ಸೋಮವಾರ, ನವೆಂಬರ್ 6, 2017

ಅರಸೀಕೆರೆಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ

"ಪರಿವರ್ತನಾ ಯಾತ್ರೆ"


ನವ ಕರ್ನಾಟಕದ ನಿರ್ಮಾಣಕ್ಕಾಗಿ ಭಾರತೀಯ ಜನತಾ ಪಕ್ಷವು ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯು ಇಂದು ಬೆಳಿಗ್ಗೆ ಅರಸೀಕೆರೆಗೆ ಆಗಮಿಸಿತು. ಮಾಜಿ ಮುಖ್ಯಮಂತ್ರಿ ಶ್ರೀ.ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಆಗಮಿಸಿದ ಈ ರಥಯಾತ್ರೆಯು ಅರಸೀಕೆರೆಗೆ ಬರುವ ಹೊತ್ತಿಗೆ ಪಟ್ಟಣದಲ್ಲಿ ಜೋರಾದ ಮಳೆ ಬರುತ್ತಿತ್ತು.  ನೂರಾರು ಕಾರ್ಯಕರ್ತರುಗಳು ಮಳೆಯನ್ನು ಲೆಕ್ಕಿಸದೇ ರಥಯಾತ್ರೆಯ ಜೊತೆ ಬೈಕ್ ರಾಲಿಯಲ್ಲಿ ಪಾಲ್ಗೊಂಡರು.  ರಥಯಾತ್ರೆಗೆಂದೇ ನಿರ್ಮಿಸಿರುವ ವಾಹನದಲ್ಲಿ ಮಾಜಿ ಸಚಿವರಾದ ವಿ.ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆಯವರು ಉಪಸ್ಥಿತರಿದ್ದರು.

ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪನವರು, ಇಂದು "ಕನಕ ಜಯಂತಿ" ಇದ್ದದ್ದರಿಂದ, ಮೊದಲಿಗೆ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ವೇದಿಕೆಯನ್ನೇರಿದರು. ಈ ಸಮಯದಲ್ಲಿ ಸ್ವಲ್ಪ ಹೊತ್ತು ಮಳೆ ನಿಂತಿದ್ದರಿಂದ ಕಾರ್ಯಕ್ರಮ ಸುಗಮವಾಗಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾಜಿ ಸಂಸದೆ ತೇಜಸ್ವಿನಿ ರಮೇಶ್, ಮಾಜಿ ಸಚಿವರಾದ ಶ್ರೀರಾಮುಲು, ವಿ.ಸೋಮಣ್ಣ, ಅರಸೀಕೆರೆಯ ಮಾಜಿ ಶಾಸಕರುಗಳಾದ ಕೆ.ಪಿ.ಪ್ರಭುಕುಮಾರ್, ಎ.ಎಸ್.ಬಸವರಾಜು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಿವಿಟಿ ಬಸವರಾಜು ಹಾಗೂ ಮುಖಂಡರುಗಳು ಮಾತನಾಡಿದರು.

ಕೊನೆಯದಾಗಿ ಬಿ.ಎಸ್.ಯಡಿಯೂರಪ್ಪನವರು ಸಭೆಯನ್ನುದ್ದೇಶಿಸಿ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ಮತ್ತೆ ಜೋರಾದ ಮಳೆ ಪ್ರಾರಂಭವಾಯಿತು.  ಶಾಮಿಯಾನದಿಂದ ಮಳೆನೀರು ಕೆಳಗೆ ಬೀಳತೊಡಗಿದಾಗ ಜನರು ಅನಿವಾರ್ಯವಾಗಿ ಕುಳಿತ ಕುರ್ಚಿಯನ್ನೇ ತಲೆಯಮೇಲೆ ಹಿಡಿದು ಮಳೆಯಿಂದ ರಕ್ಷಣೆ ಪಡೆದರು. ವೇದಿಕೆಯ ಮೇಲಿದ್ದ ಗಣ್ಯರುಗಳೂ ಸಹ ಮಳೆಯಿಂದ ರಕ್ಷಣೆ ಪಡೆಯಲು ಹರಸಾಹಸ ಪಟ್ಟರು.  ಯಡಿಯೂರಪ್ಪನವರು ತಾವು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆಗಳು, ಅರಸೀಕೆರೆ ತಾಲ್ಲೂಕಿಗೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿ, ಹಾಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದರು.

ಕಾರ್ಯಕ್ರಮದಲ್ಲಿ ಅರಸೀಕೆರೆ ನಗರ ಬಿಜೆಪಿ ಅಧ್ಯಕ್ಷ ಮನೋಜ್ ಕುಮಾರ್ ಸ್ವಾಗತಿಸಿದರು, ಬಿಜೆಪಿ ವಕ್ತಾರ ಎನ್.ಡಿ.ಪ್ರಸಾದ್ ನಿರೂಪಣೆ ಮಾಡಿದರು. ಸ್ಥಳೀಯ ಬಿಜೆಪಿ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರಥಯಾತ್ರೆಯು ಅರಸೀಕೆರೆಯಿಂದ ಬಾಣಾವರ, ಜಾವಗಲ್ ಮಾರ್ಗವಾಗಿ ಹಳೇಬೀಡು ತಲುಪಿತು.

















Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....