ಶನಿವಾರ, ಆಗಸ್ಟ್ 26, 2017

ಅರಸೀಕೆರೆಯಲ್ಲಿ ಗಣೇಶನ ವಿಸರ್ಜನೆ ಹೀಗೆ ನಡೆಯುತ್ತಿದೆ

Arsikere


ಬರಪೀಡಿತ ಅರಸೀಕೆರೆ ತಾಲ್ಲೂಕಿನಲ್ಲಿ ಎಲ್ಲ ಕೆರೆ ಕಟ್ಟೆಗಳೂ ಖಾಲಿಯಾಗಿವೆ, ಈ ಸಂದರ್ಭದಲ್ಲಿ ಅರಸೀಕೆರೆ ಪಟ್ಟಣದಲ್ಲಿ ಗಣೇಶ ವಿಸರ್ಜನೆ ಮಾಡಲು ನೀರಿರುವ ಒಂದು ಜಾಗವಿಲ್ಲ.  ಹೀಗಾಗಿ ಕೆಲವರು ತಮ್ಮ ತಮ್ಮ ಮನೆಯಲ್ಲಿ ಬಕೇಟಿನಲ್ಲಿ ಗಣೇಶನನ್ನು ವಿಸರ್ಜಿಸುತ್ತಿದ್ದಾರೆ. ಇನ್ನು ಕೆಲವು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ, ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ವಿಶೇಷ ಕಾಳಜಿ ವಹಿಸಿ, ಅರಸೀಕೆರೆ ನಗರಸಭೆಯ ಅಧ್ಯಕ್ಷರು ಮತ್ತು ಸದಸ್ಯರುಗಳ ನೇತೃತ್ವದಲ್ಲಿ ಪಟ್ಟಣದ ಕಂತೇನಹಳ್ಳಿ ದೊಡ್ಡಕೆರೆಯಲ್ಲಿ ಸುಮಾರು 15 ಅಡಿ ಆಳದ ಒಂದು ದೊಡ್ಡ ಹೊಂಡವನ್ನು ತುರ್ತಾಗಿ ನಿರ್ಮಿಸಿ ಅದಕ್ಕೆ ಬೋರ್ ವೆಲ್ ಮೂಲಕ ನೀರನ್ನು ಸರಬರಾಜು ಮಾಡಿ ಸಾರ್ವಜನಿಕರಿಗೆ ಗಣೇಶ ವಿಸರ್ಜನೆಗೆ ಅವಕಾಶ ಮಾಡಿದ್ದಾರೆ. 


ಈ ಬರಗಾಲ ಹೀಗೆ ಮುಂದುವರಿದರೆ, ಮುಂದೆ ಗಣೇಶ ವಿಸರ್ಜನೆಗೆ ಬೋರ್ ವೆಲ್ ನೀರೂ ಕೂಡ ದೊರಕುವುದು ಕಷ್ಟವಾಗುತ್ತದೆ.  ಆಗ ಗುಂಡಿತೋಡಿ ಗಣೇಶನನ್ನು ಮಣ್ಣಿನಿಂದ ಮುಚ್ಚಬೇಕಾಗಬಹುದು.  ದೈವ ಕೃಪೆಯಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾದಲ್ಲಿ ಮಾತ್ರ ಪರಿಸ್ಥಿತಿ ಸುಧಾರಿಸಬಹುದು. 


Share:

ಶುಕ್ರವಾರ, ಆಗಸ್ಟ್ 25, 2017

ಗೌರಿ ಮತ್ತು ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯ ಆಗಮನಕ್ಕೆ ಈ ದಿನ ಆಕಾಶದಿಂದ ತುಂತುರು ಮಳೆಯ ಸಿಂಚನವಾಗಿ ಶುಭ ಮುನ್ಸೂಚನೆ ನೀಡಿದೆ.  ತಾಲ್ಲೂಕಿನಾದ್ಯಂತ ಮಳೆಬೆಳೆ ಇಲ್ಲದೇ ಜನರು ರೈತಾಪಿವರ್ಗದವರು ಕಂಗಾಲಾಗಿದ್ದಾರೆ.  ಯಾವುದೇ ಕೆರೆಕಟ್ಟೆಗಳಲ್ಲಿ ನೀರಿಲ್ಲದೇ, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ.  ಅರಸೀಕೆರೆ ಪಟ್ಟಣದ ಕೆರೆಯಲ್ಲಿ ನೀರಿಲ್ಲದೇ ಇರುವುದರಿಂದ ಕಳೆದ ಕೆಲವು ವರ್ಷಗಳಿಂದ ಗಣೇಶನ ವಿಸರ್ಜನೆಗೆ ಗುಂಡಿತೋಡಿ ಅದಕ್ಕೆ ನೀರು ತುಂಬಿಸಿ ಗಣಪತಿಯನ್ನು ವಿಸರ್ಜಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶ್ರೀ ಪ್ರಸನ್ನ ಗಣಪತಿಯ ಕೃಪೆಯಿಂದ ಈ ವರ್ಷ ನಮ್ಮ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿ ಎಲ್ಲ ಕೆರೆಕಟ್ಟೆಗಳು ತುಂಬಿಹರಿಯಲಿ, ನಮ್ಮ ಅರಸೀಕೆರೆಯ ಕಂತೇನಹಳ್ಳಿ ಕೆರೆಯೂ ತುಂಬಿ ಕೋಡಿ ಬೀಳಲಿ, ಅದರಲ್ಲಿ ನಮ್ಮ ಹೆಮ್ಮೆಯ ಶ್ರೀ ಪ್ರಸನ್ನ ಗಣಪತಿಯವರ “ತೆಪ್ಪೋತ್ಸವ” ವೈಭವದಿಂದ ಜರುಗಲಿ ಎಂದು ಪ್ರಾರ್ಥಿಸೋಣ.

ತಮ್ಮೆಲ್ಲರಿಗೂ ಗೌರಿ ಮತ್ತು ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು


ಅರಸೀಕೆರೆ.in


Share:

ಗುರುವಾರ, ಆಗಸ್ಟ್ 24, 2017

ಅರಸೀಕೆರೆ ತಾಲ್ಲೂಕು ಮಾಡಾಳು ಶ್ರೀ ಸ್ವರ್ಣಗೌರಿ ದೇವಿಯ ಪ್ರತಿಷ್ಠಾಪನೆ

Arsikere


ಅರಸೀಕೆರೆ ತಾಲ್ಲೂಕು ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದಲ್ಲಿ ಶ್ರೀ ಸ್ವರ್ಣಗೌರಿ ದೇವಿಯ ಪ್ರತಿಷ್ಠಾಪನೆ ಸಂಭ್ರಮದಿಂದ ಜರುಗಿತು.  ಲಿಂಗೈಕ್ಯ ಶಿವಲಿಂಗಸ್ವಾಮಿಯವರು ನೀಡಿರುವ ಮೂಗುತಿಯನ್ನು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಶ್ರೀಶ್ರೀಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳವರು ಇಂದು ಬೆಳಿಗ್ಗೆ ಬಾವಿಯ ಬಳಿ ಪೂಜಿಸಿದ ನಂತರ ಗೌರಮ್ಮನವರಿಗೆ ತೊಡಿಸಲಾಯಿತು.  ಮಂಗಳ ವಾದ್ಯಗಳೊಡನೆ ಅಮ್ಮನವರನ್ನು  ಉತ್ಸವದಲ್ಲಿ ದೇವಾಲಯಕ್ಕೆ ತರಲಾಯಿತು.  ಅಲ್ಲಿ ಸ್ವಾಮೀಜಿಯವರ ಸಮ್ಮುಖದಲ್ಲಿ ಶ್ರೀ ಸ್ವರ್ಣಗೌರಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.  ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ನೆರದಿದ್ದರು.  ಭಕ್ತಾಧಿಗಳಿಗೆ ದೇವಸ್ಥಾನದ ವತಿಯಿಂದ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ.  ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.


ಮಾಡಾಳು ಶ್ರೀ ಸ್ವರ್ಣಗೌರಿ ದೇವಿಯವರ ವಿಸರ್ಜನಾ ಮಹೋತ್ಸವವು ಸೆಪ್ಟೆಂಬರ್ 2, 2017 ಶನಿವಾರದಂದು ಸಂಜೆ 6 ಗಂಟೆಗೆ ಜರುಗಲಿದೆ.







Share:

ಬುಧವಾರ, ಆಗಸ್ಟ್ 23, 2017

ಮಾಡಾಳು ಶ್ರೀ ಸ್ವರ್ಣಗೌರಿ ದೇವಿಯವರ ಜಾತ್ರಾ ಮಹೋತ್ಸವ

Arsikere


ಅರಸೀಕೆರೆ ತಾಲ್ಲೂಕು ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದಲ್ಲಿ ನೆಲೆಸಿರುವ ಶ್ರೀ ಸ್ವರ್ಣಗೌರಿ ದೇವಿಯವರ ಜಾತ್ರಾ ಮಹೋತ್ಸವವು ದಿನಾಂಕ 24-08-2017 ರಿಂದ 02-09-2017 ರ ವರೆಗೆ ನಡೆಯಲಿದೆ.

ದಿನಾಂಕ 24-08-2017 ಗುರುವಾರದಂದು ಮಧ್ಯಾನ್ಹ 2 ಗಂಟೆಗೆ ಸ್ವರ್ಣಗೌರಿ ದೇವಿಯವರನ್ನು ಮಂಗಳ ವಾದ್ಯಗಳೊಂದಿಗೆ ಬಾವಿಯ ಬಳಿಯಿಂದ ದೇವಸ್ಥಾನಕ್ಕೆ ಕರೆತಂದು ಪ್ರತಿಷ್ಠಾಪಿಸಲಾಗುತ್ತದೆ.  ದಿನಾಂಕ 02-09-2017 ರಂದು ಸಂಜೆ 6 ಗಂಟೆಗೆ ದೇವಾಲಯದ ಸಮೀಪವಿರುವ ಕಲ್ಯಾಣಿಯಲ್ಲಿ ಅಮ್ಮನವರ ವಿಸರ್ಜನಾ ಮಹೋತ್ಸವ ನಡೆಯಲಿದೆ.

ದೇವಸ್ಥಾನದ ಮುಂಭಾಗದಲ್ಲಿರುವ ಕರ್ಪೂರದ ಕುಂಡದಲ್ಲಿ ಇದುವರೆಗೂ ಭಕ್ತರು ಸಲ್ಲಿಸುತ್ತಿದ್ದ ಕರ್ಪೂರದ ಹರಕೆಯಿಂದ ದೇವಾಲಯದ ಸುತ್ತಮುತ್ತ ಮಾಲಿನ್ಯ ಉಂಟಾಗುತ್ತಿತ್ತು.  ಇದನ್ನು ಪರಿಹರಿಸಲು ದೇವಸ್ಥಾನ ಮಂಡಲಿಯವರು ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಹೊಗೆ ಕೊಳವೆ ಚಿಮಣಿಯನ್ನು ಸ್ಥಾಪಿಸಿದ್ದಾರೆ.  ಕರ್ಪೂರ ಕುಂಡದಲ್ಲಿ ಸಲ್ಲಿರುವ ಹರಕೆ ಕರ್ಪೂರವು ಉರಿದು ಕೊಳೆವೆಯಲ್ಲಿ ಹೊಗೆ ಹೋಗಿ ಮಾಲಿನ್ಯವು ಸ್ವಲ್ಪ ಮಟ್ಟಿಗೆ ನಿಯಂತ್ರಣಗೊಳ್ಳಲಿದೆ.

ದೇವಸ್ಥಾನದ ಮುಂಭಾಗದಲ್ಲಿದ್ದ ಮಣ್ಣಿನ ರಸ್ತೆಯನ್ನು ಇದೀಗ ಸಂಪೂರ್ಣವಾಗಿ ಕಾಂಕ್ರೀಟಿನಿಂದ ನಿರ್ಮಿಸಲಾಗಿದೆ ಹಾಗೂ ದೇವಸ್ಥಾನದ ಸುತ್ತಲೂ ಬಾಕ್ಸ್ ಚರಂಡಿಯನ್ನು ಸ್ಥಳೀಯ ಪಂಚಾಯಿತಿಯ ವತಿಯಿಂದ ನಿರ್ಮಿಸಲಾಗಿದೆ.  ಇದರಿಂದಾಗಿ ಭಕ್ತಾದಿಗಳಿಗೆ ಓಡಾಡಲು ಅನುಕೂಲ ಉಂಟಾಗಲಿದೆ.




Share:

ಶನಿವಾರ, ಆಗಸ್ಟ್ 19, 2017

ವಿಶ್ವ ಛಾಯಾಗ್ರಹಣ ದಿನ

Arsikere


ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ, ಅರಸೀಕೆರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಅರಸೀಕೆರೆ ಕಸಬಾ ಹೋಬಳಿ ಬೊಮ್ಮೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

ಅರಸೀಕೆರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಬಿ.ವಿ. ಗೋವಿಂದರಾಜು ನಾಯ್ಡು ರವರು ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಿದರು.  ಶ್ರೀರಾಮ ಜಮದಗ್ನಿ ರವರು ವಿಶ್ವ ಛಾಯಾಗ್ರಹಣ ದಿನದ ಕುರಿತು ಮಾತನಾಡಿದರು. 

ಸಂಘದ ಕಾರ್ಯದರ್ಶಿ ಜಗದೀಶ್, ಖಜಾಂಚಿ ಖಲೀಲ್, ಶಾಲೆಯ ಮುಖ್ಯೋಪಾಧ್ಯಾಯರಾದ ಸುಮಿತ್ರ, ಶಾಲೆಯ ಶಿಕ್ಷಕರು ಹಾಗೂ ಛಾಯಾಗ್ರಾಹಕ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಮಕ್ಕಳಿಗೆ ಸಿಹಿ ವಿತರಣೆ ಮಾಡಲಾಯಿತು.





Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....