ಶುಕ್ರವಾರ, ಜನವರಿ 5, 2018

ಶಾಲಾ ಶತಮಾನೋತ್ಸವ

ಶಾಲಾ ಶತಮಾನೋತ್ಸವ ಸಮಾರಂಭ

ಅರಸೀಕೆರೆ ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ (ರಾಮಣ್ಣ ಸ್ಕೂಲ್) ಇದೀಗ ಶತಮಾನೋತ್ಸವದ ಸಂಭ್ರಮ.

28 ಸೆಪ್ಟೆಂಬರ್ 1917 ರಂದು ಹಾಸನದ ಅಂದಿನ ಡೆಪ್ಯೂಟಿ ಕಮಿಷನರ್ ರವರಾಗಿದ್ದ ಜಿ.ವೆಂಕಟ ರಾವ್ Esq ರವರು ಶಾಲೆಯ ಪ್ರಾರಂಭೋತ್ಸವದ ಶಿಲಾನ್ಯಾಸವನ್ನು ನೆರವೇರಿಸಿದ್ದರು. ಈ ಶಾಲೆಯ ಕಟ್ಟಡವನ್ನು ಮರುಳಸಿದ್ದಪ್ಪ ಮತ್ತು ರುದ್ರಪ್ಪ ಎನ್ನುವರು ದಾನವಾಗಿ ನೀಡಿದ್ದರು ಎಂದು ತಿಳಿಸುವ ಶಿಲಾಫಲಕ ಇಂದಿಗೂ ಶಾಲೆಯ ಆವರಣದಲ್ಲಿದೆ.

Esq : ಕುರಿತು ಕಿರು ಮಾಹಿತಿ
ಅಂದಿನ ಬ್ರಿಟಿಷ್ ಆಳ್ವಿಕೆಯಲ್ಲಿ ಸರ್ಕಾರದ ಹಿರಿಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರಿಗೆ ಗೌರವ ಸೂಚಕವಾಗಿ Esq (Esquire) ಇಸ್ಕ್ವೈರ್ ಎಂಬ ಪದನಾಮ ಬಳಸಲಾಗುತ್ತಿತ್ತು.  ಈ ಪದನಾಮ ಹೊಂದಲು ಅವರು ಇಂಗ್ಲೇಂಡಿನ ಆಕ್ಸ್ ಫರ್ಡ್, ಕೇಂಬ್ರಿಂಜ್ ಅಥವಾ ಲಂಡನ್ ಯೂನಿವರ್ಸಿಟಿಗಳಲ್ಲಿ ವ್ಯಾಸಂಗ ಮಾಡಿರಬೇಕಿತ್ತು. ಇಲ್ಲವೇ ಲಂಡನ್ನಿನಲ್ಲಿ ಬ್ಯಾರಿಸ್ಟರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕಿತ್ತು. 

ಅಂದರೆ, ಈ ಶಾಲೆಯ ಶಿಲಾನ್ಯಾಸವನ್ನು ಮಾಡಿದ್ದಂತಹ ವ್ಯಕ್ತಿ ಅಂದಿನ ಕಾಲಕ್ಕೆ ಅತ್ಯಂತ ಮೇಧಾವಿ ಹಾಗೂ ಪ್ರಭಾವಶಾಲಿ ವ್ಯಕ್ತಿಯೇ ಆಗಿದ್ದರು.  ಬ್ರಿಟಿಷರ ಆಳ್ವಿಕೆಯ ಸಮಯದಲ್ಲೇ ಹಾಸನ ಜಿಲ್ಲೆಯ ಡೆಪ್ಯೂಟಿ ಕಮಿಷನ್ ಆಗಿದ್ದರು ಎಂದರೆ ಅವತ್ತಿನ ಅವರ ವರ್ಚಸ್ಸು ಹೇಗಿರಬಹುದೆಂದು ಊಹಿಸಿಕೊಳ್ಳಬಹುದು.  ಇಂತಹ ಘನತೆವೆತ್ತ ವ್ಯಕ್ತಿಯಿಂದ ಪ್ರಾರಂಭಗೊಂಡ ಶಾಲೆಯು ಇಂದು ಶತಮಾನದ ಸಂಭ್ರಮಕ್ಕೆ ಅಣಿಯಾಗಿದೆ.

ಕಳೆದ ಒಂದು ನೂರು ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.  ಇವರೆಲ್ಲರೂ ಸಂಭ್ರಮಿಸುವ ಸಂದರ್ಭ ಇದೀಗ ಬಂದಿದೆ.

ದಿನಾಂಕ 06-01-2018, ಶನಿವಾರ, ಅಂದರೆ ನಾಳೆ ಸಂಜೆ 4 ಗಂಟೆಗೆ ಶಾಲೆಯ ಆವರಣದಲ್ಲಿ ಶತಮಾನೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.  ಕಾರ್ಯಕ್ರಮದಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ.ಹೆಚ್.ಡಿ.ದೇವೇಗೌಡರು, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಎ.ಮಂಜುರವರು, ಅರಸೀಕೆರೆ ಕ್ಷೇತ್ರದ ಶಾಸಕರಾದ ಶ್ರೀ. ಕೆ.ಎಂ.ಶಿವಲಿಂಗೇಗೌಡರು ಸೇರಿದಂತೆ ಅನೇಕ ಗಣ್ಯವ್ಯಕ್ತಿಗಳು ಮತ್ತು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದಂತಹ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಖಾಸಗಿ ಶಾಲೆಗಳ ಅಬ್ಬರದಲ್ಲಿ ಇಂದಿಗೂ ಉತ್ತಮ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿ, ಶತಮಾನ ಪೂರೈಸಿದ ನಮ್ಮೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ.

ವಂದನೆಗಳೊಂದಿಗೆ,

ಇದೇ ಶಾಲೆಯಲ್ಲಿ 1982 ರಿಂದ 1989 ರವರೆಗೆ ವ್ಯಾಸಂಗ ಮಾಡಿದ ಹೆಮ್ಮೆಯ ವಿದ್ಯಾರ್ಥಿ

ಶ್ರೀರಾಮ ಜಮದಗ್ನಿ
ಅರಸೀಕೆರೆ.









Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....