ಸೋಮವಾರ, ಸೆಪ್ಟೆಂಬರ್ 25, 2017

ರಸ್ತೆ ಅಪಘಾತ : 5 ಜನರಿಗೆ ಗಾಯ

Arsikere : 


ಅರಸೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಿ.ಪಿ.ವೃತ್ತದ ಬಳಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಮುಂಭಾಗ ಇಂದು ಸಂಜೆ ಸಂಭವಿಸಿದ ಅಪಘಾತದಲ್ಲಿ ಐವರಿಗೆ ಗಾಯಗಳಾಗಿದೆ.  ಕಡೂರು ಕಡೆಯಿಂದ ಬೆಂಗಳೂರು ಕಡೆ ಹೋಗುತ್ತಿದ್ದ KA04 MQ 7154 ನಂಬರಿನ ಹುಂಡೈ i20 ಕಾರನ್ನು ಚಾಲನೆ ಮಾಡುತ್ತಿದ್ದ ಶಿವಕುಮಾರ್ ಎಂಬ ವ್ಯಕ್ತಿಯು ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಾಲನೆ ಮಾಡಿದ್ದರ ಪರಿಣಾಮವಾಗಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ ಪಾದಚಾರಿಗಳಿಗೆ ಹಾಗೂ ನಿಲುಗಡೆ ಮಾಡಿದ್ದ ಮಾರುತಿ 800 ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. 

ಅಪಘಾತದಲ್ಲಿ ವೈ.ಬೊಮ್ಮೇನಹಳ್ಳಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಈಶ್ವರಪ್ಪ ಮತ್ತು ಸುಭಾಷ್ ನಗರದ ವಾಸಿಯಾದ ಮಂಜುನಾಥ ಎಂಬುವರಿಗೆ ತಲೆಯ ಭಾಗಕ್ಕೆ ತೀವ್ರವಾದ ಗಾಯಗಾಳಿದ್ದು, ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳಿಸಿಕೊಡಲಾಗಿದೆ.  ಅರಸೀಕೆರೆ ವಿವೇಕಾನಂದ ಬಿಎಡ್ ಕಾಲೇಜಿನ ವಿದ್ಯಾರ್ಥಿನಿಯರಾದ ಜಯಶ್ರೀ ಮತ್ತು ವೀಣಾ ಎಂಬ ಯುವತಿಯರಿಗೆ ಮತ್ತು ಬಸವರಾಜ ಪುರ ಗ್ರಾಮದ ಶಿಕ್ಷಕಿಯಾದ ಮಂಗಳಾಕುಮಾರಿ ಎಂಬುವರಿಗೆ ಗಾಯಗಳಾಗಿದ್ದು, ಅರಸೀಕೆರೆಯ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಾಹನ ಚಾಲಕರನ್ನು ದಸ್ತಗಿರಿ ಮಾಡಲಾಗಿದ್ದು, ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


Share:

ಬುಧವಾರ, ಸೆಪ್ಟೆಂಬರ್ 20, 2017

ದಸರಾ ಬೊಂಬೆಗಳ ಪ್ರದರ್ಶನ

Arsikere



ಶರನ್ನವರಾತ್ರಿ ಪ್ರಯುಕ್ತ ಅರಸೀಕೆರೆ ಪಟ್ಟಣದ ಮಾರುತಿ ನಗರದಲ್ಲಿ ವಾಸವಾಗಿರುವ ನಿವೃತ್ತ ಶಿಕ್ಷಕರಾದ ಕೆ.ಆರ್.ಆನಂದ್ ರವರ ಮನೆಯಲ್ಲಿ ದಸರಾ ಬೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿಟ್ಟಿದ್ದಾರೆ.  ರಾಜಾ ಪ್ರತ್ಯಕ್ಷ ದೇವತಾ ಎಂಬ ಮಾತಿನಂತೆ ಚಂದಣದ ಪಟ್ಟದ ಬೊಂಬೆಗೆ ರಾಜ ರಾಣಿಯರಂತೆ ಅಲಂಕರಿಸಿ ಅಗ್ರಸ್ಥಾನದಲ್ಲಿ ಮಂಟಪ ನಿರ್ಮಿಸಿ ಅದರಲ್ಲಿ ಪ್ರತಿಷ್ಟಾಪಿಸಿದ್ದಾರೆ.  ನಂತರದ ಸಾಲುಗಳಲ್ಲಿ, ದಶಾವತಾರ, ನವದುರ್ಗೆಯರು, ಅಷ್ಟಲಕ್ಷ್ಮಿ, ಶ್ರೀಕೃಷ್ಣಾವತಾರ, ಕಾಳಿಂಗ ಮರ್ದನ, ಶ್ರೀರಾಮ ಪಟ್ಟಾಭಿಷೇಕ, ದಸರೆಯ ಪ್ರಮುಖ ದೇವತೆಗಳಾದ ದುರ್ಗಿ ಹಾಗೂ ಶಾರದೆಯ ವಿಗ್ರಹ, ಪುಸ್ತಕಗಳು, ವಿವಿಧ ದೇವತೆಗಳ ವಿಗ್ರಹಗಳು, ವಿವಾಹ ಮಹೋತ್ಸವ, ವಿವಿಧ ವಾದ್ಯಗಳು, ಪ್ರಾಣಿ ಪಕ್ಷಿಗಳು ಮೊದಲಾದ ಬೊಂಬೆಗಳನ್ನು ಒಪ್ಪವಾಗಿ ಜೋಡಿಸಿದ್ದಾರೆ.  ಕಳೆದ ಕೆಲವು ವರ್ಷಗಳಿಂದ ವಿಶ್ವದಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಯೋಗದಿನದಂದು ಜರುಗುವ ಸೂರ್ಯ ನಮಸ್ಕಾರವನ್ನು ಬೊಂಬೆಗಳಲ್ಲಿ ನಿರ್ಮಿಸಿರುವುದು ಎಲ್ಲರ ಗಮನ ಸೆಳೆಯುತ್ತದೆ. ಆನಂದ್ ರವರು ಸ್ವತಃ ಥರ್ಮೋಕೋಲ್ ನಿಂದ ನಿರ್ಮಿಸಿರುವ ಗಣೇಶನ ವಿಗ್ರಹ, ಈಶ್ವರ, ಅಂಬಾರಿ ಹೊತ್ತ ಆನೆ, ಅರ್ಜುನನಿಗೆ ಗೀತೋಪದೇಶ ಮಾಡುತ್ತಿರುವ ಕೃಷ್ಣ ಮೊದಲಾದ ಕಲಾಕೃತಿಗಳು ಆಕರ್ಶಕವಾಗಿವೆ.  ಕಳೆದ ನಾಲ್ಕು ದಶಕಗಳಿಂದ ಪ್ರತಿವರ್ಷ ನವರಾತ್ರಿಯ ಪಾಡ್ಯದ ದಿನದಿಂದಲೇ ಗೊಂಬೆಗಳನ್ನು ಪ್ರತಿಷ್ಠಾಪಿಸಿ, ಪ್ರತಿ ದಿನ ಸಂಜೆ ಗೊಂಬೆಗಳಿಗೆ ಸಾಂಪ್ರದಾಯಕ ಶೈಲಿಯಲ್ಲಿ ಆರತಿ ಬೆಳಗಿ ಪೂಜಿಸುತ್ತಾರೆ.


“ಹೈಟೆಕ್ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ಇಂದಿನ ಪೀಳಿಗೆಯ ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯವನ್ನು ಪರಿಚಯಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಪ್ರತಿ ಮನೆಗಳಲ್ಲಿ ಈ ರೀತಿಯ ಆಚರಣೆಗಳನ್ನು ನಡೆಸುವುದರಿಂದ, ಸನಾತನ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ತಿಳಿಸಬಹುದು” ಎಂದು ಶ್ರೀಮತಿ ಶಕುಂತಳ ಆನಂದ ಅವರು ತಿಳಿಸಿದರು.



Share:

ಶನಿವಾರ, ಸೆಪ್ಟೆಂಬರ್ 16, 2017

ಅರಸೀಕೆರೆ ಎಪಿಎಂಸಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

Arsikere

ಬಹು ಕುತೂಹಲ ಮೂಡಿಸಿದ್ದ ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ಆಯ್ಕೆ ಜರುಗಿತು.  ಅಧ್ಯಕ್ಷರಾಗಿ ಕಣಕಟ್ಟೆ ಕ್ಷೇತ್ರದಿಂದ ಆಯ್ಕೆಯಾಗಿರುವ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ್ ಮತ್ತು ಉಪಾಧ್ಯಕ್ಷರಾಗಿ ಕುರುವಂಕ ಕ್ಷೇತ್ರದಿಂದ ಆಯ್ಕೆಯಾಗಿರುವ  ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಶಿಧರ ರವರು ಲಾಟರಿ ಮೂಲಕ ಆಯ್ಕೆಯಾದರು.

ಬೆಳಿಗ್ಗೆ ನಾಮಪತ್ರ ಸಲ್ಲಿಕೆ ನಡೆಯಿತು.  ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಉಂಡಿಗನಾಳು ದೇವರಾಜ್ ರವರು ನಾಮಪತ್ರ ಸಲ್ಲಿಸಿದರು.  ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅರ್ಭ್ಯರ್ಥಿ ಕೆಲ್ಲೆಂಗೆರೆ ಕುಮಾರ್ ಮತ್ತು ಬಿಜೆಪಿ ಬೆಂಬಲಿತ ಅರ್ಭ್ಯರ್ಥಿ ಶಶಿಧರ ರವರು ನಾಮಪತ್ರ ಸಲ್ಲಿಸಿದರು. ನಾಮಪತ್ರ ಪರಿಶೀಲನೆಯ ನಂತರ ಚುನಾವಣಾಧಿಕಾರಿಗಳಾದ ಹಾಸನ ಜಿಲ್ಲಾ ಉಪವಿಭಾಗಾಧಿಕಾರಿ ಡಾ|| ಹೆಚ್.ಎಲ್.ನಾಗರಾಜು ರವರು ಮತದಾನಕ್ಕೆ ಆದೇಶ ನೀಡಿದರು. 

16 ಸದಸ್ಯರ ಬಲಾಬಲ ಉಳ್ಳ ಅರಸೀಕೆರೆ ಎಪಿಎಂಸಿಯಲ್ಲಿ, ಜೆಡಿಎಸ್ ಬೆಂಬಲಿತ 8 ಸದಸ್ಯರು, ಕಾಂಗ್ರೆಸ್ ಬೆಂಬಲಿತ 7 ಸದಸ್ಯರು ಮತ್ತು ಒಬ್ಬರು ಬಿಜೆಪಿ ಬೆಂಬಲಿತ ಸದಸ್ಯರಿದ್ದರು.   ಚುನಾವಣೆಯಲ್ಲಿ 8 – 8 ಸಮಬಲದ ಮತದಾನವಾದ್ದರಿಂದ, ಚುನಾವಣಾಧಿಕಾರಿಗಳು ಆಯ್ಕೆ ಪ್ರಕ್ರಿಯೆಯನ್ನು ಚೀಟಿ ಎತ್ತುವುದರ ಮೂಲಕ ನಡೆಸುವಂತೆ ನಿರ್ದೇಶನ ನೀಡಿದರು.  ಲಾಟರಿ ಆಯ್ಕೆಯಲ್ಲಿ ಚಂದ್ರಶೇಖರ್ ರವರು ಅಧ್ಯಕ್ಷರಾಗಿ ಮತ್ತು ಶಶಿಧರ್ ರವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ್ ರವರನ್ನು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರು ಅಭಿನಂದಿಸಿದರು. ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.


ಅರಸೀಕೆರೆ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ರವರಾದ ಎನ್.ವಿ.ನಟೇಶ್ ರವರು ಮತ್ತು ಎಪಿಎಂಸಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಚುನಾವಣೆಯ ಪ್ರಯುಕ್ತ ಎಪಿಎಂಸಿ ಕಚೇರಿಯ ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.


ಅರಸೀಕೆರೆ ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚಂದ್ರಶೇಖರ್

ಆರಸೀಕೆರೆ ಎಪಿಎಂಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶಶಿಧರ್


Share:

ಬುಧವಾರ, ಸೆಪ್ಟೆಂಬರ್ 6, 2017

ತೆಂಗು ಬೆಳೆಗಾರರಿಗೆ ಬರ ಪರಿಹಾರ ಒದಗಿಸಲು ಅರಸೀಕೆರೆ ಶಾಸಕರಿಂದ ಕೇಂದ್ರ ಕೃಷಿ ಸಚಿವರ ಭೇಟಿ

Arsikere



ಸತತ ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗದೇ ಬರಗಾಲದಿಂದ ಕಂಗೆಟ್ಟಿರುವ ತೆಂಗು ಮತ್ತು ಅಡಿಕೆ ಬೆಳೆಗಾರರಿಗೆ  2477.26 ಕೋಟಿ ರೂಪಾಯಿಗಳ ವಿಶೇಷ ಬರ ಪರಿಹಾರ ಘೋಷಿಸುವಂತೆ ಕೇಂದ್ರ ಸಚಿವರಿಗೆ ಇಂದು ಮನವಿ ಮಾಡಲಾಯಿತು.


ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ತೋಟಗಾರಿಕಾ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ರವರ ನೇತೃತ್ವದ ನಿಯೋಗ ಇಂದು ಕೇಂದ್ರ ಕೃಷಿ ಸಚಿವರಾದ ರಾಧಾ ಮೋಹನ ಸಿಂಗ್ ರವರನ್ನು ದೆಹಲಿಯ ಕೃಷಿ ಭವನದಲ್ಲಿ ಭೇಟಿ ಮಾಡಿ ಬರದಿಂದ ಹಾನಿಗೊಳಗಾಗಿರುವ ತೆಂಗು ಮತ್ತು ಅಡಿಕೆ ಬೆಳೆಗಾರರಿಗೆ 2477.22 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡಿದರು.  ಅರಸೀಕೆರೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ಮತ್ತು ಚನ್ನರಾಯಪಟ್ಟಣದ ಶಾಸಕರಾದ ಸಿ.ಎನ್.ಬಾಲಕೃಷ್ಣ ರವರು ನಿಯೋಗದಲ್ಲಿ ಇದ್ದರು.


Share:

ಶನಿವಾರ, ಸೆಪ್ಟೆಂಬರ್ 2, 2017

ಮಾಡಾಳು ಶ್ರೀ ಸ್ವರ್ಣಗೌರಿ ದೇವಿಯ ವಿಸರ್ಜನಾ ಮಹೋತ್ಸವ

Arsikere


ಅರಸೀಕೆರೆ ತಾಲ್ಲೂಕು ಮಾಡಾಳು ಗ್ರಾಮದಲ್ಲಿ ಆಗಸ್ಟ್ 24 ರಂದು ಪ್ರತಿಷ್ಠಾಪಿಸಿದ್ದ ಶ್ರೀ ಸ್ವರ್ಣಗೌರಿ ದೇವಿಯ ವಿಸರ್ಜನಾ ಮಹೋತ್ಸವವು ಇಂದು (ಸೆಪ್ಟೆಂಬರ್ 2, ಶನಿವಾರ) ಸಕಲ ಧಾರ್ಮಿಕ ವಿಧಿವಿಧಾನಗಳೊಡನೆ ಭಕ್ತ ಜನಸಾಗರದ ನಡುವೆ ವಿಜೃಂಭಣೆಯಿಂದ ಜರುಗಿತು.  ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬೆಳಗಿನ ಜಾವದಿಂದಲೇ ಪ್ರಾರಂಭಗೊಂಡವು, ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿದ್ದ ಚಂದ್ರ ಮಂಡಲಕ್ಕೆ ಸ್ವರ್ಣಗೌರಿ ದೇವಿಯನ್ನು ಮಂಗಳ ವಾದ್ಯಗಳೊಡನೆ ಮೆರವಣಿಗೆಯಲ್ಲಿ ಕರೆತರಲಾಯಿತು, ಅಲ್ಲಿ ಸಹಸ್ರಾರು ಭಕ್ತಾಧಿಗಳು ಗುಗ್ಗುಳ ಸೇವೆಯನ್ನು ಮಾಡಿದರು.  ಹಾಗೂ ಹರಕೆ ಹೊತ್ತಿದ್ದ ಭಕ್ತರು ದಿಂಡುರುಳು ಸೇವೆಯನ್ನು ಸಮರ್ಪಿಸಿದರು.  ನಂತರ ಗ್ರಾಮದ ಪ್ರತಿ ಮನೆ ಮನೆಗೆ ದೇವಿಯವರ ಉತ್ಸವ ತೆರಳಿತು, ಗ್ರಾಮಸ್ಥರು ದೇವಿಗೆ ಮಡಿಲಕ್ಕಿ ಸಮರ್ಪಿಸಿ ಧನ್ಯತೆಯನ್ನು ಹೊಂದಿದರು.

ಸಂಜೆ 5.30ಕ್ಕೆ ಕಲ್ಯಾಣಿಯ ಬಳಿಗೆ ಮೆರವಣಿಗೆ ಆಗಮಿಸಿತು. ಅರಸೀಕೆರೆ ಸುಕ್ಷೇತ್ರ ಕೋಡಿಮಠ ಪೀಠಾಧೀಶರಾದ ಶ್ರೀಶ್ರೀಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಮತ್ತು  ಕುಪ್ಪೂರು ಗದ್ದುಗೆ ಮಠದ ಶ್ರೀಶ್ರೀಶ್ರೀ ಡಾ.ಯತೀಶ ಶಿವಾಚಾರ್ಯ ಸ್ವಾಮೀಜಿ ರವರುಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಸ್ವರ್ಣಗೌರಿ ಅಮ್ಮನವರಿಗೆ ಮಂಗಳಾರತಿ ಮಾಡಲಾಯಿತು.  ಕಲ್ಯಾಣಿಯ ಸುತ್ತಲೂ ಕರ್ಪೂರವನ್ನು ಹಚ್ಚುತ್ತಿದ್ದಂತೆ ಸ್ವರ್ಣಗೌರಿ ದೇವಿಯ ವಿಸರ್ಜನೆಯನ್ನು ನೆರವೇರಿಸಲಾಯಿತು.  ವಿಸರ್ಜನಾ ಮಹೋತ್ಸವಕ್ಕೆ ಆಗಮಿಸಿದ್ದ ಎಲ್ಲ ಭಕ್ತಾಧಿಗಳಿಗೆ ಅನ್ನದಾಸೋಹ ವ್ಯವಸ್ತೆ ಮಾಡಲಾಗಿತ್ತು.


ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ್ ರವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.  ಅರಸೀಕೆರೆಯಿಂದ ಮಾಡಾಳಿಗೆ ಹೋಗಿಬರಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ವಿಶೇಷ ಬಸ್ ಸೌಕರ್ಯ ಒದಗಿಸಲಾಗಿತ್ತು.  












Share:

ಶುಕ್ರವಾರ, ಸೆಪ್ಟೆಂಬರ್ 1, 2017

ಅರಸೀಕೆರೆ ನಗರಸಭೆಗೆ ಪ್ರಶಸ್ತಿಯ ಗರಿ

Arsikere


ರಾಜ್ಯದ ಒಟ್ಟು 57 ನಗರಸಭೆಗಳ (CMC) ಪೈಕಿ ಅರಸೀಕೆರೆ ಪಟ್ಟಣದ ನಗರಸಭೆಗೆ “ಬಯಲು ಶೌಚ ಮುಕ್ತ ನಗರ” ಎಂಬ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡಿದೆ.  ನೆನ್ನೆ 31-08-2017 ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿಪತ್ರವನ್ನು ನೀಡಿದರು.  ಅರಸೀಕೆರೆ ನಗರಸಭೆಯ ಉಪಾಧ್ಯಕ್ಷರಾದ ಪಾರ್ಥಸಾರಥಿ ಮತ್ತು ಆಯುಕ್ತರಾದ ಪರಮೇಶ್ ರವರು ಮುಖ್ಯಮಂತ್ರಿಗಳಿಂದ ಪ್ರಶಸ್ತಿಪತ್ರ ಸ್ವೀಕರಿಸಿದರು.




Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....