ಶ್ರವಣಬೆಳಗೊಳದಲ್ಲಿಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಎ.ಮಂಜು ರವರು 2018ನೇ ಇಸವಿಯಲ್ಲಿ ನಡೆಯಲಿರುವ ಭಗವಾನ್ ಬಾಹುಬಲಿ ಮಹಾಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿದರು. ಶಾಸಕರಾದ ಬಾಲಕೃಷ್ಣ, ಗೋಪಾಲಕೃಷ್ಣ, ಜಿಲ್ಲಾಧಿಕಾರಿ ವಿ.ಚೈತ್ರ, ಎಸ್.ಪಿ. ರಾಹುಲ್ ಕುಮಾರ್ ಶಹಪೂರ್ವಾಡ್ ಹಾಗೂ ಇತರರು ಉಪಸ್ಥಿತರಿದ್ದರು.
2018 ರ ಮಸ್ತಕಾಭಿಷೇಕದ
ಲಾಂಛನದ ಬಗ್ಗೆ :-
ಕ್ರಿಸ್ತಶಕ 981
ರಲ್ಲಿ ತಲಕಾಡಿನ ಗಂಗರ ಮಹಾ ಪ್ರಧಾನಿ, ದಂಡನಾಯಕ ಚಾವುಂಡರಾಯನು ತನ್ನ ತಾಯಿ ಕಾಳಲಾದೇವಿಯ ಇಚ್ಛೆಯನ್ನು
ಪೂರೈಸಲು 58 ಅಡಿ ಎತ್ತರದ ಭಗವಾನ್ ಶ್ರೀ ಬಾಹುಬಲಿಯ ಬೃಹತ್ ಏಕಶಿಲಾ ಮೂರ್ತಿಯನ್ನು ನಿರ್ಮಾಣ ಮಾಡಿಸಿದನು. ಮೂರ್ತಿ ಪ್ರತಿಷ್ಠಾಪನಾ ಮಹಾಮಸ್ತಕಾಭಿಷೇಕವು ಚಾವುಂಡರಾಯನಿಂದ
ಏರ್ಪಟ್ಟಿತು. ಆ ಮೂರ್ತಿಗೆ ಎಷ್ಟು ಹಾಲಿನ ಅಭಿಷೇಕ
ಮಾಡಿದರೂ 1008 ಕಲಶಗಳ ನೀರು, ಹಾಲು, ಗಂಧ ಇತ್ಯಾದಿಗಳು ಮೂರ್ತಿಯ ಎದೆಯ ಭಾಗದಿಂದ ಕೆಳಕ್ಕೆ ಹರಿಯಲಿಲ್ಲವೆಂದು,
ಅಭಿಷೇಕ ಅಪೂರ್ಣವಾಯಿತೆಂದು ಹೇಳಲಾಗುತ್ತದೆ. ಇದಕ್ಕೆ
ಕಾರಣವನ್ನು ಇಂತಹ ಸೌದರ್ಯದ, ಔನತ್ಯದ, ಅತಿಶಯದ ಮೂರ್ತಿಯನ್ನು “ನಾನು” ಮಾಡಿಸಿದೆ ಎಂಬ ಚಾವುಂಡರಾಯನ
ಅಹಂಕಾರ ಕಾರಣವೆಂದು ಹೇಳಲಾಗುತ್ತದೆ.
ಅಭಿಷೇಕ ಅಪೂರ್ಣವಾಯಿತೆಂದು
ಚಾವುಂಡರಾಯನು ಪರಿತಪಿಸುತ್ತಿದ್ದಾಗ, ಕ್ಷೇತ್ರದ ಅಧಿದೇವತೆ ಶ್ರೀ ಕೂಷ್ಮಾಂಡಿನಿ ದೇವಿಯು “ಅಜ್ಜಿ”ಯ
ರೂಪದಲ್ಲಿ ಆಗಮಿಸಿ ತಾನು “ಗುಳ್ಳದಕಾಯಿ”ಯಷ್ಟು ಗಾತ್ರದ ಚಿಕ್ಕದಾದ ಬೆಳ್ಳಿಯ ಕಲಶದಲ್ಲಿ ತಂದಿದ್ದ
ಹಾಲನ್ನು ಅಭಿಷೇಕ ಮಾಡಲು ಕೇಳಿದಳೆಂದೂ, ಚಾವುಂಡರಾಯನು ಅಭಿಷೇಕಕ್ಕೆ ಅನುಮತಿ ನೀಡಿದ ಕಾರಣ, ಅಜ್ಜಿಯು
ಅಭಿಷೇಕ ಮಾಡಿದಾಗ ಹಾಲು ಅಕ್ಷಯವಾಗಿ ಧಾರೆಯಾಗಿ ಹರಿಯಿತೆಂದು, ಅಭಿಷೇಕ ಪೂರ್ಣವಾಗುವುದರ ಜೊತೆಗೆ ಇಡೀ
ಬೆಟ್ಟದಿಂದ ಹಾಲು ಧಾರಾಕಾರವಾಗಿ ಹರಿದು ಎರಡು ಬೆಟ್ಟಗಳ ಮಧ್ಯೆ ಇರುವ ಕೊಳಕ್ಕೆ ಹರಿದು “ಬಿಳಿ ಕೊಳ”ವಾಯಿತೆಂದು
ಹೇಳಲಾಗುತ್ತದೆ. ಮುಂದೆ ಈ ಕೊಳವೇ ಊರಿಗೆ “ಬೆಳ್ಗೊಳ”
ಎಂದು ಹೆಸರು ಬರಲು ಕಾರಣವಾಯಿತೆಂದು ಸ್ಥಳ ಪುರಾಣ ತಿಳಿಸುತ್ತದೆ.
ಭಕ್ತಿಯ ಪ್ರತೀಕವಾದ
ಗುಳ್ಳಕಾಯಜ್ಜಿಯ ಅಭಿಷೇಕದ ದೃಶ್ಯವನ್ನು ಈಬಾರಿ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ
2018ರ ಲಾಂಛನವಾಗಿ ಶ್ರವಣಬೆಳಗೊಳ ಶ್ರೀಗಳ ಅಪೇಕ್ಷೆಯಂತೆ ನಿರ್ಣಯ ಮಾಡಲಾಗಿದೆ. 90 ರ ದಶಕದಲ್ಲಿ ನಡೆದ
ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ತಮಿಳುನಾಡಿನ “ಮದರಾಸ್ ಮೇಲ್” ಸಂಜೆ ದಿನಪತ್ರಿಕೆಯು ಕಾರ್ಯಕ್ರಮದ
ವರದಿಯನ್ನು ಪಾರಿವಾಳಗಳ ಮೂಲಕ ಶ್ರವಣಬೆಳಗೊಳದಿಂದ ಮದ್ರಾಸಿಗೆ ತರಿಸಿಕೊಂಡು, ಮರುದಿನವೇ ಪತ್ರಿಕೆಯಲ್ಲಿ
ಪ್ರಕಟಿಸಿದ್ದು, ಈ ಘಟನೆಯನ್ನು ಲಾಂಛನದಲ್ಲಿರುವ ಪಾರಿವಾಳ ಸೂಚಿಸುತ್ತದೆ. ಚಕ್ರವರ್ತಿಯನ್ನು ಗೆದ್ದ ಸಂಕೇತವಾಗಿ ಚಕ್ರವು ಉಲ್ಲೇಖವಾಗಿದೆ.
ಬಾಹುಬಲಿ ಮೂರ್ತಿಯು
ವಿಶ್ವದಲ್ಲಿಯೇ ಅತ್ಯಂತ ಎತ್ತರವಾದ ಏಕಶಿಲಾ ಮೂರ್ತಿಯಾಗಿದ್ದು, ಈ ಲಾಂಛನದಲ್ಲಿ ಕಲಶಗಳ ಮೇಲೆ ಜಗತ್ತಿನ
ಆರು ಖಂಡಗಳ ನಕ್ಷೆ ಮತ್ತು ಭಾರತ, ಕರ್ನಾಟಕ ರಾಜ್ಯ ಮತ್ತು ಹಾಸನ ಜಿಲ್ಲೆಗಳ ನಕ್ಷೆಯನ್ನು ಅಳವಡಿಸಲಾಗಿದೆ.
(ಚಿತ್ರ ಹಾಗೂ ಮಾಹಿತಿ
: ವಾರ್ತಾಭವನ, ಹಾಸನ)
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ