ಕೃಷಿ-ಆಹಾರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೃಷಿ-ಆಹಾರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಜನವರಿ 31, 2018

ಅರಸೀಕೆರೆ ಶಾಸಕರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ

ಅರಸೀಕೆರೆ ತಾಲ್ಲೂಕಿನಲ್ಲಿ ಫಸಲು ಬಿಡುತ್ತಿದ್ದ ತೆಂಗಿನ ಮರಗಳ ಪೈಕಿ ತೀವ್ರ ಬರಗಾಲದಿಂದಾಗಿ ಸುಮಾರು 8 ಲಕ್ಷಕ್ಕೂ ಅಧಿಕ ಮರಗಳು ಸುಳಿಬಿದ್ದು ಸಂಪೂರ್ಣ ನಾಶ ಹೊಂದಿದ್ದು, ಪ್ರಸ್ತುತ ಆರ್ಥಿಕ ಸಂಕಷ್ಟಕ್ಕೀಡಾಗಿರುವ ರೈತರುಗಳಿಗೆ ಸೂಕ್ತ ಪರಿಹಾರವನ್ನು ನೀಡುವಂತೆ ಈ ಹಿಂದೆ ಹಲವುಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಮತ್ತು ಬೆಳಗಾವಿ ಅಧಿವೇಶನದಲ್ಲಿ ನಿಯಮ 69ರ ಅಡಿಯಲ್ಲಿ ಚರ್ಚೆ ಮಾಡಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು  ತೆಂಗು ಬೆಳೆಗಾರರಿಗೆ ಯಾವುದೇ ರೀತಿಯ ಪರಿಹಾರ ನೀಡಲು ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ, ಅರಸೀಕೆರೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು, ತಾಲ್ಲೂಕಿನ ಗೀಜಿಹಳ್ಳಿ ಗ್ರಾಮದ ತೋಟದಲ್ಲಿ ದಿನಾಂಕ 29-01-2018 ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.





Share:

ಬುಧವಾರ, ಜನವರಿ 17, 2018

ಸುಗ್ಗಿಯ ಸಂಭ್ರಮವನ್ನು ಕಣದಲ್ಲಿ ನೋಡಿ

ಸುಗ್ಗಿಯ ಸಂಭ್ರಮವನ್ನು ಕಣದಲ್ಲಿ ನೋಡಿ

ಅರಸೀಕೆರೆ ತಾಲ್ಲೂಕಿನಾದ್ಯಂತ ಕಳೆದ ವರ್ಷಾಂತ್ಯದಲ್ಲಿ ಆದ ಮಳೆಯಿಂದ ಈ ಬಾರಿ ಉತ್ತಮ ಬೆಳೆ ಬಂದಿದೆ. ಸಂಕ್ರಾಂತಿಯ ಈ ಸಮಯದಲ್ಲಿ ತಾಲ್ಲೂಕಿನಾದ್ಯಂತ ಕಣಗಳಲ್ಲಿ ಬಿಡುವಿಲ್ಲದ ಕೆಲಸ ನಡೆಯುತ್ತಿದೆ.

ಫಾಸ್ಟ್ ಫುಡ್ ಯುಗದಲ್ಲಿ ಬೆಳೆಯುತ್ತಿರುವ ಇಂದಿನ ಯುವ ಪೀಳಿಗೆಯ ಬಹುತೇಕ ಮಕ್ಕಳಿಗೆ ಆಹಾರ ಧಾನ್ಯಗಳು ಬೆಳೆಯುವ ರೀತಿ, ಬೆಳೆದ ಪೈರನ್ನು ಧಾನ್ಯವನ್ನಾಗಿಸುವ ಪ್ರಕ್ರಿಯೆ, ಕಣ ಪದ್ಧತಿಯಲ್ಲಿ ಬಳಸುವ ಬಣವೆ, ರೋಣಗಲ್ಲು, ಉತ್ತ್ರಾಣೆಬರ್ಲು, ಧಾನ್ಯ ತೂರಲು ಬಳಸುವ ಮೊರ, ಸಗಣಿಯಿಂದ ಸಾರಿಸಿದ ಒಕ್ಕಲು ಕಣ, ಧಾನ್ಯಗಳ ರಾಶಿ ಪೂಜೆ ಇತ್ಯಾದಿಗಳ ಬಗ್ಗೆ ಒಂದಿಷ್ಟೂ ಮಾಹಿತಿ ಇರುವುದಿಲ್ಲ. ಹಾಗಾಗಿ ಇವರುಗಳಿಗೆ ತಿನ್ನುವ ಆಹಾರದ ಬಗ್ಗೆ ಗೌರವದ ಭಾವನೆ ಇರುವುದಿಲ್ಲ. ಒಂದೊಂದು ಕಾಳು ಉತ್ಪಾದನೆ ಮಾಡಲು ರೈತರು ಪಡುವ ಪರಿಶ್ರಮವನ್ನು ಹತ್ತಿರದಿಂದ ನೋಡಿದರೆ ಸಾಕು, ಅವರು ಯಾವುದೇ ವಯೋಮಾನದವರಾಗಿರಲಿ ಮುಂದೆ ತಟ್ಟೆಯಲ್ಲಿ ಆಹಾರವನ್ನು ಖಂಡಿತವಾಗಿಯೂ ಚೆಲ್ಲುವುದಿಲ್ಲ.

ಅರಸೀಕೆರೆ ಪಟ್ಟಣದಲ್ಲಿ ವಾಸಿಸುವವರು ಸಾಧ್ಯವಾದರೆ ಪಟ್ಟಣದಿಂದ ಕೇವಲ ನಾಲ್ಕೈದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಕಣಗಳನ್ನು ತಮ್ಮ ಕುಟುಂಬ ಸಮೇತರಾಗಿ ನೋಡಿಕೊಂಡು ಬನ್ನಿ, ಅರಸೀಕೆರೆ ಕಸಬಾ ಹೋಬಳಿ ವ್ಯಾಪ್ತಿಯ ಬಹುತೇಕ ಎಲ್ಲ ಹಳ್ಳಿಗಳಲ್ಲೂ ಕಣದ ಕೆಲಸ ನಡೆಯುತ್ತಿದೆ. ಶಾಲಾ ಮುಖ್ಯಸ್ಥರೂ ಕೂಡ ತಮ್ಮ ವಿದ್ಯಾರ್ಥಿಗಳನ್ನು ಕಣಕ್ಕೆ ಕರೆದುಕೊಂಡು ಹೋಗಿ ಮಕ್ಕಳಿಗೆ ಬೇಸಾಯ ಪದ್ಧತಿ, ಆಹಾರದ ಮಹತ್ವವನ್ನು ತಿಳಿಸಿಕೊಡುವ ಕಾರ್ಯಕ್ರಮ ಮಾಡಬಹುದು.
ನೆನಪಿರಲಿ, ಕಣ ಎನ್ನುವುದು ಅತ್ಯಂತ ಪವಿತ್ರವಾದ ಜಾಗ. ಕಣವನ್ನು ಪ್ರವೇಶಿಸುವಾಗ ಕೆಲವೊಂದು ನಿಬಂಧನೆಗಳಿವೆ, ಅವುಗಳನ್ನು ಗೌರವದಿಂದ ಪಾಲಿಸಿ.

ಕಣವನ್ನು ಪ್ರವೇಶಿಸುವಾಗ ಚಪ್ಪಲಿ ಧರಿಸಬೇಡಿ, ಕಣದಲ್ಲಿ ಧೂಮಪಾನ, ಎಲೆಅಡಿಕೆ ಮೊದಲಾದ ಪದಾರ್ಥಗಳನ್ನು ತಿನ್ನಬಾರದು, ಕಣದಲ್ಲಿ ಕೈಕಟ್ಟಿ ನಿಲ್ಲಬಾರದು ಅಲ್ಲದೇ ಮಹಿಳೆಯರು ಕೆಲವೊಂದು ಸಮಯಗಳಲ್ಲಿ ಕಣದೊಳಗೆ ಪ್ರವೇಶಿಸಬಾರದು, ಇತ್ಯಾದಿ ನಿಯಮಗಳು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿವೆ. ಇಂದಿನ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೂ ಈ ಪದ್ಧತಿಗಳು ಆಹಾರದ ಶುಚಿತ್ವಕ್ಕೆ ಅಂದಿನವರು ಅನುಸರಿಸಿದ ಕ್ರಮಗಳು ಎಂದು ತಿಳಿಯುತ್ತದೆ.

"ಕಣ ಪದ್ಧತಿ ಮುಂದಿನ ಪೀಳಿಗೆಗೆ ತಿಳಿಯಲಿ"

ಧನ್ಯವಾದಗಳು
ಶ್ರೀರಾಮ ಜಮದಗ್ನಿ
ಅರಸೀಕೆರೆ.








Share:

ಸೋಮವಾರ, ಜನವರಿ 15, 2018

ರೈತರ ಬಾಳಲ್ಲಿ ಸಿಹಿ ತರಲಿ ಈ ಸಂಕ್ರಾಂತಿ

ರೈತರ ಬಾಳಲ್ಲಿ ಸಿಹಿ ತರಲಿ ಈ ಸಂಕ್ರಾಂತಿ

ಕಳೆದ ಎರಡು ಮೂರು ವರ್ಷಗ ಭೀಕರ ಬರಗಾಲದಿಂದ ಮಳೆ-ಬೆಳೆ ಇಲ್ಲದೇ, ಜಾನುವಾರುಗಳಿಗೆ ಮೇವು ಹಾಗೂ ಮನುಷ್ಯರಿಗೂ ಕುಡಿಯುವ ನೀರಿಲ್ಲದೇ ತತ್ತರಿಸಿದ್ದ ಅರಸೀಕೆರೆ ತಾಲ್ಲೂಕಿನ ರೈತಾಪಿ ವರ್ಗದವರಿಗೆ ಈ ವರ್ಷದ ಆರಂಭ ಸ್ವಲ್ಪ ನೆಮ್ಮದಿಯನ್ನು ನೀಡಿದೆ. ಕಳೆದ ವರ್ಷಾಂತ್ಯದಲ್ಲಿ ಬಂದ ಸಾಧಾರಣ ಮಳೆಯಿಂದಾಗಿ ನಮ್ಮ ತಾಲ್ಲೂಕಿನ ಪ್ರಮುಖ ಬೆಳೆಯಾದ ರಾಗಿಯು ಉತ್ತಮ ಇಳುವರಿಯಾಗಿದ್ದು ರೈತರಲ್ಲಿ ಮಂದಹಾಸ ಮೂಡಿಸಿದೆ.

ಕಳೆದ ವರ್ಷ ನಮ್ಮ ತಾಲ್ಲೂಕಿನ ರೈತರು ಅನುಭವಿಸಿದ ಸಂಕಷ್ಟವನ್ನು ಹೇಳಲು ಅಸಾಧ್ಯ. ತಾವು ಸಾಕಿದ ಜಾನುವಾರುಗಳಿಗೆ ಮೇವು ನೀಡಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಮೇವು ಬ್ಯಾಂಕ್ ಗಳಿಗೆ ಹೋಗಿ ಹೊರೆ ಹುಲ್ಲನ್ನು ತಂದಿದ್ದು, ಜಾನುವಾರುಗಳಿಗೆ ನೀರೊದಗಿಸಲು ಸಾಧ್ಯವಾಗದೇ ಇದ್ದಾಗ, ತಾಲ್ಲೂಕಿನಾದ್ಯಂತ ಸರ್ಕಾರದಿಂದ ಪ್ರಾರಂಭಗೊಂಡಿದ್ದ ಗೋಶಾಲೆಗಳಿಗೆ ಕರೆದೊಯ್ದು ಅಲ್ಲಿಯೇ ಜಾನುವಾರುಗಳ ಜೊತೆ ವಾಸ ಮಾಡಿದ್ದು. ಗೋಶಾಲೆಯಲ್ಲಿ ಜಾನುವಾರುಗಳಿಗೆ ಮಾರಕ ಸಾಂಕ್ರಾಮಿಕ ರೋಗವಾದ ಕಾಲುಬಾಯಿ ಜ್ವರ ಕಂಡ ಹಿನ್ನೆಲೆಯಲ್ಲಿ ಗೋಶಾಲೆಗಳನ್ನು ಮುಚ್ಚಿದ ನಂತರ ಮತ್ತೆ ಜಾನುವಾರುಗಳನ್ನು ತಮ್ಮ ತಮ್ಮ ಸ್ಥಳಕ್ಕೆ ಕರೆದೊಯ್ದು ಅವುಗಳ ಆರೈಕೆ ಮಾಡಿದ್ದು. ಹೀಗೆ ಒಂದೇ ಎರಡೇ... ಈ ನಮ್ಮ ರೈತರು ಅನುಭವಿಸಿದ ಯಾತನೆ. ಈ ನಡುವೆ, ಅಂತರ್ಜಲ ಕುಸಿತದಿಂದಾಗಿ ತೋಟಗಳಲ್ಲಿ ಬೆಳದು ನಿಂತಿದ್ದ ಫಲಕೊಡುವ ಲಕ್ಷಾಂತರ ತೆಂಗಿನ ಮರಗಳು ತಾಲ್ಲೂಕಿನಾದ್ಯಂತ ಸುಳಿಬಿದ್ದು ನೆಲಕಚ್ಚಿದವು. ಅತ್ತದರಿ ಇತ್ತ ಪುಲಿ ಎಂಬ ಮಾತಿನಂತೆ, ಒಂದೆಡೆ ಕೃಷಿಯಿಂದಲೂ ಆದಾಯವಿಲ್ಲ ಜಾನುವಾರುಗಳ ಹಾಲು ಮಾರಿ ಜೀವನ ನಡೆಸೋಣವೆಂದರೆ, ಈ ಜಾನುವಾರುಗಳಿಗೇ ನೀರು ಮೇವಿಲ್ಲದಂತಹ ಪರಿಸ್ಥಿತಿ.

ಇಷ್ಟಾದರೂ ಛಲಬಿಡದ ತ್ರಿವಿಕ್ರಮನಂತೆ ಮತ್ತೆ ಕೃಷಿ ಕಾಯಕದಲ್ಲಿ ತೊಡಗಿದ ನಮ್ಮ ರೈತರಿಗೆ ಕಳೆದ ವರ್ಷಾಂತ್ಯದಲ್ಲಿ ಮಳೆಯು ವರವಾಗಿ ಬಂದಿತು. ಬಹುತೇಕ ಎಲ್ಲ ಕೃಷಿಕರು ಬಿತ್ತನೆ ಮಾಡಿದ್ದ ಪೈರುಗಳು ಹುಲುಸಾಗಿ ಬೆಳೆದು ಉತ್ತಮ ಫಸಲು ಬಂದಿತು. ಜಾನುವಾರುಗಳನ್ನು ಸಾಕಿದ್ದವರು ಹಿಂದೆ ಅನುಭವಿಸಿದ್ದ ಘಟನೆಯಿಂದಾಗಿ ಪಾಠ ಕಲಿತಂತಾಗಿ, ಈಗ ಬಂದಿರುವ ರಾಗಿ, ಜೋಳದ ಹುಲ್ಲನ್ನು ಮೇವಿಗಾಗಿ ಶೇಖರಿಸಿಟ್ಟಿರುವುದು ಎಲ್ಲೆಡೆ ಕಾಣಬಹುದು.

ಸಂಕ್ರಾತಿ ಹಬ್ಬವು ರೈತರಿಗೆ ಸಂತೋಷ ನೀಡುವ ಹಬ್ಬ. ಈ ಸಮಯದಲ್ಲಿ ಜಮೀನಿನಲ್ಲಿ ಬೇಳೆ ಕಾಳುಗಳ ಪೈರು ಬಂದಿದ್ದು, ಅವುಗಳನ್ನು ಕಟಾವು ಮಾಡಿ, ಕಣವನ್ನು ನಿರ್ಮಿಸಿ, ಕುಯ್ದ ಫಸಲನ್ನು ಹಸನುಮಾಡಿ ಧಾನ್ಯವನ್ನಾಗಿಸುವ ಪ್ರಕ್ರಿಯೆ ಈ ಸಂಕ್ರಾತಿಯ ಸಮಯದಲ್ಲಿ ನಡೆಯುತ್ತದೆ.

ಸೂರ್ಯನು ತನ್ನ ಪಥವನ್ನು ಇವತ್ತಿನಿಂದ ಬದಲಾಯಿಸುವಂತೆ, ನಮ್ಮ ತಾಲ್ಲೂಕಿನ ರೈತರ ಸಂಕಷ್ಟಗಳೂ ಸಹ ಇಂದಿನಿಂದ ಕೊನೆಗೊಂಡು, ಮುಂಬರುವ ದಿನಗಳಲ್ಲಿ ನಮ್ಮ ತಾಲ್ಲೂಕಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ರೈತರ ಮೊಗದಲ್ಲಿ ಸಂತಸ ತರಲಿ ಎಂದು ಪ್ರಾರ್ಥಿಸೋಣ.

ಅರಸೀಕೆರೆ ತಾಲ್ಲೂಕಿನ ಜಾಜೂರು ಗ್ರಾಮದ ಕಣವೊಂದರಲ್ಲಿ ನೆನ್ನೆ ರಾಗಿಯನ್ನು ತೂರುತ್ತಿದ್ದ ರೈತರನ್ನು ಭೇಟಿ ಮಾಡಿದೆ. ಉತ್ತಮ ಬೆಳೆಯಾಗಿರುವುದಕ್ಕೆ ಅವರೆಲ್ಲರೂ ಸಂತಸದಿಂದಿದ್ದರು. ದೇವರ ಕೃಪೆಯಿಂದ ತಾವು ಬೆಳೆದ ರಾಗಿ ಮೊದಲಾದ ಬೆಳೆಗೆ ಉತ್ತಮ ದರ ಸಿಕ್ಕರೆ ಮತ್ತಷ್ಟು ಅನುಕೂಲವಾಗುತ್ತದೆ ಎಂದರು.

"ಸಂಕ್ರಾಂತಿಯ ಸಿಹಿ ನಾಡಿನ ಎಲ್ಲ ರೈತಬಾಂಧವರಿಗೆ ದೊರೆಯಲಿ" ಎಂದು ಹಾರೈಸುತ್ತೇನೆ.

ವಂದನೆಗಳೊಂದಿಗೆ
ಶ್ರೀರಾಮ ಜಮದಗ್ನಿ
ಅರಸೀಕೆರೆ



Share:

ಬುಧವಾರ, ಸೆಪ್ಟೆಂಬರ್ 6, 2017

ತೆಂಗು ಬೆಳೆಗಾರರಿಗೆ ಬರ ಪರಿಹಾರ ಒದಗಿಸಲು ಅರಸೀಕೆರೆ ಶಾಸಕರಿಂದ ಕೇಂದ್ರ ಕೃಷಿ ಸಚಿವರ ಭೇಟಿ

Arsikere



ಸತತ ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗದೇ ಬರಗಾಲದಿಂದ ಕಂಗೆಟ್ಟಿರುವ ತೆಂಗು ಮತ್ತು ಅಡಿಕೆ ಬೆಳೆಗಾರರಿಗೆ  2477.26 ಕೋಟಿ ರೂಪಾಯಿಗಳ ವಿಶೇಷ ಬರ ಪರಿಹಾರ ಘೋಷಿಸುವಂತೆ ಕೇಂದ್ರ ಸಚಿವರಿಗೆ ಇಂದು ಮನವಿ ಮಾಡಲಾಯಿತು.


ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ತೋಟಗಾರಿಕಾ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ರವರ ನೇತೃತ್ವದ ನಿಯೋಗ ಇಂದು ಕೇಂದ್ರ ಕೃಷಿ ಸಚಿವರಾದ ರಾಧಾ ಮೋಹನ ಸಿಂಗ್ ರವರನ್ನು ದೆಹಲಿಯ ಕೃಷಿ ಭವನದಲ್ಲಿ ಭೇಟಿ ಮಾಡಿ ಬರದಿಂದ ಹಾನಿಗೊಳಗಾಗಿರುವ ತೆಂಗು ಮತ್ತು ಅಡಿಕೆ ಬೆಳೆಗಾರರಿಗೆ 2477.22 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡಿದರು.  ಅರಸೀಕೆರೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ಮತ್ತು ಚನ್ನರಾಯಪಟ್ಟಣದ ಶಾಸಕರಾದ ಸಿ.ಎನ್.ಬಾಲಕೃಷ್ಣ ರವರು ನಿಯೋಗದಲ್ಲಿ ಇದ್ದರು.


Share:

ಶುಕ್ರವಾರ, ಜೂನ್ 2, 2017

ಅರಸೀಕೆರೆ ತಾಲ್ಲೂಕಿನ 530 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಭೂಮಿಪೂಜೆ

Arsikere

  
ಅರಸೀಕೆರೆ ತಾಲೋಕಿನ ಒಟ್ಟು 530 ಹಳ್ಳಿಗಳಿಗೆ ರೂ.254 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಮೊದಲ ಹಂತವಾಗಿ ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಾಣ ಕಾಮಗಾರಿಯ ಭೂಮಿಪೂಜೆಯನ್ನು, ಅರಸೀಕೆರೆ ಕಸಬಾ ಹೋಬಳಿ ಬೆಳಗುಂಬ ಗ್ರಾಮ ಪಂಚಾಯತಿ ಬಸವನಹಟ್ಟಿ ಗ್ರಾಮದ ಬಳಿ ಶಾಸಕ ಕೆ.ಎಂ.ಶಿವಲಿಂಗೇಗೌಡ ನೆರವೇರಿಸಿದರು. ಮುಖಂಡರಾದ ಗೀಜಿಹಳ್ಳಿ ಧರ್ಮಶೇಕರ,ಬೆಳಗುಂಬ ಬಾಬು,ಧರ್ಮಣ್ಣ, ಇನ್ನಿತರೆ ಮುಖಂಡರು ಮತ್ತು ಗ್ರಾಮಸ್ಥರು, ಹಾಗೂ ಕಾಮಗಾರಿಯ ಗುತ್ತಿಗೆ ಪಡೆದಿರುವ ಮೆಗಾ ಕಂಪನಿಯ ಪಾಟೀಲ್ ರವರು ಹಾಜರಿದ್ದರು.

ಈ ಯೋಜನೆಯಲ್ಲಿ ತಾಲ್ಲೋ‌ಕಿನಾದ್ಯಂತ ಸೂಕ್ತ ಸ್ಥಳಗಳಲ್ಲಿ ನೀರಿನ ಸಂಗ್ರಹಣಾ ಟ್ಯಾಂಕ್ ಗಳನ್ನು ನಿರ್ಮಾಣ ಮಾಡಿ ಅವುಗಳ ಮುಖಾಂತರ ಎಲ್ಲಾ ಗ್ರಾಮಗಳಿಗೆ ಹೇಮಾವತಿ ನದಿ ಮೂಲದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುವುದು


ಅರಸೀಕೆರೆ ತಾಲ್ಲೂಕಿನ 530 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಭೂಮಿಪೂಜೆ

Share:

ಬುಧವಾರ, ಏಪ್ರಿಲ್ 26, 2017

ಸಿಡಿಲಿನ ಆರ್ಭಟಕ್ಕೆ ಧರೆಗುರುಳಿದ ತೆಂಗಿನ ಮರ

ಅರಸೀಕೆರೆ ತಾಲ್ಲೂಕು ಮಾಡಾಳು ಗ್ರಾಮದಲ್ಲಿ ಬುಧವಾರ ಸಂಜೆ ಮಿಂಚು, ಗುಡುಗಿನೊಂದಿಗೆ ವರುಣನ ಆರ್ಭಟ ಜೋರಾಗಿತ್ತಾದರೂ ಮಳೆ ಹನಿಯದೇ ನಿರಾಸೆ ಮೂಡಿಸಿತು. ಆದರೆ ಭಾರೀ ಶಬ್ದದೊಂದಿಗೆ ಬಡಿದ ಸಿಡಿಲಿನ ಪರಿಣಾಮ ಎರಡು ಫಲವತ್ತಾದ ತೆಂಗಿನ ಮರಗಳು ಬೆಂಕಿಹತ್ತಿ ಧಗಧಗನೆ ಉರಿದು ನೆಲಕ್ಕುರುಳಿದವು.


(ಚಿತ್ರ/ಮಾಹಿತಿ : ಮಾಡಾಳು ನಂದೀಶ)
ಅರಸೀಕೆರೆ ತಾಲ್ಲೂಕು ಮಾಡಾಳು ಗ್ರಾಮದಲ್ಲಿ ಸಿಡಿಲಿನ ಆರ್ಭಟಕ್ಕೆ ಧರೆಗುರುಳಿದ ತೆಂಗಿನ ಮರ

ಅರಸೀಕೆರೆ ತಾಲ್ಲೂಕು ಮಾಡಾಳು ಗ್ರಾಮದಲ್ಲಿ ಸಿಡಿಲಿನ ಆರ್ಭಟಕ್ಕೆ ಧರೆಗುರುಳಿದ ತೆಂಗಿನ ಮರ


Share:

ಭಾನುವಾರ, ಮಾರ್ಚ್ 26, 2017

ತೆಂಗಿಗೆ ಬೆಂಕಿ ರೋಗ – ರೈತರಿಗೆ ಗಾಯದ ಮೇಲೆ ಬರೆ

ಸದಾ ಒಂದಲ್ಲಾ ಒಂದು ಸಂಕಷ್ಟಕ್ಕೆ ಸಿಲುಕುವ ಅರಸೀಕೆರೆ ತಾಲ್ಲೂಕಿನ ರೈತರು, ಕಳೆದ ಕೆಲವು ವರ್ಷಗಳಿಂದ ಅನಾವೃಷ್ಠಿಯಿಂದಾಗಿ ತೀವ್ರವಾದ ತೊಂದರೆ ಅನುಭವಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.  ಸತತ ಮೂರು ವರ್ಷಗಳು ಸರಿಯಾದ ಮಳೆಯಾಗದಿದ್ದರಿಂದ, ಹತ್ತಾರು ವರ್ಷಗಳಿಂದ ಫಸಲು ನೀಡುತ್ತಿದ್ದ, ಬಯಲುಸೀಮೆ ರೈತರ ಜೀವನಾಡಿಯಾಗಿದ್ದ ತೆಂಗಿನ ಮರಗಳು ನೀರಿಲ್ಲದೇ ಸುಳಿಬಿದ್ದು ಒಣಗಿ ಹೋಗಿತ್ತು.  ಕೊಳವೆ ಬಾವಿಯ ಸಂಪರ್ಕ ಹೊಂದಿದ್ದ ಕೆಲವು ರೈತರು ಹೇಗೋ ತಮ್ಮ ತೆಂಗಿನ ಮರಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿತ್ತು.  ಇದೀಗ ಕೊಳವೆ ಬಾವಿಗಳಲ್ಲೂ ನೀರಿನ ಕೊರತೆ ಉಂಟಾಗಿ ಕೃಷಿ ಕಾರ್ಯಕ್ಕೆ ನೀರಿಲ್ಲದಂತಾಗಿದೆ.  ಈ ನಡುವೆ ಅರಸೀಕೆರೆ ತಾಲ್ಲೂಕಿನ ಜಾಜೂರು, ನಾಗತಿಹಳ್ಳಿ, ಬೆಂಡೇಕೆರೆ, ಎಮ್ ಹೊಸಹಳ್ಳಿ, ಹಿರಿಯೂರು ಸೇರಿದಂತೆ ಕೆಲವು ಹಳ್ಳಿಗಳಲ್ಲಿ ತೆಂಗಿನ ಮರಗಳಿಗೆ ಸಾಂಕ್ರಾಮಿಕ ರೋಗವಾದ ಬೆಂಕಿ ರೋಗ ಕಾಣಿಸಿಕೊಂಡಿದ್ದು ಗಾಯದ ಮೇಲೆ ಬರೆ ಬಿದ್ದಂತಾಗಿ, ರೈತರು ತಮ್ಮ ಮುಂದಿನ ಭವಿಷ್ಯವೇನು ಎಂದು ಯೋಚಿಸುವಂತೆ ಮಾಡಿದೆ.

ರೋಗದ ಲಕ್ಷಣ :

ಬೆಂಕಿರೋಗಕ್ಕೆ ಕಾರಣ ಕಪ್ಪುತಲೆ ಹುಳು (Black headed caterpillar) ಇದು ತೆಂಗಿನ ಗರಿಗಳ ಹಿಂಭಾಗದಲ್ಲಿ ಕುಳಿತು ಎಲೆಯ ಹಿಂಭಾವನ್ನು ತಿನ್ನುತ್ತದೆ. ಇದರಿಂದಾಗಿ ಹಸಿರಾಗಿದ್ದ ಎಲೆಗಳು ಬಣ್ಣ ಕಳೆದುಕೊಂಡು ಸುಟ್ಟುಹೋದಂತೆ ಕಾಣುತ್ತವೆ.  ಇದರಿಂದಾಗಿ ತೆಂಗಿನ ಬೆಳೆಯ ಇಳುವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಾಣುತ್ತದೆ.   ಈ ರೋಗ ನಿಯಂತ್ರಣ ಮಾಡಲು ತೋಟಗಾರಿಕಾ ಇಲಾಖೆಯವರು ಪರೋಪಜೀವಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.  ಇಲಾಖೆಯ ತಜ್ಞರ ಸಲಹೆಯನ್ನು ಪಾಲಿಸಿದಲ್ಲಿ ಒಂದೆರಡು ವರ್ಷಗಳಲ್ಲಿ ಮರ ಮತ್ತೆ ಮೊದಲಿನಂತಾಗುತ್ತದೆ ಎಂದು ತೋಟಗಾರಿಕಾ ಇಲಾಖೆಯ ಶಿವಕುಮಾರ್ ರವರು ತಿಳಿಸಿದರು.  ಈ ರೋಗವು ಬೇಸಿಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದು, ಒಂದು ಉತ್ತಮವಾದ ಗುಡುಗು ಸಿಡಿಲಿನ ಮಳೆಯಾದಲ್ಲಿ, ಎಲೆಯ ಮೇಲಿರುವ ಕಪ್ಪುತಲೆ ಲಾರ್ವಾಗಳು ಮಳೆ ನೀರಿನಲ್ಲಿ ಕೊಚ್ಚಿಹೋಗಿ ರೋಗದ ಪ್ರಮಾಣ ಕಡಿಮೆಯಾಗುತ್ತದೆ ಎಂದರು. 


ಅರಸೀಕೆರೆ ತಾಲ್ಲೂಕಿನ ಬೆಂಡೇಕರೆ ಸಮೀಪದ ತೋಟದಲ್ಲಿ ಬೆಂಕಿ ರೋಗಕ್ಕೆ ತುತ್ತಾಗಿರುವ ತೆಂಗಿನ ಮರ

ಅರಸೀಕೆರೆ ತಾಲ್ಲೂಕಿನ ಬೆಂಡೇಕರೆ ಸಮೀಪದ ತೋಟದಲ್ಲಿ ಬೆಂಕಿ ರೋಗಕ್ಕೆ ತುತ್ತಾಗಿರುವ ತೆಂಗಿನ ಮರ

ಅರಸೀಕೆರೆ ತಾಲ್ಲೂಕಿನ ಬೆಂಡೇಕರೆ ಸಮೀಪದ ತೋಟದಲ್ಲಿ ಬೆಂಕಿ ರೋಗಕ್ಕೆ ತುತ್ತಾಗಿರುವ ತೆಂಗಿನ ಮರ

ಅರಸೀಕೆರೆ ತಾಲ್ಲೂಕಿನ ಬೆಂಡೇಕರೆ ಸಮೀಪದ ತೋಟದಲ್ಲಿ ಬೆಂಕಿ ರೋಗಕ್ಕೆ ತುತ್ತಾಗಿರುವ ತೆಂಗಿನ ಮರ

Share:

ಭಾನುವಾರ, ಫೆಬ್ರವರಿ 19, 2017

ಅರಸೀಕೆರೆ ತಾಲ್ಲೂಕಿನಲ್ಲಿರುವ ಸರ್ಕಾರದ ಗೋಶಾಲೆಗಳು

ತಾಲ್ಲೂಕಿನಾದ್ಯಂತ ಮಳೆ-ಬೆಳೆ ಇಲ್ಲದೇ ಭೀಕರ ಬರದಿಂದಾಗಿ, ಗ್ರಾಮಾಂತರ ಪ್ರದೇಶದ ಜನರಿಗೆ ಕುಡಿಯುವ ನೀರಿಗೇ ಕಷ್ಟವಾಗಿರುವಂತಹ ಪರಿಸ್ಥಿತಿಯಲ್ಲಿ, ಜಾನುವಾರುಗಳನ್ನು ನಿರ್ವಹಣೆ ಮಾಡುವುದು ಅತ್ಯಂತ ತ್ರಾಸದಾಯಕವಾಗಿದೆ. ರಾಸುಗಳಿಗೆ ನೀರು, ಮೇವು ಒದಗಿಸಲು ಸಾಧ್ಯವಾಗದೇ ರೈತರು ತಮ್ಮ ಒಡನಾಡಿ ದನಕರುಗಳನ್ನು ಅನಿವಾರ್ಯವಾಗಿ ಮಾರಾಟಮಾಡುವಂತಹ ಸ್ಥಿತಿ ಉಂಟಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ರೈತರ ಸಹಾಯಕ್ಕಾಗಿ, ಸರ್ಕಾರದ ವತಿಯಿಂದ ಅರಸೀಕೆರೆ ತಾಲ್ಲೂಕಿನಲ್ಲಿ ಹೋಬಳಿಗೆ ಒಂದರಂತೆ ಒಟ್ಟು ಐದು ಗೋಶಾಲೆಗಳನ್ನು ತೆರೆಯಲಾಗಿದೆ. ಅರಸೀಕೆರೆ ಕಸಬಾ ವ್ಯಾಪ್ತಿಯ ಬೋರನಕೊಪ್ಪಲು, ಬಾಣಾವರ, ಕಣಕಟ್ಟೆ ಹೋಬಳಿಯ ರಾಂಪುರ, ಗಂಡಸಿ ಹ್ಯಾಂಡ್ ಪೋಸ್ಟ್ ಮತ್ತು ಜಾವಗಲ್ ನಲ್ಲಿ ಒಂದೊಂದು ಗೋಶಾಲೆ ತೆರೆಯಲಾಗಿದೆ. ಇಲ್ಲಿ ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಪ್ರತಿ ರಾಸುಗಳಿಗೆ ದಿನವೊಂದಕ್ಕೆ ಉಚಿತವಾಗಿ ಐದು ಕೆಜಿಯಷ್ಟು ಮೇವು (ಭತ್ತದ ಹುಲ್ಲು, ಜೋಳದ ಹುಲ್ಲು ಇತ್ಯಾದಿ) ಒದಗಿಸಲಾಗುತ್ತಿದೆ. ಅನೇಕ ರೈತರುಗಳು ತಮ್ಮ ರಾಸುಗಳಿಗೆ ತಾತ್ಕಾಲಿಕ ಶೆಡ್ಡುಗಳನ್ನು ನಿರ್ಮಿಸಿ, ಅವರುಗಳೂ ರಾಸುಗಳ ಜೊತೆಯಲ್ಲೇ ಗೋಶಾಲೆಯಲ್ಲಿ ಉಳಿದುಕೊಂಡಿದ್ದಾರೆ. ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಪಶುವೈದ್ಯಕೀಯ ಇಲಾಖೆಯ ವೈದ್ಯರುಗಳ ತಂಡ ಪ್ರತಿಯೊಂದು ರಾಸುಗಳ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ.

ಈ ಮಧ್ಯೆ, ಕೆಲವು ಜಾನುವಾರುಗಳಿಗೆ ಸಾಂಕ್ರಾಮಿಕ ರೋಗವಾದ ಕಾಲುಬಾಯಿ ಜ್ವರ ಬಂದಿದೆ ಎಂಬ ಆತಂಕಕಾರಿ ಸುದ್ದಿ ಕೇಳಿಬಂತು. ಈಗಾಗಲೇ ಪಶುವೈದ್ಯರು ಈಕುರಿತು ಹೆಚ್ಚಿನ ಕ್ರಮಗಳನ್ನು ಕೈಗೊಂಡಿದ್ದಾರೆ, ಆದರೂ ಅವರ ಕೈಮೀರಿ ಕೆಲವು ದನಗಳಿಗೆ ಈ ರೋಗ ಹರಡಬಹುದಾದ ಸಂಭವವಿದೆ.



Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....