ಭಾನುವಾರ, ಏಪ್ರಿಲ್ 9, 2017

ಗದ್ದರ್ ಮತ್ತು ಸದ್ಯದ ಮಾವೋವಾದ

ಗದ್ದರ್ ಮತ್ತು ಸದ್ಯದ ಮಾವೋವಾದ

ಇವರ ಹೆಸರು ಗುಮ್ಮಾಡಿ ವಿಠ್ಠಲ ರಾವ್ ಅಂದರೆ ಯಾರು ಎಂದು ಕೇಳುವ ಬಹಳಷ್ಟು ಜನರಿಗೆ ಗದ್ದರ್ ಅಂದ ಕೂಡಲೇ ಒಂದು ಧನ್ಯತೆ ಮತ್ತು ಕ್ರಾಂತಿಯ ಕಿರಣ ಕಾಣುತ್ತಿದ್ದದ್ದು ಅತಿಶಯವೇನಲ್ಲ. ೧೯೪೯ರಲ್ಲಿ  ಈಗಿನ ತೆಲಂಗಾಣ ರಾಜ್ಯದ ಮೇಢಕ ಜಿಲ್ಲೆಯ ತೂಪ್ರಾನ್ ಎಂಬ ಹಳ್ಳಿಯ ಬಡ ದಲಿತ ಕುಟುಂಬದಲ್ಲಿ‌ ಹುಟ್ಟಿದ ಈತ ಮುಂದೊಂದು ದಿನ ಭಾರತಾದ್ಯಂತ ಕ್ರಾಂತಿಯ ಕಿಡಿ ಹಚ್ಚುತ್ತಾನೆಂದು ಯಾರಿಗೂ ತಿಳಿದಿರಲಿಲ್ಲ. ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಆದರೆ ಸೆಳೆದದ್ದು ಮಾವೋವಾದಿ ಚಳುವಳಿ.

ಮೈ ಮೇಲೊಂದು ಬಿಳಿಯ ಧೋತಿ, ಹೆಗಲ ಮೇಲೆ ಕೆಂಪು ವಸ್ತ್ರ ಹೊದ್ದು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಕೈಯಲ್ಲಿ ತಮಟೆ ಹಿಡಿದು ಕ್ರಾಂತಿ ಗೀತೆಗಳನ್ನು ವೇದಿಕೆಯ ಮೇಲೆ ಹಾಡುತ್ತಿದ್ದರೆ ,ಆಂಧ್ರದ ಬಡಕೂಲಿ ಕಾರ್ಮಿಕರ ಕೃಷಿಕರ ಆದಿವಾಸಿಗಳ, ದಲಿತರ, ದೀನ ದಮನಿತರ ದನಿಯೊಂದು ದೇವರ ರೂಪದಲ್ಲಿ ಧರೆಗಿಳಿದು ಬಂದಂತೆ ಕಾಣುತ್ತಿತ್ತು. ಮುಂದೆ ಎಲ್ಲರ ಬಾಯಲ್ಲಿ “ಗದ್ದರ” ಎಂಬ ಹೆಸರಿನಿಂದ ಪರಿಚಿತನಾಗಿ ಮಾವೋವಾದಿ ಸಿದ್ದಾಂತದ ಚಳುವಳಿಯ ಕ್ರಾಂತಿಕಾರನಾಗಿ ಹೊರಹೊಮ್ಮಿದ ಗದ್ದರ್ ಅವರ ಸದ್ಯದ ಜೀವನ ಕುರಿತು ಬಹಳಷ್ಟು ಚರ್ಚೆ ನಡೆಯುತ್ತಿದೆ.

ಗದ್ದರ ಎಂಬುದು ಸ್ವಾತಂತ್ರ್ಯ ಪೂರ್ವದಲ್ಲಿ ಪಂಜಾಬಿನಲ್ಲಿ ಬ್ರಿಟಿಷರ ವಿರುದ್ದ ಹೋರಾಡಿದ ಒಂದು ಸಂಘಟನೆ. ನಿಘಂಟಲ್ಲಿ ಇದಕ್ಕಿರುವ ಅರ್ಥ  "ರಾಜದ್ರೋಹ". ಎಪ್ಪತ್ತರ ದಶಕದ ಆಂಧ್ರ ಪ್ರದೇಶದಲ್ಲಿ ಮಾವೋ ಚಳವಳಿಯ ಕಾವು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅದರ ಭಾಗವಾಗಿ ಸಂಘಟನೆಯನ್ನು ಸಿದ್ಧಾಂತವನ್ನೂ ಏಕಕಾಲಕ್ಕೆ ಮೀರಿ ಬೆಳೆದವರು ಬೆಳೆಸಿದವರು ಇದೇ ಗದ್ದರ್.
ಪ್ರಭುತ್ವದ ವಿರುದ್ದ ಶಸ್ತ್ರ ಸಮೇತವಾಗಿ ರಣಾಂಗಣಕ್ಕಿಳಿದಿದ್ದು ಸರ್ಕಾರದ ಕಣ್ಣು ಕೆಂಪಾಗುವಂತೆ ಮಾಡಿತ್ತು.

ಹೀಗಾಗಿ ಅನೇಕ ವರ್ಷಗಳ ಕಾಲ ಭೂಗತರಾಗಿ ವ್ಯವಸ್ಥೆಯ ವಿರುದ್ದ ಬಂಡೇಳುತ್ತ ಸುಮಾರು ನಲವತ್ತು ವರ್ಷಗಳ ಕಾಲ ಒಂದು ಸಿದ್ಧಾಂತ ದ ಬೆನ್ನೆಲುಬಾಗಿ ದುಡಿಯುತ್ತ, ಹಾಡುತ್ತ, ಕುಣಿಯುತ್ತ, ಒಂದೊಮ್ಮೆ ಭದ್ರತಾ ಪಡೆಗಳ ಗುಂಡಿಗೆ ಮಾರಣಾಂತಿಕವಾಗಿ ಹಲ್ಲೆಗೊಳಗಾದರೂ ಛಲಗುಂದದೆ ಚಳುವಳಿಯನ್ನು ಮುನ್ನೆಡೆಸಿ ಆದಿವಾಸಿಗಳ ಪಾಲಿಗೆ ಹೀರೋ ಎನಿಸಿಕೊಂಡರು. ಮುಂದೆ ತೆಲಂಗಾಣ ಪ್ರತ್ಯೇಕ ರಾಜ್ಯದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅದರಲ್ಲಿ ಯಶಸ್ವಿಯೂ ಆದರು. ಈಗ ಇವರ ಕ್ರಾಂತಿಗೀತೆಯೊಂದು ತೆಲಂಗಾಣ ರಾಜ್ಯದ ನಾಡಗೀತೆಯ ಗೌರವ ಪಡೆದುಕೊಂಡಿದೆ. ಇದೆಲ್ಲ ಈಗ ಇತಿಹಾಸ.

ಸಧ್ಯದ ತಲ್ಲಣವೆಂದರೆ-

ಅಂತಹ ಕ್ರಾಂತಿಕಾರಿ ಸಂಘಟನೆಯ ಮುಂದಾಳುವೊಬ್ಬ ಇವತ್ತಿನವರೆಗೂ ಯಾವ ಫ್ಯೂಡಲ್ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದರೋ ಮತ್ತು ಹಾಗೆ ಅಂಥ ವ್ಯವಸ್ಥೆಯನ್ನು  ಪೋಷಿಸಿಕೊಂಡು ಬಂದ ಆರೋಪ ಹೊತ್ತ ಪುರೋಹಿತ ಶಾಹಿಯ ವಿರುದ್ಧ ಹೋರಾಡಿದ್ದರೋ ಅಂತಹ ಗದ್ದರ ಈ ದಿನಗಳಲ್ಲಿ ಗುಡಿ, ಗುಂಡಾರ, ದೈವಭಕ್ತಿ ಅಂತ ಕುಟುಂಬ ಸಮೇತರಾಗಿ ಶರಣಾಗಿರುವುದು ಕಂಡು ನಕ್ಸಲ್ ನಾಯಕರ, ದೇಶದ ಕೆಲ ಬುದ್ದಿ ಜೀವಿಗಳ ಹುಬ್ಬೇರುವಂತೆ ಮಾಡಿದೆ. ಅದರಲ್ಲೂ ಎಡಪಂಥೀಯರು ವೈಯುಕ್ತಿಕವಾಗಿ ತೆಗೆದುಕೊಂಡ ನಿರ್ಧಾರಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸುವ ಮತ್ತು ವ್ಯಕ್ತಿಯೊಬ್ಬನ ಖಾಸಗೀ ನಿರ್ಧಾರಗಳನ್ನು ಇಡೀ ಚಳವಳಿಗೆ ತಳುಕು ಹಾಕುವ ನಮ್ಮ ಮಾಧ್ಯಮಗಳ ನಡೆ ಕೂಡ ಸದ್ಯದ ಚರ್ಚೆಗೆ ಕಾವು ಕೊಡುತ್ತಿವೆ.   ಆದರೆ ಸಿದ್ಧಾಂತ ಮತ್ತು ಚಳುವಳಿಯನ್ನೇ ನಂಬಿಕೊಂಡಿರುವ ಸಾವಿರಾರು ಕಾರ್ಯಕರ್ತರಿಗೆ ಇಂಥವರ ನಡೆ ಆಘಾತ, ಭ್ರಮನಿರಸನ ತಂದೊಡ್ಡಿದೆ. ಪ್ರಭುತ್ವ ಎಷ್ಟೇ ಕಠೋರವಿದ್ದರೂ ಅದನ್ನು ಒಪ್ಪಿಕೊಂಡು ನಡೆಯಬೇಕೆ? ಹಾಗೆ ಒಪ್ಪಿಕೊಳ್ಳುವುದಿದ್ದರೆ ಅದೇಕೆ ಅದೆಷ್ಟೋ ಅಮಾಯಕರನ್ನು ಚಳವಳಿಯ ತೆಕ್ಕೆಗೆ ಒಡ್ಡಿದ ನಾಯಕರ ನಿಲುವುಗಳು ಅರ್ಥವಾಗದೇ  ವಿವಶ  ಸ್ಥಿತಿಯಲ್ಲಿದ್ದಾರೆ.

ಅಸಲೀ ಸಂಗತಿಯೆಂದರೆ ನಕ್ಸಲರ ಈ ಸಶಸ್ತ್ರ ಹೋರಾಟ ಜನಬೆಂಬಲವನ್ನು  ಎಂದೋ  ಕಳೆದುಕೊಂಡಿದೆ. ಹೋರಾಟಕ್ಕಾಗಿ ಬಲವಂತವಾಗಿ ಚಂದಾ ಎತ್ತುವ ಮತ್ತು ತನ್ನ ಸಿದ್ಧಾಂತಗಳನ್ನು ಪ್ರಶ್ನಿಸುವವರಿಗೆ ತನ್ನ ಕರಾಳ ಮುಖ ದರ್ಶನ ಮಾಡಿಸುವ ಚಳವಳಿಯ ಮೂಲ ಸ್ವರೂಪವೂ ಬದಲಾಗಿ  ತನ್ನ ಕಾವು ಕಳೆದುಕೊಂಡಿದೆ. ಅಮಾಯಕರ ಜನಸಾಮಾನ್ಯರ ಯೋಧರ ಹತ್ಯೆಯ ಆರೋಪಗಳು ಹೋರಾಟಗಾರರ ಮನೋಧೈರ್ಯವನ್ನು ಕಂಗೆಡಿಸಿವೆ. ಮೇಲಾಗಿ ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಸಶಸ್ತ್ರ ಹೋರಾಟಗಳು ಗೆಲುವು ಕಂಡಿದ್ದು ಅಪರೂಪವೆನ್ನುವ ಸತ್ಯ ಕೂಡ ವರ್ತಮಾನದ ಹೋರಾಟಗಳ ಸ್ವರೂಪವನ್ನೇ ಬದಲು ಮಾಡುತ್ತಿದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಕೆಲ ವರ್ಷಗಳ ಹಿಂದೆ ಕರ್ನಾಟಕದ ನಕ್ಸಲ್ ನಾಯಕರೆನಿಸಿಕೊಂಡವರು ಯಾವುದೇ ಷರತ್ತುಗಳಿಲ್ಲದೆ ಸರಕಾರಕ್ಕೆ ಶರಣಾಗಿದ್ದು ಈ ಘಟನೆಗಳ ಮುಂದುವರೆದ ಭಾಗವಾಗಿ ತೋರುತ್ತದೆ. ಇಲ್ಲಿನ ಸಮಸ್ಯೆಯೆಂದರೆ ಗದ್ದರ ವೈಯುಕ್ತಿಕವಾಗಿ  ಸಂಘಟನೆಯನ್ನು ಮೀರಿ ಬೆಳೆದು "ದೇವರಾ"ಗಿ ಅವನ ಅಭಿಮಾನಿಗಳು ಮತ್ತು ಅನುಯಾಯಿಗಳು ಅವನ ಭಜನೆ ಶುರುಮಾಡಿದರು. ಹೀಗಾಗಿ ನಾಯಕನೊಬ್ಬ ಸಂಘಟನೆಯೆಡೆಗೆ ಬೆನ್ನು ತಿರುಗಿಸಿದಾಗಿನ ಹತಾಶೆ ನಕ್ಸಲ್ ವಾದವನ್ನು ನಂಬಿದ್ದವರಿಗೆ ಕಾಡುತ್ತಿದೆ.

ಮಾವೋವಾದದ ಸಿದ್ದಾಂತಗಳೇನೆ ಇರಲಿ ಕ್ರಾಂತಿಯ ಹೆಸರಿನಲ್ಲಿ ರಕ್ತಪಾತವನ್ನು ಇಲ್ಲಿ ಯಾರೂ ಒಪ್ಪಲಾರರು. ಹಾಗೆಂದ ಮಾತ್ರಕ್ಕೆ ಪ್ರಭುತ್ವದ ಜಡತ್ವವನ್ನು ಒಪ್ಪಿಕೊಳ್ಳಲೇ ಬೇಕೆಂದೇನೂ ಇಲ್ಲ.ಸ್ವಾತಂತ್ರೋತ್ತರದ ಹಲವು ದಶಕಗಳಿಂದ ನಡೆಯುತ್ತಲೇ ಇರುವ  ಮಾತುಕತೆಗಳಿಂದ ಸಮಸ್ಯೆ ಬಗೆಹರಿಸುವುದಾಗಿ ಸರಕಾರಗಳು ಹೇಳುತಿದ್ದರೂ ಸಮಸ್ಯೆ ಅಷ್ಟು ಸುಲಭವಾಗಿ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಜೊತೆಗೇ  ನಕ್ಸಲ ಪೀಡಿತ ಭಾಗಗಳಿಂದ ವರದಿಯಾಗುತ್ತಿರುವ  ಘರ್ಷಣೆಗಳು ಕೂಡ ಈ ದೇಶವನ್ನು ದಶಕಗಳಿಂದ ಕಾಡುತ್ತಿರುವ ರೋಗಕ್ಕೆ ಮದ್ದಿಲ್ಲದಂಥ ಸ್ಥಿತಿಗೆ ನೂಕಿದೆ
ಶಾಂತಿ, ಸಹನೆ, ತಾಳ್ಮೆ, ಪ್ರೀತಿಯಿಂದ ಎಲ್ಲವನ್ನೂ ಎಲ್ಲರನ್ನೂ ಗೆಲ್ಲಬಹುದೆಂದು  ತೋರಿಸಿಕೊಟ್ಟ ಅಹಿಂಸೆಯ ದೊಡ್ಡ ಪ್ರತಿಪಾದಕ ಗಾಂಧೀ ಮಂತ್ರದ ಕೋಲು ನಮ್ಮ ಬಳಿಯಿದೆ. ಅಂದ ಹಾಗೆ ಗಾಂಧೀಜಿಯವರಿಗೂ ಗದ್ದರವರಿಗೂ ಕೆಲವೊಂದು ಸಾಮ್ಯತೆಗಳು ಮೇಲ್ನೋಟಕ್ಕೆ ಕಂಡುಬರುತ್ತವೆ. ಇವರಿಬ್ಬರೂ ದಮನಿತರ ಪರವಾಗಿ ದನಿಯೆತ್ತಿದವರು, ಬರಿಮೈಯಲ್ಲಿ ನಡೆದವರು, ಆದರೆ ಸೈದ್ಧಾಂತಿಕವಾಗಿ ಭಿನ್ನ ನಿಲುವಿನವರು. ಗಾಂಧೀಜಿ ದೇವರ ಹೆಸರಿನಲ್ಲಿ ನಡೆದುಬಂದ ಕಂದಾಚಾರಗಳನ್ನು ವಿರೋಧಿಸುತ್ತಲೇ ದೇವರನ್ನು ಒಪ್ಪಿಕೊಂಡು ಅಪ್ಪಿಕೊಂಡವರು. ಗದ್ದರ ಪುರೋತಶಾಹಿಯನ್ನು ಧಿಕ್ಕರಿಸಿದವರು. ಗದ್ದರವರು ಇದ್ದಕ್ಕಿದ್ದಂತೆ ದೈವಭಕ್ತರಾಗಿದ್ದು ಕೆಲವರ ಅಚ್ಚರಿಗೆ ಕಾರಣವಾದದ್ದು  ಸುಳ್ಳೇನಲ್ಲ.

ದೇವರನ್ನು ಧಿಕ್ಕರಿಸಿದವರೆಲ್ಲ ಜ್ಞಾನಿಗಳಲ್ಲ. ಹಾಗೆ ಒಪ್ಪಿಕೊಂಡವರೂ ಯೋಗಿಗಳಲ್ಲ . ಅಪಾರ ನಾಸ್ತಿಕನೊಬ್ಬನಿಗೆ ತನ್ನ ಜೀವನದಲ್ಲಿ ನಡೆದ ಪವಾಡವೊಂದು ಇದ್ದಕ್ಕಿದ್ದಂತೆ ದೈವ ಭಕ್ತಿ ಮೂಡಲು ಕಾರಣರಾಗಿರಬಹುದು. ಹಾಗೆ ದೈವ ಭಕ್ತನೊಬ್ಬನಿಗೆ ಇದ್ದಕ್ಕಿದ್ದಂತೆ ದೇವರ ಅಸ್ತಿತ್ವ ಅನುಮಾನ ಉಂಟುಮಾಡಿರಲೂಬಹುದು. ಅದು ಆಯಾ ಮನುಷ್ಯನ ಪರಿಸರ, ಪರಿಸ್ಥಿತಿಯ ಮೇಲೆ ನೇರವಾಗಿ ಅವಲಂಬಿಸಿದೆ. ಏಕೆಂದರೆ ಒಬ್ಬಸಾಮಾನ್ಯ ಮನುಷ್ಯ ಈ ಇಬ್ಬಂದಿತನದಲ್ಲಿ ಸದಾ ಜೀಕುತ್ತಿರುತ್ತಾನೆ.

ಮನುಷ್ಯ ಮೂಲತಃ ಒಬ್ಬ ಸಂಕೀರ್ಣ ಜೀವಿ. ಇಲ್ಲಿ ಅವನ ಭಾವನೆಗಳನ್ನು ಗೌರವಿಸುವುದು ಇಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಯಾಗಿರುತ್ತದೆ. ಹಾಗಾಗಿ ಗದ್ದರರವರ ಭಾವನೆಗಳನ್ನು ಗೌರವಿಸುವುದು ಇಲ್ಲಿ ಸೂಕ್ತವೆನಿಸುತ್ತದೆ. ದೇವರನ್ನು ಒಪ್ಪಿಕೊಂಡ ಮಾತ್ರಕ್ಕೆ ಅವರು ಹೋರಾಟ ನಿಂತಂತಾಗುವುದಿಲ್ಲ. ನಮ್ಮ ನಾಡಿನ ಶ್ರೇಷ್ಠ ಚಿಂತಕರಾದ ಲಂಕೇಶ್ ಮತ್ತು  ಅನಂತಮೂರ್ತಿವರು ಎಷ್ಟೇ ಪ್ರಗತಿಪರ ಚಿಂತಕರಾಗಿದ್ದರೂ ಪುರೋತಶಾಹಿಯ ಕಂದಾಚಾರಗಳನ್ನು ವಿರೋಧಿಸುತ್ತಲೇ, ಸಮಾಜದ ಅಭ್ಯುದಯಕ್ಕೆ ದೇವರ ಪಾತ್ರ ದ ಹಿರಿಮೆಯನ್ನು, ಅದರ ಪ್ರಭಾವವನ್ನು ಕುರಿತೂ ಸಾಕಷ್ಟು ಬರೆದಿದ್ದಾರೆ.

ಒಬ್ಬ ಕ್ರಾಂತಿಕಾರಿಯಲ್ಲಿ ಕವಿಯೂ ಇರಬಹುದು, ಒಬ್ಬ ಸಾಮಾನ್ಯ ಮನುಷ್ಯನೂ ಇರಬಹುದು. ಗದ್ದರರಲ್ಲಿಯ ಆ ಮನುಷ್ಯನನ್ನು ನಾವು ಗೌರವಿಸ ಬೇಕಾದದ್ದು ನಮ್ಮ ಕರ್ತವ್ಯ.

ಆದರೆ ಮತ್ತೊಂದು ವಾದವಿದೆ. ಅದೆಂದರೆ ಗದ್ದರ್ ಏನೇ ಮಾಡಲಿ ಅದು ವೈಯಕ್ತಿಕ ನೆಲೆಯಲ್ಲಿ ಮಾಡಿದ್ದರೆ ಅಷ್ಟು ಪ್ರಚಾರ ಆಗ್ತಿರಲಿಲ್ಲ. ಗದ್ದರ್ ಯಾವತ್ತೂ ಜನಸಂಘಟನೆ ಮಾಡುವ ಕಾರ್ಯಕರ್ತನೇ ಆಗಿರಲಿಲ್ಲ. ಅವರೇ ಜೀವಾಳವಾಗಿದ್ದ ಜನ ನಾಟ್ಯ ಮಂಡಳಿಯ ಸಂಘಟನೆ ಕೂಡಾ ಅವರು ಮಾಡಿರಲಿಲ್ಲ. ಆದರೆ ಇಡೀ ಆಂಧ್ರದ ಕೋಟ್ಯಂತರ ಜನತೆ ಮತ್ತು ದೇಶದ ಸಾವಿರಾರು ಜನರು ಗದ್ದರ್ ಹಾಡುಗಳಿಂದ ಅವರ ನಿರೂಪಣೆಯ ಶೈಲಿಯಿಂದ ಪ್ರಭಾವಿಸಿಲ್ಪಟ್ಟಿದ್ದಾರೆ. ಹೀಗಿರುವಾಗ ಒಂದು ಪ್ರಮುಖ ತಂತ್ರಗಾರಿಗೆಕೆ ಹೊರಳುವಾಗ ಅವರು ಗಂಭೀರವಾಗಿ ಆಲೋಚಿಸಬೇಕಿತ್ತು. ಅದರ ಪರಿಣಾಮಗಳ ಬಗ್ಗೆ ಸಮಾನ ಮನಸ್ಕರ ನಡುವೆ ಮಾತಾಡಬೇಕಿತ್ತು. ಈಗ ತಾವು ಮಾಡಿದ್ದಕ್ಕೆಲ್ಲಾ ಆದ್ಯಾತ್ಮಿಕ ಪ್ರಜಾಪ್ರಭುತ್ವದ ಸಮರ್ಥನೆ ನೀಡುತ್ತಿರುವುದು ಮತ್ತಷ್ಟು ಹೇಸಿಗೆ ಕೆಲಸ.ಮಾವೋವಾದಿ ಚಳುವಳಿ ಬಿಟ್ಟು ಕಬೀರ್ ಪಥಿಕರಾದ ಕಲಾವಿದರಿದ್ದಾರೆ.  ಗದ್ದರ್ ಹೇಳುವ ಸ್ಪಿರುಚವಲ್ ಡೆಮಾಕ್ರಸಿ ಅಲ್ಲಿ ಕಾಣಬಹುದು‌ ಆದರೆ ಹೋಗೀ ಹೋಗೀ ಪುರೋಹಿತನಿಗೆ ಮಂಡಿಯೂರಿ ಅದನ್ನು ರಾಜಕೀಯ ಮಾತುಗಳಲ್ಲಿ ಸಮರ್ಥಿಸಿಕೊಳ್ಳುವುದು ಯಾಕಾಗಿ ಅನ್ನುವುದನ್ನು ಆತ ಸ್ಪಷ್ಟಪಡಿಸಲಿ ಅನ್ನುವುದನ್ನು ಗಟ್ಟಿಯಾಗಿ ಮಾಧ್ಯಮಗಳ ಮೂಲಕ ಕೇಳಿದವರಿದ್ದಾರೆ.

ಗದ್ದರ್ ಈಗ ತುಳಿದ ದಾರಿ ತಕ್ಷಣವೇ ಆದದ್ದೇನೂ ಅಲ್ಲ. ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕಾಣುತ್ತಿದ್ದ ಈತ ಸರ್ಕಾರದ ಕಣ್ಣಿಗೆ ಮಾತ್ರ ಅಜ್ಞಾತನಾಗಿದ್ದ ಪರಿಯೇ ಈತನಿಗಿರುವ ಶಕ್ತಿಯನ್ನು ತಿಳಿಸುತ್ತದೆ. ಇವನ ಮಕ್ಕಳು ವೈದ್ಯಕೀಯ ಓದಿ ನೆಮ್ಮದಿಯ ಜೀವನ ಕಟ್ಟಿಕೊಂಡರೆ ಇವನ ಅನುಯಾಯಿಗಳ ಅದೇ ವಯಸ್ಸಿನ ಮಕ್ಕಳು ಕ್ರಾಂತಿಯ ಅಮಲಿನಲ್ಲಿ ಜೀವ ಕಳೆದುಕೊಳ್ಳುತ್ತಾರೆ. ಅಮಾಯಕರು ಜೈಲು ಸೇರಿದರೆ ನಾಯಕರಿಗೆ ಸರ್ಕಾರದ ಆತಿಥ್ಯ ಸಿಕ್ಕುತ್ತದೆ. ಇಂಥ ಒಳಸತ್ಯದ ಅರಿವು ಸಾಮಾನ್ಯರಿಗೂ ದಕ್ಕಿದ್ದೇ ಮಾಧ್ಯಮಗಳ ಮೂಲಕ. ಒಂದಾನೊಂದು ಕಾಲದ ಹೋರಾಟಗಳನ್ನೇ ಇನ್ನೂ ಶಾಶ್ವತವೆಂದು ನಂಬಿರುವ ಮತ್ತು ನಾಯಕತ್ವವನ್ನು ತನ್ನ ಕಪಿಮುಷ್ಟಿಯಲ್ಲೇ ಇಟ್ಟುಕೊಂಡಿರುವ ಮತ್ತು ಜನರೊಂದಿಗೆಂದೂ ಬೆರೆಯದೇ ತಮ್ಮ ಸಮೂಹ ಕಂಡದ್ದನ್ನಷ್ಟೇ ಸತ್ಯವೆಂದು ಬಗೆಯುವ ಎಡಪಂಥೀಯರೂ ಕಾಲಸರಿದಂತೆ ಬದಲಾಗುತ್ತಿದ್ದಾರೆ. ಪ್ರಾಯಷಃ ಕಾರ್ಲ್ ಮಾರ್ಕ್ಸ್ ಕೂಡ ಈಗ ಇದ್ದಿದ್ದರೆ ಬದಲಾಗುತ್ತಿದ್ದನೇನೋ? ಆದರೆ ನಮ್ಮ ಎಡರಂಗದ ಗೆಳೆಯರು ಮಾತ್ರ ತಾವು ಭ್ರಮಿಸಿದ್ದನ್ನಷ್ಟೇ ಜಗತ್ತೆಂದು ತಾವು ಪ್ರತಿನಿಧಿಸಿದ್ದಷ್ಟನ್ನು ಮಾತ್ರ ಪ್ರಜಾಪ್ರಭುತ್ವವೆಂದೂ ಬಿಂಬಿಸುತ್ತಿರುವುದಷ್ಟೇ ಈ ಹೊತ್ತಿನ ಸತ್ಯವಾಗಿದೆ!
ಮತ್ತು ಆ ಕಾರಣಕ್ಕೇ ನಿಜಕ್ಕೂ ಜನಪರ ನಿಲುವಿನ ಎಡವಾದವನ್ನು ಬರಿದೇ ಬಲಮಾರ್ಗದ ಎದುರಾಳಿಯನ್ನಾಗಿಸುತ್ತಿದ್ದಾರೆ.

(ಆಧಾರ: ವಿವಿಧ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳು)






Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....