Arsikere
ಅರಸೀಕೆರೆ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಒಟ್ಟು 13 ಕ್ಷೇತ್ರಗಳಿಗೆ ಆಗಸ್ಟ್ 10, 2017 ಗುರುವಾರದಂದು ನಡೆಯಲಿರುವ ಚುನಾವಣೆಯು ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದರೆ ತಪ್ಪಾಗಲಾರದು. ಈ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಅಧಿಕೃತವಾಗಿ ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷದ ಚಿನ್ಹೆಯಿಂದ ಸ್ಪರ್ಧಿಸದಿದ್ದರೂ, ಆ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟಿರುತ್ತಾರೆ. ಆದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ನಡೆಯುತ್ತಿರುವ ಎಪಿಎಂಸಿ ಚುನಾವಣೆಯು ರಾಜಕೀಯ ಪಕ್ಷಗಳಿಗೆ ಈ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಹೇಗಿದೆ ಎಂದು ತಿಳಿದುಕೊಳ್ಳಲು ಸಹಕಾರಿಯಾಗಲಿದೆ.
2015 ರ ಮತದಾರರ ಪಟ್ಟಿಯಂತೆ ಅರಸೀಕೆರೆ ಕ್ಷೇತ್ರದ (ಜಾವಗಲ್ ಹೋಬಳಿ ಹೊರತುಪಡಿಸಿ) ಮತದಾರರ ಸಂಖ್ಯೆ 2,04,358. ಈ ಮತದಾರ ಪೈಕಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಗೆ ಮತದಾನದ ಅರ್ಹತೆ ಉಳ್ಳವರು 65,536 (ಜಾವಗಲ್, ಉಂಡಿಗನಾಳು ಕ್ಷೇತ್ರ ಹೊರತುಪಡಿಸಿ). ಈ ಚುನಾವಣೆಯಲ್ಲಿ ಪಹಣಿ ಖಾತೆ ಉಳ್ಳಂತಹ ವ್ಯಕ್ತಿಗಳು ಮಾತ್ರ ಮತದಾನ ಮಾಡುವ ಅರ್ಹತೆ ಇರುವುದರಿಂದ, ಒಂದೊಂದು ಓಟು ಕೂಡ ಆ ಕುಟುಂಬದ ಬೆಂಬಲ ಯಾವ ಪಕ್ಷಕ್ಕಿದೆ ಎಂದು ಸೂಚನೆ ನೀಡುತ್ತವೆ. ಉದಾಹರಣೆಗೆ 4 ಜನರ ಒಂದು ಕುಟುಂಬದಲ್ಲಿ, ಮನೆಯ ಯಜಮಾನನ ಹೆಸರಿನಲ್ಲಿ ಮಾತ್ರ ಪಹಣಿ ಖಾತೆ ಇದ್ದು ಆತ ಯಾವ ಪಕ್ಷಕ್ಕೆ ಬೆಂಬಲಿಸುತ್ತಾನೋ, ಆತನ ಕುಟುಂಬದ ಸದಸ್ಯರುಗಳು ಬಹುತೇಕವಾಗಿ ಅದೇ ಪಕ್ಷಕ್ಕೆ ಬೆಂಬಲ ನೀಡುತ್ತಾರೆ. ಹಾಗಾಗಿ, ಈ ಚುನಾವಣೆಯಲ್ಲಿ ಅರಸೀಕೆರೆ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನರ ಬೆಂಬಲ ಯಾವ ಪಕ್ಷಕ್ಕಿದೆ ಎಂದು ಸ್ಪಷ್ಟವಾಗಿ ಊಹೆ ಮಾಡಬಹುದು.
ರಾಜ್ಯದ ಪ್ರಮುಖ ಮೂರು ರಾಜಕೀಯ ಪಕ್ಷಗಳೂ ತಮ್ಮ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಈಗಾಗಲೇ ಅಖಾಡಕ್ಕಿಳಿಸಿವೆ. ನಾಡಿದ್ದು ಸೋಮವಾರ, ನಾಮಪತ್ರ ಹಿಂತೆಗೆದುಕೊಳ್ಳುವ ದಿನವಾಗಿದ್ದು. 31 ರಂದು ಈ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ದೊರೆಯಲಿದೆ.
ಹಾಲಿ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರಿಗೆ ಅರಸೀಕೆರೆ ಕ್ಷೇತ್ರದಲ್ಲಿ ತಮ್ಮ ಪ್ರಭಾವ ಎಷ್ಟರಮಟ್ಟಿಗೆ ಇದೆ ಎಂಬುದನ್ನು ತೋರಿಸಿಕೊಳ್ಳುವ ಉದ್ದೇಶವಿದ್ದರೆ, ಕೆಪಿಸಿಸಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ರವರಿಗೆ ತಮ್ಮ ಉಸ್ತುವಾರಿಯಲ್ಲಿ ಅರಸೀಕೆರೆ ಕ್ಷೇತ್ರದ ಜನರ ಬೆಂಬಲ ಹೇಗಿದೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡಿಗೆ ತಿಳಿಸುವ ಅವಶ್ಯಕತೆ ಇದೆ. ರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿದಿರುವ, ಹಾಗೂ ದೇಶದ ಶೇಕಡಾ 70% ಭಾಗದಲ್ಲಿ ಆಳ್ವಿಕೆ ಇದ್ದರೂ.. ಅರಸೀಕೆರೆ ತಾಲ್ಲೂಕಿನಲ್ಲಿ ಪ್ರಭಾವಿ ನಾಯಕರಿಲ್ಲದೇ ಸೊರಗಿರುವ, ರಾಷ್ಟ್ರೀಯ ಪಕ್ಷವಾದ ಬಿಜೆಪಿ ಪಕ್ಷಕ್ಕೂ ತಮ್ಮ ಖಾತೆ ಎಲ್ಲಾದರೂ ಒಂದು ಕಡೆ ತೆರೆಯಲಿ ಎಂಬ ಆಸೆ ಇದೆ.
ಈ ಎಲ್ಲ ಊಹಾಪೋಹಗಳಿಗೆ ಆಗಸ್ಟ್ 12ನೇ ತಾರೀಖಿನಂದು ನಡೆಯಲಿರುವ ಮತ ಎಣಿಕೆಯ ನಂತರ ಉತ್ತರ ದೊರಕಲಿದೆ.
ಶ್ರೀರಾಮ ಜಮದಗ್ನಿ
ಅರಸೀಕೆರೆ.in
29-07-2017
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ