ಗುರುವಾರ, ಮಾರ್ಚ್ 23, 2017

ಗೋಡೆಗಳ ನಡುವೆ......

ಗೋಡೆ ಎಂಬುದು ಬಯಲೊಳಗೆ ಬದುಕು ಕಟ್ಟಿಕೊಳ್ಳುವುದರ ಸಂಕೇತವಾಗಿದೆ. ಸುತ್ತಲೂ ಎದ್ದ ಗೋಡೆಯೊಳಗೇ ಮನುಷ್ಯ ತನ್ನ ಖಾಸಗೀ ಬದುಕನ್ನು ಅರಿಯುತ್ತಾನೆ. ಸ್ವಂತಿಕೆಯ ಕುಡಿಯೊಡೆದು ಕವಲಾಗಿ ಬೆಳೆಯುತ್ತಾನೆ. ಬದುಕಿಗಾಗಿ ಹೊರಗಣ ತಿರುಗಾಟ ಬಳಲಿಸಿದಾಗ ಗೋಡೆಯ ನೆರವು ಅವನಿಗೆ ಅನಿವಾರ್ಯವಾಗುತ್ತದೆ. ನಾಲ್ಕು ಗೋಡೆಗಳ ನಡುವಣ ಪುಟ್ಟ ಗೂಡು ಮನುಷ್ಯನ ದೈಹಿಕ  ಮತ್ತು ಭಾವನಾತ್ಮಕ ಸಮಾಧಾನಗಳನ್ನು ಅವನಿಗೆ ಕರುಣಿಸುತ್ತದೆ. ಹೊರಗಿನ ದಾಳಿಗಳಿಂದ ತಪ್ಪಿಸಿಕೊಳ್ಳಲು ನಮ್ಮ ಪೂರ್ವಿಕರು ಗುಹೆಗಳನ್ನೇ ಮನೆಗಳನ್ನಾಗಿ ಆರಿಸಿಕೊಂಡ ಕಾರಣ ನಮಗರಿವಾದರೆ, ಗೋಡೆಯ ಅಗತ್ಯತೆ ನಮಗೆ ಮನದಟ್ಟಾಗುತ್ತದೆ.
ಆದಿ ಮಾನವನಿಂದ ಹಿಡಿದು ಆಧುನಿಕ ಮಾನವನವರೆಗೂ ಎಲ್ಲ ಮನುಷ್ಯರೂ ಗೋಡೆಗಳ ನಿರ್ಮಾಣಕ್ಕೆ ಕೈಹಾಕಿದವರೇ ಆಗಿದ್ದಾರೆ. ರಾಜ ಮಹಾರಾಜರಂತೂ ಕೋಟೆಗಳೆಂಬ ಬೃಹತ್ ಗೋಡೆಗಳನ್ನು ಕಟ್ಟಿಸಿದರೆ,ದೇಶದೇಶಗಳ ನಡುವೆ ಎದ್ದ ಗೋಡೆಗಳ ಇತಿಹಾಸವೂ ಇದೆ. ಚೀನಾದ ಮಹಾನ್ ಗೋಡೆಯಂತೂ ಗೋಡೆಯ ಕುರಿತ ಮಾನವನ ಅಪಾರ ನಂಬುಗೆಯ ಸಾಕ್ಷಿಯಾಗಿದೆ. ನಮ್ಮ ನಮ್ಮ ಸರಹದ್ದುಗಳನ್ನು ಸ್ಥಾಪಿಸಲು ಗೋಡೆಯೋ, ಬೇಲಿಯೋ ಅನಿವಾರ್ಯ ಸಂಗತಿಯೇ ಆಗಿದೆ. ಸರಿಯಾದ ಬೇಲಿಗಳು ಸರಿಯಾದ ನೆರೆಹೊರೆಯವರನ್ನು ಕೊಡಬಲ್ಲವು ಎಂಬ ರಾಬರ್ಟ್ ಫ್ರಾಸ್ಟ್ ಕವಿಯ ಮಾತು ಸಹಜವೆನ್ನಿಸುತ್ತದೆ.
ಮಣ್ಣು, ಇಟ್ಟಿಗೆ, ಕಲ್ಲು, ಸಿಮೆಂಟು ಮುಂತಾದುವುಗಳಿಂದ ನಿರ್ಮಿತವಾಗುವ ಭೌತಿಕ ಗೋಡೆಗಳ ಹಾಗೆಯೇ ಮನುಷ್ಯನ ಮನಸ್ಸಿನಲ್ಲೂ ಗೋಡೆಗಳೇಳುತ್ತವೆ. ಕೆಲವು ಬಾರಿ ಸರಿಸಬಹುದಾದ ಗೋಡೆಗಳೆದ್ದರೆ ಕೆಲವು ಬಾರಿ ಬಹುಕಾಲ ನಿಲ್ಲುವ ಯಾವ ಭಾವನೆಗಳನ್ನೂ ಅರ್ಥ ಮಾಡಿಕೊಳ್ಳಲಾರದ ಗೋಡೆಗಳೂ ಎದ್ದುಬಿಡುತ್ತವೆ. ಜಾತಿ, ಮತ, ಸಂಪ್ರದಾಯ, ನಂಬಿಕೆ, ಮೌಲ್ಯ, ಸಿದ್ಧಾಂತ ಮುಂತಾದ ಹೆಸರಿನಲ್ಲಿ ಕಟ್ಟಲ್ಪಡುವ ಈ ಗೋಡೆಗಳ ನಿರ್ಮಾಣಕ್ಕೆ ಬಳಸಿದ ಮನಸ್ಸುಗಳೆಂಬ ಇಟ್ಟಿಗೆಗಳು ಹೊರಗಿನ ದಾಳಿ, ಗಾಳಿಗಳಿಂದ ಉಳಿದು ನಿಲ್ಲುತ್ತವೆ. ಮನುಷ್ಯನ ಅಹಂಕಾರದ ಸಾಕ್ಷಿಗಳೇ ಆಗಿ ನಿಲ್ಲುತ್ತವೆ.
ಅಂದರೆ ಈ ಗೋಡೆಗಳು ಮನುಷ್ಯ ಮನುಷ್ಯರ ನಡುವಣ ದೂರವನ್ನು ಹೆಚ್ಚಿಸುತ್ತವೆ. ಅವನ ಬದುಕನ್ನೇ ಅಸಹನೀಯವಾಗಿಸುತ್ತವೆ. ವ್ಯಕ್ತಿಯ ನೆಲೆಯಲ್ಲಿ ಹುಟ್ಟಿಕೊಳ್ಳುವ ಈ ಗೋಡೆಗಳು ಸಮಷ್ಟಿಯ ನೆಮ್ಮದಿಯನ್ನು ಕೆಡಿಸಿ ಆತಂಕದ ಛಾಯೆಯನ್ನು ಆಕಾಶದುದ್ದಕ್ಕೂ ಎರಚಿಬಿಡುತ್ತವೆ. ಅಬೇಧ್ಯ ಗೋಡೆಗಳ ನಿರ್ಮಾಣದಲ್ಲಿ ಹಟಮಾರಿತನವೇ ಮುಖ್ಯ ಕಾರಣವಾಗಿರುತ್ತದೆ.
ಮನೆಗೆ ಗೋಡೆಗಳು ಬೇಕಾದರೂ ಗಾಳಿ ಬೆಳಕಿಗೆ ಕಿಟಕಿ ಬಾಗಿಲುಗಳ ಅನಿವಾರ್ಯತೆ ಇರುತ್ತದೆ. ಆದರೆ ನಮ್ಮ ನಡುವೆ ಏಳುವ ಗೋಡೆಗಳಿಗೆ  ಕಣ್ಣು ಮೂಗುಗಳಿಲ್ಲದಿದ್ದರೂ ಕಿವಿಗಳಂತೂ ಇದ್ದೇ ಇರುತ್ತವೆ. ಹಾಗಾಗಿಯೇ ಬರಿಯ ಮಾತಲ್ಲಿ ಮುಗಿಸಬಹುದಾದ್ದು ಹೊಡೆದಾಟಗಳಿಗೆ ಕಾರಣವಾಗುತ್ತವೆ. ಕಿಟಕಿ ಬಾಗಿಲುಗಳಿಲ್ಲದ ಗೋಡೆ ಮನೆಯಾಗದೇ ಜೈಲುಗಳನ್ನು ನಿರ್ಮಿಸುತ್ತದೆ. ನಾನಿರುವುದಷ್ಟೇ ಪ್ರಪಂಚವೆಂಬ ಕೂಪಮಂಡೂಕತನವೂ ಬೆಳೆಯುತ್ತದೆ. ಮುಕ್ತ ಮನಸ್ಕನಿಗೆ ಗೋಡೆ ಎಂಬುದು ಹಾರಲಾರದ ಏರಲಾರದ ಎವರೆಷ್ಟಾಗಿ ಬದಲಾಗುತ್ತದೆ. ಎಲ್ಲ ಮತ, ಧರ್ಮಗಳ ಗೋಡೆಯೊಡೆದು ಅಗಲ ಬಯಲೊಳಗೆ ನಿಲ್ಲಬೇಕೆಂಬುದು ಬಹುದೊಡ್ಡ ಆದರ್ಶ. ಎಲ್ಲಿಯೂ ನಿಲ್ಲದಿರು ಮನೆಯನೆಂದೂ ಕಟ್ಟದಿರು ಎನ್ನುವುದು ಎಂಬುದಂತೂ ಮೇರು ಮಟ್ಟದ ಆದರ್ಶ. 
ನಮ್ಮ ಸುತ್ತಲೂ ಭಾವನಾತ್ಮಕ ಗೋಡೆಗಳನ್ನು ಕಟ್ಟಿಕೊಳ್ಳುತ್ತ ಹೋಗುವುದರಿಂದ ನಮ್ಮ ಮನಸ್ಸುಗಳು ಸೂಕ್ಷ್ಮವಾಗುತ್ತ ಹೋಗುತ್ತವೆ. ಮನಸ್ಸು ವಿಕಾರಗೊಂಡರೆ ಸಕಾರವಿದ್ದುದೂ ವಿರೂಪವಾಗಿ ಕಾಣತೊಡಗುತ್ತದೆ. ಕುರುಕ್ಷೇತ್ರ ಯುದ್ಧಕ್ಕೆ ಧುರ್ಯೋಧನನ ಹಟಮಾರಿತನವೆಂಬ ಗೋಡೆ ಕಾರಣವಾದರೆ ರಾಮಾಯಣದ ಯುದ್ಧಕ್ಕೆ ರಾವಣನ ಮನಸ್ಸಿನಲ್ಲೆದ್ದ ಪರಸ್ತ್ರೀ ವ್ಯಾಮೋಹವೆಂಬ ಗೋಡೆ ಕಾರಣವಾಯಿತು. ಈ ಇಬ್ಬರೂ ಕಾವ್ಯನಾಯಕರು ತಮ್ಮ ಗೋಡೆಗಳಿಗೆ ವಿವೇಕದ ಕಿಟಕಿ ಹೊಂದಿಸಿದ್ದರೆ ಕಥೆಗಳ ಅಂತ್ಯ ಖಂಡಿತವಾಗಿ ಬದಲಾಗುತ್ತಿತ್ತು ಅಲ್ಲವೇ?
ಗೋಡೆಗಳಿಲ್ಲದಿದ್ದರೆ ಜೀವಕ್ಕೆ ರಕ್ಷಣೆ ಇರುವುದಿಲ್ಲ,. ಬಯಲೆಂಬುದು ಸುಲಭಕ್ಕೆ ಸಿಕ್ಕುವ ಸಾಧನವೂ ಅಲ್ಲ. ಹಾಗಾಗಿ ಗೋಡೆಗಳಿಗೆ ವಿವೇಕವೆಂಬ ಕಿಟಕಿಗಳನ್ನಿಟ್ಟುಕೊಂಡು ಹೊರಗಣ ಗಾಳಿಬೆಳಕುಗಳನ್ನು ಗಮನಿಸಿ ವಾತಾವರಣಕ್ಕೆ ತಕ್ಕಂತೆ ಬದುಕುವುದು ಅನಿವಾರ್ಯವಾಗಿದೆ.
ಆದರೆ ಇತ್ತೀಚೆಗೆ ನಮ್ಮ ಸ್ವಯಂ ಘೋಷಿತ ದೇವಮಾನವರು ತಮ್ಮ ಶಿಷ್ಯವರ್ಗವನ್ನು ದೊಡ್ಡ ಗೋಡೆಗಳ ನಡುವಿನ ಕಂದಕದಲ್ಲಿಟ್ಟ ಕಾರಣ ಜಗತ್ತೇ ಸೆರೆಮನೆಯಾಗಿ ಬದಲಾಗುತ್ತಿದೆ. ಅಕಾರಣ ವಿದ್ವೇಷ, ಧಾರ್ಮಿಕ ನಂಬುಗೆಗಳ ಕಾರಣ ತೊಟ್ಟ ವಿಧಿ ವಿಧಾನಗಳು ನಮ್ಮೊಳಗಿನ ಮನುಷ್ಯನನ್ನು ಇನ್ನಷ್ಟು ಮತ್ತಷ್ಟು ಕಂದಕಕ್ಕೆ ತಳ್ಳುತ್ತಿವೆ. ಕೂಪಮಂಡೂಕತ್ವಕ್ಕೆ ಇಂಬು ಕೊಡುತ್ತಿವೆ. ಗೋಡೆಯನ್ನು ನಿವಾರಿಸಿದ ಬಯಲ ಆಲಯ ನಮ್ಮ ಶರಣರ ಆದರ್ಶವಾಗಿದ್ದರೆ ಪ್ರಸ್ತುತ ಗೋಡೆಗಳೊಳಗೆ ನಡೆಯಬೇಕಾದ ಖಾಸಗೀ ಸಂಗತಿಗಳೂ ಮಾಧ್ಯಮದ ಅಬ್ಬರದ ಪ್ರಚಾರದಲ್ಲಿ ಬಯಲಾಗಿ ತತ್ವ ಆದರ್ಶ ನಿಷ್ಠೆಗಳೆಂಬ ಪದಗಳು ನಿಘಂಟಿನಿಂದ ಶಾಶ್ವತ ವಿಮುಕ್ತಿ ಪಡೆದಿರುವಂತೆ ಕಾಣುತ್ತಿದೆ.
ಆಧ್ಯಾತ್ಮದ ಅರ್ಥದಲ್ಲಿ ಗೋಡೆಗೂ ಬಯಲಿಗೂ ನಡುವೆ ಮೀರಬಹುದಾದ ತೆಳ್ಳನೆಯ ತೆರೆಯಿದ್ದರೆ ವಾಸ್ತವದ ಗೋಡೆಗೂ ಬಯಲಿಗೂ ನಡುವೆ ದೊಡ್ಡ  ಅಜಗಜಾಂತರ ವ್ಯತ್ಯಾಸವೇ ಇದೆ. ಹೇಳುವ ಸಂಗತಿಗೂ ಬಾಳುವ ರೀತಿಗೂ ಇದನ್ನೇ ವಿಸ್ತರಿಸಬಹುದು. ನಮ್ಮ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಈ ಗೋಡೆಗಳ ನಿರ್ಮಾತೃಗಳಾಗಿದ್ದಾರೆ. ತಾವು ಕಟ್ಟುವ ಕೋಟೆಗಳೊಳಗೆ ಮಾತ್ರ ಸುಖವಿದೆಯೆಂಬ ಸುಳ್ಳನ್ನು ಬಿತ್ತಿ ಅನ್ಯರ ಚಿಂತನೆಯನ್ನು ಒಪ್ಪದ ಮಾನಸಿಕ ಸ್ಥಿತಿಗೆ ನಮ್ಮನ್ನು ತಳ್ಳಿಬಿಡುತ್ತಾರೆ.
ರಾಜಕಾರಣ ಮತ್ತು ಧಾರ್ಮಿಕ ನಡವಳಿಕೆಗಳಿಲ್ಲದ ಬದುಕು ಕಲ್ಪಿಸಿಕೊಳ್ಳುವುದಕ್ಕೂ ಎದೆಗಾರಿಕೆ ಬೇಕು. ಅಂಥದೊಂದು ಗೋಡೆ ಕಟ್ಟಿಕೊಳ್ಳದಿದ್ದರೆ ಪ್ರಸ್ತುತ ವರ್ತಮಾನದ ದುರಂತಕ್ಕೆ ಸಾಕ್ಷಿಯಾಗಬೇಕಾದ ಅನಿವಾರ್ಯ ನಮ್ಮದಾಗುತ್ತದೆ.
Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....