ಬುಧವಾರ, ಡಿಸೆಂಬರ್ 20, 2017

ಅರಸೀಕೆರೆಯಲ್ಲಿ ಶಿವ ಸಂಚಾರ ನಾಟಕೋತ್ಸವ : ಮೋಳಿಗೆ ಮಾರಯ್ಯ

"ಶಿವ ಸಂಚಾರ ನಾಟಕೋತ್ಸವ"


ಶ್ರೀ ಶಿವಕುಮಾರ ಬಳಗ ಮತ್ತು ತರಳಬಾಳು ಯುವ ವೇದಿಕೆ, ಅರಸೀಕೆರೆ ತಾಲ್ಲೂಕು ಇವರುಗಳ ಸಂಯುಕ್ತಾಶ್ರಯದಲ್ಲಿ, ಅರಸೀಕೆರೆ ಪಟ್ಟಣದ ಹೊಯ್ಸಳೇಶ್ವರ ಕಾಲೇಜು ಆವರಣದಲ್ಲಿ ಡಿಸೆಂಬರ್ 20, 21, 22 ರಂದು ಮೂರು ದಿನಗಳ ಕಾಲ "ಶಿವಸಂಚಾರ ನಾಟಕೋತ್ಸವ" ವನ್ನು ಹಮ್ಮಿಕೊಳ್ಳಲಾಗಿದೆ.

ಮೊದಲ ದಿನದ ನಾಟಕೋತ್ಸವದ ಉದ್ಘಾಟನಾ ಸಮಾರಂಭವು ಇಂದು (20-12-2017) ಸಂಜೆ  ಹಾರನಹಳ್ಳಿ ಸುಕ್ಷೇತ್ರ ಕೋಡಿಮಠ ಶ್ರೀಶ್ರೀಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಜರುಗಿತು. ಅರಸೀಕೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗಂಜಿಗೆರೆ ಚಂದ್ರಶೇಖರ್, ಹಳೆಬೀಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಸಿ.ನಾಗರಾಜು, ಹಾಸನ ಜಿ.ಪಂ. ಸದಸ್ಯರಾದ ಮಾಡಾಳು ಸ್ವಾಮಿ, ತಾ.ಪಂ. ಇ.ಓ ಚಂದ್ರಶೇಖರ್ ಹಾಗೂ ಸಾಧು ವೀರಶೈವ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.

ಇವತ್ತು ಪ್ರದರ್ಶನಗೊಂಡ ನಾಟಕ "ಮೋಳಿಗೆ ಮಾರಯ್ಯ"

ಸಾಣೇಹಳ್ಳಿ ಮಠದ ಪಟ್ಟಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಈ ನಾಟಕದ ರಚನೆ ಮಾಡಿದ್ದಾರೆ.   ಶ್ರೀ ಮಹದೇವ ಹಡಪದ್ ರವರು ನಾಟಕದ ನಿರ್ದೇಶನ ಮಾಡಿದ್ದಾರೆ.

"ಮೋಳಿಗೆ ಮಾರಯ್ಯ" :-
12 ನೇ ಶತಮಾನದ ಬಸವಾದಿ ಶಿವಶರಣರ ತಾತ್ವಿಕ ಬದುಕಿಗೆ ಆಕರ್ಷಿತರಾಗಿ ಬೇರೆ ಬೇರೆ ರಾಜ್ಯ, ರಾಷ್ಟ್ರಗಳಿಂದ ಕಲ್ಯಾಣಕ್ಕೆ ಬಂದವರು ಹಲವರು.  ಅವರಲ್ಲಿ ಮೋಳಿಗೆ ಮಾರಯ್ಯ ಕೂಡ ಒಬ್ಬರು.  ಅವರು ಮೊದಲಿಗೆ ಕಾಶ್ಮೀರ ರಾಜ್ಯದಲ್ಲಿ ರಾಜನಾಗಿದ್ದವರು.  ಆಗ ಅವರ ಹೆಸರು ಮಹದೇವ ಭೂಪಾಲ.  ಅವರು ತಮ್ಮ ಸಂಪತ್ತು, ರಾಜ್ಯ ರಾಜಪದವಿಯನ್ನು ತ್ಯಜಿಸಿ ಸಾಮಾನ್ಯನಂತೆ ಕಲ್ಯಾಣಕ್ಕೆ ಬಂದು ಕಟ್ಟಿಗೆ ಕಾಯಕದ ಮೂಲಕ ಶರಣನಾದ ಪರಿ ಈ ನಾಟಕಲ್ಲಿ ನಿರೂಪಿತವಾಗಿದೆ.  ಅವರೊಡನೆ ಕಲ್ಯಾಣಕ್ಕೆ ಬಂದ ಪತ್ನಿ ಮಹಾದೇವಮ್ಮ, ಕಳ್ಳಚಿಕ್ಕಯ್ಯ ಮತ್ತು ನಿಜಶರಣೆ ಬೊಂತಾದೇವಿಯ ವಿವರವೂ ಇಲ್ಲಿದೆ.  ಶರಣರ ಕಾಯಕಶೀಲ ಬದುಕು ಇಂದಿನ ಜನಮಾನಸಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಈ ನಾಟಕದ ಪ್ರಯೋಗ ರೂಪಿತವಾಗಿದೆ.

ಕಲ್ಯಾಣದಿಂದ ಶರಣರ ವಿಚಾರಗಳ ಪ್ರಚಾರಕ್ಕೆ ಹೋಗಿದ್ದ ಬಹುರೂಪಿಗಳ ಜೋಳಿಗೆಯ ಕಳವು ಮತ್ತು ಬೊಂತಾದೇವಿಯ ಕನಸಿನೊಂದಿಗೆ ಆರಂಭವಾಗುವ ನಾಟಕವು, ವಚನಗಳ ತಾತ್ವಿಕ ಅರಿವನ್ನು ವಿಸ್ತರಿಸುತ್ತಾ ನುಡಿದಂತೆ ನಡೆದ ಶರಣರ ಭಾವ ಬದುಕನ್ನು ವಿಸ್ತಾರಪಡಿಸುವುದು.  "ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ" ಎನ್ನುವ ಸಂದೇಶವನ್ನು ಮಾರಯ್ಯನವರು ಸಮಾಜಕ್ಕೆ ತಿಳಿಸುವರು.

ಬಸವಣ್ಣನವರ ಆಶಯಗಳು ಅವರು ಬದುಕಿದ್ದಾಗಲೇ ಸಾಕಷ್ಟು ಜನಮಾನಸವನ್ನು ತಲುಪಿದ್ದವು.  ದೂರದೂರದ ಶರಣರೆಲ್ಲರೂ ಕಲ್ಯಾಣದತ್ತ ಆಕರ್ಷಿತರಾಗಿ ಬಂದಿದ್ದರು.  ಅಂಥ ಬರುವಿಕೆಯ ಕೇಂದ್ರವಸ್ತುವನ್ನಾಗಿ ಉಳ್ಳ ಈ ನಾಟಕವು, ದಾಸೋಹದ ಮಹಿಮೆಯನ್ನು ಮತ್ತು ಜಂಗಮಾರಾಧನೆಯ ಮಹತ್ತನ್ನು, ಸರಳತೆಯ ಸವಿಯನ್ನು ಹೇಳುತ್ತದೆ.








Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....