ಆರೋಗ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಆರೋಗ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜನವರಿ 28, 2018

ಅರಸೀಕೆರೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಮಾರಕ ರೋಗವಾದ ಪೋಲಿಯೋ ನಿರ್ಮೂಲನೆಗಾಗಿ ಭಾರತ ದೇಶದಾದ್ಯಂತ ಇಂದು ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಪಲ್ಸ್ ಪೋಲಿಯೋ ಲಸಿಕೆಯನ್ನು ಮಗುವಿಗೆ ಹಾಕಿಸುವುದರಿಂದ, ಮಗುವಿನ ದೇಹದಲ್ಲಿ ಪೋಲಿಯೋ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಬರುತ್ತದೆ.  ಈ ರೋಗವು ಸಂಪೂರ್ಣ ನಿರ್ಮೂಲನೆಯಾಗಬೇಕಿದ್ದರೆ, ದೇಶದ ಎಲ್ಲಾ ಮಕ್ಕಳಿಗೂ ಒಂದೇ ದಿನದಲ್ಲಿ ಈ ಲಸಿಕೆಯನ್ನು ನೀಡಬೇಕಿರುತ್ತದೆ.  ಇಲ್ಲವಾದಲ್ಲಿ, ಲಸಿಕೆ ಹಾಕಿಸಿಕೊಳ್ಳದ ಮಗುವಿನಲ್ಲಿ ಮುಂದಿನ ದಿನಗಳಲ್ಲಿ ಈ ಪೋಲಿಯೋ ವೈರಸ್ ಅಭಿವೃದ್ಧಿ ಹೊಂದಿ, ಆ ಮಗುವಿನಿಂದಾಗಿ ಸುತ್ತಮುತ್ತಲ ಊರಿನ ಎಲ್ಲಾ ಮಕ್ಕಳೂ ಪೋಲಿಯೋ ರೋಗದ ದಾಳಿಗೆ ಒಳಗಾಗುವ ಅಪಾಯ / ಸಾಧ್ಯತೆಗಳು ಇರುತ್ತವೆ. ಆದ ಕಾರಣ, ಈ ಹಿಂದೇ ಎಷ್ಟೇಬಾರಿ ಲಸಿಕೆ ಹಾಕಿಸಿದ್ದರೂ ಇಂದು ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆ ಕಡ್ಡಾಯವಾಗಿರುತ್ತದೆ.

ಅರಸೀಕೆರೆ ಪಟ್ಟಣದಲ್ಲಿ ಒಟ್ಟು 20 ಪೋಲಿಯೋ ಲಸಿಕಾ ಬೂತ್ ಗಳನ್ನು ಹಾಗೂ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಒಟ್ಟು 129 ಬೂತ್ ಗಳನ್ನು ತೆರೆಯಾಗಿದೆ. ತಾಲ್ಲೂಕಿನಾದ್ಯಂತ 21,250 ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ.

ಇಂದು ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯ ಬಂದೂರು ಮತ್ತು ದೇಶಾಣಿ ಗ್ರಾಮಗಳಲ್ಲಿ ಖಾಸಗಿ / ಧಾರ್ಮಿಕ ಕಾರ್ಯಕ್ರಮ (ಜಾತ್ರೆ) ನಡೆಯುತ್ತಿರುವುದರಿಂದ, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಆಗಮಿಸಿದ್ದು, ಈ ಗ್ರಾಮಗಳಲ್ಲಿ ಪೋಲಿಯೋ ಲಸಿಕೆಯು ನಿರೀಕ್ಷೆಗಿಂತ ಹೆಚ್ಚಾಗಿ ಬೇಕಾಗಿದ್ದ ಹಿನ್ನೆಲೆಯಲ್ಲಿ,  ಲಸಿಕೆಯನ್ನು ಹಾಸನದ ಜಿಲ್ಲಾಸ್ಪತ್ರೆಯಿಂದ ತುರ್ತಾಗಿ ಸರಬರಾಜು ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಅರಸೀಕೆರೆ ಪಟ್ಟಣದ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ವಿಶೇಷ ಮೊಬೈಲ್ ಬೂತ್ ತೆರೆಯಲಾಗಿದ್ದು, ಪ್ರಯಾಣದಲ್ಲಿರುವ ನೂರಾರು ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುತ್ತಿದೆ.  ತಾಲ್ಲೂಕಿನಾದ್ಯಂತ ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಿಸುತ್ತಿದ್ದಾರೆ.

ಈ ಮಧ್ಯೆ, ಅರಸೀಕೆರೆ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಪೋಲಿಯೋ ಲಸಿಕೆಯನ್ನು ಹಾಕಿಸಿಕೊಳ್ಳಲು ಪ್ರತಿರೋಧ ತೋರಿದ ಘಟನೆಯೂ ಜರುಗಿತು.

ಇಂದು ಬೆಳಿಗೆ 10 ಗಂಟೆಯ ಸಮಯದಲ್ಲಿ, ಅರಸೀಕೆರೆ ರೈಲು ನಿಲ್ದಾಣಕ್ಕೆ ಪುಟ್ಟ ಮಗುವಿನೊಂದಿಗೆ ಆಗಮಿಸಿದ್ದ ವೃದ್ಧ ದಂಪತಿಗಳು, ತಮ್ಮ ಮಗುವಿಗೆ ಪೋಲಿಯೋ ಲಸಿಕೆಯನ್ನು ಹಾಕಿಸಲು ಪ್ರತಿರೋಧ ತೋರಿದರು.  ಅಲ್ಲಿದ್ದ ಆರೋಗ್ಯ ಸಹಾಯಕಿ ಸಾಕಷ್ಟು ಕೇಳಿಕೊಂಡರೂ ಸಹ, ಆ ವೃದ್ಧ ದಂಪತಿಗಳು ಮಗುವಿಗೆ ಪೋಲಿಯೋ ಹನಿ ಹಾಕಿಸದೇ ದೊಡ್ಡ ಗಲಾಟೆಯನ್ನೇ ಮಾಡಿದರು.  ರೈಲ್ವೆ ಪೊಲೀಸರೂ ತಿಳಿಹೇಳಿದರೂ ಕೂಡ ಅವರ ಮಾತಿಗೆ ಒಪ್ಪದೇ, ಕೂಗಾಡಿಕೊಂಡು ಮಗುವನ್ನು ಕರೆದುಕೊಂಡು ರೈಲುನಿಲ್ದಾಣದಿಂದ ಹೊರಕ್ಕೆ ಹೋದರು. ನಂತರ ಅವರನ್ನು ವಿಚಾರಿಸಿದಾಗ, ಅರಸೀಕೆರೆ ತಾಲ್ಲೂಕಿನ ಮುರುಂಡಿ ಸಿದ್ದರಹಟ್ಟಿ ಗ್ರಾಮದವರೆಂದು, ಬೇರೆ ಊರಿಗೆ ಹೋಗಿದ್ದವರು ಈಗ ವಾಪಸ್ಸ್ ತಮ್ಮ ಹಳ್ಳಿಗೆ ಹೋಗುತ್ತಿರುವುದಾಗಿ ತಿಳಿಸಿದರು. ಅಲ್ಲಿದ್ದ ಆರೋಗ್ಯ ಸಹಾಯಕಿಯು ಮುರುಂಡಿ ಸಿದ್ದರಹಟ್ಟಿಯಲ್ಲಿ ಇಂದು ಕರ್ತವ್ಯಕ್ಕೆ ನಿರತರಾಗಿರುವವರಿಗೆ ಕರೆ ಮಾಡಿ, ಈ ಮಗು ಗ್ರಾಮಕ್ಕೆ ಬಂದಾಗ ಲಸಿಕೆ ಹಾಕುವಂತೆ ತಿಳಿಸಿರುತ್ತಾರೆ.








Share:

ಶುಕ್ರವಾರ, ಸೆಪ್ಟೆಂಬರ್ 1, 2017

ಅರಸೀಕೆರೆ ನಗರಸಭೆಗೆ ಪ್ರಶಸ್ತಿಯ ಗರಿ

Arsikere


ರಾಜ್ಯದ ಒಟ್ಟು 57 ನಗರಸಭೆಗಳ (CMC) ಪೈಕಿ ಅರಸೀಕೆರೆ ಪಟ್ಟಣದ ನಗರಸಭೆಗೆ “ಬಯಲು ಶೌಚ ಮುಕ್ತ ನಗರ” ಎಂಬ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡಿದೆ.  ನೆನ್ನೆ 31-08-2017 ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿಪತ್ರವನ್ನು ನೀಡಿದರು.  ಅರಸೀಕೆರೆ ನಗರಸಭೆಯ ಉಪಾಧ್ಯಕ್ಷರಾದ ಪಾರ್ಥಸಾರಥಿ ಮತ್ತು ಆಯುಕ್ತರಾದ ಪರಮೇಶ್ ರವರು ಮುಖ್ಯಮಂತ್ರಿಗಳಿಂದ ಪ್ರಶಸ್ತಿಪತ್ರ ಸ್ವೀಕರಿಸಿದರು.




Share:

ಶುಕ್ರವಾರ, ಏಪ್ರಿಲ್ 7, 2017

ವಿಶ್ವ ಆರೋಗ್ಯ ದಿನಾಚರಣೆ

ಅರಸೀಕೆರೆ ಪಟ್ಟಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ  ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಆಚರಿಸಲಾಯಿತು.  ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಜನ ಜಾಗೃತಿ ಜಾಥಾವನ್ನು ತಾ.ಪಂ ಅಧ್ಯಕ್ಷೆ ಮಂಜುಳಾ ಬಾಯಿ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು. ಜಾಥಾ ಬಿ.ಎಚ್ ರಸ್ತೆ ಮೂಲಕ ಸಾಗಿ ಅರಸೀಕೆರೆಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಪ್ಪ, ಹಿರಿಯ ವೈದ್ಯರಾದ ಡಾ. ಕೆ.ಎಲ್.ಚಂದ್ರಶೇಖರ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.

ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಸಂಸ್ಥಾಪನಾ ದಿನದ ನೆನಪಿಗಾಗಿ, ಪ್ರತಿ ವರ್ಷ ಏಪ್ರಿಲ್ 7 ರಂದು “ವಿಶ್ವ ಆರೋಗ್ಯ ದಿನಾಚರಣೆ”ಯನ್ನು ಆಚರಿಸಲಾಗುತ್ತದೆ. ಜಗತ್ತಿನ ಹಲವೆಡೆ ಇಂದು ಸಭೆ, ಸಮಾರಂಭ, ಜಾಗೃತಿ ಜಾತ ಇತ್ಯಾದಿಗಳು ನಡೆಯುತ್ತವೆ.  ಈ ವರ್ಷದ ಘೋಷಣಾ ವಾಕ್ಯ “Depression : let’s talk”, “ಖಿನ್ನತೆ : ಮಾತನಾಡೋಣ” ಎಂದು.

ಖಿನ್ನತೆ :-
ಕೆಲವು ಬೇಸರದ ಘಟನೆಗಳು ನಡೆದಾಗ ದುಃಖವಾಗುವುದು ಸಹಜ. ಆದರೆ, ಈ ಭಾವನೆ ತುಂಬಾ ದಿನಗಳವರೆಗೆ ಇದ್ದರೆ (ಎರಡು ವಾರಗಳಿಗಿಂತ ಹೆಚ್ಚು) ಅಥವಾ ಮತ್ತೆ ಮತ್ತೆ ಕಾಣಿಸಿಕೊಂಡು ದೈನಂದಿನ ಜೀವನ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಇದು ಕ್ಲಿನಿಕಲ್ ಖಿನ್ನತೆಯ (ಡಿಪ್ರೆಷನ್) ಚಿಹ್ನೆಯಾಗಿರುತ್ತದೆ. ಇದಕ್ಕೆ ಚಿಕಿತ್ಸೆ ಅಗತ್ಯ.
ಖಿನ್ನತೆಯು ವ್ಯಕ್ತಿಯ ಯೋಚನೆ, ಭಾವನೆ, ವರ್ತನೆ, ಸಂಬಂಧಗಳು, ಕೆಲಸ ಮಾಡುವ ಸಾಮರ್ಥ್ಯ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ತೀವ್ರವಾದ ಖಿನ್ನತೆ ಇರುವ ವ್ಯಕ್ತಿ ಆತ್ಮಹತ್ಯೆಯ ಪ್ರಯತ್ನ ಕೂಡ ಮಾಡಬಹುದು.
ಖಿನ್ನತೆಯ ಕೆಲವು ಲಕ್ಷಣಗಳು ಹೀಗಿವೆ:

    ಹೆಚ್ಚಿನ ಸಮಯದಲ್ಲಿ ದುಃಖ ಅಥವಾ ಬೇಸರದಲ್ಲಿರುವುದು.
    ದೈನಂದಿನ ಚಟುವಟಿಕೆಗಳನ್ನು ನಿಭಾಯಿಸಲು ಕಷ್ಟ ಪಡುವುದು ಮತ್ತು ಅವುಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು. ದಿನವಿಡೀ ಸುಸ್ತಾದಂತೆ ಅನಿಸುವುದು. ಮುಂಚೆ ಇಷ್ಟ ಪಟ್ಟು ಮಾಡುತ್ತಿದ್ದ ಕೆಲಸಗಳಲ್ಲಿ ಈಗ ನಿರಾಸಕ್ತಿಯ ಭಾವ.
    ಏಕಾಗ್ರತೆಯ ಕೊರತೆ, ಯೋಚಿಸಲು ಅಥವಾ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುವುದು (ಉದಾ: ಹವ್ಯಾಸ, ಅಧ್ಯಯನದ ಮೇಲೆ ಗಮನ ನೀಡಲು ಕಷ್ಟ, ಇತ್ಯಾದಿ).
    ಆತ್ಮವಿಶ್ವಾಸ ಮತ್ತು ಆತ್ಮಗೌರವ ಕಡಿಮೆಯಾಗುವುದು.
    ತನ್ನ ಬಗ್ಗೆ, ಜೀವನದ ಬಗ್ಗೆ ಹಾಗೂ ಭವಿಷ್ಯದ ಬಗ್ಗೆ ಋಣಾತ್ಮಕ ಭಾವನೆ.
    ಹಸಿವಾಗದಿರುವುದು ಅಥವಾ ಅತಿಯಾಗಿ ತಿನ್ನುವುದು.
    ಹಿಂದಿನ ಸೋಲುಗಳಿಗೆ ತನ್ನನ್ನೇ ದೂಷಿಸಿಕೊಳ್ಳುವುದು, ಅಪರಾಧಿ ಭಾವ; ತಾನು ಅನುಪಯುಕ್ತ ಎಂಬ ಭಾವನೆ.
    ಓದು, ಕೆಲಸ, ಮತ್ತು ಇತರ ಕಾರ್ಯಗಳಲ್ಲಿ ನಿರಾಸಕ್ತಿ.
    ಸರಿಯಾಗಿ ನಿದ್ರೆ ಬಾರದಿರುವುದು ಅಥವಾ ನಿದ್ರೆ ಮಾಡಲು ಸಾಧ್ಯವೇ ಆಗದಿರುವುದು.
    ತಲೆ ನೋವು, ಕತ್ತು ನೋವು, ಸೆಳೆತ ಹೀಗೆ ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು
    ಆತ್ಮಹತ್ಯೆ ಅಥವಾ ಸ್ವಯಂ ಹಾನಿಯ ಬಗ್ಗೆ ಯೋಚಿಸುವುದು

ಖಿನ್ನತೆಗೆ ಚಿಕಿತ್ಸೆ :
ಖಿನ್ನತೆಯು ಹೆಚ್ಚಾಗಿ ಮನಸ್ಸಿನಲ್ಲೇ ಅಡಗಿರುತ್ತದೆ. ಜನರು ಈ ಬಗ್ಗೆ ಮುಕ್ತವಾಗಿ ಮಾತನಾಡಲು ಹೆದರುತ್ತಾರೆ. ಸಾಮಾಜದಲ್ಲಿ ಅಪಹಾಸ್ಯಕ್ಕೀಡಾಗಬಹುದು, ದುರ್ಬಲ ಎನಿಸಿಕೊಳ್ಳಬಹುದು ಎಂಬ ಭಯದಿಂದ ನಗೆ ಬೀರಿ ದುಃಖವನ್ನು ಮುಚ್ಚಿಡುತ್ತಾರೆ. ಸಮಾಜದಲ್ಲಿ ಬೇರೂರಿರುವ ಕಳಂಕದಿಂದ ಜನರು ಮನೋವೈದ್ಯರ ಸಹಾಯ ಕೇಳಲು ಹಿಂಜರಿಯುತ್ತಾರೆ.  ಖಾಯಿಲೆಯ ಬಗ್ಗೆ ತಿಳುವಳಿಕೆ ಇಲ್ಲದ ಕಾರಣ, ಖಿನ್ನತೆಯ ಲಕ್ಷಣಗಳನ್ನು ಗುರುತಿಸಲಾಗದೇ ಧೀರ್ಘ ಕಾಲ ತಾವೂ ಬಳಲುತ್ತಾರೆ ಮತ್ತು ಕುಟುಂಬದವರು ಸಹ ಯಾತನೆ ಪಡುತ್ತಾರೆ.
ಸ್ವಲ್ಪ ಮಟ್ಟದ ಖಿನ್ನತೆಗೆ ಆಪ್ತಸಮಾಲೋಚನೆ ಅಥವಾ ಇತರ ಥೆರಪಿಗಳು ಸಾಕಾಗುತ್ತವೆ. ತೀವ್ರವಾದ ಖಿನ್ನತೆಗೆ ಮಾತ್ರ ಥೆರಪಿಯೊಂದಿಗೆ ಔಷಧಗಳ ಅಗತ್ಯವಿರುತ್ತದೆ.
ಖಿನ್ನತೆಯ ಚಿಕಿತ್ಸೆಯಲ್ಲಿ ಹಲವು ವಿಧಾನಗಳಿವೆ. ಖಿನ್ನತೆಯ ತೀವ್ರತೆ, ವ್ಯಕ್ತಿಯ ಆರೋಗ್ಯದ ಸ್ಥಿತಿ ಮತ್ತು ಚೇತರಿಸಿಕೊಳ್ಳಲು ಅವರಲ್ಲಿರುವ ಚೈತನ್ಯದ ಆಧಾರದ ಮೇಲೆ ವೈದ್ಯರು ಚಿಕಿತ್ಸೆಯ ನಿರ್ಧಾರ ಮಾಡುತ್ತಾರೆ.
ಖಿನ್ನತೆಯ ಚಿಕಿತ್ಸೆಯಲ್ಲಿ ವಿವಿಧ ಮನೋವೈಜ್ಞಾನಿಕ ಥೆರಪಿಗಳು ಪರಿಣಾಮಕಾರಿ ಎಂದು ಗುರುತಿಸಲಾಗಿದೆ. ಸಕಾರಾತ್ಮಕ ಚಿಂತನೆಗಳು ಮತ್ತು ಸಮಸ್ಯೆಯನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ರಿಲಾಕ್ಸೇಶನ್ ವಿಧಾನಗಳನ್ನು ಕಲಿಸಲಾಗುತ್ತದೆ. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ, ಸಪೋರ್ಟಿವ್ ಥೆರಪಿ, ಮೈಂಡ್ಫುಲ್ನೆಸ್ ಬೇಸ್ಡ್ ಕಾಗ್ನಿಟಿವ್ ಥೆರಪಿ ಮತ್ತು ಇತರ ವಿಧಾನಗಳನ್ನು ಬಳಸುತ್ತಾರೆ.
ತೀವ್ರವಾದ ಖಿನ್ನತೆಗೆ ವೈದ್ಯರು ಔಷಧಿಗಳನ್ನು (antidepressants) ಶಿಫಾರಸು ಮಾಡುತ್ತಾರೆ.
ಮಧುಮೇಹ, ಥೈರಾಯ್ಡ್ ಅಥವಾ ಇತರ ಖಾಯಿಲೆಗಳೊಂದಿಗೆ ಬಂದಿರುವ ಖಿನ್ನತೆಯಾದರೆ, ಸಮಸ್ಯೆಯನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುತ್ತಾರೆ.

(ಮಾಹಿತಿ : http://kannada.whiteswanfoundation.org/disorder/depression)

ಅರಸೀಕೆರೆ ಪಟ್ಟಣದಲ್ಲಿಂದು ವಿಶ್ವ ಆರೋಗ್ಯ ದಿನಾಚರಣೆ ಆಚರಿಸಲಾಯಿತು

Share:

ಭಾನುವಾರ, ಏಪ್ರಿಲ್ 2, 2017

ಪಲ್ಸ್ ಪೋಲಿಯೋ ಲಸಿಕೆ

ಅರಸೀಕೆರೆ :  ಇಂದು ದೇಶದಾದ್ಯಂತ ಮೊದಲ ಹಂತದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ನಡೆಸಲಾಗುತ್ತಿದೆ.  ಏಪ್ರಿಲ್ 30 ರಂದು ಎರಡನೇ ಹಂತದ ಲಸಿಕಾ ಕಾರ್ಯಕ್ರಮ ನಡೆಯಲಿದೆ.

ಅರಸೀಕೆರೆ ಪಟ್ಟಣದಲ್ಲಿ 20 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ಅರಸೀಕೆರೆ ತಾಲ್ಲೂಕಿನಾದ್ಯಂತ ಒಟ್ಟು 149 ಪಲ್ಸ್ ಪೋಲಿಯೋ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.

ಪೊಲೀಯೊ ರೋಗವು ಚಿಕ್ಕ ಮಕ್ಕಳಲ್ಲಿ ಕಂಡುಬರುತ್ತದೆ. ಮತ್ತು ಈ ರೋಗವು ಸಾಂಕ್ರಾಮಿಕ ರೋಗ ಆಗಿದ್ದು, ಒಂದು ಮಕ್ಕಳಿಂದ ಮತ್ತೊಂದು ಮಗುವಿಗೆ ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು.  ಈ ಮುಂಚೆ ಎಷ್ಟೇಸಲ ಲಸಿಕೆ ಹಾಕಿಸಿದ್ದರೂ,  ಇಂದು ಮತ್ತೆ ಲಸಿಕೆಯನ್ನು ಹಾಕಿಸಬೇಕಾಗಿರುತ್ತದೆ.  ಭಾರತವನ್ನು ಪೋಲಿಯೊ ಮುಕ್ತವನ್ನಾಗಿಸಲು 1994 ರಲ್ಲಿ ಪ್ರಾರಂಭವಾದ ಈ ಪಲ್ಸ್ ಪೋಲಿಯೊ ಅಭಿಯಾನಕ್ಕೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆಯಿಂದಾಗಿ, ಈ ರೋಗದ ನಿರ್ಮೂಲನೆಯಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ.
ಅರಸೀಕೆರೆ ಪಟ್ಟಣದ ಸರ್ಕಾರಿ ಜೆ.ಸಿ.ಆಸ್ಪತ್ರೆಯಲ್ಲಿ ಫಿಜಿಶಿಯನ್ ಡಾ|| ಷಡಾಕ್ಷರಿ ರವರು ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕಿದರು


ಅರಸೀಕೆರೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕಲಾಯಿತು


ಅರಸೀಕೆರೆ ಪಟ್ಟಣದ ರೈಲು ನಿಲ್ದಾಣದಲ್ಲಿ ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕಲಾಯಿತು

ಅರಸೀಕೆರೆ ಪಟ್ಟಣದ ರೈಲು ನಿಲ್ದಾಣದಲ್ಲಿ ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕಲಾಯಿತು

ಅರಸೀಕೆರೆ ಪಟ್ಟಣದ ರೈಲು ನಿಲ್ದಾಣದಲ್ಲಿ ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕಲಾಯಿತು

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....