ಮಹಾಮಸ್ತಕಾಭಿಷೇಕ ಉದ್ಘಾಟನಾ ಸಮಾರಂಭ
ಜೈನ ಕಾಶಿ ಶ್ರವಣಬೆಳಗೊಳದಲ್ಲಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಗೊಮ್ಮಟೇಶ್ವರ ಭಗವಾನ್ ಶ್ರೀ ಶ್ರೀ ಶ್ರೀ ಬಾಹುಬಲಿ ಮಹಾಸ್ವಾಮಿಯ 88ನೇ ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಇಂದು ಜರುಗಿತು.
ಭಾರತದ ಘನತೆವೆತ್ತ ರಾಷ್ಟ್ರಪತಿಗಳಾದ ಸನ್ಮಾನ್ಯ ಶ್ರೀ ರಾಮನಾಥ ಕೋವಿದ್ ರವರು ಚಾವುಂಡರಾಯ ಮಂಟಪದ ಬೃಹತ್ ವೇದಿಕೆಯ ಮೇಲಿದ್ದ ಬಾಹುಬಲಿಯ ಪ್ರತಿಕೃತಿಯನ್ನು ಅನಾವರಣಗೊಳಿಸಿ, ದೀಪ ಬೆಳಗಿಸಿ 88ನೇ ಮಹಾಮಸ್ತಕಾಭಿಷೇಕಕ್ಕೆ ಇಂದು ಚಾಲನೆ ನೀಡಿದರು.
ರಾಷ್ಟ್ರಪತಿಗಳ ಆಗಮನ ಆಗುತ್ತಿದ್ದಂತೆಯೇ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜುರವರು ಆಗಮಿಸಿದ್ದ ಗಣ್ಯರೆಲ್ಲರಿಗೂ ಸ್ವಾಗತ ಕೋರಿದರು. ನಂತರ ಮಾತನಾಡಿದ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ತಾವು ಪಟ್ಟಾಧಿಕಾರ ಹೊಂದಿದ ನಂತರ ಜರುಗಿದ 1981 ರ ಹಾಗೂ ನಂತರದ ಮಸ್ತಕಾಭಿಷೇಕಗಳ ಬಗ್ಗೆ ಮಾತನಾಡಿದರು. ಶ್ರವಣಬೆಳಗೊಳಕ್ಕೆ ರೈಲು ಸಂಚಾರವನ್ನು ಮಾಡಲು ಶ್ರಮಿಸಿದ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ. ಹೆಚ್.ಡಿ.ದೇವೇಗೌಡರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು ಹಾಗೂ ಈ ವರ್ಷದ ಮಹಾಮಸ್ತಕಾಭಿಷೇಕಕ್ಕೆ ಅನುದಾನ ನೀಡಿದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಆಚಾರ್ಯ ಶ್ರೀ 108 ಶಾಂತಿಸಾಗರ ಮುನಿಮಹಾರಾಜರ ಪರಂಪರೆಯ ಪರಮಪೂಜ್ಯ ಆಚಾರ್ಯ ಶ್ರೀ 108 ವರ್ಧಮಾನಸಾಗರ ಮುನಿ ಮಹಾರಾಜರು ಆಶೀರ್ವಚನವನ್ನು ನೀಡಿ ಬಾಹುಬಲಿಯ ದಿವ್ಯ ಸಂದೇಶವನ್ನು ತಿಳಿಸಿದರು. ನಂತರ ಮಾತನಾಡಿದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು, ತಮ್ಮ ಅಧಿಕಾರಾವಧಿಯಲ್ಲಿ ಮಹಾಮಸ್ತಕಾಭಿಷೇಕ ಜರುಗುತ್ತಿರುವುದು ತಮ್ಮ ಸೌಭಾಗ್ಯವೆಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಯಾವುದೇ ಕೊರತೆ ಉಂಟಾಗದಂತೆ ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದರು. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ರಾಜರ್ಷಿ ಶ್ರೀ ಡಾ.ವೀರೇಂದ್ರ ಹೆಗ್ಗಡೆಯವರು ಮತನಾಡಿ ಏಕಕಾಲದಲ್ಲಿ ಒಂದೇ ವೇದಿಕೆಯಲ್ಲಿ ನೂರಾರು ಜನ ಆಚಾರ್ಯರು, ತ್ಯಾಗಿಗಳು ಹಾಗೂ ಆರ್ಯಿಕಾ ರವರುಗಳ ದರ್ಶನ ಭಾಗ್ಯವನ್ನು ಪಡೆದ ನಾವೇ ಧನ್ಯರು ಎಂದರು. ನಂತರ ರಾಷ್ಟ್ರಪತಿಯವರಿಗೆ ರಾಜ್ಯಸರ್ಕಾರದ ವತಿಯಿಂದ ಹಾಗೂ ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ವಜುಭಾಯಿ ರೂಢಾಭಾಯಿ ವಾಲಾ ರವರು ಜೈನ ಧರ್ಮದ ಅಹಿಂಸಾ ತತ್ವಗಳ ಬಗ್ಗೆ ಮತ್ತು ಬಾಹುಬಲಿಯ ತ್ಯಾಗದ ಬಗ್ಗೆ ಮಾತನಾಡಿದರು. ಕೊನೆಯದಾಗಿ ಮಾತನಾಡಿದ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್ ರವರು ಮೊದಲಿಗೆ ಕನ್ನಡದಲ್ಲಿ ಮಾತನಾಡಿದರು. ತಾವು ಅಧಿಕಾರ ಸ್ವೀಕರಿಸಿದ ನಂತರ ಇದು ಮೂರನೇ ಬಾರಿ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಈ ರಾಜ್ಯಕ್ಕೆ ಬರಲು ಸಂತೋಷವಾಗುತ್ತದೆ ಎಂದರು. ಜಗದ್ವಿಖ್ಯಾತ ಏಕಶಿಲಾ ಮೂರ್ತಿಯಾದ ಗೊಮ್ಮಟೇಶ್ವರನ ಇತಿಹಾಸವನ್ನು ತಿಳಿಸಿದರು. ರಾಷ್ಟ್ರಪತಿಯವರ ಭಾಷಣದ ನಂತರ ಮತ್ತೊಮ್ಮೆ ರಾಷ್ಟ್ರಗೀತೆ ನುಡಿಸಲಾಯಿತು. ರಾಷ್ಟ್ರಪತಿಗಳ ಜೊತೆ ಅವರ ಧರ್ಮಪತ್ನಿ ಶ್ರೀಮತಿ ಸವಿತಾ ಕೋವಿಂದ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೃಹತ್ ವೇದಿಕೆಯ ಎಡಭಾಗದಲ್ಲಿ ಆಚಾರ್ಯರು ಮತ್ತು ತ್ಯಾಗಿಗಳಿಗೆ ಮತ್ತು ಬಲಭಾಗದಲ್ಲಿ ಆರ್ಯಿಕಾ ರವರುಗಳಿಗೆ ಆಸನವನ್ನು ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ.ದೇವೇಗೌಡರು, ಮಹಾಮಸ್ತಕಾಭಿಷೇಕ ರಾಜ್ಯಮಟ್ಟದ ಸಮಿತಿಯ ಸಹ ಅಧ್ಯಕ್ಷರಾದ ಅಭಯಚಂದ್ರ ಜೈನ್, ಹಾಸನ ಜಿಪಂ ಅಧ್ಯಕ್ಷೆ ಶ್ವೇತ ದೇವರಾಜ್, ಹಾಸನ ಜಿಲ್ಲೆಯ ಶಾಸಕರುಗಳಾದ ಸಿ.ಎನ್.ಬಾಲಕೃಷ್ಣ, ಹೆಚ್.ಡಿ.ರೇವಣ್ಣ, ಹೆಚ್.ಕೆ.ಕುಮಾರಸ್ವಾಮಿ, ಹೆಚ್.ಎಸ್.ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ವಿಧಾನಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಮಸ್ತಕಾಭಿಷೇಕ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸರಿತಾ ಎಂ.ಕೆ.ಜೈನ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಕೆ.ರತ್ನಪ್ರಭಾ, ಹಿರಿಯ ಪೊಲೀಸ್ ಅಧಿಕಾರಿಗಳಾದ ಶ್ರೀ ಭಾಸ್ಕರ ರಾವ್, ಶ್ರೀ ಕಮಲ್ ಪಂಥ್, ಜಿಲ್ಲಾಧಿಕಾರಿ ಶ್ರೀಮತಿ ರೋಹಿಣಿ ಸಿಂಧೂರಿ ಸೇರಿದಂತೆ ಗಣ್ಯರುಗಳು ಉಪಸ್ಥಿತರಿದ್ದರು. ಸಾವಿರಾರು ಸಂಖ್ಯೆಯಲ್ಲಿ ಜೈನ ಸಮಾಜಬಾಂಧವರು ಹಾಗೂ ಸಾರ್ವಜನಿಕರುಗಳು ಭಾಗವಹಿಸಿದ್ದರು. ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರಾಹುಲ್ ಕುಮಾರ್ ಶಹಪೂರ್ವಾಡ್ ರವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಶ್ರೀಮಠದ ವತಿಯಿಂದ ಭೋಜನದ ವ್ಯವಸ್ತೆ ಏರ್ಪಾಡು ಮಾಡಲಾಗಿತ್ತು.
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ