ಮಾರಕ ರೋಗವಾದ ಪೋಲಿಯೋ ನಿರ್ಮೂಲನೆಗಾಗಿ ಭಾರತ ದೇಶದಾದ್ಯಂತ ಇಂದು ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಲ್ಸ್ ಪೋಲಿಯೋ ಲಸಿಕೆಯನ್ನು ಮಗುವಿಗೆ ಹಾಕಿಸುವುದರಿಂದ, ಮಗುವಿನ ದೇಹದಲ್ಲಿ ಪೋಲಿಯೋ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಬರುತ್ತದೆ. ಈ ರೋಗವು ಸಂಪೂರ್ಣ ನಿರ್ಮೂಲನೆಯಾಗಬೇಕಿದ್ದರೆ, ದೇಶದ ಎಲ್ಲಾ ಮಕ್ಕಳಿಗೂ ಒಂದೇ ದಿನದಲ್ಲಿ ಈ ಲಸಿಕೆಯನ್ನು ನೀಡಬೇಕಿರುತ್ತದೆ. ಇಲ್ಲವಾದಲ್ಲಿ, ಲಸಿಕೆ ಹಾಕಿಸಿಕೊಳ್ಳದ ಮಗುವಿನಲ್ಲಿ ಮುಂದಿನ ದಿನಗಳಲ್ಲಿ ಈ ಪೋಲಿಯೋ ವೈರಸ್ ಅಭಿವೃದ್ಧಿ ಹೊಂದಿ, ಆ ಮಗುವಿನಿಂದಾಗಿ ಸುತ್ತಮುತ್ತಲ ಊರಿನ ಎಲ್ಲಾ ಮಕ್ಕಳೂ ಪೋಲಿಯೋ ರೋಗದ ದಾಳಿಗೆ ಒಳಗಾಗುವ ಅಪಾಯ / ಸಾಧ್ಯತೆಗಳು ಇರುತ್ತವೆ. ಆದ ಕಾರಣ, ಈ ಹಿಂದೇ ಎಷ್ಟೇಬಾರಿ ಲಸಿಕೆ ಹಾಕಿಸಿದ್ದರೂ ಇಂದು ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆ ಕಡ್ಡಾಯವಾಗಿರುತ್ತದೆ.
ಅರಸೀಕೆರೆ ಪಟ್ಟಣದಲ್ಲಿ ಒಟ್ಟು 20 ಪೋಲಿಯೋ ಲಸಿಕಾ ಬೂತ್ ಗಳನ್ನು ಹಾಗೂ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಒಟ್ಟು 129 ಬೂತ್ ಗಳನ್ನು ತೆರೆಯಾಗಿದೆ. ತಾಲ್ಲೂಕಿನಾದ್ಯಂತ 21,250 ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ.
ಇಂದು ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯ ಬಂದೂರು ಮತ್ತು ದೇಶಾಣಿ ಗ್ರಾಮಗಳಲ್ಲಿ ಖಾಸಗಿ / ಧಾರ್ಮಿಕ ಕಾರ್ಯಕ್ರಮ (ಜಾತ್ರೆ) ನಡೆಯುತ್ತಿರುವುದರಿಂದ, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಆಗಮಿಸಿದ್ದು, ಈ ಗ್ರಾಮಗಳಲ್ಲಿ ಪೋಲಿಯೋ ಲಸಿಕೆಯು ನಿರೀಕ್ಷೆಗಿಂತ ಹೆಚ್ಚಾಗಿ ಬೇಕಾಗಿದ್ದ ಹಿನ್ನೆಲೆಯಲ್ಲಿ, ಲಸಿಕೆಯನ್ನು ಹಾಸನದ ಜಿಲ್ಲಾಸ್ಪತ್ರೆಯಿಂದ ತುರ್ತಾಗಿ ಸರಬರಾಜು ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಅರಸೀಕೆರೆ ಪಟ್ಟಣದ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ವಿಶೇಷ ಮೊಬೈಲ್ ಬೂತ್ ತೆರೆಯಲಾಗಿದ್ದು, ಪ್ರಯಾಣದಲ್ಲಿರುವ ನೂರಾರು ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುತ್ತಿದೆ. ತಾಲ್ಲೂಕಿನಾದ್ಯಂತ ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಿಸುತ್ತಿದ್ದಾರೆ.
ಈ ಮಧ್ಯೆ, ಅರಸೀಕೆರೆ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಪೋಲಿಯೋ ಲಸಿಕೆಯನ್ನು ಹಾಕಿಸಿಕೊಳ್ಳಲು ಪ್ರತಿರೋಧ ತೋರಿದ ಘಟನೆಯೂ ಜರುಗಿತು.
ಇಂದು ಬೆಳಿಗೆ 10 ಗಂಟೆಯ ಸಮಯದಲ್ಲಿ, ಅರಸೀಕೆರೆ ರೈಲು ನಿಲ್ದಾಣಕ್ಕೆ ಪುಟ್ಟ ಮಗುವಿನೊಂದಿಗೆ ಆಗಮಿಸಿದ್ದ ವೃದ್ಧ ದಂಪತಿಗಳು, ತಮ್ಮ ಮಗುವಿಗೆ ಪೋಲಿಯೋ ಲಸಿಕೆಯನ್ನು ಹಾಕಿಸಲು ಪ್ರತಿರೋಧ ತೋರಿದರು. ಅಲ್ಲಿದ್ದ ಆರೋಗ್ಯ ಸಹಾಯಕಿ ಸಾಕಷ್ಟು ಕೇಳಿಕೊಂಡರೂ ಸಹ, ಆ ವೃದ್ಧ ದಂಪತಿಗಳು ಮಗುವಿಗೆ ಪೋಲಿಯೋ ಹನಿ ಹಾಕಿಸದೇ ದೊಡ್ಡ ಗಲಾಟೆಯನ್ನೇ ಮಾಡಿದರು. ರೈಲ್ವೆ ಪೊಲೀಸರೂ ತಿಳಿಹೇಳಿದರೂ ಕೂಡ ಅವರ ಮಾತಿಗೆ ಒಪ್ಪದೇ, ಕೂಗಾಡಿಕೊಂಡು ಮಗುವನ್ನು ಕರೆದುಕೊಂಡು ರೈಲುನಿಲ್ದಾಣದಿಂದ ಹೊರಕ್ಕೆ ಹೋದರು. ನಂತರ ಅವರನ್ನು ವಿಚಾರಿಸಿದಾಗ, ಅರಸೀಕೆರೆ ತಾಲ್ಲೂಕಿನ ಮುರುಂಡಿ ಸಿದ್ದರಹಟ್ಟಿ ಗ್ರಾಮದವರೆಂದು, ಬೇರೆ ಊರಿಗೆ ಹೋಗಿದ್ದವರು ಈಗ ವಾಪಸ್ಸ್ ತಮ್ಮ ಹಳ್ಳಿಗೆ ಹೋಗುತ್ತಿರುವುದಾಗಿ ತಿಳಿಸಿದರು. ಅಲ್ಲಿದ್ದ ಆರೋಗ್ಯ ಸಹಾಯಕಿಯು ಮುರುಂಡಿ ಸಿದ್ದರಹಟ್ಟಿಯಲ್ಲಿ ಇಂದು ಕರ್ತವ್ಯಕ್ಕೆ ನಿರತರಾಗಿರುವವರಿಗೆ ಕರೆ ಮಾಡಿ, ಈ ಮಗು ಗ್ರಾಮಕ್ಕೆ ಬಂದಾಗ ಲಸಿಕೆ ಹಾಕುವಂತೆ ತಿಳಿಸಿರುತ್ತಾರೆ.
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ