Arsikere :
ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ರಾಮಸಾಗರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಶನಿವಾರ ಬೆಳಿಗ್ಗೆ ಸುಮಾರು 8 ಗಂಟೆಯ ಸಮಯದಲ್ಲಿ ಟಾಟಾ ವಿನ್ಜರ್ ವ್ಯಾನ್ ಮತ್ತು ಮಾರುತಿ ಆಲ್ಟೋ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದರಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ.
ಉಡುಪಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಮಾರುತಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ದಾಸನಪುರದ ರಂಗ (27 ವರ್ಷ) ಮತ್ತು ಗೋವಿಂದ (26 ವರ್ಷ) ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಇದೇ ಕಾರಿನಲ್ಲಿದ್ದ ದಯಾನಂದ ಹಾಗೂ ಮಂಜೇಗೌಡ ಎಂಬುವರಿಗೆ ತೀವ್ರಸ್ವರೂಪದ ಗಾಯವಾಗಿದೆ. ಟಾಟಾ ವ್ಯಾನಿನ ಚಾಲಕರಿಗೂ ಗಂಭೀರ ಗಾಯಗಳಾಗಿದ್ದು ಇವರುಗಳಿಗೆ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಿಕೊಡಲಾಗಿದೆ.
ದುರ್ಘಟನೆ ಸಂಭವಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಕೆಲವು ನಿಮಿಷಗಳ ಕಾಲ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಅಪಘಾತಕ್ಕೊಳಗಾಗಿದ್ದ ವಾಹನಗಳನ್ನು ಪೊಲೀಸರು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಚಿತ್ರ/ಮಾಹಿತಿ : ಅರಸೀಕೆರೆ ಗ್ರಾಮಾಂತರ ಪೊಲೀಸ್ ಇಲಾಖೆ)
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ