ಜಾನಪದ ಸಿರಿ ಸಂಭ್ರಮ
ಅರಸೀಕೆರೆಯ ಸಾಧು ವೀರಶೈವ ಸಮಾಜ, ತರಳಬಾಳು ಯುವ ವೇದಿಕೆ, ಶಿವಕುಮಾರ ಬಳಗ
ಹಾಗೂ ತರಳಬಾಳು ನೌಕರರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ, ಜಾನಪದ ಕಲಾ ಪ್ರಾಕಾರಗಳನ್ನು ಪರಿಚಯಿಸುವ
ಜಾನಪದ ಸಿರಿ ಸಂಭ್ರಮವು ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿರುವ ಶ್ರೀ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ
ದಿನಾಂಕ 13-01-2018, ಶನಿವಾರ ಸಂಜೆ ಜರುಗಿತು.
ಜನಪದರ ಸಂಸ್ಕೃತಿಯ ಪ್ರತಿ ಹೆಜ್ಜೆಯಲ್ಲೂ ಜನಪದ ಕಲೆಗಳು ಹಾಸುಹೊಕ್ಕಾಗಿವೆ. ತಮ್ಮ ದಿನನಿತ್ಯದ ದುಡಿಮೆಯಲ್ಲಿನ ಆಯಾಸ, ಬದುಕಿನ ಏಕಾನತೆ,
ಬೇಸರಿಕೆ ಹೋಗಲಾಡಿಸಲು ಮನುಷ್ಯ ಕಲೆಯ ಮೊರೆಹೊಕ್ಕ.
ಕಾಲಗತಿಯಲ್ಲಿ ಮೂಲ ಜನಪದ ಕಲೆಗಳು ಮರೆಯಾಗಿ ಅವುಗಳು ಕೇವಲ ಯಾಂತ್ರಿಕ ಪ್ರದರ್ಶನಗಳಾಗಿವೆ. ಇಂತಹ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸಿರಿಗೆರೆಯ
ತರಳಬಾಳು ಕಲಾ ಸಂಘವು ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ
ಮಾರ್ಗದರ್ಶನದಲ್ಲಿ ಜಾನಪದ ಸಿರಿ ಸಂಭ್ರಮವನ್ನು ನಾಡಿನಾದ್ಯಂತ ಪ್ರದರ್ಶನ ನೀಡುತ್ತಿದೆ.
ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿವಿಧ
ವಯೋಮಾನದ 350ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯ ಸಮಯದಲ್ಲಿ ಸಿರಿಗೆರೆಯ ತರಳಬಾಳು ಕಲಾಸಂಘದಲ್ಲಿ
ವಿಶೇಷ ಶಿಬಿರವನ್ನು ಏರ್ಪಡಿಸಿ, 15ಕ್ಕೂ ಅಧಿಕ ಜಾನಪದ ಕಲಾ ಪ್ರಾಕಾರಗಳನ್ನು ಅವುಗಳ ಮೂಲ ಕಲಾವಿದರುಗಳಿಂದ
ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗಿದೆ.
ಅರಸೀಕೆರೆಯಲ್ಲಿ ಶನಿವಾರದಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ನಮ್ಮ ರಾಜ್ಯದ
ಪ್ರಮುಖ ಜಾನಪದ ಕಲಾ ಪ್ರಾಕಾರಗಳಾದ ದೇವರ ಗುಡ್ಡರು ಹಾಡುವ ಮಲೆಮಾದೇಶ್ವರನ ಬೀಸು ಕಂಸಾಳೆ ನೃತ್ಯ,
ಶಕ್ತಿದೇವತೆಯ ಆರಾಧನೆಯ ಸಂಕೇತವಾದ ಪೂಜಾ ಕುಣಿತ, ಮೈಸೂರು ಪ್ರಾಂತ್ಯದ ಪಟಾ ಕುಣಿತ, ತುಳುನಾಡಿನ ಗೊಡ್ಡ
ಜನಾಂಗದ ಸಾಂಪ್ರದಾಯಕ ಆಚರೆಣೆಯಾದ ಕಂಗೀಲು ನೃತ್ಯ, ಕೊಡಗಿನ ಪಾರಂಪರಿಕ ಉಮ್ಮತ್ತಾಟ್ ನೃತ್ಯ, ಉಡುಪಿ
ಜಿಲ್ಲೆಯ ಕುಡುಬಿ ಜನಾಂಗದವರ ಕುಲದೇವತೆಯಾದ ಚಂಡಿಕಾ ದೇವಿ ಮಾರಿಯಮ್ಮ ಹಾಗೂ ಯಲ್ಲಮ್ಮನ ಪೂಜಿಸುವ ಕರಗ
ಕೋಲಾಟ, ಚಾಮರಾಜನಗರದ ಸೋಲಿಗರ ನೃತ್ಯ, ಮಧ್ಯಕರ್ನಾಟಕದ
ವಿಶಿಷ್ಠ ಕಲೆಯಾದ ಶೈವ ಸಂಪ್ರದಾಯದ ವೀರಗಾಸೆ ನೃತ್ಯ, ಹಾಲುಮತ ಸಮುದಾಯದ ಆರಾಧ್ಯದೈವ ಬೀರಪ್ಪನ ಭಕ್ತರ
ಡೊಳ್ಳು ಕುಣಿತ, ಲಂಬಾಣಿ ಜನಾಂಗದ ವರ್ಣರಂಜಿತ ಲಂಬಾಣಿ ನೃತ್ಯ, ಭಾರತದ ಪ್ರಾಚೀನ ಕ್ರೀಡೆಗಳಲ್ಲಿ ಒಂದಾದ
ಪ್ರೇಕ್ಷಕರ ಮೈನವಿರೇಳಿಸುವ ಮಲ್ಲಕಂಬ ಹಾಗೂ ಮಲ್ಲಿಹಗ್ಗ ಮೊದಲಾದ ಜಾನಪದ ಕಲೆಗಳನ್ನು ವಿದ್ಯಾರ್ಥಿಗಳು
ಪ್ರದರ್ಶಿಸಿದರು. ಕಿಕ್ಕಿರಿದು ತುಂಬಿದ್ದ ಕಲಾಭಿಮಾನಿಗಳು
ವಿದ್ಯಾರ್ಥಿಗಳ ಕಲಾ ನೈಪುಣ್ಯತೆಗೆ ಮನಸೋತರು.
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ