ಶನಿವಾರ, ಡಿಸೆಂಬರ್ 31, 2016

2016 ನೇ ಇಸವಿಗೆ ವಿದಾಯ

2016 ನೇ ಇಸವಿಗೆ ವಿದಾಯ

ಅರಸೀಕೆರೆ ತಾಲ್ಲೂಕಿಗೆ 2016ನೇ ಇಸವಿಯು ಭೀಕರ ಕ್ಷಾಮದ ಮುನ್ಸೂಚನೆ ನೀಡಿತು..  ಎಂದಿನಂತೆ ಮಳೆಯ ಕೊರತೆಯಿಂದ ಜಾನುವಾರುಗಳ ಮೇವಿಗೆ ಹಾಗೂ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಯಿತು.  7600 ಹೆಕ್ಟೇರ್ ನಷ್ಟು ಕೃಷಿ ಭೂಮಿ ಇರುವ ನಮ್ಮ ತಾಲ್ಲೂಕಿನಲ್ಲಿ ಕೇವಲ 155 ಹೆಕ್ಟೇರ್ ನಷ್ಟು (ಶೇಕಡಾ 2%) ಮಾತ್ರ ಕೃಷಿ ನಡೆದಿದೆ ಎಂದರೆ ನಮ್ಮ ತಾಲ್ಲೂಕಿನ ಬರದ ಪರಿಸ್ಥಿತಿ ಹೇಗಿದೆ ಎಂದು ಊಹಿಸಬಹುದು.  ಇನ್ನು ಅಲ್ಪಸ್ವಲ್ಪ ಬೆಳೆ ಬೆಳೆದ ರೈತರಿಗೆ ಕೀಟ ಬಾಧೆ, ಬೆಳೆಗಳಿಗೆ ರೋಗಬಾಧೆ ತಗುಲಿ ಮತ್ತಷ್ಟು ಹಾನಿಯಾಯಿತು.  ವಾಣಿಜ್ಯ ಬೆಳೆಗಳಾದ ತೆಂಗು ಹಾಗೂ ಕೊಬ್ಬರಿಯ ಬೆಲೆ ಕುಸಿತ ರೈತರಿಗೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿತು.  ಸಾಲ ಮಾಡಿ ಬೋರ್ ಕೊರೆಸಿದರೆ 800 ಅಡಿ ಆಳ ಹೋದರೂ ಹನಿ ನೀರು ಸಿಗುತ್ತಿಲ್ಲ.  ಜಲ ಕ್ಷಾಮ ಈಗಾಗಲೇ ನಮ್ಮ ತಾಲ್ಲೂಕಿನಲ್ಲಿ ಪ್ರಾರಂಭಗೊಂಡಿದೆ.  ಮುಂಬರುವ ದಿನಗಳಲ್ಲಿ ನಮ್ಮ ತಾಲ್ಲೂಕಿನ ರೈತರು ಹಾಗೂ ಗ್ರಾಮೀಣ ಭಾಗದ ಜನರು ಹೇಗೆ ಜೀವನ ಮಾಡುತ್ತಾರೋ ಆ ದೇವರೇ ಬಲ್ಲ.

ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ಈ ವರ್ಷ ಒಂದೇ ಒಂದು ಹನಿ ನೀರು ಬಾರದೇ ತನ್ನ ಬರಡುತನವನ್ನು ಮುಂದುವರೆಸಿತು.  ಬಿಸಿಲು ಹೀಗೆಯೇ ಮುಂದುವರಿದರೆ ಅಲ್ಪಸ್ವಲ್ಪ ನೀರಿರುವ ಅರಸೀಕೆರೆಯ ಕಂತೇನಹಳ್ಳಿ ಕೆರೆಯೂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ ಬರಡು ಭೂಮಿಯಂತಾಗುವುದರಲ್ಲಿ ಸಂಶಯವಿಲ್ಲ. 

ನಿರಾಶೆಯ ಕಾರ್ಮೋಡದ ನಡುವೆ ಒಂದೆರಡು ಆಶಾದಾಯಕ ಕೆಲಸಗಳೂ ನಮ್ಮ ಪಟ್ಟಣದಲ್ಲಿ ಜರುಗಿತು.  ಅರಸೀಕೆರೆ ಶಾಸಕರಾದ ಶ್ರೀ.ಕೆ.ಎಂ.ಶಿವಲಿಂಗೇಗೌಡರ ಅವಿರತ ಪ್ರಯತ್ನದ ಫಲವಾಗಿ ಹೇಮಾವತಿ ಕುಡಿಯುವ ನೀರು ಪಟ್ಟಣದ ಮನೆಮನೆಗೆ ಸರಬರಾಜಾಯಿತು.  ಪಟ್ಟಣಕ್ಕೆ ಅಗತ್ಯವಾಗಿದ್ದ ಒಳಚರಂಡಿ ವ್ಯವಸ್ಥೆಯೂ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿತು.  ಕಾಮಗಾರಿಗಳಿಂದ ಹದಗೆಟ್ಟಿದ್ದ ಕೆಲವು ರಸ್ತೆಗಳಿಗೆ ಡಾಂಬರೀಕರಣವಾಯಿತು.

ಮುಂಬರುವ 2017ನೇ ಇಸವಿಯು ನಮ್ಮ ತಾಲ್ಲೂಕಿಗೆ ಉತ್ತಮ ಮಳೆ ತಂದು ಈ ಭೂಮಿಯಲ್ಲಿ ಉತ್ತಮ ಬೆಳೆ ಬರುವಂತಾಗಲಿ.  ಬರದಿಂದ ಕಂಗೆಟ್ಟಿರುವ ರೈತರ ಮೊಗದಲ್ಲಿ ಸಂತಸ ಅರಳಲಿ ಎಂದು ಹಾರೈಸುತ್ತಾ 2016ನೇ ಇಸವಿಗೆ ವಿದಾಯ ಕೋರುತ್ತೇನೆ.

ಇನ್ನೇನು ಕೆಲವೇ ಕ್ಷಣಗಳಲ್ಲಿ ಮಾನ್ಯ ಪ್ರಧಾನ ಮಂತ್ರಿಯವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ.  ಅವರು ಇಂದು ತೆಗೆದುಕೊಳ್ಳುವ ಕ್ರಮಗಳು ರಾಷ್ಟ್ರಕ್ಕೆ ಒಳ್ಳೆಯದಾಗುವಂತಿರಲಿ ಎಂದು ಬಯಸುತ್ತೇನೆ.

ಶ್ರೀರಾಮ ಜಮದಗ್ನಿ

ಅರಸೀಕೆರೆ.


Share:

ಮಂಗಳವಾರ, ಡಿಸೆಂಬರ್ 13, 2016

ಇಂದು ಮುಂಜಾನೆ ಅರಸೀಕೆರೆಯ ಬಿ.ಹೆಚ್.ರಸ್ತೆ ಹೀಗೆ ಕಾಣುತ್ತಿತ್ತು

ಇಂದು ಮುಂಜಾನೆ ಅರಸೀಕೆರೆಯ ಬಿ.ಹೆಚ್.ರಸ್ತೆ ಹೀಗೆ ಕಾಣುತ್ತಿತ್ತು


Share:

ಸೋಮವಾರ, ಡಿಸೆಂಬರ್ 12, 2016

ಅಚ್ಛೇ ದಿನ್

"ದೇಶಕ್ಕೆ ಅಚ್ಛೇ (ಒಳ್ಳೆಯ) ದಿನ ಬರಬೇಕೆಂದರೆ, ನಾವೂ ಅಚ್ಛೇ (ಒಳ್ಳೆಯ) ಜನ ಆಗಬೇಕು"

ಕಳೆದ ಕೆಲವು ದಿನಗಳಿಂದ ಆದಾಯ ತೆರಿಗೆ (IT) ಹಾಗೂ ಜಾರಿ ನಿರ್ದೇಶನಾಲಯ (ED) ಇಲಾಖೆಯವರ ದಾಳಿಯಲ್ಲಿ ದೊರೆಯುತ್ತಿರುವ ಹಣ, ಚಿನ್ನಗಳ ವಿವರಗಳನ್ನು ಓದುತ್ತಿದ್ದರೆ ಮೈ ಜುಂ ಎನ್ನಿಸುತ್ತಿದೆ.  ಈ ಜನರಿಗೆ ಕೋಟಿ ಕೋಟಿಗಳು ಲೆಕ್ಕಕ್ಕೇ ಇಲ್ಲದಂತಿದೆ. ಅಕ್ರವಾಗಿ ಸಂಪಾದಿಸಿರುವ ಹಣ, ಚಿನ್ನವನ್ನು ಮುಚ್ಚಿಡಲು ದಿನಕ್ಕೊಂದು ಹೊಸಹೊಸ ಜಾಗಗಳನ್ನು ಹುಡುಕುತ್ತಿದ್ದಾರೆ...   

ಇದೆಂತಹ ದಾಹ... ಇದೆಂತಹ ವ್ಯಾಮೋಹ... ಇದೆಂತಹ ದುರಾಸೆ... ಯಾರಿಗಾಗಿ ಈ ಹಣ, ಈ ಚಿನ್ನ, ಆಸ್ತಿ....  ಇದಕ್ಕೊಂದು ಮಿತಿ ಬೇಡವೇ... ಈ ವ್ಯಕ್ತಿಗಳು ತಾವು ಎಷ್ಟು ವರ್ಷಗಳ ಕಾಲ ಬದುಕಿರಬಹುದು ಎಂದು ತಿಳಿದುಕೊಂಡಿರಬಹುದು... 100 ವರ್ಷ, 200 ವರ್ಷ... ಅಥವಾ ಸಾವೇ ಇಲ್ಲದವರೇ... ?... ಇವರ ಜೀವಿತಾವಧಿಯಲ್ಲಿ ಈ ಹಣ, ಚಿನ್ನ, ಆಸ್ತಿಯನ್ನು ಇವರಿಂದ ಅನುಭವಿಸಲು ಸಾಧ್ಯವೇ...? ಏತಕ್ಕಾಗಿ ಇಷ್ಟೆಲ್ಲಾ ಗಳಿಸಿರುವುದು....? ಇಷ್ಟಾದರೂ ತೃಪ್ತಿಯಾಗಿಲ್ಲವೇ...? ಇನ್ನೂ ಎಷ್ಟು ಅವಶ್ಯಕತೆ ಇದೆ ಇವರಿಗೆ..?

ಒಬ್ಬ ವ್ಯಕ್ತಿ ದೇಶ ಬದಲಿಸಲು ಏನೆಲ್ಲಾ ಕಸರತ್ತು ಮಾಡುತ್ತಿದ್ದಾರೆ. ಈ ಭಾರತ ದೇಶವನ್ನು ಉದ್ಧಾರ ಮಾಡುತ್ತೇನೆ, ದೇಶಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂಬ ಶಪಥ ಮಾಡಿ ಹಗಲು ರಾತ್ರಿ ಎನ್ನದೇ ಕೆಲಸ ನಿರ್ವಹಿಸುತ್ತಿರುವ ಮೋದಿ ಒಂದು ಕಡೆಯಾದರೆ, ಮತ್ತೊಂದು ಕಡೆ  ಈ ಬೃಹತ್ ಯೋಜನೆಯನ್ನೇ ಬುಡಬೇಲು ಮಾಡಲು ಹೊಸಹೊಸ ಉಪಾಯಗಳನ್ನು ಹುಡುಕಿ ಕಾಳಧನಿಕರ ಹಣವನ್ನು ಪರಿವರ್ತಿಸಿಕೊಡುತ್ತಿರುವ ವಿವಿಧ ಬ್ಯಾಂಕುಗಳ ಅಧಿಕಾರಿಗಳು....

ನಿಜ... ಕಳೆದ ಮೂವತ್ತು ದಿನಗಳಿಂದ  ನಮ್ಮಂತಹ ಜನಸಾಮಾನ್ಯರಿಗೆ ಹಣಕಾಸಿನ ವಿಷಯದಲ್ಲಿ ತೊಂದರೆಯಾಗಿದೆ....  ನಮ್ಮ ಪರಿಶ್ರಮದಿಂದ, ನಿಯತ್ತಿನಿಂದ ಗಳಿಸಿರುವ ನಮ್ಮ ಹಣವನ್ನು ಬ್ಯಾಂಕುಗಳಿಂದ ಹೊರತೆಗೆಯಲು ಆಗುತ್ತಿಲ್ಲ.  ಶುಭ-ಅಶುಭ ಕಾರ್ಯಕ್ರಮಗಳಿಗೆ ಹಣ ಹೊಂದಿಸಲು ಹರಸಾಹಸ ಪಡಬೇಕಾಗಿದೆ. ಕಟ್ಟಡ ನಿರ್ಮಾಣಕ್ಕೆ ಕೈಹಾಕಿರುವವರಿಗೂ ನೂರೆಂಟು ತೊಂದರೆಯಾಗಿದೆ.  ಕಾರ್ಮಿಕವರ್ಗಕ್ಕೆ ಕೂಲಿ ಹಣ ಸರಿಯಾಗಿ ಪಾವತಿಯಾಗುತ್ತಿಲ್ಲ... ವ್ಯಾಪಾರ ವಹಿವಾಟುಗಳು ಗಣನೀಯ ಪ್ರಮಾಣದಲ್ಲಿ ಕುಸಿತಗೊಂಡಿದೆ.  ಆಸ್ಪತ್ರೆಗಳಲ್ಲಿ ವೈದ್ಯಕೀಯ ವೆಚ್ಚವನ್ನು ಭರಿಸಲು ಕಷ್ಟವಾಗುತ್ತಿದೆ.

ಆದರೂ....  ಮೋದಿಯವರ ಈ ಕ್ರಮದಿಂದ ಈಗ ತೊಂದರೆಯಾದರೂ ಮುಂದೆ ಒಳ್ಳೆಯದಾಗಬಹುದು, ಐವತ್ತು ದಿನಗಳ ಅವಕಾಶವನ್ನು ಕೇಳಿದ ಮೋದಿಗಾಗಿ ಈ ತೊಂದರೆ ಅನುಭವಿಸೋಣ ಎಂದು ನಮ್ಮಂತಹ ಕೋಟ್ಯಾಂತರ ಜನರು ಈ ತಾತ್ಕಾಲಿಕ ನೋವನ್ನು ಸಹಿಸಿಕೊಂಡಿದ್ದೇವೆ....

"ಅಕಸ್ಮಾತ್ ಈ ನೋಟುರದ್ದತಿ ಯೋಜನೆಯು ವಿಫಲವಾಯಿತೆಂದರೆ... ಅದು ಖಂಡಿತ ಮೋದಿಯ ಸೋಲಲ್ಲ... ಬದಲಿಗೆ ಈ ದೇಶದ ದುರಾದೃಷ್ಟ ಅಷ್ಟೆ"

ಶ್ರೀರಾಮ ಜಮದಗ್ನಿ

ಅರಸೀಕೆರೆ.
Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....