ರಾಜಾಸ್ಥಾನದಲ್ಲಿದ್ದ ಅರಸೀಕೆರೆಯ ಯುವತಿಯ ರಕ್ಷಣೆ
ಅರಸೀಕೆರೆ ಪಟ್ಟಣದ ಯುವತಿಯೊಬ್ಬಳಿಗೆ ಬೆಂಗಳೂರಿನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯನ್ನು ರಾಜಾಸ್ಥಾನದ ಪುರುಷನೊಂದಿಗೆ ವಿವಾಹ ಮಾಡಿಸಿದ್ದ ಪ್ರಕರಣವನ್ನು ಅರಸೀಕೆರೆ ನಗರ ಠಾಣೆ ಪೊಲೀಸರು ಭೇದಿಸಿ ಯುವತಿಯನ್ನು ರಕ್ಷಿಸಿದ್ದಾರೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ. ರಾಹುಲ್ ಕುಮಾರ್ ಶಹಪೂರ್ವಾಡ್ ರವರು ಇಂದು ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು.
ಅರಸೀಕೆರೆಯ ಯುವತಿಯು ಕಳೆದ ವರ್ಷ ಕಾಣೆಯಾಗಿದ್ದಳು. ಆಕೆ ಕಾಣೆಯಾದ ಏಳು ತಿಂಗಳ ಬಳಿಕ ಯುವತಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಅರಸೀಕೆರೆ ಪೊಲೀಸರು ಯುವತಿಯ ತಾಯಿಯಿಂದ ಕೆಲವು ಮಹತ್ವದ ವಿಚಾರಗಳನ್ನು ಸಂಗ್ರಹಿಸಿ, ಯುವತಿಯು ರಾಜಾಸ್ಥಾನದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡರು. ಹಾಸನ ಎಸ್.ಪಿ ರವರ ಮಾರ್ಗದರ್ಶನದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿ ಪ್ರಕರಣ ಪತ್ತೆ ಕಾರ್ಯ ಪ್ರಾರಂಭಿಸಲಾಯಿತು.
ಅರಸೀಕೆರೆ ಯುವತಿಗೆ ಬೆಂಗಳೂರಿನಲ್ಲಿ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿ, ಆಕೆಯನ್ನು ಅಜ್ಞಾತ ಸ್ಥಳದಲ್ಲಿ ಬಂಧಿಯಾಗಿಟ್ಟು, ನಂತರ ಆಕೆಯನ್ನು ಚೆನ್ನೈಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ರಾಜಾಸ್ಥಾನಕ್ಕೆ ಕರೆದೊಯ್ದು ಅಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬರಿಂದ ಭಾರೀ ಪ್ರಮಾಣದ ಹಣ ಪಡೆದು ಆತನೊಂದಿಗೆ ವಿವಾಹ ಮಾಡಿಸಲಾಗಿತ್ತು. ಈ ಯುವತಿಯ ಅಕ್ಕಪಕ್ಕದ ಮನೆಯಲ್ಲಿರುವ ವ್ಯಕ್ತಿಗಳೇ ಈ ಕೃತ್ಯವೆಸಗಿದ್ದು, ಸಧ್ಯ ಈ ಆರೋಪಿಗಳು ತಲೆಮರೆಸಿಕೊಂಡಿರುತ್ತಾರೆ. ಈ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಸ್.ಪಿ. ರಾಹುಲ್ ಕುಮಾರ್ ಶಹಪೂರ್ವಾಡ್ ತಿಳಿಸಿದರು.
ಪತ್ರಿಕಾ ಗೊಷ್ಠಿಯಲ್ಲಿ ಹೆಚ್ಚುವರಿ ಎಸ್.ಪಿ ಹಾಗೂ ಅರಸೀಕೆರೆ ನಗರಠಾಣೆ ಇನ್ಸ್ ಪೆಕ್ಟರ್ ನಿರಂಜನ್ ಕುಮಾರ್ ಉಪಸ್ಥಿತರಿದ್ದರು.
(ಚಿತ್ರ: ವಾರ್ತಾ ಇಲಾಖೆ, ಹಾಸನ)
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ