ಶನಿವಾರ, ಡಿಸೆಂಬರ್ 31, 2016

2016 ನೇ ಇಸವಿಗೆ ವಿದಾಯ

2016 ನೇ ಇಸವಿಗೆ ವಿದಾಯ

ಅರಸೀಕೆರೆ ತಾಲ್ಲೂಕಿಗೆ 2016ನೇ ಇಸವಿಯು ಭೀಕರ ಕ್ಷಾಮದ ಮುನ್ಸೂಚನೆ ನೀಡಿತು..  ಎಂದಿನಂತೆ ಮಳೆಯ ಕೊರತೆಯಿಂದ ಜಾನುವಾರುಗಳ ಮೇವಿಗೆ ಹಾಗೂ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಯಿತು.  7600 ಹೆಕ್ಟೇರ್ ನಷ್ಟು ಕೃಷಿ ಭೂಮಿ ಇರುವ ನಮ್ಮ ತಾಲ್ಲೂಕಿನಲ್ಲಿ ಕೇವಲ 155 ಹೆಕ್ಟೇರ್ ನಷ್ಟು (ಶೇಕಡಾ 2%) ಮಾತ್ರ ಕೃಷಿ ನಡೆದಿದೆ ಎಂದರೆ ನಮ್ಮ ತಾಲ್ಲೂಕಿನ ಬರದ ಪರಿಸ್ಥಿತಿ ಹೇಗಿದೆ ಎಂದು ಊಹಿಸಬಹುದು.  ಇನ್ನು ಅಲ್ಪಸ್ವಲ್ಪ ಬೆಳೆ ಬೆಳೆದ ರೈತರಿಗೆ ಕೀಟ ಬಾಧೆ, ಬೆಳೆಗಳಿಗೆ ರೋಗಬಾಧೆ ತಗುಲಿ ಮತ್ತಷ್ಟು ಹಾನಿಯಾಯಿತು.  ವಾಣಿಜ್ಯ ಬೆಳೆಗಳಾದ ತೆಂಗು ಹಾಗೂ ಕೊಬ್ಬರಿಯ ಬೆಲೆ ಕುಸಿತ ರೈತರಿಗೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿತು.  ಸಾಲ ಮಾಡಿ ಬೋರ್ ಕೊರೆಸಿದರೆ 800 ಅಡಿ ಆಳ ಹೋದರೂ ಹನಿ ನೀರು ಸಿಗುತ್ತಿಲ್ಲ.  ಜಲ ಕ್ಷಾಮ ಈಗಾಗಲೇ ನಮ್ಮ ತಾಲ್ಲೂಕಿನಲ್ಲಿ ಪ್ರಾರಂಭಗೊಂಡಿದೆ.  ಮುಂಬರುವ ದಿನಗಳಲ್ಲಿ ನಮ್ಮ ತಾಲ್ಲೂಕಿನ ರೈತರು ಹಾಗೂ ಗ್ರಾಮೀಣ ಭಾಗದ ಜನರು ಹೇಗೆ ಜೀವನ ಮಾಡುತ್ತಾರೋ ಆ ದೇವರೇ ಬಲ್ಲ.

ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ಈ ವರ್ಷ ಒಂದೇ ಒಂದು ಹನಿ ನೀರು ಬಾರದೇ ತನ್ನ ಬರಡುತನವನ್ನು ಮುಂದುವರೆಸಿತು.  ಬಿಸಿಲು ಹೀಗೆಯೇ ಮುಂದುವರಿದರೆ ಅಲ್ಪಸ್ವಲ್ಪ ನೀರಿರುವ ಅರಸೀಕೆರೆಯ ಕಂತೇನಹಳ್ಳಿ ಕೆರೆಯೂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ ಬರಡು ಭೂಮಿಯಂತಾಗುವುದರಲ್ಲಿ ಸಂಶಯವಿಲ್ಲ. 

ನಿರಾಶೆಯ ಕಾರ್ಮೋಡದ ನಡುವೆ ಒಂದೆರಡು ಆಶಾದಾಯಕ ಕೆಲಸಗಳೂ ನಮ್ಮ ಪಟ್ಟಣದಲ್ಲಿ ಜರುಗಿತು.  ಅರಸೀಕೆರೆ ಶಾಸಕರಾದ ಶ್ರೀ.ಕೆ.ಎಂ.ಶಿವಲಿಂಗೇಗೌಡರ ಅವಿರತ ಪ್ರಯತ್ನದ ಫಲವಾಗಿ ಹೇಮಾವತಿ ಕುಡಿಯುವ ನೀರು ಪಟ್ಟಣದ ಮನೆಮನೆಗೆ ಸರಬರಾಜಾಯಿತು.  ಪಟ್ಟಣಕ್ಕೆ ಅಗತ್ಯವಾಗಿದ್ದ ಒಳಚರಂಡಿ ವ್ಯವಸ್ಥೆಯೂ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿತು.  ಕಾಮಗಾರಿಗಳಿಂದ ಹದಗೆಟ್ಟಿದ್ದ ಕೆಲವು ರಸ್ತೆಗಳಿಗೆ ಡಾಂಬರೀಕರಣವಾಯಿತು.

ಮುಂಬರುವ 2017ನೇ ಇಸವಿಯು ನಮ್ಮ ತಾಲ್ಲೂಕಿಗೆ ಉತ್ತಮ ಮಳೆ ತಂದು ಈ ಭೂಮಿಯಲ್ಲಿ ಉತ್ತಮ ಬೆಳೆ ಬರುವಂತಾಗಲಿ.  ಬರದಿಂದ ಕಂಗೆಟ್ಟಿರುವ ರೈತರ ಮೊಗದಲ್ಲಿ ಸಂತಸ ಅರಳಲಿ ಎಂದು ಹಾರೈಸುತ್ತಾ 2016ನೇ ಇಸವಿಗೆ ವಿದಾಯ ಕೋರುತ್ತೇನೆ.

ಇನ್ನೇನು ಕೆಲವೇ ಕ್ಷಣಗಳಲ್ಲಿ ಮಾನ್ಯ ಪ್ರಧಾನ ಮಂತ್ರಿಯವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ.  ಅವರು ಇಂದು ತೆಗೆದುಕೊಳ್ಳುವ ಕ್ರಮಗಳು ರಾಷ್ಟ್ರಕ್ಕೆ ಒಳ್ಳೆಯದಾಗುವಂತಿರಲಿ ಎಂದು ಬಯಸುತ್ತೇನೆ.

ಶ್ರೀರಾಮ ಜಮದಗ್ನಿ

ಅರಸೀಕೆರೆ.


Share:

ಮಂಗಳವಾರ, ಡಿಸೆಂಬರ್ 13, 2016

ಇಂದು ಮುಂಜಾನೆ ಅರಸೀಕೆರೆಯ ಬಿ.ಹೆಚ್.ರಸ್ತೆ ಹೀಗೆ ಕಾಣುತ್ತಿತ್ತು

ಇಂದು ಮುಂಜಾನೆ ಅರಸೀಕೆರೆಯ ಬಿ.ಹೆಚ್.ರಸ್ತೆ ಹೀಗೆ ಕಾಣುತ್ತಿತ್ತು


Share:

ಸೋಮವಾರ, ಡಿಸೆಂಬರ್ 12, 2016

ಅಚ್ಛೇ ದಿನ್

"ದೇಶಕ್ಕೆ ಅಚ್ಛೇ (ಒಳ್ಳೆಯ) ದಿನ ಬರಬೇಕೆಂದರೆ, ನಾವೂ ಅಚ್ಛೇ (ಒಳ್ಳೆಯ) ಜನ ಆಗಬೇಕು"

ಕಳೆದ ಕೆಲವು ದಿನಗಳಿಂದ ಆದಾಯ ತೆರಿಗೆ (IT) ಹಾಗೂ ಜಾರಿ ನಿರ್ದೇಶನಾಲಯ (ED) ಇಲಾಖೆಯವರ ದಾಳಿಯಲ್ಲಿ ದೊರೆಯುತ್ತಿರುವ ಹಣ, ಚಿನ್ನಗಳ ವಿವರಗಳನ್ನು ಓದುತ್ತಿದ್ದರೆ ಮೈ ಜುಂ ಎನ್ನಿಸುತ್ತಿದೆ.  ಈ ಜನರಿಗೆ ಕೋಟಿ ಕೋಟಿಗಳು ಲೆಕ್ಕಕ್ಕೇ ಇಲ್ಲದಂತಿದೆ. ಅಕ್ರವಾಗಿ ಸಂಪಾದಿಸಿರುವ ಹಣ, ಚಿನ್ನವನ್ನು ಮುಚ್ಚಿಡಲು ದಿನಕ್ಕೊಂದು ಹೊಸಹೊಸ ಜಾಗಗಳನ್ನು ಹುಡುಕುತ್ತಿದ್ದಾರೆ...   

ಇದೆಂತಹ ದಾಹ... ಇದೆಂತಹ ವ್ಯಾಮೋಹ... ಇದೆಂತಹ ದುರಾಸೆ... ಯಾರಿಗಾಗಿ ಈ ಹಣ, ಈ ಚಿನ್ನ, ಆಸ್ತಿ....  ಇದಕ್ಕೊಂದು ಮಿತಿ ಬೇಡವೇ... ಈ ವ್ಯಕ್ತಿಗಳು ತಾವು ಎಷ್ಟು ವರ್ಷಗಳ ಕಾಲ ಬದುಕಿರಬಹುದು ಎಂದು ತಿಳಿದುಕೊಂಡಿರಬಹುದು... 100 ವರ್ಷ, 200 ವರ್ಷ... ಅಥವಾ ಸಾವೇ ಇಲ್ಲದವರೇ... ?... ಇವರ ಜೀವಿತಾವಧಿಯಲ್ಲಿ ಈ ಹಣ, ಚಿನ್ನ, ಆಸ್ತಿಯನ್ನು ಇವರಿಂದ ಅನುಭವಿಸಲು ಸಾಧ್ಯವೇ...? ಏತಕ್ಕಾಗಿ ಇಷ್ಟೆಲ್ಲಾ ಗಳಿಸಿರುವುದು....? ಇಷ್ಟಾದರೂ ತೃಪ್ತಿಯಾಗಿಲ್ಲವೇ...? ಇನ್ನೂ ಎಷ್ಟು ಅವಶ್ಯಕತೆ ಇದೆ ಇವರಿಗೆ..?

ಒಬ್ಬ ವ್ಯಕ್ತಿ ದೇಶ ಬದಲಿಸಲು ಏನೆಲ್ಲಾ ಕಸರತ್ತು ಮಾಡುತ್ತಿದ್ದಾರೆ. ಈ ಭಾರತ ದೇಶವನ್ನು ಉದ್ಧಾರ ಮಾಡುತ್ತೇನೆ, ದೇಶಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂಬ ಶಪಥ ಮಾಡಿ ಹಗಲು ರಾತ್ರಿ ಎನ್ನದೇ ಕೆಲಸ ನಿರ್ವಹಿಸುತ್ತಿರುವ ಮೋದಿ ಒಂದು ಕಡೆಯಾದರೆ, ಮತ್ತೊಂದು ಕಡೆ  ಈ ಬೃಹತ್ ಯೋಜನೆಯನ್ನೇ ಬುಡಬೇಲು ಮಾಡಲು ಹೊಸಹೊಸ ಉಪಾಯಗಳನ್ನು ಹುಡುಕಿ ಕಾಳಧನಿಕರ ಹಣವನ್ನು ಪರಿವರ್ತಿಸಿಕೊಡುತ್ತಿರುವ ವಿವಿಧ ಬ್ಯಾಂಕುಗಳ ಅಧಿಕಾರಿಗಳು....

ನಿಜ... ಕಳೆದ ಮೂವತ್ತು ದಿನಗಳಿಂದ  ನಮ್ಮಂತಹ ಜನಸಾಮಾನ್ಯರಿಗೆ ಹಣಕಾಸಿನ ವಿಷಯದಲ್ಲಿ ತೊಂದರೆಯಾಗಿದೆ....  ನಮ್ಮ ಪರಿಶ್ರಮದಿಂದ, ನಿಯತ್ತಿನಿಂದ ಗಳಿಸಿರುವ ನಮ್ಮ ಹಣವನ್ನು ಬ್ಯಾಂಕುಗಳಿಂದ ಹೊರತೆಗೆಯಲು ಆಗುತ್ತಿಲ್ಲ.  ಶುಭ-ಅಶುಭ ಕಾರ್ಯಕ್ರಮಗಳಿಗೆ ಹಣ ಹೊಂದಿಸಲು ಹರಸಾಹಸ ಪಡಬೇಕಾಗಿದೆ. ಕಟ್ಟಡ ನಿರ್ಮಾಣಕ್ಕೆ ಕೈಹಾಕಿರುವವರಿಗೂ ನೂರೆಂಟು ತೊಂದರೆಯಾಗಿದೆ.  ಕಾರ್ಮಿಕವರ್ಗಕ್ಕೆ ಕೂಲಿ ಹಣ ಸರಿಯಾಗಿ ಪಾವತಿಯಾಗುತ್ತಿಲ್ಲ... ವ್ಯಾಪಾರ ವಹಿವಾಟುಗಳು ಗಣನೀಯ ಪ್ರಮಾಣದಲ್ಲಿ ಕುಸಿತಗೊಂಡಿದೆ.  ಆಸ್ಪತ್ರೆಗಳಲ್ಲಿ ವೈದ್ಯಕೀಯ ವೆಚ್ಚವನ್ನು ಭರಿಸಲು ಕಷ್ಟವಾಗುತ್ತಿದೆ.

ಆದರೂ....  ಮೋದಿಯವರ ಈ ಕ್ರಮದಿಂದ ಈಗ ತೊಂದರೆಯಾದರೂ ಮುಂದೆ ಒಳ್ಳೆಯದಾಗಬಹುದು, ಐವತ್ತು ದಿನಗಳ ಅವಕಾಶವನ್ನು ಕೇಳಿದ ಮೋದಿಗಾಗಿ ಈ ತೊಂದರೆ ಅನುಭವಿಸೋಣ ಎಂದು ನಮ್ಮಂತಹ ಕೋಟ್ಯಾಂತರ ಜನರು ಈ ತಾತ್ಕಾಲಿಕ ನೋವನ್ನು ಸಹಿಸಿಕೊಂಡಿದ್ದೇವೆ....

"ಅಕಸ್ಮಾತ್ ಈ ನೋಟುರದ್ದತಿ ಯೋಜನೆಯು ವಿಫಲವಾಯಿತೆಂದರೆ... ಅದು ಖಂಡಿತ ಮೋದಿಯ ಸೋಲಲ್ಲ... ಬದಲಿಗೆ ಈ ದೇಶದ ದುರಾದೃಷ್ಟ ಅಷ್ಟೆ"

ಶ್ರೀರಾಮ ಜಮದಗ್ನಿ

ಅರಸೀಕೆರೆ.
Share:

ಮಂಗಳವಾರ, ನವೆಂಬರ್ 29, 2016

ಡಿಜಿಟಲ್ ವ್ಯವಹಾರಕ್ಕೆ ನಾವೆಷ್ಟು ಸಿದ್ಧರಾಗಿದ್ದೀವಿ

ಡಿಜಿಟಲ್ ವ್ಯವಹಾರಕ್ಕೆ ನಾವೆಷ್ಟು ಸಿದ್ಧರಾಗಿದ್ದೀವಿ...


ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರು ಹಳೆಯ 500 ಮತ್ತು 1000 ರೂಪಾಯಿಗಳ ಚಲಾವಣೆಯಯನ್ನು ರದ್ದುಗೊಳಿಸಿದ್ದು ತಮಗೆಲ್ಲಾ ಗೊತ್ತೇ ಇದೆ.  ಮೊನ್ನೆ 27-11-2016, ಭಾನುವಾರದಂದು ಪ್ರಸಾರವಾದ ಪ್ರಧಾನ ಮಂತ್ರಿ ಮೋದಿರವರ "ಮನ್ ಕಿ ಬಾತ್" ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮ ತಮ್ಮ ವ್ಯಾಪಾರದಲ್ಲಿ  ಹಾಗೂ ಇತರೆ ಹಣಕಾಸಿನ ವ್ಯವಹಾರಗಳು ಡಿಜಿಟಲ್ ರೂಪದಲ್ಲಿ  (ಇಂಟರ್ ನೆಟ್ ಬ್ಯಾಂಕಿಗ್, ಮೊಬೈಲ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಕೆ, ಈ-ವ್ಯಾಲೆಟ್ ಇತ್ಯಾದಿಗಳ ಮೂಲಕ) ನಡೆಸುವಂತೆ ಸಲಹೆ ನೀಡಿದ್ದಾರೆ.  ಅಲ್ಲದೇ ದೇಶದ ಯುವ ಜನತೆಯು ತಮಗೆ ಪರಿಚಿತರಿರುವ ಹಿರಿಯರುಗಳಿಗೂ ಈ ಡಿಟಿಜಟ್ ಹಣ ಚಲಾವಣೆಯನ್ನು ಮಾಡುವ ರೀತಿಗಳನ್ನು ತಿಳಿಸಿಕೊಡಿ ಎಂದು ಕರೆ ನೀಡಿದ್ದಾರೆ. 

ಪ್ರಧಾನ ಮಂತ್ರಿಯವರ ಆಲೋಚನೆಯೇನೋ ಅತ್ಯುತ್ತಮವಾಗಿದೆ.  ಆದರೆ ನಮ್ಮ ಭಾರತ ದೇಶದಲ್ಲಿ ಈ ರೀತಿಯ ಡಿಜಿಟಲ್ ವಹಿವಾಟು ಎಷ್ಟರಮಟ್ಟಿಗೆ ಸುರಕ್ಷಿತವಾಗಿ ನಡೆಸಬಹುದು ಎಂಬುದನ್ನೂ ಗಮನಿಸಬೇಕಾಗುತ್ತದೆ. 

ಹಣಕಾಸಿನ ವ್ಯವಹಾರಗಳಲ್ಲಿ ಆನ್ ಲೈನ್ ಮೂಲಕ ಜನರನ್ನು ವಂಚಿಸುವ ಅತಿದೊಡ್ಡ ಜಾಲವೇ ಈ ಜಗತ್ತಿನಲ್ಲಿದೆ.  ಇವರು ಸಾರ್ವಜನಿಕರಿಗೆ ಕರೆ ಮಾಡಿ ಅವರ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡಿನ ಮಾಹಿತಿಯನ್ನು ಪಡೆದು, ಅವರ ಖಾತೆಯಲ್ಲಿರುವ ಹಣವನ್ನು ಕ್ಷಣಮಾತ್ರದಲ್ಲಿ ಲಪಟಾಯಿಸುತ್ತಾರೆ. ಈ ಕೃತ್ಯ ಎಸಗುವುದರಲ್ಲಿ ನೈಜೀರಿಯನ್ ದೇಶದವರು ಕುಖ್ಯಾತಿ ಪಡೆದಿದ್ದಾರೆ. ಅದಕ್ಕಾಗಿ ಇಂತಹ ವಂಚನೆಯನ್ನು "ನೈಜೀರಿಯನ್ ಫ್ರಾಡ್" ಎಂದು ಕರೆಯುತ್ತಾರೆ.  ಈ ರೀತಿಯಾಗಿ ವಂಚನೆಗೊಳಗಾಗುವರು ಕೇವಲ ಅನಕ್ಷರಸ್ಥರೋ, ಡಿಜಿಟಲ್ ಜ್ಞಾನ ಇಲ್ಲದವರೋ ಮಾತ್ರ ಅಲ್ಲ, ಅತ್ಯಂತ ವಿದ್ಯಾವಂತರು, ಐ.ಟಿ ಇಂಜಿನಿಯರ್ ಗಳು, ಅಷ್ಟೇಕೆ  ನಮ್ಮ ಕರ್ನಾಟಕ ರಾಜ್ಯದ ಹಾಲಿ ಪೊಲೀಸ್ ಮಹಾನಿರ್ದೇಶಕರೂ ಕೂಡ ಈ ವಂಚಕರಿಂದ ಹಣ ಕಳೆದುಕೊಂಡಿದ್ದಾರೆ.  ಬಹಳಷ್ಟು ಸಂದರ್ಭದಲ್ಲಿ ಈ ವಂಚಕರನ್ನು ಪತ್ತೆ ಹಚ್ಚುವುದು ಅಸಾಧ್ಯವಾಗಿರುತ್ತದೆ. ಆನ್ ಲೈನ್ ನಲ್ಲಿ  ಒಮ್ಮೆ ಕಳೆದುಕೊಂಡ ಹಣ ಮತ್ತೆ ದೊರಕುವ ಸಾಧ್ಯತೆ ಇಲ್ಲವೆಂದೇ ಹೇಳಬಹುದು.


ಸಾರ್ವಜನಿಕರಿಗೆ ಈರೀತಿಯ ಆನ್ ಲೈನ್ ವಂಚನೆಗಳ ಕುರಿತ ಮಾಹಿತಿಯನ್ನು ತಿಳಿದವರು ನೀಡಬೇಕು.  ಹಾಗೂ ಸರ್ಕಾರವು ಈ ರೀತಿಯ ವಂಚಕರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಜಾರಿಗೊಳಿಸಬೇಕು. ಇವೆಲ್ಲದಕ್ಕೂ ಮೊದಲು ನಮ್ಮ ದೇಶದಲ್ಲಿ ಉತ್ತಮ ಗುಣಮಟ್ಟದ ದೂರವಾಣಿ ಸೌಕರ್ಯ, ಮೊಬೈಲ್ ಸಿಗ್ನಲ್  ಹಾಗೂ ಹೈ ಸ್ಪೀಡ್ ಇಂಟರ್ ನೆಟ್ ಸೌಲಭ್ಯ ಪ್ರತಿಯೊಂದು ಗ್ರಾಮಗಳಿಗೂ ಸಿಗುವಂತಾಗಬೇಕು.  ಆಗ ಮಾತ್ರ ಪ್ರಧಾನಿಯವರ ಕನಸಿನ ಕೂಸಾದ ಡಿಜಿಟಲ್ ಇಂಡಿಯಾ ಸಾಕಾರಗೊಳಿಸಬಹುದು.

ಶ್ರೀರಾಮ ಜಮದಗ್ನಿ
ಅರಸೀಕೆರೆ


Share:

ಭಾನುವಾರ, ನವೆಂಬರ್ 27, 2016

ರಾಜ್ಯಮಟ್ಟದ ಹಳ್ಳಿ ಗುಡ್ಡಗಾಡು ಓಟದ ಸ್ಪರ್ಧೆ

ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ, ಹಾಸನ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಅರಸೀಕೆರೆ ರೋಟರಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಅರಸೀಕೆರೆಯಲ್ಲಿ ರಾಜ್ಯಮಟ್ಟದ ಹಳ್ಳಿ ಗುಡ್ಡಗಾಡು ಓಟದ ಸ್ಪರ್ಧೆಯನ್ನು ದಿನಾಂಕ 27-11-2016ನೇ ಭಾನುವಾರದಂದು ಬೆಳಿಗ್ಗೆ ಆಯೋಜಿಸಲಾಗಿತ್ತು. ರಾಜ್ಯದ ಅನೇಕ ಜಿಲ್ಲೆಗಳ ವಿವಿಧ ವಯೋಮಾನದ ಸುಮಾರು 600ಕ್ಕೂ ಅಧಿಕ ಸ್ಪರ್ಧಾಳುಗಳು, 12 ವಿಭಾಗಳಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.






Share:

ಮಂಗಳವಾರ, ಸೆಪ್ಟೆಂಬರ್ 6, 2016

ಮಾಡಾಳು ಗೌರಮ್ಮನಿಗೆ ಕರ್ಪೂರದ ಹರಕೆ

"ಮಾಡಾಳು ಗೌರಮ್ಮನಿಗೆ ಕರ್ಪೂರದ ಹರಕೆ"


ಅರಸೀಕೆರೆ ತಾಲ್ಲೂಕು ಮಾಡಾಳು ಶ್ರೀ ಸ್ವರ್ಣಗೌರಿ ದೇವಿಯ 10 ದಿನಗಳ ಮಹೋತ್ಸವವು ಇದೇ ತಿಂಗಳ 4 ತಾರೀಖಿನಿಂದ ಪ್ರಾರಂಭವಾಗಿದೆ, ಗೌರಮ್ಮನವರ ವಿಸರ್ಜನಾ ಮಹೋತ್ಸವ 13ನೇ ತಾರೀಖಿನಂದು ನಡೆಯಲಿದೆ.

ಗೌರಮ್ಮನವರಿಗೆ ಕರ್ಪೂರ ಸೇವೆ, ಗುಗ್ಗುಳ ಸೇವೆ ಮಾಡುತ್ತೇವೆಂದು ಭಕ್ತರು ಹರಕೆ ಕಟ್ಟಿಕೊಳ್ಳುತ್ತಾರೆ.  ತಮ್ಮ ಇಷ್ಟಾರ್ಥಗಳು ಪೂರ್ಣವಾದರೆ ಮಾಡಾಳು ಗೌರಮ್ಮನ ದೇವಾಲಯದ ಮುಂಭಾಗದಲ್ಲಿರುವ ಕುಂಡದಲ್ಲಿ ಕರ್ಪೂರದ ಹರಕೆಯನ್ನು ಸಲ್ಲಿಸುತ್ತಾರೆ.  ಅವರವರ ಶಕ್ತ್ಯಾನುಸಾರ 10 ರೂಪಾಯಿ ನಿಂದ ಹಿಡಿದು ಸಾವಿರಾರು ರೂಪಾಯಿಗಳ ವರೆಗೆ ಕರ್ಪೂರವನ್ನು ದೇವಾಲಯದ ಮುಂಭಾಗದ ಕುಂಡದಲ್ಲಿ ಸಲ್ಲಿಸುತ್ತಾರೆ.   ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗುತ್ತಿರುವುದನ್ನು ನೋಡಿದರೆ, ಗೌರಮ್ಮನವರಿಗೆ ಹರಕೆ ಕಟ್ಟಿಕೊಂಡವರಿಗೆ ಉತ್ತಮ ಫಲಗಳು / ಇಷ್ಟಾರ್ಥಗಳು ಖಂಡಿತವಾಗಿಯೂ ದೊರೆಯುತ್ತಿವೆ ಎಂದು ತಿಳಿದುಬರುತ್ತದೆ.

ಕರ್ಪೂರವನ್ನು ಮೊದಲು ಕ್ಯಾಂಫರ್ ಲಾರೆಲ್ ಎಂಬ ಮರಗಳ ತಿರುಳಿನಿಂದ ತಯಾರಿಸುತ್ತಿದ್ದರು.  ಆದರೆ ಕರ್ಪೂರದ ಬೇಡಿಕೆ ಹೆಚ್ಚಾಗತೊಡಗಿದಾಗ ಡಿ-ಪೈನೀನ್ ಎಂಬ ವಸ್ತುವನ್ನು ಬಳಸಿ ಕೃತಕ ವಿಧಾನದಿಂದ ತಯಾರಿಸುತ್ತಿದ್ದಾರೆ. ಇದಲ್ಲದೇ ಟರ್ಪನ್ಟೈನ್ ಬಳಸಿಯೂ ಕರ್ಪೂರವನ್ನು ತಯಾರಿಸುತ್ತಿದ್ದಾರೆ.  ಇತ್ತೀಚೆಗೆ ಎಲ್ಲಕಡೆ ಸಿಗುತ್ತಿರುವುದು ಕೃತಕವಾಗಿ ತಯಾರಿಸುವ ಕರ್ಪೂರ.

ಮಾಡಾಳಿನಲ್ಲಿ ಭಕ್ತರು ಹರಕೆಯ ರೂಪದಲ್ಲಿ ಸಲ್ಲಿಸುವ ಈ ಕರ್ಪೂರದ ಜ್ವಾಲೆಯ ಹೊಗೆಯು ಮುಗಿಲೆತ್ತರಕ್ಕೆ ಏರಿರುತ್ತದೆ.  ಇದರಿಂದ ಸಾಕಷ್ಟು ಪರಿಸರ ಮಾಲಿನ್ಯ ಉಂಟಾಗುತ್ತದೆ.  ಅಷ್ಟೇ ಅಲ್ಲದೇ, ಭಕ್ತರು ಕರ್ಪೂರವನ್ನು ಪ್ಲಾಸ್ಟಿಕ್ ಕವರ್ ಸಮೇತವಾಗಿ ಈ ಕುಂಡಕ್ಕೆ ಹಾಕುವುದರಿಂದ ಈ ಹೊಗೆಯು ವಿಷಕಾರಿಯಾಗಿ ಪರಿಣಮಿಸುತ್ತದೆ.   ಈ ಕುಂಡದ ಸಮೀಪದಲ್ಲಿ ಕೆಲಹೊತ್ತು ಇದ್ದರೆ ಸಾಕು ನಿಮ್ಮ ಶರೀರ, ಬಟ್ಟೆ ಹಾಗೂ ಮೂಗಿನ ಹೊಳ್ಳೆಗಳಲ್ಲಿ ಈ ಹೊಗೆಯು ಅಂಟಿಕೊಳ್ಳುತ್ತದೆ.  ಹತ್ತು ದಿನಗಳ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕರ್ಪೂರವು ಈ ಕುಂಡದಲ್ಲಿ ಉರಿಯುತ್ತದೆ ಎಂದಮೇಲೆ ಇದರಿಂದ ಉಂಟಾಗುವ ಮಾಲಿನ್ಯದ ಪ್ರಮಾಣ ಎಷ್ಟಾಗಬಹುದು ಎಂದು ಊಹಿಸಬಹುದು.

ಕೆಲ ತಿಂಗಳಹಿಂದೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಹೋಗಿದ್ದೆ, ಅಲ್ಲಿ ಭಕ್ತರು  ಅಮ್ಮನವರಿಗೆ ಅಕ್ಕಿಯನ್ನು ಹರಕೆಯ ರೂಪದಲ್ಲಿ ಸಲ್ಲಿಸುತ್ತಾರೆ, ಇದಕ್ಕಾಗಿ ದೇವಾಲಯದ ಮುಂಭಾಗದಲ್ಲಿ ಒಂದು ಕೌಂಟರ್ ಇದೆ, ಅಲ್ಲಿ ನಿಮ್ಮ ಶಕ್ತ್ಯಾನುಸಾರ ಹಣವನ್ನು ಸಂದಾಯ ಮಾಡಿದರೆ, ಆ ಹಣಕ್ಕೆ ಒಂದು ರಸೀತಿಯನ್ನು ಕೊಡುತ್ತಾರೆ, ಆ ರಸೀತಿಯನ್ನು ದೇವಾಲಯದ ಒಳಗಿರುವ ಅಕ್ಕಿ ಹರಕೆ ಸಲ್ಲಿಸುವ ಜಾಗದಲ್ಲಿ ನೀಡಿದರೆ ಒಂದು ಸಣ್ಣ ಬಟ್ಟಲಿನಲ್ಲಿ ಅಕ್ಕಿಯನ್ನು ಕೊಡುತ್ತಾರೆ, ನಾವು ಅದನ್ನು ಅಕ್ಕಿಯ ಪಾತ್ರೆಗೆ ಸುರಿಯಬೇಕು. ಇದು ನಮ್ಮಿಂದಲೇ ದೇವಾಲಯಕ್ಕೆ ಅಕ್ಕಿ ಸಲ್ಲಿಕೆಯಾಗಿದೆ ಎಂದು ಭಕ್ತರ ಮನಸ್ಸಿನಲ್ಲಿ ಮೂಡುವಂತೆ ಮಾಡುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಅಕ್ಕಿ ಸೇವೆಗೆ ಎಷ್ಟೇ ಹಣ ಸಂದಾಯ ಮಾಡಿದ್ದರೂ ನಿಮಗೆ ಒಂದು ಬಟ್ಟಲಿನಷ್ಟು ಅಕ್ಕಿಯನ್ನು ಮಾತ್ರ ಸಲ್ಲಿಸಲು ಅವಕಾಶ ನೀಡುತ್ತಾರೆ.   ಅಂದರೆ, ಒಂದು ರೀತಿಯ  ಸಾಂಕೇತಿಕವಾದ ಕಾರ್ಯ ಜರುಗುತ್ತದೆ.

ಇದೇ ಮಾದರಿಯಲ್ಲಿ ಮಾಡಾಳು ದೇವಾಲಯದ ಆಡಳಿತ ಮಂಡಳಿಯವರು, ದೇವಾಲಯದ ಬಳಿ ಒಂದು ಕರ್ಪೂರದ ಕೌಂಟರ್ ಅನ್ನು ನಿರ್ಮಿಸಿ, ಅಲ್ಲಿ ಭಕ್ತರಿಂದ ಕರ್ಪೂರದ ಹರಕೆ ಕಾಣಿಕೆಯನ್ನು ಸಂಗ್ರಹಿಸಿ, ಅದಕ್ಕೆ ರಸೀತಿಯನ್ನು ನೀಡಿ ಜೊತೆಗೆ ಒಂದು ಸಣ್ಣ ಬಿಲ್ಲೆ ಗಾತ್ರದ ಕರ್ಪೂರವನ್ನು ಅವರಿಗೆ ನೀಡಿ, ಅದನ್ನು ಭಕ್ತರು ಕುಂಡದಲ್ಲಿ ಸಲ್ಲಿಸುವಂತಾದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ… ಇದರಿಂದ ಪ್ರಮುಖವಾಗಿ ಎರಡು ಪ್ರಯೋಜನಗಳಾಗಲಿದೆ.  ಮೊದಲನೆಯದು, ಮಾಲಿನ್ಯ ನಿಯಂತ್ರಣ. ಒಬ್ಬ ವ್ಯಕ್ತಿ ಹತ್ತು ರೂಪಾಯಿಯ ಕರ್ಪೂರದ ಸೇವೆ ಮಾಡಿಸಿದರೂ ಆತನಿಂದ ಒಂದು ಬಿಲ್ಲೆಯಷ್ಟು ಕರ್ಪೂರ ದಹನವಾಗುತ್ತದೆ, ಮತ್ತೊಬ್ಬರು ಹತ್ತು ಸಾವಿರ ರೂಪಾಯಿ ನೀಡಿದರೂ ಒಂದು ಬಿಲ್ಲೆಯಷ್ಟೇ ಪ್ರಮಾಣದ ಕರ್ಪೂರ ದಹನವಾಗುತ್ತದೆ.  ಇದರಿಂದ ಮಾಡಾಳು ದೇವಾಲಯದ ಸುತ್ತಮುತ್ತಲಿನ ಹಾಗೂ ಗ್ರಾಮದಲ್ಲಿನ ಪರಿಸರಕ್ಕೆ ಆಗುವ ಹಾನಿಯನ್ನು ಹಾಗೂ ಭಕ್ತಾದಿಗಳಿಗೆ ಈ ಕರ್ಪೂರದ ಹೊಗೆಯಿಂದಾಗುವ ತೊಂದರೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಡೆಗಟ್ಟಬಹುದು.  ಮತ್ತೊಂದು ಪ್ರಯೋಜನವೆಂದರೆ, ಈ ಕರ್ಪೂರದ ಹರಕೆಯ ಹಣವು ಸಂಪೂರ್ಣವಾಗಿ ದೇವಾಲಯಕ್ಕೆ ಸಲ್ಲಿಕೆಯಾಗುವುದರಿಂದ ಜಾತ್ರಾ ಮಹೋತ್ಸವದ ಸಂದರ್ಭ ಒಂದರೆಲ್ಲೇ ಲಕ್ಷಾಂತರ ರೂಪಾಯಿಗಳ ಕರ್ಪೂರ ಹರಕೆ ಹಣ ದೇವಸ್ಥಾನಕ್ಕೆ ಸಂಗ್ರಹವಾಗುತ್ತದೆ.  ಈ ಹಣವನ್ನು ದೇವಾಲಯದ ಅಭಿವೃದ್ಧಿಕಾರ್ಯ, ಅನ್ನ ದಾಸೋಹ, ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಳಸಬಹುದಾಗಿರುತ್ತದೆ. 

ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸುವಾಗ ಆರಂಭದಲ್ಲಿ ವಿರೋಧಗಳು ಉಂಟಾಗುವುದು ಸಹಜ, ಇಲ್ಲಿಯೂ ಆರಂಭದಲ್ಲಿ ಭಕ್ತಾಧಿಗಳಿಂದ ವಿರೋಧ ಆಗಬಹುದು ಅಥವಾ ಇಲ್ಲದೆಯೂ ಇರಬಹುದು.  ಆದರೆ ಈ ಒಂದು ಕ್ರಮದಿಂದ ಪರಿಸರಕ್ಕೆ ಹಾಗೂ ದೇವಾಲಯಕ್ಕೆ ಒಳಿತಾಗುವುದರಲ್ಲಿ ಸಂಶಯವಿಲ್ಲ.   ಆದ್ದರಿಂದ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ರವರು, ಆರೋಗ್ಯಾಧಿಕಾರಿಗಳು ಹಾಗೂ ಪರಿಸರ ಇಲಾಖೆಯವರು ಮತ್ತು ದೇವಾಲಯದ ಆಡಳಿತ ಮಂಡಲಿಯವರು ಒಟ್ಟಾಗಿ ಕುಳಿತು ಭಕ್ತರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಕರ್ಪೂರದ ಮಾಲಿನ್ಯವನ್ನು ತಡೆಗಟ್ಟುವ ಕುರಿತ ಒಂದು ಯೋಜನೆಯನ್ನು ರೂಪಿಸಿದರೆ ಅದರಿಂದ ಮುಂದೆ ಹಲವು ಪ್ರಯೋಜನಗಳು ದೊರೆಯುವುದರಲ್ಲಿ ಯಾವುದೇ ಸಂದೇಹವಿರುವುದಿಲ್ಲ.

ಶ್ರೀರಾಮ ಜಮದಗ್ನಿ

ಅರಸೀಕೆರೆ
Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....