ಸೋಮವಾರ, ಜೂನ್ 5, 2017

ಅರಸೀಕೆರೆಯ ವೃಕ್ಷಮಿತ್ರ : ಶ್ರೀ. ಕೆ.ಮಂಜುನಾಥ್

Arsikere

ಇಂದು ವಿಶ್ವ ಪರಿಸರ ದಿನಾಚರಣೆ, ಇದರ ನಿಮಿತ್ತ ಜಗತ್ತಿನಾದ್ಯಂತ ಅನೇಕ ಕಾರ್ಯಕ್ರಮಗಳು ಜರುಗುತ್ತವೆ. ಕೆಲವು ವ್ಯಕ್ತಿಗಳು ಇಂದು ಒಂದೋ ಎರಡೋ ಗಿಡ ನೆಟ್ಟು ಫೋಟೋ ತೆಗೆಸಿಕೊಂಡು ಫೇಸ್ ಬುಕ್, ವ್ಯಾಟ್ಸಪ್ ಗಳಲ್ಲಿ ಶೇರ್ ಮಾಡಿಕೊಂಡು ಕೇವಲ ಪ್ರಚಾರ ಪಡೆಯಲು ಹಾತೊರೆಯುತ್ತಾರೆ. ನಾಳೆಯಿಂದ ಅವರು ನೆಟ್ಟ ಗಿಡಕ್ಕೆ ಒಂದು ಬೊಗಸೆ ನೀರನ್ನೂ ಹಾಕದೇ ಜಾಣ ಮರೆವು ತೋರುತ್ತಾರೆ.  ಆದರೆ ಇನ್ನು ಕೆಲವು ವ್ಯಕ್ತಿಗಳು ಎಲೆಮರೆ ಕಾಯಿಯಂತೆ ಯಾವುದೇ ಪ್ರಚಾರದ ಹಂಗಿಲ್ಲದೆ ಪರಿಸರ ಸಂರಕ್ಷಣೆ ಹಾಗೂ ಗಿಡಮರ ಪೋಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಅರಸೀಕೆರೆ ಪಟ್ಟಣದಲ್ಲೂ ಎಲೆಮರೆ ಕಾಯಂತೆ, ಪರಿಸರ ಸಂರಕ್ಷಣೆಯನ್ನು ಮಾಡುತ್ತಿರುವ ವ್ಯಕ್ತಿಯೊಬ್ಬರಿದ್ದಾರೆ.  ಅವರೇ ಶ್ರೀ. ಕೆ.ಮಂಜುನಾಥ್, ಪಟ್ಟಣದ ಮಾರುತಿ ನಗರದ ನಿವಾಸಿಯಾಗಿರುವ ಮಂಜುನಾಥ್ ರವರು ಕಳೆದ ಐದಾರು ತಿಂಗಳಿಂದ ಕಂತೇನಹಳ್ಳಿ ಕೆರೆ ಪಾರ್ಕಿನ ನಿರ್ವಹಣೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

ಶಾಸಕ ಕೆ.ಎಂ.ಶಿವಲಿಂಗೇಗೌಡರ ಪ್ರಯತ್ನದ ಫಲವಾಗಿ ಕೆಲ ವರ್ಷಗಳ ಹಿಂದೆ ಅರಸೀಕೆರೆ ಕಂತೇನಹಳ್ಳಿ ಕೆರೆಯ ಬದಿಯಲ್ಲಿ ಉದ್ಯಾನವನವನ್ನು ನಿರ್ಮಾಣ ಮಾಡಲಾಯಿತು.  ಆದರೆ ಸೂಕ್ತ ನಿರ್ವಹಣೆ ಇಲ್ಲದೇ ಪಾರ್ಕಿನಲ್ಲಿ ಪುಂಡ ಪೋಕರಿಗಳು ಇಸ್ಪೀಟ್, ಮದ್ಯಪಾನ ಇತ್ಯಾದಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದರು.  ವಾಯುವಿಹಾರಕ್ಕಾಗಿ ಬರುವ ಸಾರ್ವಜನಿಕರುಗಳಿಗೆ ಇದರಿಂದ ಕಿರಿಕಿರಿಯಾಗುತ್ತಿದ್ದರೂ, ಸಹಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿತ್ತು.  ಪಾರ್ಕಿನ ಗಿಡ ಮರಗಳಿಗೆ ಸೂಕ್ತ ನಿರ್ವಹಣೆ ಇಲ್ಲದೇ ಕೆಲವು ಗಿಡಗಳು ಒಣಗಿಹೋಗಿದ್ದವು, ಪಾರ್ಥೇನಿಯಂ, ಲಾಂಟಾನ, ಬಳ್ಳಾರಿ ಜಾಲಿ ಗಿಡಗಳು ಎಲ್ಲಂದರಲ್ಲಿ ಬೆಳೆದು ಪಾರ್ಕಿನ ಗುಣಮಟ್ಟವನ್ನೇ ಹಾಳುಮಾಡಿತ್ತು.   ಇಂತಹ ಸಂದರ್ಭದಲ್ಲಿ ಅರಸೀಕೆರೆ ನಗರಸಭೆ ಆಡಳಿತಕ್ಕೆ ಒಳಪಟ್ಟಿರುವ, ಕಂತೇನಹಳ್ಳಿ ಪಾರ್ಕಿನ ಉಸ್ತುವಾರಿಯ ಹೊಣೆ ಹೊತ್ತ ಮಂಜುನಾಥ್ ರವರು, ತಮ್ಮ ಸಹಾಯಕರುಗಳಾದ ಶಿವಶಂಕರಪ್ಪ, ಪಾಪಣ್ಣ, ಮಲ್ಲಿಕಾರ್ಜುನ ಮತ್ತು ಲೋಕೇಶ್ ರವರುಗಳ ಜೊತೆ ಪ್ರತಿನಿತ್ಯ ಪಾರ್ಕಿನ ನಿರ್ವಹಣೆಯನ್ನು ಪ್ರಾರಂಭಿಸಿದರು.  ಮೊದಲಿಗೆ ಪಾರ್ಕಿನಲ್ಲಿರುವ ಸುಮಾರು 2 ಕಿ.ಮೀ ಉದ್ದದ ವಾಕಿಂಗ್ ಪಾಥ್ ನ ಎರಡೂ ಬದಿಗಳಲ್ಲಿ ಬೆಳೆದಿದ್ದ ಕಳೆಗಳನ್ನು ಕಿತ್ತುಹಾಕಿದರು. ಪಾರ್ಕಿನಲ್ಲಿ ಲಭ್ಯವಿದ್ದ ಸಲಕರಣೆಗಳ ಸಹಾಯದಿಂದ, ನಿರ್ವಹಣೆ ಇಲ್ಲದೇ ಸೊರಗಿದ್ದ ಗಿಡಗಳ ಪೋಷಣೆ ಪ್ರಾರಂಭಿಸಿದರು.  ದಿನದಿನ ಕಳೆದಂತೆ, ಪಾರ್ಕಿಗೆ ಕಳೆ ಬರುವಂತಾಯಿತು.

ಕಳೆದ ಒಂದು ವಾರದಲ್ಲಿ, ಕೆರೆ ಪಾರ್ಕಿನ ಆವರಣದಲ್ಲಿ ವಿವಿಧ ಜಾತಿಯ ಸುಮಾರು 700 ಗಿಡಗಳನ್ನು ನೆಡಲಾಗಿದೆ, ಹಾಗೂ ಮುಂಬರುವ ದಿನಗಳಲ್ಲಿ ಪಾರ್ಕಿನಲ್ಲಿ ಇನ್ನೂ 500 ಗಿಡಗಳನ್ನು ನೆಡುವ ಗುರಿಯನ್ನು ಮಂಜುನಾಥ್ ರವರು ಹೊಂದಿದ್ದಾರೆ.  ಇವರಿಂದಾಗಿ, ಪಾರ್ಕಿನಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳು ನಿಂತುಹೋಗಿವೆ.  ಇದೀಗ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಅರಸೀಕೆರೆ ನಗರ ಠಾಣೆ ಪೊಲೀಸರು ಪಾರ್ಕಿನಲ್ಲಿ ಬೀಟ್ ನಡೆಸುತ್ತಿದ್ದು, ಪಾರ್ಕಿನಲ್ಲಿ ಯಾವುದೇ ಪುಂಡ ಪೋಕರಿಗಳು ಸುಳಿಯದಂತಾಗಿರುವುದರಿಂದ, ವಾಯು ವಿಹಾರಿಗಳು ಅತ್ಯಂತ ಸಂತಸಗೊಂಡಿದ್ದಾರೆ.

ಪಾರ್ಕಿನಲ್ಲಿ, ಸಂಜೆಯ ವೇಳೆಯಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ ಇದ್ದರೂ, ಈಗ ಅವುಗಳಲ್ಲಿ ಕೆಲವು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.  ಈ ಕುರಿತು ನಗರಸಭೆಯ ಅಧಿಕಾರಿಗಳು ಗಮನ ಹರಿಸಿ, ಪಾರ್ಕಿನ ಎಲ್ಲ ದೀಪಗಳನ್ನು ದುರಸ್ತಿ ಮಾಡಿಸಿದರೆ ಪಾರ್ಕಿಗೆ ಮತ್ತಷ್ಟು ಕಳೆ ಕಟ್ಟುತ್ತದೆ. ಹಾಗೂ ಈಗ ನೆಟ್ಟಿರುವ ಗಿಡಗಳಿಗೆ ಹನಿ ನೀರಾವರಿ ಹಾಗೂ ಸ್ಪ್ರಿಂಕ್ಲರ್ ವ್ಯವಸ್ಥೆ ಕಲ್ಪಿಸಿದರೆ ಗಿಡಗಳಿಗೂ ಅನುಕೂಲವಾಗಲಿದೆ.

ವಿಶ್ವ ಪರಿಸರ ದಿನಾಚರಣೆಯ ಈ ದಿನದಂದು, ಅರಸೀಕೆರೆ ಕಂತೇನಹಳ್ಳಿ ಕೆರೆ ಪಾರ್ಕಿನ ಎಲ್ಲ ವಾಯುವಿಹಾರಿಗಳ ಪರವಾಗಿ ಶ್ರೀ.ಕೆ.ಮಂಜುನಾಥ್ ಮತ್ತು ತಂಡದವರಿಗೆ ಅಭಿನಂದನೆಗಳು.


ಅರಸೀಕೆರೆಯ ವೃಕ್ಷಮಿತ್ರ : ಶ್ರೀ. ಕೆ.ಮಂಜುನಾಥ್

ಅರಸೀಕೆರೆ ನಗರ ಠಾಣೆ ಪೊಲೀಸರು ಪಾರ್ಕಿನಲ್ಲಿ ಬೀಟ್ ನಡೆಸುತ್ತಿರುವುದು

ಹೊಸ ಗಿಡಗಳು

Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....