ಬುಧವಾರ, ಜನವರಿ 31, 2018

ಅರಸೀಕೆರೆ ಪಟ್ಟಣದ ಆಗಸದಲ್ಲಿ ಇಂದು ಸಂಜೆ ಕಂಡ "ಸೂಪರ್ ಬ್ಲೂ ಬ್ಲಡ್ ಮೂನ್"

ಖಗ್ರಾಸ ಚಂದ್ರಗ್ರಹಣ

ಅರಸೀಕೆರೆ ಪಟ್ಟಣದ ಆಗಸದಲ್ಲಿ ಇಂದು ಸಂಜೆ ಕಂಡ "ಸೂಪರ್ ಬ್ಲೂ ಬ್ಲಡ್ ಮೂನ್"

ಒಂದು ಕ್ಯಾಲೆಂಡರ್ ತಿಂಗಳಲ್ಲಿ ಎರಡು ಹುಣ್ಣಿಮೆ ಬಂದರೆ, ಎರಡನೇ ಹುಣ್ಣಿಮೆಯ ಚಂದ್ರನನ್ನು "ಬ್ಲೂಮೂನ್" ಎನ್ನುತ್ತಾರೆ. ಈ ಜನವರಿ ತಿಂಗಳ 2ನೇ ತಾರೀಖು ಹುಣ್ಣಿಮೆ ಬಂದಿತ್ತು. ಇಂದು 31 ಇದೇ ತಿಂಗಳ 2ನೇ ಹುಣ್ಣಿಮೆಯಾದ್ದರಿಂದ ಇವತ್ತಿನ ಚಂದ್ರ "ಬ್ಲೂಮೂನ್" ಆಗಿದ್ದಾನೆ.

ಚಂದ್ರ ಭೂಮಿಯನ್ನು ಸುತ್ತುವಾಗ ವರ್ಷದಲ್ಲಿ ನಾಲ್ಕೈದುಬಾರಿ ಭೂಮಿಗೆ ಸಮೀಪದಲ್ಲಿ ಹಾದುಹೋಗುತ್ತಾನೆ. ಆ ಸಮಯದಲ್ಲಿ ಸಾಮಾನ್ಯವಾಗಿ ಕಾಣುವುದಕ್ಕಿಂತ ಶೇ.14 ರಷ್ಟು ದೊಡ್ಡದಾಗಿ ಕಾಣುತ್ತಾನೆ ಮತ್ತು ಚಂದ್ರನ ಪ್ರಖರತೆಯೂ ಹೆಚ್ಚಾಗಿರುತ್ತದೆ. ಈ ರೀತಿ ಹತ್ತಿರದಿಂದ ಕಾಣುವ ಹುಣ್ಣಿಮೆ ಚಂದ್ರನಿಗೆ "ಸೂಪರ್ ಮೂನ್" ಎನ್ನುತ್ತಾರೆ. ಇಂದು ಚಂದ್ರ ಭೂಮಿಗೆ ಬಹಳ ಹತ್ತಿರ ಬಂದಿರುವುದರಿಂದ ಈ ಹುಣ್ಣಿಮೆಯ ಚಂದ್ರ "ಸೂಪರ್ ಮೂನ್" ಆಗಿದ್ದಾನೆ.

ಖಗ್ರಾಸ ಚಂದ್ರಗ್ರಹಣ ನಡೆದಾಗ ಚಂದ್ರನ ಬಣ್ಣವು ಕೆಂಪಾಗಿ ತಾಮ್ರವರ್ಣದಂತೆ ಕಾಣುತ್ತದೆ ಇದನ್ನು "ಬ್ಲಡ್ ಮೂನ್" ಎನ್ನುತ್ತಾರೆ.

ಈ ದಿನದ ವಿಶೇಷವೆಂದರೆ ಈ ಎಲ್ಲಾ ಖಗೋಳ ಕೌತುಗಳೂ ಒಟ್ಟಿಗೆ ಜರುಗಿತು. ಭಾರತದಲ್ಲಿ 36 ವರ್ಷಗಳ ಹಿಂದೆ ಈ ರೀತಿಯ ಗ್ರಹಣ ಸಂಭವಿಸಿತ್ತು.

ದೃಶ್ಯ ಮಾಧ್ಯಮಗಳ ಪರಿಣಾಮವೋ, ನಂಬಿಕೆಯೋ, ಮೂಢ ನಂಬಿಕೆಯೋ... ಪ್ರತಿದಿನ ಸಂಜೆಯಾಗುತ್ತಲೇ ಗಿಜಿಗುಡುತ್ತಿದ್ದ ಅರಸೀಕೆರೆ ಪಟ್ಟಣದ ಪಿಪಿ ವೃತ್ತದ ಬಳಿ ಇರುವ ರಸ್ತೆಗಳ ಅಕ್ಕಪಕ್ಕದಲ್ಲಿರುವ ಹೋಟೆಲ್, ಪಾನಿಪುರಿ, ಚರುಮುರಿ, ಬೋಂಡ ಮುಂತಾದ ಆಹಾರದ ಅಂಗಡಿಗಳು ಇಂದು ಸಂಜೆ ಜನರ ಓಡಾಟವಿಲ್ಲದೇ ಬಿಕೋ ಎನ್ನುತ್ತಿತ್ತು.








Share:

ಅರಸೀಕೆರೆ ಶಾಸಕರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ

ಅರಸೀಕೆರೆ ತಾಲ್ಲೂಕಿನಲ್ಲಿ ಫಸಲು ಬಿಡುತ್ತಿದ್ದ ತೆಂಗಿನ ಮರಗಳ ಪೈಕಿ ತೀವ್ರ ಬರಗಾಲದಿಂದಾಗಿ ಸುಮಾರು 8 ಲಕ್ಷಕ್ಕೂ ಅಧಿಕ ಮರಗಳು ಸುಳಿಬಿದ್ದು ಸಂಪೂರ್ಣ ನಾಶ ಹೊಂದಿದ್ದು, ಪ್ರಸ್ತುತ ಆರ್ಥಿಕ ಸಂಕಷ್ಟಕ್ಕೀಡಾಗಿರುವ ರೈತರುಗಳಿಗೆ ಸೂಕ್ತ ಪರಿಹಾರವನ್ನು ನೀಡುವಂತೆ ಈ ಹಿಂದೆ ಹಲವುಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಮತ್ತು ಬೆಳಗಾವಿ ಅಧಿವೇಶನದಲ್ಲಿ ನಿಯಮ 69ರ ಅಡಿಯಲ್ಲಿ ಚರ್ಚೆ ಮಾಡಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು  ತೆಂಗು ಬೆಳೆಗಾರರಿಗೆ ಯಾವುದೇ ರೀತಿಯ ಪರಿಹಾರ ನೀಡಲು ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ, ಅರಸೀಕೆರೆ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು, ತಾಲ್ಲೂಕಿನ ಗೀಜಿಹಳ್ಳಿ ಗ್ರಾಮದ ತೋಟದಲ್ಲಿ ದಿನಾಂಕ 29-01-2018 ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.





Share:

ಸೋಮವಾರ, ಜನವರಿ 29, 2018

ಅರಸೀಕೆರೆ ತಾಲ್ಲೂಕು ೭ನೇ ಕನ್ನಡ ಸಾಹಿತ್ಯ ಸಮ್ಮೇಳನ

ದಿನಾಂಕ ೨೯ ಜನವರಿ ೨೦೧೮ ರಂದು ಅರಸೀಕೆರೆಯಲ್ಲಿ ಜರುಗಿದ "ಅರಸೀಕೆರೆ ತಾಲ್ಲೂಕು ೭ನೇ ಕನ್ನಡ ಸಾಹಿತ್ಯ ಸಮ್ಮೇಳನ"ದ ಚಿತ್ರಗಳು











Share:

ಭಾನುವಾರ, ಜನವರಿ 28, 2018

ಅರಸೀಕೆರೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಮಾರಕ ರೋಗವಾದ ಪೋಲಿಯೋ ನಿರ್ಮೂಲನೆಗಾಗಿ ಭಾರತ ದೇಶದಾದ್ಯಂತ ಇಂದು ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಪಲ್ಸ್ ಪೋಲಿಯೋ ಲಸಿಕೆಯನ್ನು ಮಗುವಿಗೆ ಹಾಕಿಸುವುದರಿಂದ, ಮಗುವಿನ ದೇಹದಲ್ಲಿ ಪೋಲಿಯೋ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಬರುತ್ತದೆ.  ಈ ರೋಗವು ಸಂಪೂರ್ಣ ನಿರ್ಮೂಲನೆಯಾಗಬೇಕಿದ್ದರೆ, ದೇಶದ ಎಲ್ಲಾ ಮಕ್ಕಳಿಗೂ ಒಂದೇ ದಿನದಲ್ಲಿ ಈ ಲಸಿಕೆಯನ್ನು ನೀಡಬೇಕಿರುತ್ತದೆ.  ಇಲ್ಲವಾದಲ್ಲಿ, ಲಸಿಕೆ ಹಾಕಿಸಿಕೊಳ್ಳದ ಮಗುವಿನಲ್ಲಿ ಮುಂದಿನ ದಿನಗಳಲ್ಲಿ ಈ ಪೋಲಿಯೋ ವೈರಸ್ ಅಭಿವೃದ್ಧಿ ಹೊಂದಿ, ಆ ಮಗುವಿನಿಂದಾಗಿ ಸುತ್ತಮುತ್ತಲ ಊರಿನ ಎಲ್ಲಾ ಮಕ್ಕಳೂ ಪೋಲಿಯೋ ರೋಗದ ದಾಳಿಗೆ ಒಳಗಾಗುವ ಅಪಾಯ / ಸಾಧ್ಯತೆಗಳು ಇರುತ್ತವೆ. ಆದ ಕಾರಣ, ಈ ಹಿಂದೇ ಎಷ್ಟೇಬಾರಿ ಲಸಿಕೆ ಹಾಕಿಸಿದ್ದರೂ ಇಂದು ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆ ಕಡ್ಡಾಯವಾಗಿರುತ್ತದೆ.

ಅರಸೀಕೆರೆ ಪಟ್ಟಣದಲ್ಲಿ ಒಟ್ಟು 20 ಪೋಲಿಯೋ ಲಸಿಕಾ ಬೂತ್ ಗಳನ್ನು ಹಾಗೂ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಒಟ್ಟು 129 ಬೂತ್ ಗಳನ್ನು ತೆರೆಯಾಗಿದೆ. ತಾಲ್ಲೂಕಿನಾದ್ಯಂತ 21,250 ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ.

ಇಂದು ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯ ಬಂದೂರು ಮತ್ತು ದೇಶಾಣಿ ಗ್ರಾಮಗಳಲ್ಲಿ ಖಾಸಗಿ / ಧಾರ್ಮಿಕ ಕಾರ್ಯಕ್ರಮ (ಜಾತ್ರೆ) ನಡೆಯುತ್ತಿರುವುದರಿಂದ, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಆಗಮಿಸಿದ್ದು, ಈ ಗ್ರಾಮಗಳಲ್ಲಿ ಪೋಲಿಯೋ ಲಸಿಕೆಯು ನಿರೀಕ್ಷೆಗಿಂತ ಹೆಚ್ಚಾಗಿ ಬೇಕಾಗಿದ್ದ ಹಿನ್ನೆಲೆಯಲ್ಲಿ,  ಲಸಿಕೆಯನ್ನು ಹಾಸನದ ಜಿಲ್ಲಾಸ್ಪತ್ರೆಯಿಂದ ತುರ್ತಾಗಿ ಸರಬರಾಜು ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಅರಸೀಕೆರೆ ಪಟ್ಟಣದ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ವಿಶೇಷ ಮೊಬೈಲ್ ಬೂತ್ ತೆರೆಯಲಾಗಿದ್ದು, ಪ್ರಯಾಣದಲ್ಲಿರುವ ನೂರಾರು ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುತ್ತಿದೆ.  ತಾಲ್ಲೂಕಿನಾದ್ಯಂತ ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಿಸುತ್ತಿದ್ದಾರೆ.

ಈ ಮಧ್ಯೆ, ಅರಸೀಕೆರೆ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಪೋಲಿಯೋ ಲಸಿಕೆಯನ್ನು ಹಾಕಿಸಿಕೊಳ್ಳಲು ಪ್ರತಿರೋಧ ತೋರಿದ ಘಟನೆಯೂ ಜರುಗಿತು.

ಇಂದು ಬೆಳಿಗೆ 10 ಗಂಟೆಯ ಸಮಯದಲ್ಲಿ, ಅರಸೀಕೆರೆ ರೈಲು ನಿಲ್ದಾಣಕ್ಕೆ ಪುಟ್ಟ ಮಗುವಿನೊಂದಿಗೆ ಆಗಮಿಸಿದ್ದ ವೃದ್ಧ ದಂಪತಿಗಳು, ತಮ್ಮ ಮಗುವಿಗೆ ಪೋಲಿಯೋ ಲಸಿಕೆಯನ್ನು ಹಾಕಿಸಲು ಪ್ರತಿರೋಧ ತೋರಿದರು.  ಅಲ್ಲಿದ್ದ ಆರೋಗ್ಯ ಸಹಾಯಕಿ ಸಾಕಷ್ಟು ಕೇಳಿಕೊಂಡರೂ ಸಹ, ಆ ವೃದ್ಧ ದಂಪತಿಗಳು ಮಗುವಿಗೆ ಪೋಲಿಯೋ ಹನಿ ಹಾಕಿಸದೇ ದೊಡ್ಡ ಗಲಾಟೆಯನ್ನೇ ಮಾಡಿದರು.  ರೈಲ್ವೆ ಪೊಲೀಸರೂ ತಿಳಿಹೇಳಿದರೂ ಕೂಡ ಅವರ ಮಾತಿಗೆ ಒಪ್ಪದೇ, ಕೂಗಾಡಿಕೊಂಡು ಮಗುವನ್ನು ಕರೆದುಕೊಂಡು ರೈಲುನಿಲ್ದಾಣದಿಂದ ಹೊರಕ್ಕೆ ಹೋದರು. ನಂತರ ಅವರನ್ನು ವಿಚಾರಿಸಿದಾಗ, ಅರಸೀಕೆರೆ ತಾಲ್ಲೂಕಿನ ಮುರುಂಡಿ ಸಿದ್ದರಹಟ್ಟಿ ಗ್ರಾಮದವರೆಂದು, ಬೇರೆ ಊರಿಗೆ ಹೋಗಿದ್ದವರು ಈಗ ವಾಪಸ್ಸ್ ತಮ್ಮ ಹಳ್ಳಿಗೆ ಹೋಗುತ್ತಿರುವುದಾಗಿ ತಿಳಿಸಿದರು. ಅಲ್ಲಿದ್ದ ಆರೋಗ್ಯ ಸಹಾಯಕಿಯು ಮುರುಂಡಿ ಸಿದ್ದರಹಟ್ಟಿಯಲ್ಲಿ ಇಂದು ಕರ್ತವ್ಯಕ್ಕೆ ನಿರತರಾಗಿರುವವರಿಗೆ ಕರೆ ಮಾಡಿ, ಈ ಮಗು ಗ್ರಾಮಕ್ಕೆ ಬಂದಾಗ ಲಸಿಕೆ ಹಾಕುವಂತೆ ತಿಳಿಸಿರುತ್ತಾರೆ.








Share:

ಶುಕ್ರವಾರ, ಜನವರಿ 26, 2018

ಅರಸೀಕೆರೆಯಲ್ಲಿ 69ನೆಯ ಗಣರಾಜ್ಯೋತ್ಸವ

ಅರಸೀಕೆರೆಯಲ್ಲಿ 69ನೆಯ ಗಣರಾಜ್ಯೋತ್ಸವ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಅರಸೀಕೆರೆ ಪಟ್ಟಣದ ಜೇನುಕಲ್ ಬಡಾವಣೆಯಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ಸಂಭ್ರಮ ಸಡಗರದಿಂದ 69ನೆಯ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಅರಸೀಕೆರೆ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀ.ಎನ್.ವಿ.ನಟೇಶ್ ರವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ನಂತರ ತೆರೆದ ಜೀಪಿನಲ್ಲಿ ಕವಾಯತು ವೀಕ್ಷಣೆ ನಡೆಸಿದರು.   ಅರಸೀಕೆರೆ ನಗರಠಾಣೆ ಆರಕ್ಷಕ ಉಪನಿರೀಕ್ಷಕ ಯೋಗನಂಜಪ್ಪನವರ ನೇತೃತ್ವದಲ್ಲಿ ಆರಕ್ಷಕ ಇಲಾಖೆ, ಗೃಹರಕ್ಷಕ ದಳ, ಎನ್.ಸಿ.ಸಿ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳ ಆಕರ್ಶಕ ಪಥಸಂಚಲನ ಜರುಗಿತು.  ತಹಶೀಲ್ದಾರ್ ರವರು ಗಣರಾಜ್ಯೋತ್ಸವ ಸಂದೇಶವನ್ನು ನೀಡಿದರು.  ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರುಗಳಿಗೆ, ಕ್ರೀಡಾಪಟುಗಳಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅರಸೀಕೆರೆ ಕ್ಷೇತ್ರದ ಶಾಸಕರಾದ ಶ್ರೀ.ಕೆ.ಎಂ.ಶಿವಲಿಂಗೇಗೌಡರು ಸಭೆಯನ್ನುದ್ದೇಶಿಸಿ ಮಾತನಾಡಿದರು.  ನಂತರ ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಭಿಕರ ಮನಸೂರೆಗೊಳ್ಳುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.



















Share:

ಸೋಮವಾರ, ಜನವರಿ 22, 2018

ಕರ್ನಾಟಕ ವಿಧಾನಸಭೆಯಲ್ಲಿ ಅರಸೀಕೆರೆ ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕರುಗಳು

ಕರ್ನಾಟಕ ವಿಧಾನಸಭೆಯಲ್ಲಿ ಅರಸೀಕೆರೆ ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕರುಗಳು

1952 ರಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಯ ಸಮಯದಿಂದಲೂ ಅರಸೀಕೆರೆ ತಾಲ್ಲೂಕಿನಲ್ಲಿ 2 ವಿಧಾನಸಭಾ ಕ್ಷೇತ್ರಗಳನ್ನು ರಚಿಸಲಾಗಿತ್ತು. 1952 ರ ಚುನಾವಣೆಯಲ್ಲಿ ಅರಸೀಕೆರೆ ಮತ್ತು ಜಾವಗಲ್ ಕ್ಷೇತ್ರವೆಂದು ವಿಗಂಡಿಸಲಾಗಿತ್ತು. ನಂತರದ ಚುನಾವಣೆಯಲ್ಲಿ ಜಾವಗಲ್ ಕ್ಷೇತ್ರವು ಗಂಡಸಿ ಕ್ಷೇತ್ರವೆಂದು ಬದಲಾಯಿತು. 2008ರಲ್ಲಿ ನಡೆದ ಕ್ಷೇತ್ರಗಳ ವಿಂಗಡನೆಯಲ್ಲಿ ಗಂಡಸಿ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಗ್ರಾಮಗಳು ಬೇರೆಬೇರೆ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗಿ ಗಂಡಸಿ ಕ್ಷೇತ್ರವು ಇತಿಹಾಸದ ಪುಟ ಸೇರಿತು.

ಅರಸೀಕೆರೆ ಕ್ಷೇತ್ರದ ಶಾಸಕರುಗಳು :-

1) 1952 ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ ಒಟ್ಟು 40,884 ಜನ ಮತದಾರರಿದ್ದರು. ಇವರುಗಳ ಪೈಕಿ ಶೇ.45.67% ರಷ್ಟು ಅಂದರೆ, 18,671 ಜನ ಮತದಾನ ಮಾಡಿದ್ದರು. ಅರಸೀಕೆರೆ ಕ್ಷೇತ್ರದಿಂದ ಮೂವರು ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇವರು ಪೈಕಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಪಂಚಾಕ್ಷರಯ್ಯನವರು 8631 ಮತಗಳನ್ನು ಪಡೆದು ಅರಸೀಕೆರೆ ಕ್ಷೇತ್ರದ ಪ್ರಥಮ ಶಾಸಕರಾಗಿ ಆಯ್ಕೆಯಾದರು. ಇವರ ಪ್ರತಿಸ್ಪರ್ಧಿಗಳಾದ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯ ಪಿ.ಬಿ.ಬೊಮ್ಮಣ್ಣನವರು 8348 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಎಂ.ಬಸವರಾಜ್ ರವರು 1692 ಮತಗಳನ್ನು ಪಡೆದಿದ್ದರು.

2) ರಾಜ್ಯ ವಿಧಾನಸಭೆಯ ಎರಡನೇ ಸಾರ್ವತ್ರಿಕ ಚುನಾವಣೆ 1957 ರಲ್ಲಿ ಜರುಗಿತು. ಅರಸೀಕೆರೆ ಕ್ಷೇತ್ರದಿಂದ ಮೂವರು ಸ್ಪರ್ಧಿಸಿದ್ದರು. ಒಟ್ಟು ಮತದಾರ ಸಂಖ್ಯೆ 45,101, ಇವರಲ್ಲಿ 26,646 (ಶೇ.59.08%) ಜನ ಮತದಾನ ಮಾಡಿದ್ದರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಡಾ. ಎ.ಆರ್.ಕರಿಸಿದ್ದಪ್ಪನವರು 14,834 ಮತಗಳನ್ನು ಪಡೆದು ಜಯಶಾಲಿಯಾದರು. ಇವರ ಪ್ರತಿಸ್ಪರ್ಧಿಗಳಾದ ಪಕ್ಷೇತರ ಅಭ್ಯರ್ಥಿ ವೈ.ಧರ್ಮಪ್ಪ ರವರು 10,469 ಮತಗಳನ್ನು ಹಾಗೂ ಪ್ರಜಾ ಸೋಶಿಯಲಿಷ್ಟ್ ಪಾರ್ಟಿಯ ಕೆ.ಎಂ.ಬಸವರಾಜು 1343 ಮತಗಳನ್ನು ಪಡೆದರು.

3) 1962ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ 52,573 ಮತದಾರರಿದ್ದರು ಇವರ ಪೈಕಿ 30,155 (ಶೇ.57.36%) ರಷ್ಟು ಜನ ಮತ ಚಲಾಯಿಸಿದ್ದರು. ಅರಸೀಕೆರೆ ಕ್ಷೇತ್ರದಲ್ಲಿ ನಾಲ್ಕು ಜನ ಅರ್ಭ್ಯರ್ಥಿಗಳಿದ್ದರು. ಪ್ರಜಾ ಸೋಶಿಯಲಿಷ್ಟ್ ಪಾರ್ಟಿಯಿಂದ ಕಣಕ್ಕಿಳಿದಿದ್ದ ಪಿ.ಬಿ.ಬೊಮ್ಮಣ್ಣನವರು 14,639 ಮತಗಳನ್ನು ಪಡೆದು ಕ್ಷೇತ್ರದ ಮೂರನೇ ಶಾಸಕರಾಗಿ ಆಯ್ಕೆಯಾದರು. 1957ರಲ್ಲಿ ಶಾಸಕರಾಗಿದ್ದ ಕಾಂಗ್ರೆಸ್ ಪಕ್ಷದ ಡಾ.ಎ.ಆರ್.ಕರಿಸಿದ್ದಪ್ಪನವರು 11,655 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಪಕ್ಷೇತರ ಅಭ್ಯರ್ಥಿ ಟಿ. ಮೊಹಮದ್ ಇಸ್ಮಾಯಿಲ್ ರವರು 928 ಮತಗಳನ್ನು ಹಾಗೂ ಜನಸಂಘದಿಂದ ಸ್ಪರ್ಧಿಸಿದ್ದ ಕೆ.ಎಂ.ಬಸವರಾಜು ರವರು 824 ಮತಗಳನ್ನು ಪಡೆದಿದ್ದರು.

4) 1967ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜಿ.ಚನ್ನಬಸಪ್ಪನವರು 22,847 ಮತಗಳನ್ನು ಪಡೆದು ಜಯಶಾಲಿಯಾದರೆ, ಪ್ರತಿಸ್ಪರ್ಧಿಗಳಾದ ಸ್ವತಂತ್ರ ಪಕ್ಷದ ಹೆಚ್.ಎಸ್.ಸಿದ್ದಪ್ಪ (ಮಿಲ್ಟ್ರಿ ಸಿದ್ದಪ್ಪ) ರವರು 15,942 ಮತಗಳನ್ನು ಹಾಗೂ ಭಾರತೀಯ ಜನಸಂಘದ ಕೆ.ಎನ್.ದುರ್ಗಪ್ಪಶೆಟ್ಟಿ ರವರು 2,082 ಮತಗಳನ್ನು ಪಡೆದರು. ಒಟ್ಟು 62,060 ಮತದಾರರ ಪೈಕಿ 42,958 (ಶೇ.69.22%) ಜನ ಮತದಾನ ಮಾಡಿದ್ದರು.

5) 1972 ರಲ್ಲಿ ನಡೆದ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ 73,120 ಮತದಾರರಿದ್ದರು. 49,747 (68.03%) ಜನ ಮತ ಚಲಾಯಿಸಿದರು. ಸಂಸ್ಥಾ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಹೆಚ್.ಎಸ್.ಸಿದ್ದಪ್ಪ (ಮಿಲ್ಟ್ರಿ ಸಿದ್ದಪ್ಪ) ರವರು 23,026 ಮತಗಳನ್ನು ಪಡೆದು ಅರಸೀಕೆರೆಯ ಐದನೇ ಶಾಸಕರಾಗಿ ಆಯ್ಕೆಯಾದರು. ಕಾಂಗ್ರೆಸ್ (ಐ) ನಿಂದ ಸ್ಪರ್ಧಿಸಿದ್ದ ಗಂಗಾಧರಪ್ಪನವರು 21,925 ಮತಗಳನ್ನು, ಭಾರತೀಯ ಜನಸಂಘದ ಎನ್.ಎಮ್.ಬಸವರಾಜು ರವರು 1,668 ಮತಗಳನ್ನು, ಪಕ್ಷೇತರ ಅರ್ಭ್ಯರ್ಥಿಗಳಾದ ಪಾಪಯ್ಯ ರವರು 837 ಮತಗಳನ್ನು ಮತ್ತು ಬಸಪ್ಪ ಒಡೆಯರ್ ರವರು 745 ಮತಗಳನ್ನು ಪಡೆದರು.

ಹೆಚ್.ಎಸ್.ಸಿದ್ದಪ್ಪನವರು ಶಾಸಕರಾಗಿದ್ದ ಅವಧಿಯಲ್ಲೇ ನಿಧನಹೊಂದಿದರು. ಅವರ ಅಕಾಲಿಕ ನಿಧನದಿಂದ ತೆರೆವಾದ ಸ್ಥಾನಕ್ಕೆ 1974 ರಲ್ಲಿ ನಡೆದ ಉಪಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಆನಿವಾಳದ ನಂಜಪ್ಪನವರು ಅರಸೀಕೆರೆಯ ಆರನೇ ಶಾಸಕರಾಗಿ ಆಯ್ಕೆಯಾದರು.

6) 1978ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಅರಸೀಕೆರೆ ಕ್ಷೇತ್ರದ ಮತದಾರ ಸಂಖ್ಯೆ 86,981 ಆಗಿತ್ತು. ಈ ಪೈಕಿ 65,210 (ಶೇ.74.97%) ಜನ ಮತ ಚಲಾಯಿಸಿದ್ದರು. ಚುನಾವಣಾ ಕಣದಲ್ಲಿ ನಾಲ್ಕು ಜನ ಸ್ಪರ್ಧಿಸಿದ್ದರು. ಕಾಂಗ್ರೆಸ್ (ಐ) ನಿಂದ ಸ್ಪರ್ಧಿಸಿದ್ದ ಡಿ.ಬಿ.ಗಂಗಾಧರಪ್ಪನವರು 36,062 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾದರು. ಜನತಾ ಪಾರ್ಟಿಯ ಕೆ.ಎನ್.ದುರ್ಗಪ್ಪಶೆಟ್ಟಿ ರವರು 19,585 ಮತಗಳನ್ನು, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಜಿ.ಎಸ್.ಬಸವರಾಜು ರವರು 7563 ಮತಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿ ಕೃಷ್ಣಾನಾಯ್ಕ ರವರು 575 ಮತಗಳನ್ನು ಪಡೆದರು.

7) 1983ರ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಿಂದ ಮೂವರು ಸ್ಪರ್ಧಿಸಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಬಸವರಾಜು ರವರು 32,877 ಮತಗಳನ್ನು ಪಡೆದು ಜಯಶಾಲಿಯಾದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ.ಬಿ.ಗಂಗಾಧರಪ್ಪ ರವರು 19,095 ಮತಗಳನ್ನು ಹಾಗೂ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿಯಾಗಿದ್ದ ಕೆ.ಎನ್.ದುರ್ಗಪ್ಪಶೆಟ್ಟಿ ರವರು 11,950 ಮತಗಳನ್ನು ಪಡೆದರು. ಒಟ್ಟು ಮತದಾರ ಸಂಖ್ಯೆ 95,307 ರ ಪೈಕಿ 65,048 (ಶೇ.68.25%) ಜನ ಮತದಾನ ಮಾಡಿದ್ದರು.

1983 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಗಳಿಗೆ ಸ್ಪಷ್ಟ ಬಹುಮತ ದೊರೆಯಲಿಲ್ಲ. 95 ಸ್ಥಾನಗಳಲ್ಲಿ ಜಯಶಾಲಿಯಾಗಿದ್ದ ಜನತಾಪಕ್ಷವು ಬಿಜೆಪಿ ಹಾಗೂ ಇತರೆ ಪಕ್ಷಗಳ ಬಾಹ್ಯ ಬೆಂಬಲ ಪಡೆದು, ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಿ ರಾಮಕೃಷ್ಣಹೆಗ್ಡೆ ರವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತು. ಆದರೆ 1984 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಜನತಾ ಪಕ್ಷವು ಕೇವಲ 4 ಲೋಕಸಭಾ ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಈ ಬೆಳವಣಿಗೆಯಿಂದ ರಾಮಕೃಷ್ಣಹೆಗ್ಡೆಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿಧಾನಸಭೆಯನ್ನು ವಿಸರ್ಜಿಸಿದರು.

8) 1985ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ದೊರೆತು ರಾಮಕೃಷ್ಣ ಹೆಗ್ಡೆ ಯವರು ಮತ್ತೆ ಮುಖ್ಯಮಂತ್ರಿಯಾದರು. ಅರಸೀಕೆರೆ ಕ್ಷೇತ್ರದಿಂದ ಜನತಾ ಪಕ್ಷದ ಡಿ.ಬಿ.ಗಂಗಾಧರಪ್ಪನವರು ಆಯ್ಕೆಯಾಗಿ ಅರಸೀಕೆರೆಯಲ್ಲಿ ಎರಡು ಸಲ ಶಾಸಕರಾಗಿ ಆಯ್ಕೆಯಾದ ಮೊದಲ ವ್ಯಕ್ತಿ ಎಂದೆನಿಸಿದರು. ಚುನಾವಣಾ ಕಣದಲ್ಲಿ ಒಟ್ಟು 15 ಜನ ಸ್ಪರ್ಧಿಸಿದ್ದರು. ಡಿ.ಬಿ.ಗಂಗಾಧರಪ್ಪ 35,356 ಮತ, ಕಾಂಗ್ರೆಸ್ ಪಕ್ಷದ ಜಿ.ಎಸ್.ಬಸವರಾಜು 30,148, ಬಿಜೆಪಿಯ ಎ.ಎಸ್.ಬಸವರಾಜು 3,902 ಮತಗಳನ್ನು ಪಡೆದರು. ಉಳಿದ ಅಭ್ಯರ್ಥಿಗಳಾದ ವೆಂಕಟರಮಣಪ್ಪ (604), ಜಿ.ಕೆಂಚಪ್ಪ (547), ಕೆ.ಕೆ.ಹೆಚ್.ಅಬ್ದುಲ್ ಖಲೀಲ್ (331), ಹೆಚ್.ಎಸ್.ಅಮೀರ್ (293), ಜಿ.ಇಕ್ಬಾಲ್ ಅಹಮದ್ (288), ಚಲದೇವ ಬೋವಿ (275), ಮೂಡಲಪ್ಪ (213), ಎ.ಹೆಚ್.ರಮೇಶ (175), ಬಿ.ಎಸ್.ಶ್ರೀನಾಥ (174), ಕೆ.ನಾಗರಾಜ (137), ವೆಂಕಟರಾಜು (131), ಪುಟ್ಟಯ್ಯ (66) ಮತಗಳನ್ನು ಪಡೆದರು. ಈ ಚುನಾವಣೆಯಲ್ಲಿ ಅರಸೀಕೆರೆ ಮತದಾರರ ಸಂಖ್ಯೆ ಒಂದು ಲಕ್ಷಕ್ಕೆ ಏರಿತ್ತು. ಒಟ್ಟು 1,06,704 ಮತದಾರರ ಪೈಕಿ 73,845 (ಶೇ.69.21%) ಮತದಾನ ಮಾಡಿದ್ದರು.

9) 1989ರ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಿಂದ ಇದುವರೆಗಿದ ದಾಖಲೆ ಪ್ರಮಾಣದ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಒಟ್ಟು 19 ಜನ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಪಕ್ಷದ ಕೆ.ಪಿ.ಪ್ರಭುಕುಮಾರ್ ರವರು 30,533 ಮತಗಳನ್ನು ಪಡೆದು ಜಯಶಾಲಿಯಾದರು. ಜನತಾ ದಳದ ಜಿ.ಎಸ್.ಪರಮೇಶ್ವರಪ್ಪ 19,591 ಮತಗಳು, ಜನತಾ ಪಕ್ಷದ ಡಿ.ಬಿ.ಗಂಗಾಧರಪ್ಪ 15,776 ಮತಗಳು, ಬಿಜೆಪಿಯ ಎ.ಎಸ್.ಬಸವರಾಜು 13,622 ಮತಗಳನ್ನು ಪಡೆದರು. ಪಕ್ಷೇತರ ಅಭ್ಯರ್ಥಿಗಳಾದ ಜಿ.ಉರಲಿಂಗಪ್ಪ (2278), ಬಿ.ಪಿ.ದಯಾನಂದ (891), ಡಿ.ಭೀಮಾನಾಯ್ಕ (426), ಜಿ.ಕೆಂಚಪ್ಪ (392), ಹೆಚ್.ಕೆ.ಗೋಪಾಲನಾಯ್ಕ (371), ಲಕ್ಷ್ಮಾಬೋವಿ (284), ಬಸಪ್ಪ ಒಡೆಯರ್ (256), ಸಣ್ಣಚಲುವಯ್ಯ (140), ಪಿ.ಎಸ್.ಗೋಪಾಲಕೃಷ್ಣ (118), ಅನಂತಸ್ವಾಮಿ (106), ಪಿ.ಚಂದ್ರಪ್ಪ (105), ಮೂಡ್ಲಯ್ಯ (97), ಎಸ್.ಸಿ.ಸಿದ್ದರಾಮಪ್ಪ (96), ರುದ್ರಾಣಮ್ಮ (91), ಜಗದೀಶಮೂರ್ತಿ (75) ಮತಗಳನ್ನು ಪಡೆದರು. ಒಟ್ಟು 1,31,362 ಮತದಾರ ಪೈಕಿ 91,058 (ಶೇ.69.32%) ಮತದಾನ ಮಾಡಿದ್ದರು.

10) 1994 ರ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರ ಅಚ್ಚರಿಯ ಫಲಿತಾಂಶ ನೀಡಿ ರಾಜ್ಯದ ಗಮನ ಸೆಳೆಯಿತು. ಹಿರಿಯ ರಾಜಕೀಯ ಮುತ್ಸದ್ಧಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಹಾರನಹಳ್ಳಿ ರಾಮಸ್ವಾಮಿಯವರು ಈ ಚುನಾವಣೆಯಲ್ಲಿ ಪರಾಭವಗೊಂಡರು. ಜನತಾದಳದಿಂದ ಸ್ಪರ್ಧಿಸಿದ್ದ ಜಿ.ಎಸ್.ಪರಮೇಶ್ವರಪ್ಪನವರು 31,845 ಮತಗಳನ್ನು ಪಡೆದು ಅರಸೀಕೆರೆ ಶಾಸಕರಾಗಿ ಆಯ್ಕೆಯಾದರು. ಹಾರನಹಳ್ಳಿ ರಾಮಸ್ವಾಮಿಯವರಿಗೆ 29,113 ಮತಗಳು, ಬಿಜೆಪಿಯ ಎ.ಎಸ್.ಬಸವರಾಜು ರವರಿಗೆ 20,326 ಮತಗಳು ಕರ್ನಾಟಕ ಕಾಂಗ್ರೆಸ್ ಪಕ್ಷದ ಎಸ್.ಸಿ.ಸಿದ್ದರಾಮಪ್ಪ ರವರಿಗೆ 12,636 ಮತಗಳು ಲಭಿಸಿದವು. ಉಳಿದ ಸ್ಪರ್ಧಿಗಳಾದ ಕೆ.ಆರ್.ಚಂದ್ರಶೇಖರ್ (2668), ಶಿವರುದ್ರಪ್ಪ (635), ಆರ್.ಸಿದ್ದೇಗೌಡ (430), ಕೃಷ್ಣಮೂರ್ತಿ (137), ಜಿ.ಕೆಂಚಪ್ಪ (82), ಜಿ.ಮೋಹನ್ ಲಾಲ್ (49) ಮತಗಳನ್ನು ಪಡೆದರು. ಒಟ್ಟು 1,39,970 ಮತದಾರರ ಪೈಕಿ 99,753 (ಶೇ. 71.27%) ಮತದಾನ ಮಾಡಿದ್ದರು.

11) 1999 ರ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದ ಮತದಾರ ಸಂಖ್ಯೆ 1,46,857 ಆಗಿತ್ತು. ಒಟ್ಟು 1,04,522 (ಶೇ. 71.17%) ರಷ್ಟು ಜನ ಮತದಾನ ಮಾಡಿದ್ದರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಜಿ.ವಿ.ಸಿದ್ದಪ್ಪನವರು 43,224 ಮತಗಳನ್ನು ಪಡೆದು ಅರಸೀಕೆರೆ ಕ್ಷೇತ್ರದ ಹನ್ನೆರಡನೇ ಶಾಸಕರಾಗಿ ಆಯ್ಕೆಯಾದರು. ಬಿಜೆಪಿಯ ಎ.ಎಸ್.ಬಸವರಾಜು 32,235 ಮತಗಳು, ಜೆಡಿಎಸ್ ನ ಕೆ.ಪಿ.ಪ್ರಭುಕುಮಾರ್ 22,208 ಮತಗಳು ಹಾಗು ಪಕ್ಷೇತರ ಅಭ್ಯರ್ಥಿಗಳಾದ ಎಸ್.ಎನ್.ರಾಮಚಂದ್ರ ಶಾಸ್ತ್ರಿ 1238 ಮತಗಳು, ಎ.ಟಿ.ತಿಮ್ಮಪ್ಪ 1194, ಎ.ಬಿ.ಶ್ರೀನಿವಾಸ (ವಾಟಾಳ್) 318 ಮತ ಹಾಗೂ ಎಸ್.ಎಂ.ರಮೇಶ್ 222 ಮತಗಳನ್ನು ಪಡೆದರು.

12) 2004 ರ ವಿಧಾನಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಬಳಸಲಾಯಿತು. ಭಾರತೀಯ ಜನತಾ ಪಕ್ಷವು ಅರಸೀಕೆರೆಯಲ್ಲಿ ಮೊದಲ ಸಲ ಖಾತೆ ತೆರೆಯಿತು. ಸತತ ನಾಲ್ಕುಬಾರಿ ಸ್ಪರ್ಧಿಸಿ ಸೋತಿದ್ದ ಬಿಜೆಪಿಯ ಎ.ಎಸ್.ಬಸವರಾಜು ರವರು ತಮ್ಮ ಐದನೇ ಪ್ರಯತ್ನದಲ್ಲಿ 36,867 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಕಾಂಗ್ರೆಸ್ ನ ಜಿ.ವಿ.ಸಿದ್ದಪ್ಪ 30,418, ಜೆಡಿಎಸ್ ನ ಕೆ.ಪಿ.ಪ್ರಭುಕುಮಾರ್ 20,381, ಪಕ್ಷೇತರ ಅಭ್ಯರ್ಥಿಗಳಾದ ಬಿಳಿಚೌಡಯ್ಯ 9996, ಬಿ.ಎನ್.ವಿದ್ಯಾಧರ 5497, ಜಿ.ಎಮ್.ಉರಲಿಂಗಪ್ಪ 1397 ಹಾಗೂ ಬಿ.ಆರ್.ತೋಂಟದಾರ್ಯ 1036 ಮತಗಳನ್ನು ಪಡೆದರು. ಒಟ್ಟು 1,57,442 ಮತದಾರ ಪೈಕಿ 1,05,234 (ಶೇ.66.83%) ಜನ ಮತದಾನ ಮಾಡಿದ್ದರು.

13) 2008 ರಲ್ಲಿ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳ ಮರುವಿಂಗಡನೆಯಾಯಿತು. ಈ ಸಮಯದಲ್ಲಿ ಅರಸೀಕೆರೆ ತಾಲ್ಲೂಕಿನ ಗಂಡಸಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಗ್ರಾಮಗಳನ್ನು ಬೇರೆಬೇರೆ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದರಿಂದ ಗಂಡಸಿ ಕ್ಷೇತ್ರವು ಇಲ್ಲವಾಯಿತು. 2004 ರ ಚುನಾವಣೆಯಲ್ಲಿ ಗಂಡಸಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಎಂ.ಶಿವಲಿಂಗೇಗೌಡರು ಕೇವಲ 18 ಮತಗಳಿಂದ ಸೋಲನ್ನು ಅನುಭವಿಸಿದ್ದರು. 2008ರಲ್ಲಿ ನಡೆದ ಕ್ಷೇತ್ರ ಮರು ವಿಂಗಡಣೆ ಬಳಿಕ ಗಂಡಸಿ ಕ್ಷೇತ್ರ ಕಳೆದುಕೊಂಡ ಕೆ.ಎಂ.ಶಿವಲಿಂಗೇಗೌಡರು, ಅರಸೀಕೆರೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 74,025 ಮತಗಳನ್ನು ಪಡೆದು ಅರಸೀಕೆರೆಯ ಹದಿನಾಲ್ಕನೆಯ ಶಾಸಕರಾಗಿ ಚುನಾಯಿತರಾದರು. ಇವರ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ನ ಜಿ.ವಿ.ಸಿದ್ದಪ್ಪ 39,799 ಮತಗಳು, ಬಿಜೆಪಿಯ ಬಿ.ಎನ್.ರವಿ 19,774 ಮತಗಳು, ಬಹುಜನ ಸಮಾಜ ಪಕ್ಷದ ಕೆ.ಎಮ್.ಬಸವರಾಜು 2301 ಮತಗಳು, ಪಕ್ಷೇತರ ಅಭ್ಯರ್ಥಿ ಎಂ.ಪಿ.ಪ್ರವೀಣ 1949 ಮತಗಳು ಹಾಗೂ ಜೆಡಿಯು ನ ಬಿ.ಎನ್.ರಮೇಶ್ 1445 ಮತಗಳನ್ನು ಪಡೆದರು. ಕ್ಷೇತ್ರ ವಿಂಗಡನೆಯಲ್ಲಿ ಗಂಡಸಿ ಹೋಬಳಿ ಸೇರಿದಂತೆ ಹಿಂದಿನ ಗಂಡಸಿ ಕ್ಷೇತ್ರದ ಹಲವು ಗ್ರಾಮಗಳು ಅರಸೀಕೆರೆ ಕ್ಷೇತ್ರದಲ್ಲಿ ಸೇರ್ಪಡೆಯಾಗಿದ್ದರಿಂದ ಒಟ್ಟು ಮತದಾರ ಸಂಖ್ಯೆ 1,78,412 ಕ್ಕೆ ಏರಿತ್ತು, ಈ ಪೈಕಿ 1,38,935 (ಶೇ.77.87%) ಜನ ಮತದಾನ ಮಾಡಿದ್ದರು.

14) 2013ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕೆ.ಎಂ.ಶಿವಲಿಂಗೇಗೌಡರು 76,579 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಬಿ.ಶಿವರಾಮ್ ರವರನ್ನು 29,631 ಮತಗಳ ಅಂತರದಿಂದ ಸೋಲಿಸಿ, ಅರಸೀಕೆರೆ ಕ್ಷೇತ್ರದಲ್ಲಿ ಸತತ ಎರಡು ಚುನಾವಣೆಗಳಲ್ಲಿ ಗೆದ್ದ ಪ್ರಥಮ ಶಾಸಕ ಎಂದೆನಿಸಿಕೊಂಡರು. ಕಾಂಗ್ರೆಸ್ ಅಭ್ಯರ್ಥಿ ಬಿ.ಶಿವರಾಮ್ 46,498 ಮತಗಳನ್ನು ಪಡೆದರೆ, ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಡಾ.ಡಿ.ಜಿ. ಲೋಕೇಶ್ 26,312 ಮತಗಳನ್ನು ಪಡೆದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ.ಬಿ.ಗಂಗಾಧರ್ (2464), ಪಕ್ಷೇತರ ಅಭ್ಯರ್ಥಿ ಗಂಗಾಧರಪ್ಪ (1557), ಕುಮಾರ ಬೋವಿ (1335), ಜೆ.ಪಿ.ಜಯಣ್ಣ (1244), ಎನ್.ಪಿ.ರಾಜೇಂದ್ರ ಪ್ರಸಾದ್ (745), ಬಿ.ಕೆ.ಸೋಮಶೇಖರ್ (605), ಟಿ.ಎಂ.ಚಂದ್ರಶೇಖರಯ್ಯ (561), ಆಟೋ ರವಿ (ಬೋಂಡ) 519 ಮತಗಳನ್ನು ಪಡೆದರು. ಅರಸೀಕೆರೆ ಕ್ಷೇತ್ರದ ಒಟ್ಟು 1,97,265 ಮತದಾರರ ಪೈಕಿ 1,58,869 (ಶೇ. 80.47%) ರಷ್ಟು ಮತದಾನ ನಡೆದಿತ್ತು.

(ಚುನಾವಣಾ ಅಂಕಿಅಂಶಗಳು ಹಾಗೂ ಇತರೆ ಮಾಹಿತಿಗಳನ್ನು ಅಂತರ್ಜಾಲದಲ್ಲಿ ದೊರತ ವಿವಿಧ ಮೂಲಗಳಿಂದ ಸಂಗ್ರಹಿಸಿರುತ್ತೇನೆ, ಶಾಸಕರುಗಳ ಭಾವಚಿತ್ರಗಳನ್ನು ಅವರ ಕುಟುಂಬದ ಸದಸ್ಯರುಗಳಿಂದ ಸಂಗ್ರಹಿಸಿರುತ್ತೇನೆ.)
ಮೇಲ್ಕಂಡ ವಿವರಗಳಲ್ಲಿ ಸಾಧ್ಯವಾದಷ್ಟೂ ಅಧಿಕೃತವಾದ ಮಾಹಿತಿಗಳನ್ನು ಸಂಗ್ರಹಿಸಿದ್ದೇನೆ. ಅಕಸ್ಮಾತ್ ಯಾವುದೇ ವಿವರಗಳಲ್ಲಿ ವೆತ್ಯಾಸವೇನಾದರೂ ಕಂಡುಬಂದರೆ ಅಥವಾ ತಮ್ಮಲ್ಲಿ ಹೆಚ್ಚಿನ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ. ತಮ್ಮ ಪ್ರತಿಕ್ರಿಯೆಗೆ ಕಾಯುತ್ತಿರುತ್ತೇನೆ.

ಧನ್ಯವಾದಗಳು
ಶ್ರೀರಾಮ ಜಮದಗ್ನಿ
ಅರಸೀಕೆರೆ.


Share:

ಬುಧವಾರ, ಜನವರಿ 17, 2018

ಸುಗ್ಗಿಯ ಸಂಭ್ರಮವನ್ನು ಕಣದಲ್ಲಿ ನೋಡಿ

ಸುಗ್ಗಿಯ ಸಂಭ್ರಮವನ್ನು ಕಣದಲ್ಲಿ ನೋಡಿ

ಅರಸೀಕೆರೆ ತಾಲ್ಲೂಕಿನಾದ್ಯಂತ ಕಳೆದ ವರ್ಷಾಂತ್ಯದಲ್ಲಿ ಆದ ಮಳೆಯಿಂದ ಈ ಬಾರಿ ಉತ್ತಮ ಬೆಳೆ ಬಂದಿದೆ. ಸಂಕ್ರಾಂತಿಯ ಈ ಸಮಯದಲ್ಲಿ ತಾಲ್ಲೂಕಿನಾದ್ಯಂತ ಕಣಗಳಲ್ಲಿ ಬಿಡುವಿಲ್ಲದ ಕೆಲಸ ನಡೆಯುತ್ತಿದೆ.

ಫಾಸ್ಟ್ ಫುಡ್ ಯುಗದಲ್ಲಿ ಬೆಳೆಯುತ್ತಿರುವ ಇಂದಿನ ಯುವ ಪೀಳಿಗೆಯ ಬಹುತೇಕ ಮಕ್ಕಳಿಗೆ ಆಹಾರ ಧಾನ್ಯಗಳು ಬೆಳೆಯುವ ರೀತಿ, ಬೆಳೆದ ಪೈರನ್ನು ಧಾನ್ಯವನ್ನಾಗಿಸುವ ಪ್ರಕ್ರಿಯೆ, ಕಣ ಪದ್ಧತಿಯಲ್ಲಿ ಬಳಸುವ ಬಣವೆ, ರೋಣಗಲ್ಲು, ಉತ್ತ್ರಾಣೆಬರ್ಲು, ಧಾನ್ಯ ತೂರಲು ಬಳಸುವ ಮೊರ, ಸಗಣಿಯಿಂದ ಸಾರಿಸಿದ ಒಕ್ಕಲು ಕಣ, ಧಾನ್ಯಗಳ ರಾಶಿ ಪೂಜೆ ಇತ್ಯಾದಿಗಳ ಬಗ್ಗೆ ಒಂದಿಷ್ಟೂ ಮಾಹಿತಿ ಇರುವುದಿಲ್ಲ. ಹಾಗಾಗಿ ಇವರುಗಳಿಗೆ ತಿನ್ನುವ ಆಹಾರದ ಬಗ್ಗೆ ಗೌರವದ ಭಾವನೆ ಇರುವುದಿಲ್ಲ. ಒಂದೊಂದು ಕಾಳು ಉತ್ಪಾದನೆ ಮಾಡಲು ರೈತರು ಪಡುವ ಪರಿಶ್ರಮವನ್ನು ಹತ್ತಿರದಿಂದ ನೋಡಿದರೆ ಸಾಕು, ಅವರು ಯಾವುದೇ ವಯೋಮಾನದವರಾಗಿರಲಿ ಮುಂದೆ ತಟ್ಟೆಯಲ್ಲಿ ಆಹಾರವನ್ನು ಖಂಡಿತವಾಗಿಯೂ ಚೆಲ್ಲುವುದಿಲ್ಲ.

ಅರಸೀಕೆರೆ ಪಟ್ಟಣದಲ್ಲಿ ವಾಸಿಸುವವರು ಸಾಧ್ಯವಾದರೆ ಪಟ್ಟಣದಿಂದ ಕೇವಲ ನಾಲ್ಕೈದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಕಣಗಳನ್ನು ತಮ್ಮ ಕುಟುಂಬ ಸಮೇತರಾಗಿ ನೋಡಿಕೊಂಡು ಬನ್ನಿ, ಅರಸೀಕೆರೆ ಕಸಬಾ ಹೋಬಳಿ ವ್ಯಾಪ್ತಿಯ ಬಹುತೇಕ ಎಲ್ಲ ಹಳ್ಳಿಗಳಲ್ಲೂ ಕಣದ ಕೆಲಸ ನಡೆಯುತ್ತಿದೆ. ಶಾಲಾ ಮುಖ್ಯಸ್ಥರೂ ಕೂಡ ತಮ್ಮ ವಿದ್ಯಾರ್ಥಿಗಳನ್ನು ಕಣಕ್ಕೆ ಕರೆದುಕೊಂಡು ಹೋಗಿ ಮಕ್ಕಳಿಗೆ ಬೇಸಾಯ ಪದ್ಧತಿ, ಆಹಾರದ ಮಹತ್ವವನ್ನು ತಿಳಿಸಿಕೊಡುವ ಕಾರ್ಯಕ್ರಮ ಮಾಡಬಹುದು.
ನೆನಪಿರಲಿ, ಕಣ ಎನ್ನುವುದು ಅತ್ಯಂತ ಪವಿತ್ರವಾದ ಜಾಗ. ಕಣವನ್ನು ಪ್ರವೇಶಿಸುವಾಗ ಕೆಲವೊಂದು ನಿಬಂಧನೆಗಳಿವೆ, ಅವುಗಳನ್ನು ಗೌರವದಿಂದ ಪಾಲಿಸಿ.

ಕಣವನ್ನು ಪ್ರವೇಶಿಸುವಾಗ ಚಪ್ಪಲಿ ಧರಿಸಬೇಡಿ, ಕಣದಲ್ಲಿ ಧೂಮಪಾನ, ಎಲೆಅಡಿಕೆ ಮೊದಲಾದ ಪದಾರ್ಥಗಳನ್ನು ತಿನ್ನಬಾರದು, ಕಣದಲ್ಲಿ ಕೈಕಟ್ಟಿ ನಿಲ್ಲಬಾರದು ಅಲ್ಲದೇ ಮಹಿಳೆಯರು ಕೆಲವೊಂದು ಸಮಯಗಳಲ್ಲಿ ಕಣದೊಳಗೆ ಪ್ರವೇಶಿಸಬಾರದು, ಇತ್ಯಾದಿ ನಿಯಮಗಳು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿವೆ. ಇಂದಿನ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೂ ಈ ಪದ್ಧತಿಗಳು ಆಹಾರದ ಶುಚಿತ್ವಕ್ಕೆ ಅಂದಿನವರು ಅನುಸರಿಸಿದ ಕ್ರಮಗಳು ಎಂದು ತಿಳಿಯುತ್ತದೆ.

"ಕಣ ಪದ್ಧತಿ ಮುಂದಿನ ಪೀಳಿಗೆಗೆ ತಿಳಿಯಲಿ"

ಧನ್ಯವಾದಗಳು
ಶ್ರೀರಾಮ ಜಮದಗ್ನಿ
ಅರಸೀಕೆರೆ.








Share:

ಸೋಮವಾರ, ಜನವರಿ 15, 2018

ರೈತರ ಬಾಳಲ್ಲಿ ಸಿಹಿ ತರಲಿ ಈ ಸಂಕ್ರಾಂತಿ

ರೈತರ ಬಾಳಲ್ಲಿ ಸಿಹಿ ತರಲಿ ಈ ಸಂಕ್ರಾಂತಿ

ಕಳೆದ ಎರಡು ಮೂರು ವರ್ಷಗ ಭೀಕರ ಬರಗಾಲದಿಂದ ಮಳೆ-ಬೆಳೆ ಇಲ್ಲದೇ, ಜಾನುವಾರುಗಳಿಗೆ ಮೇವು ಹಾಗೂ ಮನುಷ್ಯರಿಗೂ ಕುಡಿಯುವ ನೀರಿಲ್ಲದೇ ತತ್ತರಿಸಿದ್ದ ಅರಸೀಕೆರೆ ತಾಲ್ಲೂಕಿನ ರೈತಾಪಿ ವರ್ಗದವರಿಗೆ ಈ ವರ್ಷದ ಆರಂಭ ಸ್ವಲ್ಪ ನೆಮ್ಮದಿಯನ್ನು ನೀಡಿದೆ. ಕಳೆದ ವರ್ಷಾಂತ್ಯದಲ್ಲಿ ಬಂದ ಸಾಧಾರಣ ಮಳೆಯಿಂದಾಗಿ ನಮ್ಮ ತಾಲ್ಲೂಕಿನ ಪ್ರಮುಖ ಬೆಳೆಯಾದ ರಾಗಿಯು ಉತ್ತಮ ಇಳುವರಿಯಾಗಿದ್ದು ರೈತರಲ್ಲಿ ಮಂದಹಾಸ ಮೂಡಿಸಿದೆ.

ಕಳೆದ ವರ್ಷ ನಮ್ಮ ತಾಲ್ಲೂಕಿನ ರೈತರು ಅನುಭವಿಸಿದ ಸಂಕಷ್ಟವನ್ನು ಹೇಳಲು ಅಸಾಧ್ಯ. ತಾವು ಸಾಕಿದ ಜಾನುವಾರುಗಳಿಗೆ ಮೇವು ನೀಡಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಮೇವು ಬ್ಯಾಂಕ್ ಗಳಿಗೆ ಹೋಗಿ ಹೊರೆ ಹುಲ್ಲನ್ನು ತಂದಿದ್ದು, ಜಾನುವಾರುಗಳಿಗೆ ನೀರೊದಗಿಸಲು ಸಾಧ್ಯವಾಗದೇ ಇದ್ದಾಗ, ತಾಲ್ಲೂಕಿನಾದ್ಯಂತ ಸರ್ಕಾರದಿಂದ ಪ್ರಾರಂಭಗೊಂಡಿದ್ದ ಗೋಶಾಲೆಗಳಿಗೆ ಕರೆದೊಯ್ದು ಅಲ್ಲಿಯೇ ಜಾನುವಾರುಗಳ ಜೊತೆ ವಾಸ ಮಾಡಿದ್ದು. ಗೋಶಾಲೆಯಲ್ಲಿ ಜಾನುವಾರುಗಳಿಗೆ ಮಾರಕ ಸಾಂಕ್ರಾಮಿಕ ರೋಗವಾದ ಕಾಲುಬಾಯಿ ಜ್ವರ ಕಂಡ ಹಿನ್ನೆಲೆಯಲ್ಲಿ ಗೋಶಾಲೆಗಳನ್ನು ಮುಚ್ಚಿದ ನಂತರ ಮತ್ತೆ ಜಾನುವಾರುಗಳನ್ನು ತಮ್ಮ ತಮ್ಮ ಸ್ಥಳಕ್ಕೆ ಕರೆದೊಯ್ದು ಅವುಗಳ ಆರೈಕೆ ಮಾಡಿದ್ದು. ಹೀಗೆ ಒಂದೇ ಎರಡೇ... ಈ ನಮ್ಮ ರೈತರು ಅನುಭವಿಸಿದ ಯಾತನೆ. ಈ ನಡುವೆ, ಅಂತರ್ಜಲ ಕುಸಿತದಿಂದಾಗಿ ತೋಟಗಳಲ್ಲಿ ಬೆಳದು ನಿಂತಿದ್ದ ಫಲಕೊಡುವ ಲಕ್ಷಾಂತರ ತೆಂಗಿನ ಮರಗಳು ತಾಲ್ಲೂಕಿನಾದ್ಯಂತ ಸುಳಿಬಿದ್ದು ನೆಲಕಚ್ಚಿದವು. ಅತ್ತದರಿ ಇತ್ತ ಪುಲಿ ಎಂಬ ಮಾತಿನಂತೆ, ಒಂದೆಡೆ ಕೃಷಿಯಿಂದಲೂ ಆದಾಯವಿಲ್ಲ ಜಾನುವಾರುಗಳ ಹಾಲು ಮಾರಿ ಜೀವನ ನಡೆಸೋಣವೆಂದರೆ, ಈ ಜಾನುವಾರುಗಳಿಗೇ ನೀರು ಮೇವಿಲ್ಲದಂತಹ ಪರಿಸ್ಥಿತಿ.

ಇಷ್ಟಾದರೂ ಛಲಬಿಡದ ತ್ರಿವಿಕ್ರಮನಂತೆ ಮತ್ತೆ ಕೃಷಿ ಕಾಯಕದಲ್ಲಿ ತೊಡಗಿದ ನಮ್ಮ ರೈತರಿಗೆ ಕಳೆದ ವರ್ಷಾಂತ್ಯದಲ್ಲಿ ಮಳೆಯು ವರವಾಗಿ ಬಂದಿತು. ಬಹುತೇಕ ಎಲ್ಲ ಕೃಷಿಕರು ಬಿತ್ತನೆ ಮಾಡಿದ್ದ ಪೈರುಗಳು ಹುಲುಸಾಗಿ ಬೆಳೆದು ಉತ್ತಮ ಫಸಲು ಬಂದಿತು. ಜಾನುವಾರುಗಳನ್ನು ಸಾಕಿದ್ದವರು ಹಿಂದೆ ಅನುಭವಿಸಿದ್ದ ಘಟನೆಯಿಂದಾಗಿ ಪಾಠ ಕಲಿತಂತಾಗಿ, ಈಗ ಬಂದಿರುವ ರಾಗಿ, ಜೋಳದ ಹುಲ್ಲನ್ನು ಮೇವಿಗಾಗಿ ಶೇಖರಿಸಿಟ್ಟಿರುವುದು ಎಲ್ಲೆಡೆ ಕಾಣಬಹುದು.

ಸಂಕ್ರಾತಿ ಹಬ್ಬವು ರೈತರಿಗೆ ಸಂತೋಷ ನೀಡುವ ಹಬ್ಬ. ಈ ಸಮಯದಲ್ಲಿ ಜಮೀನಿನಲ್ಲಿ ಬೇಳೆ ಕಾಳುಗಳ ಪೈರು ಬಂದಿದ್ದು, ಅವುಗಳನ್ನು ಕಟಾವು ಮಾಡಿ, ಕಣವನ್ನು ನಿರ್ಮಿಸಿ, ಕುಯ್ದ ಫಸಲನ್ನು ಹಸನುಮಾಡಿ ಧಾನ್ಯವನ್ನಾಗಿಸುವ ಪ್ರಕ್ರಿಯೆ ಈ ಸಂಕ್ರಾತಿಯ ಸಮಯದಲ್ಲಿ ನಡೆಯುತ್ತದೆ.

ಸೂರ್ಯನು ತನ್ನ ಪಥವನ್ನು ಇವತ್ತಿನಿಂದ ಬದಲಾಯಿಸುವಂತೆ, ನಮ್ಮ ತಾಲ್ಲೂಕಿನ ರೈತರ ಸಂಕಷ್ಟಗಳೂ ಸಹ ಇಂದಿನಿಂದ ಕೊನೆಗೊಂಡು, ಮುಂಬರುವ ದಿನಗಳಲ್ಲಿ ನಮ್ಮ ತಾಲ್ಲೂಕಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ರೈತರ ಮೊಗದಲ್ಲಿ ಸಂತಸ ತರಲಿ ಎಂದು ಪ್ರಾರ್ಥಿಸೋಣ.

ಅರಸೀಕೆರೆ ತಾಲ್ಲೂಕಿನ ಜಾಜೂರು ಗ್ರಾಮದ ಕಣವೊಂದರಲ್ಲಿ ನೆನ್ನೆ ರಾಗಿಯನ್ನು ತೂರುತ್ತಿದ್ದ ರೈತರನ್ನು ಭೇಟಿ ಮಾಡಿದೆ. ಉತ್ತಮ ಬೆಳೆಯಾಗಿರುವುದಕ್ಕೆ ಅವರೆಲ್ಲರೂ ಸಂತಸದಿಂದಿದ್ದರು. ದೇವರ ಕೃಪೆಯಿಂದ ತಾವು ಬೆಳೆದ ರಾಗಿ ಮೊದಲಾದ ಬೆಳೆಗೆ ಉತ್ತಮ ದರ ಸಿಕ್ಕರೆ ಮತ್ತಷ್ಟು ಅನುಕೂಲವಾಗುತ್ತದೆ ಎಂದರು.

"ಸಂಕ್ರಾಂತಿಯ ಸಿಹಿ ನಾಡಿನ ಎಲ್ಲ ರೈತಬಾಂಧವರಿಗೆ ದೊರೆಯಲಿ" ಎಂದು ಹಾರೈಸುತ್ತೇನೆ.

ವಂದನೆಗಳೊಂದಿಗೆ
ಶ್ರೀರಾಮ ಜಮದಗ್ನಿ
ಅರಸೀಕೆರೆ



Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....