Arsikere
ಮೊನ್ನೆ ಮೊನ್ನೆ ಅರಸೀಕೆರೆ ಕೆರೆಯ ಏರಿ ಮೇಲೆ ಬಸ್ಸಿನಲ್ಲಿ ಹೋಗುವಾಗ ಕಂಡ ದೃಶ್ಯವದು. ಈಗ್ಗೆ ಎರಡು ವರ್ಷಗಳ ಹಿಂದೆ ತುಂಬಿ ತುಳುಕುತ್ತಿದ್ದ ಕೆರೆ ಈಗ ಬರಡು ಮೈದಾನದಂತಾಗಿದೆ. ಕೆರೆಯಲ್ಲಿದ್ದ ಅಷ್ಟೂ ನೀರು ಬಸಿದು, ಆವಿಯಾಗಿ ಖಾಲಿಯಾಗಿದೆ. ಕೆರೆಯ ತಳ ಕಾಣುತ್ತಿದೆ. ತಳದಲ್ಲಿರುವ ಆಳೆತ್ತರದ ಹೂಳೂ ಕಾಣುತ್ತಿದೆ.
ಊರಿಂದೂರಿಗೆ ಏರಿ ಮೇಲೆ ಪ್ರಯಾಣಿಸುವ ನಮ್ಮ ಕಣ್ಣಿಗೇ ಕೆರೆಯಲ್ಲಿನ ಹೂಳು ಕಾಣುತ್ತದೆ. ಅಲ್ಲೇ ಇರುವ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳ ಕಣ್ಣಿಗೆ ಹೂಳು ಬೀಳುತ್ತಿಲ್ಲವೇ ?
ಮಳೆಗಾಲ ಆರಂಭವಾಗಿತ್ತಿದೆ. ಅಷ್ಟರೊಳಗೆ ಹೂಳೆತ್ತಿದರೆ, ಹೆಚ್ಚು ಮಳೆ ನೀರು ಸಂಗ್ರಹಣೆಯಾಗುತ್ತದೆ. ಹೇಮಾವತಿ, ಹಾರನಹಳ್ಳಿ ಕೆರೆಗಳಿಂದ ನೀರು ತರುವುದು ತಪ್ಪುತ್ತದೆ. ಕೆರೆಯಲ್ಲಿನ ರೈತರ ಜಮೀನಿಗೆ ಎರೆಗೋಡಾಗುತ್ತದೆ. ಇದ್ಯಾವುದೂ ಆಗದಿದ್ದರೆ, ಹೂಳಿರುವ ಕೆರೆ ಒಂದೇ ಮಳೆಗೆ ತುಂಬುತ್ತದಷ್ಟೇ. ಆ ನೀರು ಹೆಚ್ಚು ದಿನ ಇರುವುದಿಲ್ಲ. ಎಂದಿನಂತೆ ಅರಸೀಕೆರೆ ಮಹಾಜನತೆಯ ತೆರಿಗೆ ಹಣ ಖರ್ಚು ಮಾಡಿ ಹೇಮೆಯಿಂದ ನೀರು ತರುವ ಭಾರೀ ಭಗೀರಥ ಪ್ರಯತ್ನವಂತೂ ನಡೆಯುತ್ತದೆ.
ಇದೆಲ್ಲ ಆಗಬಾರದೆಂದಿದ್ದರೆ ಕೂಡಲೇ ಹೂಳೆತ್ತಬೇಕು. ಈಗಾಗಲೇ ಬರಪೀಡಿತ ತಾಲೂಕಿನ ಪಟ್ಟಿಗೆ ಸೇರಿರುವ ಅರಸೀಕೆರೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಜಾಬ್ ಕಾರ್ಡ್ ಪಡೆದವರು ಕೆಲಸವಿಲ್ಲದೆ ಕುಳಿತಿದ್ದಾರೆ. ಅವರನ್ನೆಲ್ಲಾ ಬಳಸಿಕೊಳ್ಳಲು ಅನುಮತಿ ಸಿಕ್ಕರೆ ಕೆರೆಯ ಹೂಳು ರೈತರ ಜಮೀನಿಗೆ ಚಿನ್ನದಂಥ ಗೊಬ್ಬರವಾದೀತು. ಹೂಳು ತುಂಬಿ ಮೈದಾನದಂತಾಗಿರುವ ಕೆರೆಯ ಹೂಳು ಕರಗಿದರೆ ಕೆರೆ ಕೆರೆಯಂತಾಗುವುದರಲ್ಲಿ ಸಂದೇಹವಿಲ್ಲ.
ಆಳುವವರು ಈ ಕೆಲಸ ಮಾಡದಿದ್ರೂ ಪರ್ವಾಗಿಲ್ಲ ಎನ್ನುವವರು, ತಾವಾಗಿಯೇ ಕೆರೆಗಿಳಿದು ಹೂಳೆತ್ತಬಹುದು.
ಸಾಮಗ ಶೇಷಾದ್ರಿ
ಬೆಂಗಳೂರು
https://www.facebook.com/samaga.sheshadri
ಹೂಳು ತುಂಬಿ ಮೈದಾನದಂತಾಗಿರುವ ಅರಸೀಕೆರೆ ಕೆರೆ |
1 ಕಾಮೆಂಟ್(ಗಳು) :
ಎಲ್ಲವನ್ನೂ ಸರ್ಕಾರವೇ ಮಾಡಬೇಕೆಂಬ ನಿರೀಕ್ಷೆಯನ್ನ ತೊರೆದು ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಕಾರ ಪಡೆದು ಜನಾಂದೋಲನ ರೂಪಿಸಬೇಕು.ಇದರಲ್ಲಿ ನಮ್ಮ ರೈತರ ಹಿತವೂ ಅಡಗಿದೆ ಎಂದು ಮನದಟ್ಟು ಮಾಡಿಕೊಡುವ ಪ್ರಯತ್ನದಿಂದ ಮಾತ್ರ ಸಾಧ್ಯ.ಎಲ್ಲಾ ಗ್ರಾಮ ಗಳಲ್ಲಿಯೂ ನಡೆಯಬೇಕಾದ ಪ್ರಕ್ರಿಯೆ ಇದಾಗಿದ್ದು,ನೀರಿಗಾಗಿ ಕಾವೇರಿ,ಹೇಮಾವತಿ,ಯನ್ನು ಬರಿದುಮಾಡಿ ಮುಂಬರುವ ತಲೆಮಾರುಗಳಿಗೆ ಕಾಡುಗಳ,ನದಿಗಳ ಚಿತ್ರ ತೋರಿಸುವ ದುರದೃಷ್ಟಕರ ಪರಿಸ್ಥಿತಿಯನ್ನು ತಪ್ಪಿಸುವುದು ನಮ್ಮೆಲ್ಲಾರಿಗೂ ಸೇರಿದ ಹೊಣೆಗಾರಿಕೆಯಾಗಿದೆ.
ಕಾಮೆಂಟ್ ಪೋಸ್ಟ್ ಮಾಡಿ