ಶನಿವಾರ, ಜುಲೈ 29, 2017

ಎಪಿಎಂಸಿ ಚುನಾವಣೆ ಎಂಬ ಮಿನಿ ಸಮರ

Arsikere


ಅರಸೀಕೆರೆ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಒಟ್ಟು 13 ಕ್ಷೇತ್ರಗಳಿಗೆ ಆಗಸ್ಟ್ 10, 2017 ಗುರುವಾರದಂದು ನಡೆಯಲಿರುವ ಚುನಾವಣೆಯು ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದರೆ ತಪ್ಪಾಗಲಾರದು.  ಈ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಅಧಿಕೃತವಾಗಿ ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷದ ಚಿನ್ಹೆಯಿಂದ ಸ್ಪರ್ಧಿಸದಿದ್ದರೂ, ಆ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟಿರುತ್ತಾರೆ.  ಆದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ನಡೆಯುತ್ತಿರುವ ಎಪಿಎಂಸಿ ಚುನಾವಣೆಯು ರಾಜಕೀಯ ಪಕ್ಷಗಳಿಗೆ ಈ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಹೇಗಿದೆ ಎಂದು ತಿಳಿದುಕೊಳ್ಳಲು ಸಹಕಾರಿಯಾಗಲಿದೆ.

2015 ರ ಮತದಾರರ ಪಟ್ಟಿಯಂತೆ ಅರಸೀಕೆರೆ ಕ್ಷೇತ್ರದ (ಜಾವಗಲ್ ಹೋಬಳಿ ಹೊರತುಪಡಿಸಿ) ಮತದಾರರ ಸಂಖ್ಯೆ 2,04,358.  ಈ ಮತದಾರ ಪೈಕಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಗೆ ಮತದಾನದ ಅರ್ಹತೆ ಉಳ್ಳವರು 65,536 (ಜಾವಗಲ್, ಉಂಡಿಗನಾಳು ಕ್ಷೇತ್ರ ಹೊರತುಪಡಿಸಿ).  ಈ ಚುನಾವಣೆಯಲ್ಲಿ ಪಹಣಿ ಖಾತೆ ಉಳ್ಳಂತಹ ವ್ಯಕ್ತಿಗಳು ಮಾತ್ರ ಮತದಾನ ಮಾಡುವ ಅರ್ಹತೆ ಇರುವುದರಿಂದ, ಒಂದೊಂದು ಓಟು ಕೂಡ ಆ ಕುಟುಂಬದ ಬೆಂಬಲ ಯಾವ ಪಕ್ಷಕ್ಕಿದೆ ಎಂದು ಸೂಚನೆ ನೀಡುತ್ತವೆ.  ಉದಾಹರಣೆಗೆ 4 ಜನರ ಒಂದು ಕುಟುಂಬದಲ್ಲಿ, ಮನೆಯ ಯಜಮಾನನ ಹೆಸರಿನಲ್ಲಿ ಮಾತ್ರ ಪಹಣಿ ಖಾತೆ ಇದ್ದು ಆತ ಯಾವ ಪಕ್ಷಕ್ಕೆ ಬೆಂಬಲಿಸುತ್ತಾನೋ, ಆತನ ಕುಟುಂಬದ ಸದಸ್ಯರುಗಳು ಬಹುತೇಕವಾಗಿ ಅದೇ ಪಕ್ಷಕ್ಕೆ ಬೆಂಬಲ ನೀಡುತ್ತಾರೆ.  ಹಾಗಾಗಿ, ಈ ಚುನಾವಣೆಯಲ್ಲಿ ಅರಸೀಕೆರೆ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನರ ಬೆಂಬಲ ಯಾವ ಪಕ್ಷಕ್ಕಿದೆ ಎಂದು ಸ್ಪಷ್ಟವಾಗಿ ಊಹೆ ಮಾಡಬಹುದು.

ರಾಜ್ಯದ ಪ್ರಮುಖ ಮೂರು ರಾಜಕೀಯ ಪಕ್ಷಗಳೂ ತಮ್ಮ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಈಗಾಗಲೇ ಅಖಾಡಕ್ಕಿಳಿಸಿವೆ. ನಾಡಿದ್ದು ಸೋಮವಾರ, ನಾಮಪತ್ರ ಹಿಂತೆಗೆದುಕೊಳ್ಳುವ ದಿನವಾಗಿದ್ದು. 31 ರಂದು ಈ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ದೊರೆಯಲಿದೆ.

ಹಾಲಿ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರಿಗೆ ಅರಸೀಕೆರೆ ಕ್ಷೇತ್ರದಲ್ಲಿ ತಮ್ಮ ಪ್ರಭಾವ ಎಷ್ಟರಮಟ್ಟಿಗೆ ಇದೆ ಎಂಬುದನ್ನು ತೋರಿಸಿಕೊಳ್ಳುವ ಉದ್ದೇಶವಿದ್ದರೆ,  ಕೆಪಿಸಿಸಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ರವರಿಗೆ ತಮ್ಮ ಉಸ್ತುವಾರಿಯಲ್ಲಿ ಅರಸೀಕೆರೆ ಕ್ಷೇತ್ರದ ಜನರ ಬೆಂಬಲ ಹೇಗಿದೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡಿಗೆ ತಿಳಿಸುವ ಅವಶ್ಯಕತೆ ಇದೆ.  ರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿದಿರುವ, ಹಾಗೂ ದೇಶದ ಶೇಕಡಾ 70% ಭಾಗದಲ್ಲಿ ಆಳ್ವಿಕೆ ಇದ್ದರೂ.. ಅರಸೀಕೆರೆ ತಾಲ್ಲೂಕಿನಲ್ಲಿ ಪ್ರಭಾವಿ ನಾಯಕರಿಲ್ಲದೇ ಸೊರಗಿರುವ, ರಾಷ್ಟ್ರೀಯ ಪಕ್ಷವಾದ ಬಿಜೆಪಿ ಪಕ್ಷಕ್ಕೂ ತಮ್ಮ ಖಾತೆ ಎಲ್ಲಾದರೂ ಒಂದು ಕಡೆ ತೆರೆಯಲಿ ಎಂಬ ಆಸೆ ಇದೆ.

ಈ ಎಲ್ಲ ಊಹಾಪೋಹಗಳಿಗೆ ಆಗಸ್ಟ್ 12ನೇ ತಾರೀಖಿನಂದು ನಡೆಯಲಿರುವ ಮತ ಎಣಿಕೆಯ ನಂತರ ಉತ್ತರ ದೊರಕಲಿದೆ.

ಶ್ರೀರಾಮ ಜಮದಗ್ನಿ
ಅರಸೀಕೆರೆ.in
29-07-2017



Share:

ಶುಕ್ರವಾರ, ಜುಲೈ 28, 2017

ಅಶಕ್ತಸ್ತು ಭವೇತ್ ಸಾಧುಃ ಬ್ರಹ್ಮಚಾರೀ ಚ ನಿರ್ಧನಃ |
ವ್ಯಾಧಿತೋ ದೇವಭಕ್ತಶ್ಚ ವೃದ್ಧಾ ನಾರೀ ಪತಿವ್ರತಾ ||
’ಬಲವಿಲ್ಲದವನು ಸಜ್ಜನನಾಗುತ್ತಾನೆ. ಹಣವಿಲ್ಲದವನು ಬ್ರಹ್ಮಚಾರಿಯಾಗುತ್ತಾನೆ. ರೋಗಪೀಡಿತನು ದೇವಭಕ್ತನಾಗುತ್ತಾನೆ. ವಯಸ್ಸಾದ ಹೆಣ್ಣು ಹದಿಬದೆಯಾಗುತ್ತಾಳೆ.’
ಚಾಣಕ್ಯನೀತಿದರ್ಪಣದಲ್ಲಿ ಕಾಣಸಿಗುವ ಈ ಪದ್ಯ ವಿಡಂಬನಾತ್ಮಕವಾದದ್ದು. ಸಜ್ಜನತೆ ಬ್ರಹ್ಮಚರ್ಯ ದೇವಭಕ್ತಿ ಪಾತಿವ್ರತ್ಯ – ಇವುಗಳಲ್ಲೊಂದೊಂದೂ ಅತ್ಯಂತ ಮೌಲ್ಯಯುತವಾದದ್ದು. ಆದರೆ ಬೇರೆ ಗತಿಯಿಲ್ಲದೆ, ಅನಿವಾರ್ಯವಾಗಿ ಅದನ್ನೊಪ್ಪಿಕೊಳ್ಳಬೇಕಾಗಿ ಬಂದಾಗಲಷ್ಟೇ ಸ್ವೀಕರಿಸುವಾತನು ಆದರಾರ್ಹನಾಗುವುದಿಲ್ಲ. ’ನಪುಂಸಕನ ಸಂನ್ಯಾಸ’ ಎಂಬ ನುಡಿಗಟ್ಟೂ ಇದೇ ಅರ್ಥದಲ್ಲಿರುವುದು. ತಾತ್ಪರ್ಯವಿಷ್ಟು - ಸಾಮರ್ಥ್ಯ-ಅವಕಾಶಗಳಿದ್ದಾಗಲೂ ಮೌಲ್ಯವನ್ನು ಮನಗಂಡು ಯಾರು ಸಾಜ್ಜನ್ಯವೇ ಮೊದಲಾದ ಗುಣಗಳನ್ನು ಹೊಂದುತ್ತಾರೋ ಅವರೇ ಮಾನ್ಯರು. ದೌರ್ಬಲ್ಯಾದಿ ಅನಿವಾರ್ಯತೆಗಳಿಂದ ಬರುವ ಸಾಧುತ್ವಾದಿಗಳು ಮೌಲ್ಯಗಳಾಗಲಾರವು.
’ವೃದ್ಧಾ ನಾರೀ ಪತಿವ್ರತಾ’ ಎಂಬೀ ಪಾದ ಕೊನೆಯಲ್ಲಿ ಬರುವ ಇನ್ನೊಂದು ಸುಭಾಷಿತವೂ ಇದೆ –
ಆರ್ತಾ ದೇವಾನ್ ನಮಸ್ಯಂತಿ ತಪಃ ಕುರ್ವಂತಿ ರೋಗಿಣಃ |
ನಿರ್ಧನಾ ದಾನಮಿಚ್ಛಂತಿ ವೃದ್ಧಾ ನಾರೀ ಪತಿವ್ರತಾ ||
ತಾತ್ಪರ್ಯ ಹಿಂದಿನದ್ದೇ.
ಇದೇ ಆಶಯವನ್ನು ವ್ಯಕ್ತಪಡಿಸುವ ಇನ್ನೊಂದು ಸುಭಾಷಿತ –
ನವೇ ವಯಸಿ ಯಃ ಶಾಂತಃ ಸ ಶಾಂತ ಇತಿ ಕಥ್ಯತೇ |
ಧಾತುಷು ಕ್ಷೀಯಮಾಣೇಷು ಶಾಂತಿಃ ಕಸ್ಯ ನ ಜಾಯತೇ ||
ಯೌವನದಲ್ಲಿ ಯಾರು ಇಂದ್ರಿಯಗಳನ್ನು ಹತೋಟಿಯಲ್ಲಿರಿಸಿಕೊಳ್ಳುತ್ತಾನೋ ಅವನೇ ಶಾಂತ (ನಿಗ್ರಹಿ ಅಥವಾ ಸಂನ್ಯಾಸಿ) ಎಂದೆನಿಸುತ್ತಾನೆ. ಧಾತುಗಳು ಕಳೆದು ಹೋಗುತ್ತಿದ್ದಂತೆ ಯಾರು ತಾನೇ ನಿಗ್ರಹಿಗಳಾಗುವುದಿಲ್ಲ

Share:

ಗುರುವಾರ, ಜುಲೈ 27, 2017

ಸುಧಾರಿತ ಗಸ್ತು – ಸರ್ವ ಸದಸ್ಯರ ಸಭೆ

Arsikere


ಅರಸೀಕೆರೆ ಪಟ್ಟಣದ ವಾಚನಾಲಯ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಕಲಾಭವನದಲ್ಲಿ ಅರಸೀಕೆರೆ ಪೊಲೀಸ್ ಉಪವಿಭಾಗದ ವತಿಯಿಂದ “ಸುಧಾರಿತ ಗಸ್ತು – ಸರ್ವ ಸದಸ್ಯರ ಸಭೆ” ಜರುಗಿತು.  ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ.ರಾಹುಲ್ ಕುಮಾರ್ ಶಹಪೂರ್ವಾಡ್ ರವರು ಈ ನೂತನ ಗಸ್ತು ವ್ಯವಸ್ತೆಯ ಬಗ್ಗೆ ಮಾಹಿತಿಯನ್ನು ನೀಡಿದರು.  ಇದೇ ಸಂದರ್ಭದಲ್ಲಿ ಗಸ್ತು ಸದಸ್ಯರುಗಳು ಗಮನಸೆಳೆದ ಪ್ರಶ್ನೆಗಳಿಗೆ ಉತ್ತರಿಸಿದರು.  ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸಿದ್ದರಾಮೇಶ್ವರ, ಗ್ರಾಮಾಂತರ ಪಿ.ಎಸ್.ಐ ಪುರುಷೋತ್ತಮ, ಅಬಕಾರಿ ನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.



Share:

ಭಾನುವಾರ, ಜುಲೈ 16, 2017

ಅರಸೀಕೆರೆ ತಾಲ್ಲೂಕಿನ ಮತದಾರರ ಪಟ್ಟಿ ಪರಿಷ್ಕರಣೆ

Arsikere



ಮುಂಬರುವ ವಿಧಾನಸಭಾ ಚುನಾವಣೆಯ ನಿಮಿತ್ತ ಅರಸೀಕೆರೆ ತಾಲ್ಲೂಕಿನ ಮತದಾರರ ಪಟ್ಟಿಯ ಪರಿಷ್ಕರಣೆಯು 01-07-2017 ರಿಂದ ಪ್ರಾರಂಭಗೊಂಡಿದ್ದು, 30-07-2017ನೇ ತಾರೀಖಿನವರೆಗೆ ನಡೆಯಲಿದೆ. ಮತದಾರರ ಪಟ್ಟಿಗೆ ಹೊಸದಾಗಿ ಹೆಸರನ್ನು ಸೇರ್ಪಡೆ ಮಾಡಿಸುವವರು, ತಿದ್ದುಪಡಿ ಮಾಡಿಸಬೇಕಾದವರು, ಪರಸ್ಥಳಕ್ಕೆ ವಲಸೆ ಹೋಗಿರುವವರ ಹೆಸರನ್ನು ಪಟ್ಟಿಯಿಂದ ತೆರವುಗೊಳಿಸಲು ನಿಮ್ಮ ನಿಮ್ಮ ಮತಗಟ್ಟೆಗೆ ಸಂಬಂಧಿಸಿದ ಚುನಾವಣಾ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ.  ಹೆಚ್ಚಿನ ಮಾಹಿತಿಗೆ ತಾಲ್ಲೂಕು ಕಚೇರಿಯಲ್ಲಿರುವ ಚುನಾವಣಾ ಶಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.

Share:

ಸೋಮವಾರ, ಜುಲೈ 10, 2017

ರಸ್ತೆಯಲ್ಲಿ ಹರಿಯುತ್ತಿದೆ ಅರಸೀಕೆರೆ ಸರ್ಕಾರಿ ಜೆ.ಸಿ.ಆಸ್ಪತ್ರೆಯ ತ್ಯಾಜ್ಯ

Arsikere


ಅರಸೀಕೆರೆ ಪಟ್ಟಣದ ಸರ್ಕಾರಿ ಜೆ.ಸಿ.ಆಸ್ಪತ್ರೆಯ ತ್ಯಾಜ್ಯದ ಗುಂಡಿಯು (Septic Tank) ಸಂಪೂರ್ಣ ಭರ್ತಿಯಾಗಿ, ರಸ್ತೆಯ ಮೇಲೆ ಉಕ್ಕಿ ಹರಿಯುತ್ತಿದ್ದು, ಶಿವಾನಂದ ಕಾಲೋನಿಯ ಜನತೆ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಾದ್ಯಂತ ಡೆಂಗ್ಯೂ, ವೈರಲ್ ಜ್ವರದ ಹಾವಳಿ ಇದೆ, ಈ ನಡುವೆ ಆಸ್ಪತ್ರೆಯ ತ್ಯಾಜ್ಯಗಳು ರಸ್ತೆಯಲ್ಲಿ ನಿಂತು ಅದರಲ್ಲಿ ಕುಳಿತ ಸೊಳ್ಳೆ, ನೊಣಗಳ ಮೂಲಕ ಜನಸಾಮಾನ್ಯರ ಆರೋಗ್ಯಕ್ಕೆ ಮತ್ತಷ್ಟು ತೊಂದರೆ ಉಂಟಾಗುವ ಭೀತಿ ಎದುರಾಗಿದೆ.  ಸರ್ಕಾರಿ ಜೆ.ಸಿ.ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಈ ಕುರಿತು ಶೀಘ್ರ ಗಮನಹರಿಸಿ, ತ್ಯಾಜ್ಯದ ಗುಂಡಿಯನ್ನು ದುರಸ್ತಿಮಾಡಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಶಿವಾನಂದ ಕಾಲೋನಿಯ ನಿವಾಸಿಗಳು ಆಗ್ರಹಿಸಿದ್ದಾರೆ.




Share:

ಶನಿವಾರ, ಜುಲೈ 8, 2017

ಅರಸೀಕೆರೆ ಮೂಲಕ ಸಾಗಿದ ಮಾನ್ಸೂನ್ ಬೈಸಿಕಲ್ ಸವಾರರು

Arsikere


ಬೆಂಗಳೂರಿನ Cadence90  ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ “ಮಾನ್ಸೂನ್ ಬೈಕಿಂಗ್” (ಹಾಸನ-ಚಿಕ್ಕಮಗಳೂರು-ಹಾಸನ) ಪ್ರಯುಕ್ತ ಇಂದು ಬೆಳಿಗ್ಗೆ 31 ಸೈಕ್ಲಿಸ್ಟ್ ಗಳು ಅರಸೀಕೆರೆ ಪಟ್ಟಣದ ಮೂಲಕ ಸಾಗಿದರು.  ಬೆಳಿಗ್ಗೆ 8.30 ರ ಸಮಯಕ್ಕೆ ಅರಸೀಕೆರೆ ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿರುವ ಕೆ.ಪಿ.ಎಸ್ ರವರ ಹೆಚ್.ಪಿ ಪೆಟ್ರೋಲ್ ಬಂಕ್ ಬಳಿ ಆಗಮಿಸಿದ ಸೈಕಲ್ ಸವಾರರು, ಅಲ್ಲಿ ಲಘು ಉಪಹಾರ ಸೇವನೆ ಮಾಡಿದರು.  16 ವರ್ಷದಿಂದ 48 ವರ್ಷದ ವಯೋಮಾನದ 31 ಜನರ ತಂಡದಲ್ಲಿ 6 ಜನ ಮಹಿಳಾ ಸೈಕಲ್ ಸವಾರರೂ ಇದ್ದರು. 50 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿ ಬೆಲೆಬಾಳುವ ಹೈಬ್ರೀಡ್ ಸೈಕಲ್ ಗಳು ಈ ತಂಡದಲ್ಲಿದ್ದವು.

Cadence90 ಸಂಸ್ಥೆಯ ಮುಖ್ಯಸ್ಥೆ ಚೇತನ್ ರಾಮ್ ರವರು ಮಾತನಾಡಿ, ತಮ್ಮ ಸಂಸ್ಥೆಯ ವತಿಯಿಂದ ಪ್ರತಿವರ್ಷ ಮಾನ್ಸೂನ್ ಸಮಯದಲ್ಲಿ ಸೈಕಲ್ ಸವಾರಿಯನ್ನು ಆಯೋಜಿಸಲಾಗುತ್ತದೆ.  ಇದರಲ್ಲಿ ವಿಶೇಷ ತರಬೇತಿಯನ್ನು ಹೊಂದಿದ ವಿವಿಧ ವಯೋಮಾನದ ಸೈಕಲ್ ಸವಾರರು ಪಾಲ್ಗೊಳ್ಳುತ್ತಾರೆ.  ಸವಾರಿಯ ಬಗ್ಗೆ ಸಂಪೂರ್ಣ ಮುಜಾಗರೂಕತಾ ಕ್ರಮಗಳನ್ನು ಕೈಗೊಂಡಿರುತ್ತೇವೆ. ಸೂಕ್ತ ಸ್ಥಳಗಳಲ್ಲಿ ಊಟ-ಉಪಹಾರ ಹಾಗೂ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿರುತ್ತದೆ.  ಸಮಯದಲ್ಲಿ ತುರ್ತು ಸಂದರ್ಭಕ್ಕಾಗಿ ಜೊತೆಯಲ್ಲಿ ವಿಶೇಷ ವಾಹನಗಳನ್ನು ಕರೆದೊಯ್ಯಲಾಗುತ್ತದೆ.  ಈ ಸಲದ ಮಾನ್ಸೂಸ್ ಸವಾರಿಯು ಹಾಸನದಿಂದ ಪ್ರಾರಂಭವಾಗಿ ಅರಸೀಕೆರೆ, ಕಡೂರು, ಬೀರೂರು, ಲಿಂಗದಹಳ್ಳಿ ಮುಖಾಂತರ ಚಿಕ್ಕಮಗಳೂರು ತಲುಪಿ, ಅಲ್ಲಿಂದ ಬೇಲೂರು ಮುಖಾಂತರ ಹಾಸನ ತಲುಪುವಂತೆ ಆಯೋಜಿಸಲಾಗಿದ್ದು, ಇದರ ಒಟ್ಟು ದೂರ ಅಂದಾಜು 200 ಕಿಮೀ ಆಗಲಿದೆ ಎಂದು ತಿಳಿಸಿದರು.  ಅರಸೀಕೆರೆಯಲ್ಲಿ ಉಪಹಾರ ಸೇವನೆಗೆ ಸ್ಥಳಾವಕಾಶ ನೀಡಿದ ಕೆ.ಪಿ.ಎಸ್ ಪ್ರಸನ್ನ ರವರಿಗೆ ಹಾಗೂ ಉಪಹಾರದ ವ್ಯವಸ್ಥೆಗಳನ್ನು ಮಾಡಿದ್ದ ಹೆಚ್.ರಾಮಚಂದ್ರ ರವರಿಗೆ ಧನ್ಯವಾದಗಳನ್ನು ತಿಳಿಸಿದರು.










Share:

ಬುಧವಾರ, ಜುಲೈ 5, 2017

ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಮಹಾ ರಥೋತ್ಸವ

Arsikere

ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಮಹಾ ರಥೋತ್ಸವವು ಬುಧವಾರದಂದು ಭಕ್ತ ಜನಸಾಗರದ ಸಮ್ಮುಖದಲ್ಲಿ ವೈಭೋಗದಿಂದ ಜರುಗಿತು. 

ಇಂದು ಬೆಳಗಿನಿಂದಲೇ ವಿಶೇಷ ಸೇವೆಗಳು ಪ್ರಾರಂಭಗೊಂಡವು, ಯಾತ್ರಾ ದಾನೋತ್ಸವ, ಶ್ರೀ ಕೃಷ್ಣಗಂಧೋತ್ಸವ, ಹೂವಿನ ಸೇವೆ, ನಿತ್ಯೋತ್ಸವ, ಪ್ರಾಕಾರೋತ್ಸವ, ಸೂರ್ಯಮಂಡಲೋತ್ಸವ, ರಥ ಮಂಟಪ ಸೇವೆ, ವಸಂತಸೇವೆ ಹಾಗೂ ರಥದಮೇಲೆ ಪೊಂಗಲು ಸೇವೆಗಳು ಜರುಗಿದವು.  11 ಗಂಟೆಯಿಂದ 12.30 ರೊಳಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ವೈಖಾನಸಾಗಮರೀತ್ಯ ರಥಾರೋಹಣ ಜರುಗಿತು.  ನೆರೆದಿದ್ದ ಸಹಸ್ರಾರು ಭಕ್ತಾಧಿಗಳ ಗೋವಿಂದ ನಾಮಸ್ಮರಣೆಯ ಜಯಘೋಷದ ನಡುವೆ ರಥವನ್ನು ಎಳೆಯಲಾಯಿತು.  ರಥದ ಕಳಸಕ್ಕೆ ಭಕ್ತರು ಬಾಳೆಹಣ್ಣನ್ನು ತೂರಿ ಭಕ್ತಿಸಮರ್ಪಿಸಿದರು.

ಅರಸೀಕೆರೆ ಶಾಸಕರಾದ ಕೆ.ಎಮ್.ಶಿವಲಿಂಗೇಗೌಡರು, ಹಾಸನ ಜಿ.ಪಂ ಅಧ್ಯಕ್ಷೆ ಶ್ವೇತ ದೇವರಾಜ್, ಅರಸೀಕೆರೆ ನಗರಸಭಾಧ್ಯಕ್ಷ ಎಂ.ಸಮೀಉಲ್ಲ, ಉಪಾಧ್ಯಕ್ಷ ಪಾರ್ಥಸಾರಥಿ, ಅರಸೀಕೆರೆ ತಾ.ಪಂ ಅಧ್ಯಕ್ಷೆ ಮಂಜುಳಾಬಾಯಿ ಚಂದ್ರಾನಾಯ್ಕ, ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಎನ್.ವಿ.ನಟೇಶ್ ಸೇರಿದಂತೆ ತಾಲ್ಲೂಕಿನ ಜನಪ್ರತಿನಿಧಿಗಳು, ವಿವಿಧ ಸಮಾಜದ ಮುಖಂಡರುಗಳು, ಕಂದಾಯ ಇಲಾಖೆ, ಮುಜರಾಯಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು, ರಥೋತ್ಸವ ಸಮಿತಿಯ ಅಧ್ಯಕ್ಷರಾದ ಟಿ.ಆರ್.ನಾಗರಾಜ್ ಹಾಗೂ ಸಮಿತಿಯ ಸದಸ್ಯರುಗಳು, ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಜಾತ್ರಾ ಮಹೋತ್ಸವಕ್ಕೆ ಪೊಲೀಸ್ ಇಲಾಖೆಯ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅರಸೀಕೆರೆ ಉಪವಿಭಾಗದ ಡಿ.ವೈ.ಎಸ್.ಪಿ ಧಶರಥಮೂರ್ತಿ ರವರ ನೇತೃತ್ವದಲ್ಲಿ ಜಿಲ್ಲೆಯ ಅನೇಕ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾರ್ಯನಿರ್ವಹಿಸಿದರು.  ಸಿಸಿಟಿವಿ ಕ್ಯಾಮರಾಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿತ್ತು.

ಅರಸೀಕೆರೆ ತಾಲ್ಲೂಕು ಆರೋಗ್ಯ ಇಲಾಖೆಯ ವತಿಯಿಂದ ಜಾತ್ರಾ ಮಹೋತ್ಸವದಲ್ಲಿ ತುರ್ತು ವೈದ್ಯಕೀಯ ಸೇವೆಗಾಗಿ ಆರೋಗ್ಯ ಕೇಂದ್ರವನ್ನು ತೆರೆದು ಅಲ್ಲಿಗೆ ವೈದ್ಯರುಗಳನ್ನು ನೇಮಿಸಲಾಗಿತ್ತು.


ಚಿತ್ರಗಳು : ಶ್ರೀರಾಮ ಜಮದಗ್ನಿ












Share:

ಸೋಮವಾರ, ಜುಲೈ 3, 2017

ಅರಸೀಕೆರೆ ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವದ ಆರನೆಯ ದಿನದ ಕಾರ್ಯಕ್ರಮಗಳು

Arsikere


ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ಆರನೆಯ ದಿನವಾದ ಇಂದು (ಆಷಾಢ ಶುದ್ಧ ದಶಮಿ, 03-07-17 ಸೋಮವಾರದಂದು) ಬೆಳಿಗ್ಗೆ ನಿತ್ಯೋತ್ಸವ, ಪ್ರಹ್ಲಾದ ಪರಿಪಾಲನೋತ್ಸವ ಹಾಗೂ ರಾತ್ರಿ  ಶ್ರೀಯವರಿಗೆ ದೊಡ್ಡ ಗರುಡೋತ್ಸವ, ಕೆಂಚರಾಯಸ್ವಾಮಿಯ ಸೇವೆ ಜರುಗಿತು.  ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.


ಚಿತ್ರಗಳು : ಟಿ.ಎಸ್.ಚಂದ್ರಮೌಳಿ




Share:

ಭಾನುವಾರ, ಜುಲೈ 2, 2017

ಅರಸೀಕೆರೆ ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವದ ಐದನೆಯ ದಿನದ ಕಾರ್ಯಕ್ರಮಗಳು

Arsikere


ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ಐದನೆಯ ದಿನವಾದ ಇಂದು (ಆಷಾಢ ಶುದ್ಧ ನವಮಿ, 02-07-17 ಭಾನುವಾರದಂದು) ಬೆಳಿಗ್ಗೆ ನಿತ್ಯೋತ್ಸವ ಹಾಗೂ ರಾತ್ರಿ  ಶ್ರೀಯವರಿಗೆ  ಪುಷ್ಪಮಂಟಪೋತ್ಸವ ಸೇವೆ ಜರುಗಿತು.  ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ಚಿತ್ರಗಳು : ತಿರುಪತಿ ರಾಜ (ರಾಜಾಹುಲಿ)


Share:

ಶನಿವಾರ, ಜುಲೈ 1, 2017

ಅರಸೀಕೆರೆ ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವದ ನಾಲ್ಕನೆಯ ದಿನದ ಕಾರ್ಯಕ್ರಮಗಳು

ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ನಾಲ್ಕನೆಯ ದಿನವಾದ ಇಂದು (ಆಷಾಢ ಶುದ್ಧ ಅಷ್ಟಮಿ, 01-07-17 ಶನಿವಾರದಂದು) ರಾತ್ರಿ  ಶ್ರೀಯವರಿಗೆ  ಶೇಷವಾಹನೋತ್ಸವ ಸೇವೆ ಜರುಗಿತು.  ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.


ಚಿತ್ರಗಳು : ತಿರುಪತಿ ರಾಜ (ರಾಜಾಹುಲಿ)



Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....