ಬರೆಯದ ಕವಿತೆಯ ರೂಪಕ ಡಾ.ರಾಜ್
‘ಅಣ್ಣ'- ಪ್ರೀತಿಗೆ, ಹಿರಿತನಕ್ಕೆ, ಭಯಕ್ಕೆ ಮತ್ತು ಕೆಲವೊಮ್ಮೆ ದಾಸ್ಯವನ್ನು ಪ್ರದರ್ಶಿಸಲು ಬಳಸುವ ಪದ. ನಿಜ, ‘ಅಣ್ಣ' ಎಂದು ಡಾ.ರಾಜಕುಮಾರ್‌ರನ್ನು ಯಾರು ಯಾರು ಯಾವ ಯಾವ ಕಾರಣಕ್ಕೆ ಕರೆದರು ಎನ್ನುವುದರ ಮೇಲೆ, ಅವರು ಆ ಅಣ್ಣನೊಂದಿಗಿಟ್ಟುಕೊಂಡಿದ್ದ ಸಂಬಂಧಗಳ ಅರಿವು ನಮಗಾಗುತ್ತದೆ.
ಸತ್ತ ಶ್ರೇಷ್ಠರೆಲ್ಲ ನಕ್ಷತ್ರಗಳಾಗಿ ಮಿನುಗುತ್ತಾರೆನ್ನುವುದು ಒಂದು ರಮ್ಯ ಕಲ್ಪನೆ. ಆದರೆ ಚಿತ್ರರಂಗದ ‘ಈ ತಾರೆ' ಕನ್ನಡದ ನೆಲದಲ್ಲಿ ಬರೀ ಮಿನುಗಲಿಲ್ಲ. ಬದಲಿಗೆ ಸೂರ್ಯನಾಗಿ ಪ್ರಖರಿಸಿದ್ದು ಈಗ ಇತಿಹಾಸ. ಅವರ ನಿಧನದಿಂದ ಒಂದು ಯುಗ ಮುಕ್ತಾಯವಾಯಿತೆಂದು ಇತ್ತೀಚಿನ ಬೆಳವಣಿಗೆಗಳು ದೃಢಪಡಿಸಿವೆ.
ಸಾಮಾನ್ಯರು ಸತ್ತಾಗ ಕೂಡ ಸಂತಾಪ ಸೂಚಕ ಸಭೆಗಳು ಸೂತಕ ಕಳೆಯುವವರೆಗೂ ಮಾತಲ್ಲಿ, ಆಚರಣೆಯಲ್ಲಿ ನಡೆಯುತ್ತಲೇ ಇರುತ್ತವೆ. ರಾಜ್‌ರಂಥ ‘ಜನಪ್ರಿಯ'ರು ನಿಧನರಾದಾಗ ಆ ಸಂತಾಪದ ಕಣ್ಣೀರ ಹನಿಗಳನ್ನು ಕೂಡಿಸಿದರೆ ಸಾಗರವಾಗುವುದು ನಿಶ್ಚಿತ. ಆದರೆ ರಾಜ್ ಕುರಿತ ಪುಸ್ತಕಗಳು, ಆಡಿಯೊ, ವಿಡಿಯೊ ಸಿ.ಡಿಗಳು, ಮಾರ್ಕೆಟ್ಟಿನ ತುಂಬ ತುಂಬಿಕೊಳ್ಳುತ್ತಿರುವಾಗ, ಸಾವು ಕೂಡ ಹೇಗೆ ವ್ಯಾಪಾರದ ಸರಕಾಗಿ ಬಿಡುತ್ತದೆ ಮತ್ತು ಇಂಥ ಚರಮ ಶ್ಲೋಕ ಬರೆಯಲೆಂದೇ ಕಾದು ಕುಳಿತವರ ಮನಸ್ಥಿತಿಯ ಬಗ್ಗೆಯೂ ಸಂಕಟವಾಗುತ್ತದೆ.
ಡಾ.ರಾಜ್ ನಿಧನದ ತರುವಾಯ, ಶವಸಂಸ್ಕಾರದವರೆಗೂ ಟಿ.ವಿ.ವಾಹಿನಿಗಳು ಬಿತ್ತರಿಸಿದ್ದನ್ನು ಸ್ಮರಿಸಿಕೊಂಡರೆ, ಆಗ ಸೇರಿದ್ದ ಜನರ ರೋಷಾವೇಷಗಳನ್ನು ನೆನೆಸಿಕೊಂಡರೆ ಎದೆ ತುಂಬಿ ಬರುತ್ತದೆ. ಮೃತರು ತಮ್ಮ ಜೀವನದುದ್ದಕ್ಕೂ ತೋರಿದ ಸಜ್ಜನಿಕೆ, ಸರಳತೆ ಮತ್ತು ಸದಭಿರುಚಿಗಳನ್ನು ಕ್ಷಣಾರ್ಧದಲ್ಲಿ ಮರೆತು, ಮತ್ತೊಂದು ಬಗೆಯ ಐತಿಹಾಸಿಕ ಸ್ಮಾರಕವನ್ನಾಗಿಸಿದ ರೀತಿಯೇ ಕ್ಲೀಷೆ ಎನ್ನಿಸುತ್ತಿದೆ.
ಡಾ.ರಾಜ್ ಬದುಕಿಗೆ ಸಾಂಸ್ಕೃತಿಕ ಮಹತ್ವವನ್ನು ಈಚೆಗೆ ಹೊರಿಸಹೊರಟವರೆಲ್ಲ ಸೂರ್ಯನನ್ನು ತೋರಿಸಲು ದೀಪ ಹಿಡಿಯುವವರ ಹಾಗೆ ಕಾಣುತ್ತಿದ್ದಾರೆ. ವಯಸ್ಸು, ವಿದ್ಯೆ, ಅಂತಸ್ತುಗಳ ಬೇಧವಿಲ್ಲದೆ ನೋಡುಗರೆಲ್ಲರನ್ನೂ ಪ್ರಭಾವಿಸುವ ಚಲನಚಿತ್ರ ಮಾಧ್ಯಮವನ್ನು ಐದು ದಶಕಗಳ ಕಾಲ ಅಕ್ಷರಶಃ ಮುನ್ನಡೆಸಿದ ರಾಜ್, ಸಮಾಜ ವಿರೋಧಿ ಆಶಯಗಳನ್ನೆಂದೂ ತಮ್ಮ ಚಿತ್ರಗಳಲ್ಲಿ ತೋರಿಸಿಯೇ ಇಲ್ಲ. ಅವರು ಒಂದೆರಡು ಚಿತ್ರಗಳಲ್ಲಿ ಕಳ್ಳನಾಗಿ ನಟಿಸಿದ್ದರೂ, ಆ ಪಾತ್ರಗಳಿಗೂ ನೀಡಿದ್ದ ನೈತಿಕ ಚೌಕಟ್ಟು ಮತ್ತು ಚಿತ್ರದ ಅಂತ್ಯದಲ್ಲಿ ಆ ಪಾತ್ರಗಳು ಬದಲಾಗುತ್ತಿದ್ದುದನ್ನು ಇಲ್ಲಿ ಹೇಳಲೇಬೇಕು. ಮನರಂಜನೆಯೇ ಮುಖ್ಯವಾಗುವ ಚಲನಚಿತ್ರ ಮಾಧ್ಯಮವನ್ನು ತಮ್ಮೆಲ್ಲ ತಿಕ್ಕಲುತನ, ಡಾಂಭಿಕತೆ ಮತ್ತು ಮೌಢ್ಯಗಳ ಪ್ರಸಾರಕ್ಕೆ ಬಹುತೇಕರು ಬಳಸುತ್ತಿರುವಾಗ, ಕಳೆದ ಐವತ್ತು ವರ್ಷಗಳ ವೃತ್ತಿ ಜೀವನದುದ್ದಕ್ಕೂ ರಾಜ್ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರಗಳನ್ನೆ ಆಯ್ಕೆ ಮಾಡಿಕೊಂಡಿರುವುದು ಅವರು ಅಂಟಿಕೊಂಡಿದ್ದ ಮೌಲ್ಯಗಳನ್ನು ಸಾರಿ ಹೇಳುತ್ತವೆ.
‘ಸಂಸ್ಕೃತಿ'ಯನ್ನು ಕುರಿತು ಬಾಯಿಗೆ ಬಂದಂತೆ ಮಾತನಾಡುವ ನಮ್ಮ ಬಹುತೇಕ ಬುದ್ಧಿ ಜೀವಿಗಳು ರಾಜ್ ಬೆಳಸಿದ, ಉಳಿಸಿದ ಸಂಗತಿಗಳ ಬಗ್ಗೆ ಏಕೆ ಮೌನ ವಹಿಸುತ್ತಾರೋ ತಿಳಿಯುವುದಿಲ್ಲ. ರಾಜ್ ಚಿತ್ರಗಳಲ್ಲಿ ನಟಿಸುವುದನ್ನು ಬಿಟ್ಟು ವರ್ಷಗಳೇ ಕಳೆದಿದ್ದರೂ ಅವರ ಜನಪ್ರಿಯತೆ ಕೊಂಚವೂ ಕಡಿಮೆಯಾಗಿರಲಿಲ್ಲ. ಯಾರು ಏನು ಹೇಳಲಿ, ಬಿಡಲಿ, ಕೋಟ್ಯಂತರ ಜನರ ಹೃದಯ ಸಿಂಹಾಸನಾಧೀಶ್ವರನಾಗಿದ್ದ ಈ ಬಂಗಾರದ ಮನುಷ್ಯನ ಬಗ್ಗೆ ಅಭಿಮಾನ ತುಂಬಿ ಬರುತ್ತದೆ.
‘ಅಭಿಮಾನಿ ದೇವರುಗಳೆ' -ರಾಜ್ ತಮ್ಮ ಅಭಿಮಾನಿಗಳನ್ನು ಕರೆಯುತ್ತಿದ್ದ ರೀತಿ ಇತರರಿಗೆ ಅನುಕರಣೀಯ. ಅವರು ಹಾಗೆಂದ ಮರುಕ್ಷಣವೇ ತುಂಬಿ ಬರುತ್ತಿದ್ದ ಹರ್ಷೊದ್ಗಾರಗಳನ್ನು ನೆನಪಿಸಿಕೊಳ್ಳುವುದೇ ಒಂದು ಬಗೆಯ ರೋಮಾಂಚನ. ತಾವು ಯಾರಿಂದಾಗಿ ಎತ್ತರಕ್ಕೇರಿದೆವೋ ಅದಕ್ಕೆ ಕಾರಣರಾದವರನ್ನು ಮತ್ತೆ ಮತ್ತೆ ನೆನೆಯುವುದು ಕೃತಜ್ಙತೆಯ ಭಾಗವೆನ್ನುವುದು ಆ ಮೇರು ನಟನಿಗೆ ತಿಳಿದಿತ್ತು.
ಪ್ರಾಯಶಃ ರಾಜ್‌ರಷ್ಟು ವೈವಿಧ್ಯಮಯ ಪಾತ್ರಗಳು ಕನ್ನಡದ ಇನ್ನಾವ ನಟನಿಗೂ ಸಿಗಲಾರವು. ಇತ್ತೀಚಿನ ಒಬ್ಬ ನಟ ಹೆಚ್ಚೆಂದರೆ ಎಷ್ಟು ವರ್ಷ ಈ ರಂಗದಲ್ಲುಳಿಯಬಲ್ಲ? ಖಂಡಿತ ಐವತ್ತು ವಸಂತಗಳನ್ನಂತೂ ಪೂರೈಸಲು ಸಾಧ್ಯವಿಲ್ಲ! ಸರಿಸುಮಾರು ಅರ್ಧ ಶತಮಾನಗಳ ಕಾಲ ಚಿತ್ರೋದ್ಯಮದ ಅನಭಿಷಕ್ತ ದೊರೆಯಂತಿದ್ದ ರಾಜ್, ಸಾಮಾಜಿಕ ಚಿತ್ರಗಳಿಗಿಂತ ಪೌರಾಣಿಕ, ಐತಿಹಾಸಿಕ ಚಿತ್ರಗಳಿಂದಲೇ ಹತ್ತಿರವಾದವರು. ಅವರ ಉಚ್ಚಾರ, ಸಂಭಾಷಣೆ ಒಪ್ಪಿಸುತ್ತಿದ್ದ ರೀತಿಯೇ ಅವರನ್ನು ಎತ್ತರಕ್ಕೆ ಒಯ್ದ ಸಂಗತಿಗಳು. ಮುಪ್ಪಲ್ಲೂ ಅವರ ‘ಬಾಡಿ ಲಾಂಗ್ವೇಜ್' ಮತ್ತು ಪ್ರಮಾಣ ಬದ್ಧ ಅಂಗ ಸೌಷ್ಟವ ಹಾಗೆಲ್ಲ ಮರೆಯುವಂಥವಲ್ಲ. ಕೃಷ್ಣದೇವರಾಯ, ಕವಿರತ್ನ ಕಾಳಿದಾಸ, ಮಯೂರ, ಬಬೃವಾಹನರು ಹೇಗಿದ್ದರೋ ಏನೋ ನಾವಂತೂ ಆ ಮಹಾ ಮಹಿಮರನ್ನು ರಾಜ್ ಮೂಲಕವೇ ಕಂಡುಕೊಂಡಿದ್ದೇವೆ.
ಜಾತಿ ಬಲ, ಹಣ ಬಲ, ವಿದ್ಯಾ ಬಲಗಳಿಲ್ಲದೆಯೇ ಬರಿಯ ಅಭಿನಯ ಬಲವೊಂದರಿಂದಲೇ ಕಲಾ ಸಾಮ್ರಾಟನಾಗಿ ಮೆರೆದದ್ದು ವಿಸ್ಮಯದ ಪರಮಾವಧಿ. ಚಿತ್ರವೊಂದರ ಬಿಡುಗಡೆಯ ದಿನದ ಪ್ರಥಮ ಪ್ರದರ್ಶನಕ್ಕೆ ನಡೆದ ನುಗ್ಗಾಟದಲ್ಲಿ ಜೀವ ಕಳೆದುಕೊಂಡ ಉದಾಹರಣೆಗಳಿರುವುದು ಕೇವಲ ರಾಜ್‌ಗೆ ಮಾತ್ರ. ಪ್ರಾಯಶಃ ರಾಜ್ ನಂಬಿದ್ದು ಕಲೆಯನ್ನು ಮಾತ್ರ. ಅದು ಅವರೊಳಗಿನ ಕಲಾವಿದನಿಗಿದ್ದ ಸಜ್ಜನಿಕೆಯ ದ್ಯೋತಕ.ರಾಜ್ ರಂಗಭೂಮಿಯ ಕೊಡುಗೆ. ಅವರ ಇಷ್ಟದಂತೆ ನಡೆದುಕೊಳ್ಳಲು ಅವರಿಗೆ ಬಿಟ್ಟಿದ್ದಿದ್ದರೆ ರಾಜ್ ರಂಗಭೂಮಿಯ ಸಂಪರ್ಕವನ್ನು ಕಡಿದುಕೊಳ್ಳುತ್ತಲೇ ಇರಲಿಲ್ಲವೇನೋ!
ಅವರ ನೇತೃತ್ವ ಸಿಗದಿದ್ದಲ್ಲಿ ಗೋಕಾಕ್ ಚಳವಳಿ, ಅದಕ್ಕೆ ಸಿಕ್ಕ ವ್ಯಾಪಕ ವಿಸ್ತಾರಗಳನ್ನು ಪಡೆಯುತಿತ್ತೋ ಇಲ್ಲವೋ ಊಹಿಸುವುದು ಕಷ್ಟದ ಕೆಲಸ. ಆ ವರದಿಯನ್ನು ಕೊಟ್ಟ ಡಾ.ವಿ.ಕೃ.ಗೋಕಾಕ್ ಯಾರೆಂದು ತಿಳಿಯದ, ಆ ವರದಿಯ ವಿವರಗಳೇನೆಂಬುದನ್ನೂ ಅರಿಯದ, ಆದರೆ ರಾಜ್ ನೇತೃತ್ವ ವಹಿಸಿದ ಕಾರಣಕ್ಕೆ ಅದನ್ನು ಬೆಂಬಲಿಸಿದ, ಅದೆಷ್ಟೋ ಮುಗ್ಧ ಜೀವಿಗಳಿದ್ದಾರೆನ್ನ್ನುವ ಸತ್ಯದಿಂದಲೂ ನಾವು ಪಾಠ ಕಲಿಯಲೇ ಇಲ್ಲ. ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳಲ್ಲಿ ಕನ್ನಡದ ಚಿತ್ರಗಳಿಗೆ ಅವಕಾಶ ಸಿಗದಿದ್ದಾಗಲೂ ರಾಜ್ ಮೊಳಗಿಸಿದ ರಣ ದುಂಧುಭಿಯೇ ಅದನ್ನು ಆಗ ಮಾಡಿತೆಂದರೆ ಅದು ಅವರ ಶಕ್ತಿ ಸಾಮರ್ಥ್ಯದ ಕುರುಹಲ್ಲದೇ ಮತ್ತೇನು? ಇತರ ಭಾಷೆಗಳಿಂದ ಡಬ್ಬಿಂಗ್ ಆದ ಚಿತ್ರಗಳನ್ನು ಉಳಿದೆಲ್ಲ ಭಾಷೆಗಳು ಒಪ್ಪಿಕೊಂಡರೂ, ಕನ್ನಡ ಚಿತ್ರೋದ್ಯಮದ ಉಳಿವಿಗಾಗಿ ಅದನ್ನು ವಿರೋಧಿಸಿ ವ್ಯಾಪಕವಾಗಿ ಚಳವಳಿ ನಡೆಸಿದ ಕೀರ್ತಿ ರಾಜ್‌ಗಲ್ಲದೆ ಮತ್ತಾರಿಗೂ ಸಲ್ಲುವುದಿಲ್ಲ.
ಅವರು ‘ಸಂಪತ್ತಿಗೆ ಸವಾಲ್'ನ ನಂತರ ತಮ್ಮ ಚಿತ್ರಗಳಿಗೆ ತಾವೇ ಹಾಡ ತೊಡಗಿದಾಗ, ಪಿ.ಬಿ.ಯವರ ಅಭಿಮಾನಿಗಳು ಮುನಿದು ಗೊಣಗಿಕೊಂಡರು. ಪಿ.ಬಿ ಯವರದು ಸುಮಧುರ ಕಂಠವೇನೋ ಹೌದು. ಅವರ ಸ್ವರ ಮಾಧುರ್ಯವೂ ಅಧ್ಭುತವಾದುದು, ನಿಜ. ಆದರೆ ಅದರಲ್ಲಿ ವೈವಿಧ್ಯತೆ ಇತ್ತೆ? ಅವರು ರಾಜ್‌ಗೆ ಹಾಡಿದ ಹಾಗೇ ಕಲ್ಯಾಣಕುಮಾರ್‌ಗೆ, ಉದಯಕುಮಾರ್‌ಗೆ ಹಾಡಿದ್ದಾರೆ. ಇಲ್ಲಿ ಎಸ್.ಪಿ. ಚಿತ್ರದ ನಾಯಕರಿಗೆ ತಕ್ಕಂತೆ ಹಾಡುವುದನ್ನು ಗಮನಿಸ ಬೇಕು.
ಎಷ್ಟೆಲ್ಲ ಖ್ಯಾತಿ, ಜನಪ್ರಿಯತೆ ಮತ್ತು ಹಣ ಸಂಪಾದಿಸಿದರೂ ರಾಜ್ ಚಿತ್ರ ರಂಗಕ್ಕೇನು ಮಾಡಿದ್ದಾರೆ ಎಂದು ಕೇಳುವವರೂ ನಮ್ಮ ನಡುವೆ ಇದ್ದಾರೆ. ಒಪ್ಪೋಣ. ಒಂದು ವೇಳೆ ಅವರು ಸ್ಟುಡಿಯೋ ಸ್ಥಾಪಿಸಿದ್ದಿದ್ದರೆ ಅದನ್ನು ನಡೆಸುವ ಹೈರಾಣದಲ್ಲಿ ಅವರ ಅಧ್ಭುತ ಚಿತ್ರಗಳಿಂದ ನಾವೆಲ್ಲ ವಂಚಿತರಾಗಿರುತ್ತಿದ್ದೆವು. ಅಥವ ಈಗಿನ ನಮ್ಮ ನಾಯಕ ನಟರಂತೆ ಅವರೇ ಚಲನ ಚಿತ್ರದ ಎಲ್ಲ ವಿಭಾಗಗಳಲ್ಲೂ ಕೈ ಆಡಿಸಿದ್ದಿದ್ದರೆ ಚಿ.ಉದಯ ಶಂಕರ್, ಪಂತುಲು, ದೊರೆ-ಭಗವಾನ್, ಲಿಂಗಪ್ಪ, ಹುಣಸೂರು ಮುಂತಾದವರೆಲ್ಲ ಎಲ್ಲಿರುತ್ತಿದ್ದರು? ಅವರು ಡಬ್ಬಿಂಗ್ ವ್ಯಾಪಕತೆ ತಗ್ಗಿಸಲು ಗೆಳೆಯರ ಜೊತೆ ಸೇರಿ ನಿರ್ಮಿಸಿದ ರಣಧೀರ ಕಂಠೀರವನನ್ನು ಹಾಗೆಲ್ಲ ಮರೆಯಲಾದೀತೆ? ರಾಜಕುಮಾರ್ ಮತ್ತು ನರಸಿಂಹರಾಜು ಜೋಡಿ ಮನರಂಜನೆಯ ಮೂಲಕವೇ ನೋಡುಗರಿಗೆ ಕೊಡುತ್ತಿದ್ದ ನೀತಿ ಬೋಧೆ ಈಗಿನ ಚಿತ್ರಗಳಲ್ಲಿ ಕಲ್ಪಿಸಿಕೊಳ್ಳಲಾದರೂ ಸಾಧ್ಯವೆ?
ಚಲನ ಚಿತ್ರ ಮಾಧ್ಯಮ ಸಾಂಸ್ಕೃತಿಕ ಮಾಧ್ಯಮವಾಗಿ ಉಳಿಯಲಾರದಂಥ ನೀಚತನ ಇಂದು ಆ ಉದ್ದಿಮೆಯಲ್ಲಿ ವ್ಯಾಪಕವಾಗಿದೆ. ಇವತ್ತು ಬರುತ್ತಿರುವ ಒಂದೇ ಒಂದು ಚಿತ್ರವನ್ನು, ರಾಜ್ ಮಕ್ಕಳ ಚಿತ್ರಗಳನ್ನೂ ಸೇರಿದಂತೆ, ಮನೆಯವರೆಲ್ಲ ಒಟ್ಟಿಗೆ ಕುಳಿತು ನೋಡಲು ಸಾಧ್ಯವೇ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ.
ಇಷ್ಟೆಲ್ಲ ವರ್ಷಗಳ ಕಾಲ ನಮ್ಮ ಹೃದಯ ಸಿಂಹಾಸನದಲ್ಲಿ ಕುಳಿತು ನಮ್ಮ ಕನಸುಗಳಿಗೆಲ್ಲ ತಮ್ಮ ನಾಯಕನ ವರ್ಚಸ್ಸಿನಿಂದಲೇ ಉತ್ತರ ಕೊಡುತ್ತಿದ್ದ ರಾಜ್ ಬಗ್ಗೆ ನಮ್ಮ ಜನಸಾಮಾನ್ಯರ ಪ್ರೀತಿ ಆಕಾಶದೆತ್ತರದ್ದು. ಆದರೆ, ನಮ್ಮ ಲೇಖಕರು, ಕವಿಗಳಿಗೆ ರಾಜ್ ಒಂದು ವಸ್ತುವಾಗಿ ಕಾಡದೇ ಇದ್ದುದು ಅತಿ ಆಶ್ಚರ್ಯವನ್ನು, ಅನುಮಾನವನ್ನು ಹುಟ್ಟುಹಾಕುತ್ತದೆ. ಕೇವಲ ಕುತೂಹಲಕ್ಕೆಂದು ಅದನ್ನು ಶೋಧಿಸ ಹೊರಟರೆ, ದೊಡ್ದ ರಂಗೇ ಗೌಡ ಮತ್ತು ಕಲ್ಯಾಣ್ ಬಿಟ್ಟು ಉಳಿದವರಾರೂ ರಾಜ್ ಮೇಲೆ ಕವಿತೆ ಬರೆದೇ ಇಲ್ಲ.ಇವರಿಬ್ಬರೂ ಚಿತ್ರ ರಂಗಕ್ಕೆ ಸೇರಿದವರಾದ್ದರಿಂದ ರಾಜ್ ಬರಹಗಾರರ ವಲಯದ ಮೆಲೆ ಯಾವ ಪ್ರಭಾವವನ್ನೂ ಉಂಟುಮಾಡಲಿಲ್ಲವೇ ಎನ್ನಿಸತೊಡಗುತ್ತದೆ. ಆದರೆ ರಾಜ್‌ರನ್ನೇಕೆ, ಇಡೀ ಚಿತ್ರರಂಗವನ್ನೇ ಸೀರಿಯಸ್ ಕಲ್ಚರಲ್ ವಲಯವನ್ನಾಗಿ ಗ್ರಹಿಸದ ಆಷಾಢ ಭೂತಿತನ ನಮ್ಮ ಬರಹಗಾರರಲ್ಲಿದೆಯೋ ಅಥವ ಚಿತ್ರ ರಂಗವೇ ಇವರ ಮಿತಿಗಳನ್ನರಿತು ದೂರವಿಟ್ಟಿದೆಯೋ ಇನ್ನೂ ಇತ್ಯರ್ಥ ವಾಗಬೇಕಾದ ಸಂಗತಿಯಾಗಿದೆ.
ರಾಜ್ ಮೇಲೆ ಕವಿತೆ ಕಟ್ಟದ ಮಾತ್ರಕ್ಕೆ ಅಥವ ಅವರ ಸಾಧನೆ ಕುರಿತು ಸೆಮಿನಾರ್ ಮಾಡದ ಮಾತ್ರಕ್ಕೆ ಅವರ ಸಾಧನೆಗಳೇನೂ ಮರೆಯಾಗುವುದಿಲ್ಲ. ಅವರ ಅಭಿಮಾನಿಗಳು, ಅಭಿಮಾನಿ ಎಂದರೆ, ನಕ್ಷತ್ರ ಹೊತ್ತುಕೊಂಡು ಮೆರವಣಿಗೆ ಮಾಡಿ ಉಪವಾಸವಿದ್ದು ಮೊದಲ ಪ್ರದರ್ಶನ ನೋಡುವವನಲ್ಲ, ತನ್ನ ಬದುಕಿಗೆ ರಾಜ್ ಪಾತ್ರವೊಂದನ್ನು ಮಾದರಿಯನ್ನಾಗಿಸಿಕೊಂಡು ಅದನ್ನೇ ಆದರ್ಶವನ್ನಾಗಿ ಸ್ವೀಕರಿಸಿದವನು. ಅಂಥ ಲಕ್ಷ ಲಕ್ಷ ಅಭಿಮಾನಿಗಳು ಅವರಿಗಿದ್ದಾರೆ. ಅವರ ಇತ್ತೀಚಿನ ಆಕಸ್ಮಿಕ, ಗುರಿ ಮೊದಲಾದ ಕೆಲವೇ ಕೆಲವು ಚಿತ್ರಗಳನ್ನು ಹೊರತು ಪಡಿಸಿ ಉಳಿದ ಅದರಲ್ಲೂ ಅವರ ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳೇನಾದರೂ ಟಿ.ವಿ.ಯಲ್ಲಿ ಬರುತ್ತಿದ್ದರೆ ನಿಂತು ನೋಡದ ಕನ್ನಡಿಗನ್ಯಾರೂ ಇರಲು ಸಾಧ್ಯವೇ ಇಲ್ಲ. ಹಾಗೇನಾದರು ಇದ್ದರೆ ಅವನು ಕೇವಲ ರಾಜ್ ಅಭಿಮಾನಿ ಅಲ್ಲವೆಂದಲ್ಲ, ಬದಲಿಗೆ ಕನ್ನಡದ ಬಗ್ಗೆಯೇ ನಿರಭಿಮಾನವಿರುವ ಈ ನೆಲದ ಅನ್ನವನ್ನುಂಡು ಪರರಿಗೆ ಜೈ ಎನ್ನುವವ ಎಂದರ್ಥ.
ರಾಜ್ ಬದುಕಿನ ಅನೇಕ ಘಟನೆಗಳನ್ನು ಪೋಣಿಸಿ ಅವರನ್ನೊಬ್ಬ ಸಂತನನ್ನಾಗಿಯೋ, ಉದಾತ್ತನನ್ನಾಗಿಯೋ ಅಥವ ಅಪಾರ ಮಾನವ ಪ್ರೇಮಿಯೆಂದೋ ಸಾಬೀತು ಮಾಡಬಹುದು. ಆದರೆ ರಾಜ್ ಕೂಡ ನಮ್ಮ ನಿಮ್ಮಂಥ ಸಾಮಾನ್ಯ ಮನುಷ್ಯರೆ ಆಗಿದ್ದರು. ಅವರಿಗೂ ಸಾಂಸಾರಿಕ ಬಂಧನಗಳು, ಕಟ್ಟುಪಾಡುಗಳು ಮಿತಿ-ನಿರ್ಮಿತಿಗಳು ಇದ್ದವು. ಹಾಗಾಗಿದ್ದರಿಂದಲೇ ರಾಜ್, ‘ರಾಜಕುಮಾರ'ನಾಗದೇ ನಮ್ಮ ಮನೆಯ ಹುಡುಗನೇ ಆಗಿದ್ದರು. ಆ ಕಾರಣಕ್ಕೇ ಅವರು ನಾಡಿನ ಅಭಿಮಾನದ ಸಂಕೇತವಾಗುತ್ತಾರೆ ಮತ್ತು ಬರೆಯದ ಕವಿತೆಯ ರೂಪಕವಾಗಿ ಕಾಡುತ್ತಲೇ ಇರುತ್ತಾರೆ.
ಸೋಮವಾರ, ಏಪ್ರಿಲ್ 24, 2017
Home
»
»
ಡಾ.ರಾಜಕುಮಾರ್: ಬರೆಯದ ಕವಿತೆಯ ರೂಪಕ
0 ಕಾಮೆಂಟ್(ಗಳು) :
ಕಾಮೆಂಟ್ ಪೋಸ್ಟ್ ಮಾಡಿ