಬರಿ ಚಿಪ್ಪನ್ನು ಪುಡಿಮಾಡಿ ವಿವಿಧ ಹಂತಗಳಾಗಿ ವಿಂಗಡಿಸಿ ಗ್ರಾಹಕರ ಅಗತ್ಯತೆಗೆ ತಕ್ಕಂತೆ ಪೂರೈಸುತ್ತಾರೆ.  ಇಲ್ಲಿ ಉತ್ಪಾದನೆಗೊಂಡ ಚಿಪ್ಪಿನ ಪುಡಿಯನ್ನು ಮುಂಬೈ, ದೆಹಲಿ, ಕಲ್ಕತ್ತಾ ಹಾಗೂ ಇತರೆ ಸ್ಥಳಗಳಿಗೆ ಪೂರೈಸಲಾಗುತ್ತದೆ. ವಾರ್ಷಿಕ ಸುಮಾರು ೩೫೦ ಟನ್ ಚಿಪ್ಪಿನ ಪುಡಿಯನ್ನು ಉತ್ಪಾದಿಸಲಾಗುತ್ತಿದೆ.  ಹಾಲಿ ೭ ಜನ ಮಹಿಳಾ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.  ಕಳೆದ ೨೩ ವರ್ಷಗಳಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ, ಇವರಲ್ಲಿ ಎಲ್ಲರೂ ಮಹಿಳಾ ಕಾರ್ಮಿಕರೇ ಎಂಬುದು ವಿಶೇಷ. ೧೯೯೬ ರಲ್ಲಿ "ವರ್ಷದ ಮಹಿಳಾ ಉದ್ಯಮಿ" ಪ್ರಶಸ್ತಿಯನ್ನು ಅಂದಿನ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರಿಂದ ಪಡೆದಿರುತ್ತಾರೆ.  ಪತಿ ಶ್ರೀ.ವೆಂಕಟವರದ, ಒಬ್ಬ ಪುತ್ರ ಹಾಗೂ ಒಬ್ಬಳು ಪುತ್ರಿಯನ್ನು ಹೊಂದಿರುವ ರಾಜಲಕ್ಷ್ಮಿಯವರು  "ಪ್ರತಿಯೊಬ್ಬ ಮಹಿಳೆಯೂ ತನಗೆ ದೊರೆತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು, ಸ್ವತಂತ್ರವಾಗಿ ನಿರ್ಧಾರವನ್ನು ತೆಗೆದುಕೊಳ್ಳುವಂತವಳಾಗಬೇಕು, ಬದುಕಿನಲ್ಲಿ ಸಂಭವಿಸಬಹುದಾದಂತಹ ಅಡೆತಡೆಗಳಿಗೆ ಅಂಜದೇ ಮುನ್ನುಗ್ಗಬೇಕು" ಎಂದು ಮಹಿಳೆಯರಿಗೆ ಸಂದೇಶ ನೀಡಿದರು.

ಶ್ರೀಮತಿ ಲೋಲ ಪ್ರಸಾದ್


ಅರಸೀಕೆರೆ ತಾಲ್ಲೂಕು ಗುಂಡ್ಕಾನಹಳ್ಳಿಯಲ್ಲಿರುವ ರೇಣು ಕಾಯರ್ ಪ್ರಾಡಕ್ಟ್ ಒಡತಿಯಾದ ೪೮ ವರ್ಷದ ಶ್ರೀಮತಿ ಲೋಲ ಪ್ರಸಾದ್, ೧೯೮೭ ರಲ್ಲಿ ಇವರ ಪತಿ ರೇಣುಕಾಪ್ರಸಾದ್ ರವರು ಈ ಉದ್ಯಮವನ್ನು ಪ್ರಾರಂಭಿಸಿದರು. ೨೦೦೦ನೇ ಇಸವಿಯಲ್ಲಿ ಪತಿಯ ಅಕಾಲಿಕ ನಿಧನದಿಂದ ಈ ಸಂಸ್ಥೆಯನ್ನು ನಡೆಸಬೇಕಾದ ದೊಡ್ಡ ಜವಾಬ್ದಾರಿಯು ಇವರ ಹೆಗಲೇರಿತು.  ಧೃತಿಗೆಡದೇ, ಅಚಲ ವಿಶ್ವಾಸದಿಂದ ಉದ್ಯಮದಲ್ಲುಂಟಾಗುವ ಅಡೆತಡೆಗಳನ್ನು ಮೆಟ್ಟಿನಿಂತು ಯಶಸ್ವಿಯಾಗಿ ಕೈಗಾರಿಕಾ ಸಂಸ್ಥೆಯನ್ನು ಮುನ್ನೆಡೆಸುತ್ತಿರುವ ಶ್ರೀಮತಿ ಲೋಲಾ ಒಬ್ಬ ಆದರ್ಶ ಮಹಿಳೆ.  ವಾರ್ಷಿಕ ಸುಮಾರು ೨೩೦ ಟನ್ ಗಳಷ್ಟು ತೆಂಗಿನ ನಾರಿನ ಉತ್ಪನ್ನಗಳನ್ನು ತಯಾರಿಸುವ ಇವರ ಸಂಸ್ಥೆಯಲ್ಲಿ ಸುಮಾರು ೬ ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.  ಬೆಂಗಳೂರು ಹಾಗೂ ಇತರೆ ಪ್ರದೇಶದಲ್ಲಿರುವ ಕೈಗಾರಿಕೆಗಳಿಗೆ ಇಲ್ಲಿಂದ ನಾರಿನ ಪದಾರ್ಥಗಳು ರಪ್ತಾಗುತ್ತವೆ.  ಇಬ್ಬರು ಮಕ್ಕಳ ವಿದ್ಯಾಭ್ಯಾಸ, ಗೃಹ ನಿರ್ವಹಣೆ, ವ್ಯಾಪಾರ ಎಲ್ಲವುಗಳನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಲೋಲಾಪ್ರಸಾದ್ ರವರು "ಧೈರ್ಯ, ಆತ್ಮವಿಶ್ವಾಸ, ಗುರಿ ಹಾಗೂ ಇಚ್ಚಾಶಕ್ತಿ ಇದ್ದರೆ ಎಂತಹ ಸಂದರ್ಭದಲ್ಲೂ ಮಹಿಳೆಯು ಸಬಲೆಯಾಗಿರಬಹುದು" ಎನ್ನುತ್ತಾರೆ.

ಶ್ರೀಮತಿ.ಜ್ಞಾನೇಶ್ವರಿ ಬಾಯಿ
ಅರಸೀಕೆರೆ ತಾಲ್ಲೂಕು ಬಾಣಾವರ ಗ್ರಾಮದಲ್ಲಿರುವ ಅಂಬಿಕಾ ಗಾರ್ಮೆಂಟ್ಸ್ ಮಾಲೀಕರಾದ ೬೦ ವರ್ಷದ ಶ್ರೀಮತಿ.ಜ್ಞಾನೇಶ್ವರಿ ಬಾಯಿ.  ೧೯೯೭ ರಲ್ಲಿ ಪ್ರಾರಂಭಗೊಂಡ ಇವರ ಉದ್ಯಮದಲ್ಲಿ ಒಳ ಉಡುಪುಗಳನ್ನು ತಯಾರಿಸಲಾಗುತ್ತಿದೆ.  ವಾರ್ಷಿಕ ಸುಮಾರು ೨೫ ಲಕ್ಷ ರೂಪಾಯಿ ವಹಿವಾಟು ನಡೆಸುವ ಇವರ ಸಂಸ್ಥೆಯಲ್ಲಿ, ೪೦ ಜನ ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ಶಿವಮೊಗ್ಗ ಹಾಗೂ ಬೆಳಗಾವಿಗೆ ಇಲ್ಲಿ ತಯಾರದ ಉಡುಪುಗಳನ್ನು ರಪ್ತುಮಾಡಲಾಗುತ್ತಿದೆ.  ಬಿ.ಜೆ.ಪಿ ಹಾಸನ ಜಿಲ್ಲಾ ಉಪಾಧ್ಯಕ್ಷೆಯಾಗಿರುವ ಶ್ರೀಮತಿ ಜ್ಞಾನೇಶ್ವರಿ ಬಾಯಿ "ಎಂತಹ ಒತ್ತಡ ಇದ್ದರೂ ಮಹಿಳೆಯು ಆರ್ಥಿಕ ಸಬಲತೆಯನ್ನು ಹೊಂದಬೇಕು, ಸಮಾಜದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು" ಎಂದು ನುಡಿದರು.
Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....