ಅನುಸಂಧಾನ-೨೩
ಮದುವೆ ಕೂಡ ರಿಯಾಲಿಟಿ ಷೋ ಆದ ಹೊತ್ತಲ್ಲಿ
ತುಂಬ ಪರಿಚಯದವರ ಮನೆಯಲ್ಲಿ ಮದುವೆ. ಅವರು ಸಾಕಷ್ಟು ಇರುವವರು. ಸಮಾಜದಲ್ಲಿ ಗುರುತಿಸಿಕೊಂಡವರು. ಜೊತೆಗೆ ವ್ಯಾಪಾರ ವ್ಯವಹಾರಗಳ ಗಡಿಬಿಡಿ. ಹಾಗಾಗಿ ಮದುವೆಯ ಅಹ್ವಾನ ಪತ್ರಿಕೆಯನ್ನು ಅವರ ಸಹಾಯಕ ಊರ ತುಂಬ ಹಂಚುತ್ತಿದ್ದಾನೆ. ಮದುವೆಯ ಪತ್ರಿಕೆಯ ಜೊತೆಗೊಂದು ಕಾಗದ ಇದೆ. ಸಮಯಾವಕಾಶದ ಕೊರತೆಯಿಂದಾಗಿ ಖುದ್ದು ಆಹ್ವಾನಿಸಲಾಗುತ್ತಿಲ್ಲ. ಇದನ್ನೇ ವೈಯಕ್ತಿಕ ಆಹ್ವಾನವೆಂದು ಮನ್ನಿಸಿ, ಮದುವೆಗೆ ಬಂದು ವಧು-ವರರನ್ನು ಹಾರೈಸಿ ಇತ್ಯಾದಿ ಇತ್ಯಾದಿ. ಜೊತೆಗೇ ಅವರ ಸಹಾಯಕ ಅಹ್ವಾನ ಪತ್ರಿಕೆಯ ಜೊತೆಯಲ್ಲೇ ಆ ಪತ್ರವನ್ನೂ ಜೊತೆಗೆ ಉಡುಗೊರೆಯ ಪ್ಯಾಕೆಟ್ಟನ್ನೂ ಮನೆ ಮನೆಗೆ ತಲುಪಿಸುತ್ತಿದ್ದಾನೆ. ಅವನ ಕೈಯಲ್ಲಿ ಮೂರು ಬಗೆಯ ಆಹ್ವಾನಪತ್ರಿಕೆಗಳೂ, ವಿವಿಧ ಆಕಾರದ ಉಡುಗೊರೆ ಪೊಟ್ಟಣಗಳೂ ಇವೆ. ಅವನು ಈ ಮೊದಲೇ ಗುರುತು ಹಾಕಿಕೊಂಡಂತೆ ಪತ್ರಿಕೆ ತಲುಪಿಸಬೇಕಾದವರ ಮನೆಯ ಮುಂದೆ ಕಾರು ನಿಲ್ಲಿಸಿ, ಆ ಮನೆಗೆ ಸಲ್ಲಬೇಕಾದ ಪತ್ರಿಕೆಯನ್ನೂ ಉಡುಗೊರೆಯನ್ನೂ ಮದುವೆ ಮನೆಯವರ ಪರವಾಗಿ ತಲುಪಿಸುತ್ತಾನೆ. ಆಹ್ವಾನ ಪತ್ರಿಕೆ ಅದ್ದೂರಿಯಾಗಿದೆ. ಜೊತೆಗಿರುವ ಕೋರಿಕೆ ಪತ್ರಕ್ಕೆ ಖುದ್ದು ಅವರೇ ಸಹಿ ಹಾಕಿದ್ದಾರೆ. ಹಿಂದಿನ ದಿನ ಆರತಕ್ಷತೆ, ಮಾರನೇ ದಿನ ಮದುವೆ, ಅದಾದ ಮೇಲೆ ಬೀಗರೂಟ. ಎಲ್ಲ ವಿವರಗಳೂ ಸರಿಯಾಗಿಯೇ ಇವೆ. ಉಡುಗೊರೆ ಒಪ್ಪಿಸಿಕೊಂಡದ್ದಕ್ಕೆ ಮದುವೆಗೆ ಹೋಗಲೇ ಬೇಕಾದ ಅನಿವಾರ್ಯತೆಯಲ್ಲಿ ಅತಿಥಿ ಸಿಲುಕಿದ್ದಾನೆ.
ಇದ್ದ ಬದ್ದ ಕೆಲಸಗಳನ್ನೆಲ್ಲ ಬದಿಗೊತ್ತಿ ಟ್ರಾಫಿಕ್ಕಿನಿಕ್ಕಟ್ಟಿನಲ್ಲಿ ಅಂತೂ ಇಂತೂ ಮದುವೆ ಮನೆಗೆ ಹೋದರೆ ಅಲ್ಲಿ ಆಗಲೇ ಸರದಿಯ ಸಾಲು. ಈ ಅತಿಥಿಯೂ ಇತರೆ ಅತಿಥಿಗಳಂತೆಯೇ ಸರತಿಯ ಸಾಲು ಸೇರಿಕೊಳ್ಳುತ್ತಾನೆ. ಮದುಮಕ್ಕಳ ಕೈ ಕುಲುಕುವಾಗ ಮುಗುಳ್ನಗೆ. ಉಡುಗೊರೆಯ ಕವರಿನಲ್ಲಿ ಹಣವಿಟ್ಟು ಕವರಿನ ಮೇಲೆ ಚಿತ್ತಾಗದಂತೆ ಹೆಸರು ಬರೆದ ಕವರನ್ನು ಹಸ್ತಾಂತರಿಸಿ ಅಭಿನಂದನೆ ಅಂತ ಹೇಳುವಾಗ ಅದು ಕೇಳದಂತೆ ಹಿನ್ನಲೆ ಸಂಗೀತ. ಹಿಂದಿನಿಂದ ದಬ್ಬುತ್ತಿರುವ ಸರತಿ ಸಾಲು. ಸಾಲಾಗಿ ನಿಲ್ಲಿ ಅನ್ನುವ ಛಾಯಾಗ್ರಾಹಕನ ಅಪ್ಪಣೆ. ಸಾಲಾಗಿ ನಿಲ್ಲುತ್ತಿದ್ದಂತೆ ಕ್ಲಿಕ್ಕೆನ್ನುವ ಕೆಮರಾ, ಪ್ಯಾನ್ ಆಗುವ ವಿಡಿಯೋ ಕ್ಯಾಮರಾ. ಅಲ್ಲಿಗೆ ಆ ಅತಿಥಿಯ ಕತೆ ಮುಗಿಯಿತು.
ಮದುಮಕ್ಕಳು ಅವರ ಜೊತೆಗಿರುವವರೂ ಸಾಲಿನ ತುದಿಗೆ ಬಂದ ಮತ್ತೊಬ್ಬರತ್ತ ಕಣ್ಣು ಹಾಯಿಸುತ್ತಾರೆ. ಮತ್ತೂ ಅಲ್ಲೇ ನಿಂತಿದ್ದರೆ, ಛಾಯಾಗ್ರಾಹಕನೇ ಪಕ್ಕಕ್ಕೆ ಸರೀರಿ ಅಂತ ಸಿಡುಕುತ್ತಾನೆ. ಅಲ್ಲಿಂದ ನಂತರ ಊಟದ ಮನೆಗೆ. ಅಲ್ಲಿ ಅಷ್ಟುದ್ದದ ಕ್ಯೂ. ಬಾಳೆ ಎಲೆ ಊಟ ಬೇಕಿದ್ದರೆ ಕಾಯಬೇಕು. ಬುಫೆಯೂಟ ಆದರೆ ತಟ್ಟೆ ಹಿಡಕೊಂಡು ನಿಂತುಕೊಂಡು ಭಿಕ್ಷಾನ್ನವನ್ನು ಅವಸರದಲ್ಲಿ ಮುಗಿಸಿ ಹೊರಗೆ ಬರಬೇಕು. ಮಿಕ್ಕವರಿಗೆ ಜಾಗ ಬಿಟ್ಟುಕೊಡಬೇಕು. ಒಮ್ಮೆ ಅಲ್ಲಿಂದ ಹೊರಗೆ ಬಿದ್ದರೆ ಮದುವೆ ಮುಗೀತು.
ಇದು ಈಚೆಗೆ ನಡೆಯುತ್ತಿರುವ ಮದುವೆ ಸಂಭ್ರಮ.
ಹಿಂದೆಲ್ಲ ಬರೀ ಮದುವೆಯೇ ಅಲ್ಲ, ಮನೆಯಲ್ಲಿ ನಡೆಯುತ್ತಿದ್ದ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲೂ ನೆಂಟರಿಷ್ಟರ ಜೊತೆ ಸ್ನೇಹಿತರಿಗೂ ಅತಿಥಿಗಳಿಗೂ ಸ್ವತಃ ಆತಿಥೇಯರೇ ಖುದ್ದು ಕರೆ ಕೊಡುತ್ತಿದ್ದರು. ಆಹ್ವಾನ ಪತ್ರಿಕೆ ಹಂಚಲು ವಾರಗಟ್ಟಲೇ ಹಿಡಿಯುತ್ತಿತ್ತು. ಅಂಚೆಗೆ ಹಾಕಿದ ಪತ್ರಿಕೆಗಳು ತಲುಪಿದವೋ ಇಲ್ಲವೋ ಎಂಬ ಆತಂಕವೂ ಇರುತ್ತಿತ್ತು.
ಆದರೆ ಈಗಿನ ಮದುವೆಗಳು ಲಕ್ಷ ರೂಪಾಯಿ ಬಾಡಿಗೆಯ ಅದ್ದೂರಿ ಕಲ್ಯಾಣ ಮಂದಿರಗಳಲ್ಲಿ ನಡೆಯುತ್ತವಾದರೂ ಅಲ್ಲಿ ಪರಸ್ಪರ ಕೂತು ಮಾತಾಡುವುದಕ್ಕೆ ಸಮಯವಿರುವುದಿಲ್ಲ. ಇನ್ನು ಅತಿಥಿಗಳಾಗಿ ಬಂದವರೇ ಪರಸ್ಪರ ಗುರ್ತಿಸಿ ಕೈ ಕುಲಿಕಿ ಇಲ್ಲದ ನಗೆಯನ್ನು ಹಂಚಿಕೊಳ್ಳಬೇಕು. ಇನ್ನು ಮಾತೇನಿದ್ದರೂ ಪಾರ್ಕಿಂಗ್ ಲಾಟ್ನಲ್ಲೋ ಗೇಟಲ್ಲೋ ಜರುಗಬೇಕು. ಅದು ಕೂಡ ಒಂದು ಕೈಲಿ ಮೊಬೈಲು, ಮತ್ಯಾರದೋ ಜೊತೆ ಬೇಡದ ಮಾತಿನೊಂದಿಗೇ ಮುಗಿಯುತ್ತದೆ. ಇನ್ನೊಮ್ಮೆ ಸಿಗೋಣ ಅನ್ನೋದು ಜನಪ್ರಿಯ ಸಂಭಾಷಣೆ. ಎಷ್ಟು ದಿನ ಆಯ್ತೂರಿ ನಿಮ್ಮನ್ನು ನೋಡಿ ಅನ್ನೋದು ಬೋನಸ್ ಸಂಭಾಷಣೆ. ಮನೆಯವರೆಲ್ಲ ಚೆನ್ನಾಗಿದ್ದಾರಾ ಅಂತ ಯಾರಾದರೂ ಕೇಳಿದರೆ ಜನ್ಮಸಾರ್ಥಕ. ಮಿಕ್ಕಂತೆ ಎಲ್ಲವೂ ಸಾಂದರ್ಭಿಕ ಅನಿವಾರ್ಯ ಕರ್ಮ.
ಐದೈದು ದಿನ ಮದುವೆ ಮಾಡುತ್ತಾರೆ. ದುಡ್ಡು ಖರ್ಚು ಮಾಡುತ್ತಾರೆ. ನೂರಾರು ಮಂದಿಗೆ ಊಟ ಹಾಕುತ್ತಾರೆ ಅಂತ ಹಿಂದಿನ ಕಾಲದ ಮದುವೆಗಳನ್ನು ದೂರುತ್ತಿದ್ದರು. ಅದಕ್ಕೆ ಪರ್ಯಾಯವಾಗಿ ಒಂದೇ ದಿನದ ಮದುವೆ ಬಂತು. ಅದು ಕ್ರಮೇಣ ಒಂದೇ ಹೊತ್ತಿಗೆ ಸೀಮಿತವಾಯಿತು. ಹಾಗಂತ ದುಡ್ಡು ಖರ್ಚು ಮಾಡುವುದೇನೂ ಕಮ್ಮಿಯಾಗಲಿಲ್ಲ. ಮನೆಯಲ್ಲಿ ನೆಂಟರ ಜೊತೆಗೆ ಐದು ದಿನ ಮಾಡುವುದಕ್ಕಿಂತ ಹತ್ತು ಪಟ್ಟು ದುಡ್ಡನ್ನು ಛತ್ರಗಳಿಗೆ ಕೊಡಬೇಕಾಗಿ ಬಂತು. ಛತ್ರಕ್ಕೆ ಹೋದರೆ ಹುಡುಗಿ ಕಡೆಯವರು ಯಾರು, ಹುಡುಗನ ಕಡೆಯವರು ಯಾರು, ಹುಡುಗಿಯ ಅಪ್ಪ ಅಮ್ಮ ತಮ್ಮ ತಂಗಿ ಯಾರು ಅನ್ನುವುದೇ ಗೊತ್ತಾಗದಂಥ ಪರಿಸ್ಥಿತಿ. ಎಲ್ಲವೂ ಕ್ಷಣಿಕ ಮತ್ತು ನೀರಮೇಲಿನ ಗುಳ್ಳೆ ಅನ್ನುವ ಫಿಲಾಸಫಿ ನಿಜವಾಗುತ್ತಿರುವುದು ಮದುವೆ ಮನೆಗಳಲ್ಲೇ.
ಇತ್ತೀಚೆಗೊಬ್ಬರು ಸಿಕ್ಕಿದ್ದರು. ಅವರ ಮಗನ ಮದುವೆ ಮುರಿದುಬಿದ್ದಿತ್ತು.ಮ್ಯಾಟ್ರಿಮೋನಿಯಲ್ ಏಜೆನ್ಸಿಯೊಂದರ ಮೂಲಕ ಕುದುರಿದ್ದ ಮದುವೆ ತಿಂಗಳ ಚಪ್ಪರ ತೆಗೆಯುವ ಮೊದಲೇ ಮುಗಿದು ಹೋಗಿತ್ತು. ಪರಸ್ಪರ ಸಂಸಾರಗಳ ವಿವರ ತಿಳಿಯದೇ ಅವರ ಇಷ್ಟಾನಿಷ್ಠಗಳು ಗೊತ್ತಾಗದೇ ಅವರವರ ವೈಯಕ್ತಿಕ ವಿಚಾರಸರಣಿಯೂ ತಿಳಿಯದೇ ಮದುವೆ ಮುರಿದಿತ್ತು. ಹೊಸ ಗಂಡು ಹೆಣ್ಣುಗಳು ಊಟ ತಿಂಡಿ ನಿದ್ರೆಯ ಸಮಯ ಶ್ವಪಚತನ ಸೋಂಭೇರಿತನ ಹೀಗೆ ಹತ್ತು ಹಲವು ವಿಚಾರಗಳು ಕುದುರದಾದಾಗ ಮದುವೆ ಮುರಿದುಕೊಳ್ಳುವುದು ಸಾಮಾನ್ಯವಾಗುತ್ತಿ ದೆ.
ಇಂಥ ಸಂಕಷ್ಟಗಳನ್ನು ಹೆಣ್ಣು ಹೆತ್ತವರೂ ಅನುಭವಿಸಿದ್ದನ್ನು ನೋಡುತ್ತೇವೆ. ದಿನಕ್ಕೊಂದು ಸಂಸಾರ ಒಡೆದ ಸುದ್ದಿ ಕಿವಿಗೆ ಬೀಳುತ್ತಿರುತ್ತದೆ. ಅವುಗಳಲ್ಲಿ ಆರೇಂಜ್ಡ್ ಮದುವೆಯ ಜೊತೆಗೇ ಪ್ರೇಮ ವಿವಾಹಗಳೂ ಇರುತ್ತವೆ.ಬಹುತೇಕ ಅರೇಂಜ್ಡ್ ಮದುವೆ ಕೂಡ ಗೊತ್ತಾಗುವುದು ಮ್ಯಾಟ್ರಿಮೋನಿಯಲ್ ಸೈಟುಗಳಿಂದಲೇ. ಇದನ್ನೆಲ್ಲ ನೋಡುತ್ತಿದ್ದರೆ, ಹಳೆಯ ಕಾಲದ ಮದುವೆಗಳು ಎಷ್ಟು ಮುಖ್ಯವಾಗಿದ್ದವು ಅನ್ನುವುದು ಅರ್ಥವಾಗುತ್ತದೆ.
ಇದೀಗ ಮೂವತ್ತು ವರುಷಗಳ ಹಿಂದೆ ಮದುವೆಯೆಂದರೆ ಸುದೀರ್ಘ ಸಂಭ್ರಮ. ನೆಂಟರಿಷ್ಟರೆಲ್ಲ ದಿನಗಟ್ಟಲೆ ಮೊದಲೇ ಬರುತ್ತಿದ್ದರು. ಮನೆಯಲ್ಲಿ ಚಪ್ಪರ ಏಳುತ್ತಿತ್ತು. ಚಿಕ್ಕಮ್ಮ ದೊಡ್ಡಮ್ಮನ ಮಕ್ಕಳು, ಅತ್ತೆ ಮಗ, ಮಾವನ ಮಗಳು, ಅವರ ಪಕ್ಕದ ಮನೆಯ ಹುಡುಗ, ಕೊನೇ ಬೀದಿಯ ಹುಡುಗಿ- ಹೀಗೆ ಎಲ್ಲರೂ ಮದುವೆಗೆಂದು ಹೊರಟು ಬರುತ್ತಿದ್ದರು. ನಮ್ಮ ಹುಡುಗೀನೂ ಕರಕೊಂಡು ಹೋಗ್ರೀ, ಮದುವೆ ಮನೇಲಿ ನಾಲ್ಕು ಮಂದಿ ಕಣ್ಣಿಗೆ ಬೀಳಲಿ. ಲಗ್ನ ಕುದುರಿದರೆ ಪುಣ್ಯ ಅಂತ ಹೆತ್ತವರು ಕೂಡ ಮದುವೆ ವಯಸ್ಸಿಗೆ ಬಂದ ಹೆಣ್ಮಕ್ಕಳನ್ನು ಕಳಿಸಿಕೊಡುತ್ತಿದ್ದರು. ಆರೆಂಟು ದಿನ ಆ ಮದುವೆ ಸಂಭ್ರಮದಲ್ಲಿ ಕಳೆಯುತ್ತಾ, ಮದುವೆಯ ದಿನವೂ ಪಾನಕ ಹಂಚುತ್ತಾ, ಬಡಿಸುತ್ತಾ, ಕುಂಕುಮ ಕೊಡುತ್ತಾ ಓಡಾಡುತ್ತಿದ್ದ ಹೆಣ್ಮಕ್ಕಳು, ತೋರಣ ಕಟ್ಟುತ್ತಾ, ಸ್ವಾಗತಿಸುತ್ತಾ, ತರಲೆ ಮಾಡುತ್ತಾ ಇದ್ದ ತರುಣರು, ಅವರವರ ಮನೆಯವರು- ಹೀಗೆ ಅಲ್ಲೊಂದು ಪುಟ್ಟ ಹೊಸ ಜಗತ್ತು ತೆರೆದುಕೊಳ್ಳುತ್ತಿತ್ತು. ಅಲ್ಲೇ ಆ ಹುಡುಗಿ ಯಾರು ಅಂತ ವಿಚಾರಿಸಿಕೊಳ್ಳುತ್ತಿದ್ದರು. ಈ ಹುಡುಗನಿಗೆ ಮದುವೆ ಆಗಿದೆಯಾ ಅಂತ ಕೇಳುತ್ತಿದ್ದರು. ಅವನು ಇಂಥೋರ ಮಗ, ಅವನ ಚಿಕ್ಕಪ್ಪ ಹೀಗ್ಹೀಗೆ, ಅವನ ಅಪ್ಪ ಇಂತಿಂಥಾ ಕೆಲಸ ಮಾಡುತ್ತಾನೆ. ಅಪ್ಪ ಮದುವೆಯಾದದ್ದು ಇಂತಿಂಥಾ ಮನೆತನದ ಹೆಣ್ಣು, ದೊಡ್ಡ ಮಗಳನ್ನು ಎಲ್ಲಿಗೆ ಕೊಟ್ಟಿದ್ದಾರೆ ಎಂಬುದೆಲ್ಲ ಮಾತಲ್ಲಿ ಬಂದು ಹೋಗುತ್ತಿತ್ತು. ಒಬ್ಬ ಹುಡುಗನನ್ನು ನೋಡಿದ ತಕ್ಷಣ ಎಲ್ಲ ವಿವರಗಳೂ ಗೂಗಲ್ಲಿಗಿಂತ ವೇಗವಾಗಿ ಮತ್ತು ವಿವರವಾಗಿ ಕೈವಶವಾಗುತ್ತಿದ್ದವು. ಆಮೇಲೆ ಹುಡುಗಿ ನೋಡೋದು, ಹುಡುಗನ ಮನೆ ನೋಡೋದು- ಇತ್ಯಾದಿ ಶಾಸ್ತ್ರಗಳು ನಡೆದು ಮದುವೆ ನಡೆಯುತ್ತಿತ್ತು.
ಈ ಸೋಷಿಯಲ್ ಸೆಕ್ಯುರಿಟಿ ವ್ಯವಸ್ಥೆ ಎಷ್ಟು ಅದ್ಭುತವಾಗಿತ್ತು ಅನ್ನುವುದು ನಮಗೀಗ ಗೊತ್ತಾಗುತ್ತಿದೆ. ಎಲ್ಲೋ ಕೆಲವೊಮ್ಮೆ ಅಸುಖಿ ಕುಟುಂಬಗಳು ಇದ್ದಿರಬಹುದು. ಮದುವೆ ವಿಫಲವಾಗಿರಬಹುದು. ಆದರೆ, ಈಗೀಗ ಪತ್ತೆಯಾಗುತ್ತಿರುವ ಕಾರಣಗಳಿಗಂತೂ ಅಲ್ಲ. ಅವನ ಹಿನ್ನೆಲೆ ಗೊತ್ತಿರಲಿಲ್ಲ. ಅವನ ಅಭ್ಯಾಸಗಳ ಅರಿವಿರಲಿಲ್ಲ. ಅವನಿಗೆ ಮೊದಲೇ ಎರಡು ಮದುವೆ ಆಗಿತ್ತು ಎಂಬ ಕಾರಣಗಳಿಂದ ಮದುವೆ ಮುರಿದುಬೀಳುತ್ತಿರಲಿಲ್ಲ. ಗುಟ್ಟುಗುಟ್ಟಾಗಿ ಮದುವೆ ನಡೆದುಹೋಗುತ್ತಿರಲೂ ಇಲ್ಲ. ಪ್ರತಿಯೊಂದು ಮದುವೆ ಕೂಡ ವರ್ಷಗಟ್ಟಲೆ ನೆನಪಿರುತ್ತಿತ್ತು. ಅಲ್ಲಿ ಪ್ರೇಮವೊಂದು ಮೊಳೆಯುತ್ತಿತ್ತು. ಮದುವೆಯೊಂದು ಕುದುರುತ್ತಿತ್ತು. ಜೀವ ಝಲ್ಲೆನಿಸುವ ಕ್ಷಣಗಳಿರುತ್ತಿದ್ದವು. ಕತ್ತಲಲ್ಲಿ ಅವನು ಕೆನ್ನೆ ಚಿವುಟಿ ಓಡಿಹೋಗುತ್ತಿದ್ದ. ಅವಳು ದೀಪದ ಮುಂದೆ ಕೂತು ಅವನನ್ನೇ ದಿಟ್ಟಿಸಿ ನೋಡುತ್ತಿದ್ದಳು. ಬೆಳದಿಂಗಳಲ್ಲಿ ಯಾರೋ ಹಾಡುವುದು ಕೇಳಿಸುತ್ತಿತ್ತು.
ಆದರೆ ಈ ನಡುವೆ ಮದುವೆಯ ಹುಡುಗನ ಕೈ ಕುಲುಕುವುದಕ್ಕೂ ಅವಕಾಶ ಸಿಕ್ಕುವುದಿಲ್ಲ. ಕ್ಯೂ ನಿಂತು ನಿಂತೂ ಕಾಲು ಬಿದ್ದು ಹೋಗಿರುತ್ತದೆ. ಊಟದ ಮನೆಗೆ ಹೋದರೆ ಅಲ್ಲಿ ಒಂದಷ್ಟು ಮಂದಿ ಊಟ ಮಾಡುತ್ತಿರುತ್ತಾರೆ. ಅವರ ಹಿಂದೆ ಕೈ ಕಟ್ಟಿ ನಿಂತುಕೊಂಡು ಮತ್ತೊಂದಷ್ಟು ಮಂದಿ ತಮ್ಮ ಸರದಿಗಾಗಿ ಕಾಯುತ್ತಿರುತ್ತಾರೆ. ಹಿಂದೆಲ್ಲ ನಿಧಾನವಾಗಲಿ ಊಟ ಅಂತ ಹೇಳುತ್ತಿದ್ದವರು. ಈಗ ಬೇಗ ತಿಂದು ಎದ್ದು ಹೋಗಿ ಎಂದು ಎಲ್ಲರೂ ಜೋರಾಗಿ ಕಿರುಚುತ್ತಿದ್ದಂತೆ ಅನ್ನಿಸುತ್ತದೆ. ಹಿಂದಿನ ಮದುವೆಗಳಲ್ಲಿ ಅಣ್ಣಂದಿರ ಮಕ್ಕಳೋ ಮಾವನ ಮಕ್ಕಳೋ ಚಿಕ್ಕಪ್ಪ ದೊಡ್ಡಪ್ಪನವರೋ ಪಕ್ಕದ ಮನೆ ಹುಡುಗನೋ ಅನ್ನ ಸಾರು ಬಡಿಸುತ್ತಿದ್ದರು. ಆಪ್ತವಾಗಿ ಮಾತಾಡುತ್ತಾ ಬಡಿಸುತ್ತಿದ್ದರು. ಇಲ್ಲಿ ಯಾರೋ ಗುರುತಿಲ್ಲದವನು ಕೈಗೆ ಪ್ಲಾಸ್ಟಿಕ್ ಕವರ್ ಕಟ್ಟಿಕೊಂಡು, ತಲೆಗೆ ಪ್ಲಾಸ್ಟಿಕ್ ಟೋಪಿ ಹಾಕಿಕೊಂಡು ಮುಖ ಕೂಡ ನೋಡದೇ ಬಡಿಸುವ ಡ್ಯೂಟಿ ಮಾಡುತ್ತಾರೆ. ಮದುವೆ ಶಿಷ್ಟಾಚಾರ ಆಗಿದೆ. ಸಂಸಾರ ಕೂಡ ಕಾಟಾಚಾರಕ್ಕೆ ಆಗಿರುವಂತೆ ಕಾಣಿಸಲಾಗುತ್ತಿದೆ. ಇದರಿಂದ ಮುಕ್ತಿ ಇಲ್ಲವೇ?