ಶುಕ್ರವಾರ, ಏಪ್ರಿಲ್ 14, 2017

ರಾಮನ ನೆಲದಲ್ಲಿ......ರಾಮನ ನೆವದಲ್ಲಿ....

ಶ್ರೀರಾಮನೆಂಬ ಪುರಾಣ ಪಾತ್ರ ಈ ನೆಲದಲ್ಲಿ ಬರಿಯ ಪಾತ್ರವಲ್ಲ. ಬದಲಿಗೆ ರಾಮನೆಂಬುದು ಒಂದು ಆದರ್ಶ, ಅದೊಂದು ಕನಸು. ರಾಮನೆಂಬುದು ಸಂತೋಷ ಸಂಭ್ರಮ ಮತ್ತು ಸಮ್ಯಕ್‌ ಆಗಿ ಒದಗುವ ತಿಳುವಳಿಕೆ ಎಂದೇ ಈ ನೆಲದ ಜನ ನಂಬಿದ್ದಾರೆ. ಹಾಗಾಗಿಯೇ ರಾಮಚಂದ್ರ ಪುರುಷೋತ್ತಮ, ವಾಂಛೆಗಳನ್ನಿರಿಸಿಕೊಳ್ಳದ ದಾಶರಥಿ. ಆದರೆ ರಾಜಕಾರಣದ ದಾಳ ಇಂಥ ರಾಮನ ಮೂರುತಿಗೆ ಪೆಟ್ಟು ಕೊಟ್ಟು ಈ ನೆಲದ ಬಹುತೇಕರ ಭಾವನೆಗಳೊಂದಿಗೆ ಮಸಲತ್ತು ನಡೆಸಿ ಅಂದುಕೊಂಡ ರಾಮನಿಗಿಂತ ಭಿನ್ನವಾದ ಅನ್ಯ ರಾಮನನ್ನು ಅಯೋಧ್ಯೆಯ ರಾಜಕಾರಣದಲ್ಲಿ ಎಳೆದು ತರುವುದರ ಮೂಲಕ ಬಹುತೇಕ ರಾಜಕೀಯ ಪಕ್ಷಗಳು ಸಂಸ್ಕೃತಿಗೆ ಸನ್ನಿಪಾತ ಹಿಡಿಸಿವೆ.‌ಬಹುತೇಕ ರಾಜಕಾರಣಿಗಳಿಗೆ ಅಯೋಧ್ಯೆಯ ರಾಮ ಮಂದಿರ ತಮ್ಮ ಮಾತಿಗೊಂದು ಕಾರಣವೇ ವಿನಾ ಅವರಾರಿಗೂ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಆದರ್ಶಗಳಾಗಲೀ ಅವನ ರಾಜ್ಯದಲ್ಲಿ ಇದ್ದಿತೆಂದು ನಂಬಲಾಗಿರುವ ಸಮೃದ್ಧಿಯಾಗಲೀ ಬೇಕಿಲ್ಲ.
ಇನ್ನು ಭಾಜಪವಂತೂ ತನ್ನ ಪ್ರಣಾಳಿಕೆಯಲ್ಲಿ  'ಸಂವಿಧಾನದ ಸಾಧ್ಯತೆಗಳನ್ನು ಬಳಸಿಕೊಂಡು' ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದಾಗಿ ಘೋಷಿಸಿತ್ತು. ಈಗ ಮೂಲೆಗೆ ತಳ್ಳಲ್ಪಟ್ಟಿರುವ  ಅದೇ ಪಕ್ಷದ ಆಡ್ವಾಣಿಯವರ ಹಳೆಯ ಕನಸು ಮೋದಿ ಮತ್ತು ಷಾರವರ ನಿದ್ರೆಯಲ್ಲೂ ಪ್ರವೇಶ ಪಡೆದ  ಇದೇ ಸಮಯಕ್ಕೆ ಸರಿಯಾಗಿ ಉತ್ತರ ಪ್ರದೇಶದಲ್ಲಿ ಕೇಸರಿ ಸರ್ಕಾರವೇ ಸ್ಥಾಪನೆಯಾಗಿ  ಭೂತವು ಹೊಸ ರೂಪ ಧರಿಸಿ ಸದ್ಯದ  ವರ್ತಮಾನವಾಗಿರುವುದು ರಾಜಕೀಯ ವಿಶ್ಲೇಷಕರಿಗೆ ಮತ್ತಷ್ಟು ಅವಕಾಶಗಳನ್ನೂ ಚರ್ಚೆಯ ಹೆಸರಲ್ಲಿ ನಡೆಯುವ ಹರಟೆಗಳಿಗೂ ವಿಪುಲ ಅವಕಾಶ ಒದಗಿಸಿದೆ.

1956ರಲ್ಲೇ ಹಿರಿಯ ಸಮಾಜವಾದಿ ಮುತ್ಸದ್ಧಿ ರಾಮಮನೋಹರ ಲೋಹಿಯಾ 'ರಾಮ, ಕೃಷ್ಣ, ಶಿವ' ಎಂಬ ಲೇಖನ ಪ್ರಕಟಿಸಿದ್ದರು. ತುಂಬ ಪ್ರಸಿದ್ಧವಾದ ಈ ಲೇಖನದಲ್ಲಿ ಅವರು ಪ್ರತಿಪಾದಿಸಿದಂತೆ ಶ್ರೀರಾಮ 'ಘನತೆಯ ಪ್ರತಿರೂಪ'. ರಾಮ, ಶಿವ ಮತ್ತು ಕೃಷ್ಣ ಈ  ಮೂವರೂ ಕಾಲ್ಪನಿಕ ವ್ಯಕ್ತಿಗಳಿದ್ದಿರಬಹುದು. ಆದರೆ, ಸಮುದಾಯವೊಂದರ ಆಸೆ ಕನಸು ಕಲ್ಪನೆಗಳು ಆದರ್ಶ ರೂಪ ಪಡೆದು ಪುರಾಣಗಳ ಪಾತ್ರವಾಗಿರುವ ಸಾಧ್ಯತೆ ಇಲ್ಲಿ ಪ್ರಶ್ನಾತೀತ. ರಾಮ, ಶಿವ, ಕೃಷ್ಣರು ಕ್ರಮವಾಗಿ ಕ್ಷತ್ರಿಯ, ಶೂದ್ರ, ವೈಶ್ಯ ತತ್ವಗಳ ರೂಪಕಗಳು. ಇವರ ಮೈಬಣ್ಣವೂ ನಮ್ಮ ಜಾತಿ ವರ್ಗಗಳ ವೈವಿಧ್ಯವನ್ನು ಬಿಂಬಿಸುವಂತೆಯೇ ಇದೆಯೆಂದು ಬಣ್ಣಿಸಿದ್ದ ಲೋಹಿಯಾರ ಈ ಲೇಖನವನ್ನು ಸಮಾಜ ಚಿಂತನೆಯೊಂದರ 'ಕ್ಲಾಸಿಕ್‌' ಎಂಬಂತೆ ಪರಿಗಣಿಸಲಾಗಿದೆ.

ಭಾರತದ ರಾಜಕಾರಣದಲ್ಲಿ ರಾಮನನ್ನು ಮೊದಲಿಗೆ ಹೀಗೆ ತಂದ ಲೋಹಿಯ ಅವರಿಗಿಂತಲೂ ಹೆಚ್ಚು ಜನಪ್ರಿಯವಾಗಿರುವುದು ಗಾಂಧಿ ಕಂಡುಕೊಂಡಿದ್ದ  ಶ್ರೀರಾಮ.
ಸಮಾಜವಾದೀ ಲೋಹಿಯಾಗಿಂತಲೂ ಹೆಚ್ಚು ಶಕ್ತನಾದ ಮತ್ತು ನೆನೆದರೆ ಸಹಜವಾಗಿ  ಒದಗುವ ರಾಮನನ್ನು ಹೋರಾಟದ ಹಾದಿಗೆ ಹಚ್ಚಿದ ಹೆಗ್ಗಳಿಕೆ ನಮ್ಮ ರಾಷ್ಟ್ರಪಿತನಿಗೇ ಸಲ್ಲುತ್ತದೆ. ಅವರು 'ರಘುಪತಿ ರಾಘವ ರಾಜಾರಾಮ್‌' ಎಂಬ ಭಜನೆ ಗೊತ್ತು ಮಾಡದಿದ್ದಿದ್ದರೆ ಸ್ವಾತಂತ್ರ್ಯ ಹೋರಾಟಕ್ಕೆ ಅಷ್ಟೊಂದು ಅಲೌಕಿಕ ಆಯಾಮ ಸೇರಿಕೊಳ್ಳುತ್ತಿದ್ದುದಾದರೂ ಹೇಗೆ? ಸ್ವಾತಂತ್ರ್ಯ ಹೋರಾಟವೆಂಬುದು ಬರೀ ಐಹಿಕವಲ್ಲ, ದೈವಿಕ ಮತ್ತು ಆಧ್ಯಾತ್ಮಿಕ ಅರ್ಥಗಳನ್ನುಳ್ಳದ್ದು ಎಂದು ಪ್ರತಿಪಾದಿಸಿ ಇಡೀ ಜಗತ್ತಿಗೆ ತಿಳಿಸಿದ ಆ ಪುಣ್ಯಾತ್ಮನ ರಾಮನೂ ಈಗ ಗಲಿಬಿಲಿಗೆ ಬಿದ್ದಿದ್ದಾನೆ.

ಹೀಗೆ ತಣ್ಣಗಿದ್ದ ರಾಮನನ್ನು, ಕಾಲು ಶತಮಾನದ ಕೆಳಗೆ ಕೈಗೆತ್ತಿಕೊಂಡ ಬಿಜೆಪಿ, ಹಿಡಿದರೆ ಸುಡುವ ಬೆಂಕಿಯ ಉಂಡೆಯಾಗುವಂತೆ ಮಾಡಿದ್ದು ಈಗ ಇತಿಹಾಸ.  ಲಾಲ್‌ಕೃಷ್ಣ ಆಡ್ವಾಣಿ ದೇಶಾದ್ಯಂತ ರಥಯಾತ್ರೆ ನಡೆಸಿ, ಪ್ರತಿ ಊರಲ್ಲೂ ಒಂದೊಂದು ಅಯೋಧ್ಯೆ ಸೃಷ್ಟಿಸಿ ಎಲ್ಲೆಲ್ಲೂ ಇಟ್ಟಿಗೆಗಳನ್ನು ಪೇರಿಸಿದ್ದು ಮರೆಯಲಾಗದ ಗಾಯದ ಕಲೆ.‌ 1992ರ ಡಿಸೆಂಬರ್‌ ಆರನೇ ತಾರೀಖು ನಡೆದ ಘಟನೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ.

'ಬಾಬರಿ ಮಸೀದಿ ಧ್ವಂಸ' ಎಂಬುದು ಕಾಂಗ್ರೆಸ್ ಪಾಲಿಗೆ ಅಸ್ತ್ರ. ಅದು ಆಗಾಗ ಅದನ್ನು ಬಿಜೆಪಿ ಮೇಲೆ ಪ್ರಯೋಗಿಸುತ್ತಾ ಬಂದಿದೆ. ಈ ಅಸ್ತ್ರಪ್ರಯೋಗಕ್ಕೆ ಅದರದೇ ಆದ ಅವಾರ್ಡುಗಳೂ, ರಿವಾರ್ಡುಗಳೂ ಇವೆ. 1984ರ ಸಿಖ್ ವಿರೋಧಿ ಹತ್ಯಾಕಾಂಡವನ್ನು ಬಿಜೆಪಿ ಆಗಾಗ ಕಾಂಗ್ರೆಸ್ ಮೇಲೆ ಬೀಸುತ್ತಾ ಇರುತ್ತದಲ್ಲ, ಹಾಗೇ ಇದೂ.

ಹೀಗೆ ಶ್ರೀರಾಮನನ್ನು ರಾಜಕಾರಣಕ್ಕೆ ಬಳಸುತ್ತಿರುವವರು ಬಿಜೆಪಿ, ಕಾಂಗ್ರೆಸ್‌ನವರು ಮಾತ್ರವೇನೂ ಅಲ್ಲ. ಕೆಲ ವರ್ಷಗಳ ಹಿಂದೆ ಡಿಎಂಕೆಯ ಪರಮನಾಯಕ ಕರುಣಾನಿಧಿ, 'ಶ್ರೀರಾಮ ಕಾಲ್ಪನಿಕ ವ್ಯಕ್ತಿ' ಎಂಬ ಹೇಳಿಕೆ ನೀಡಿದ್ದರು. ತಾನೂ ಸತ್ತ ಮೇಲೆ ತನ್ನನ್ನೂ ಒಂದು ಮೂರ್ತಿಯಾಗಿಸುತ್ತಾರೆಂದು ಅವರಿಗೆ ಗೊತ್ತಿಲ್ಲವೆಂದಲ್ಲ. ಆದರೆ ಅವರ ಗುರು ಪೆರಿಯಾರ್ ರಾಮಸ್ವಾಮಿ ಅವರಿಗೆ ಹೇಳಿಕೊಟ್ಟದ್ದು ಹಾಗೆ. ಅವರ ದ್ರಾವಿಡ ಚಿಂತನೆಯಲ್ಲಿ ರಾಮನಿಗೆ ಜಾಗವಿಲ್ಲ. ಹಾಗೆಂದು ಅವರು ಸುಮ್ಮನಿರುವುದಿಲ್ಲ, ರಾಮನನ್ನು ನಂಬಿದವರನ್ನು ಆಗಾಗ ಕೆಣಕುತ್ತಾ ಮಜಾ ತೆಗೆದುಕೊಳ್ಳುವುದು ಅವರ ರೀತಿ.

ತುಸು ನೆನಪನ್ನು ಕೆದಕುತ್ತ ಹೋದರೆ, ನಮ್ಮ ದೇಶದ ರಾಜಕಾರಣದಲ್ಲಿ ಎಲ್ಲ ಪಕ್ಷಗಳಲ್ಲೂ ಎಷ್ಟೊಂದು 'ರಾಮ'ರುಗಳಿದ್ದಾರೆ. ರಾಜಾರಾಮ್ ಮೋಹನರಾಯ್, ಕಾನ್ಷಿರಾಮ್, ಪೆರಿಯಾರ್ ರಾಮಸ್ವಾಮಿ, ಎಂ.ಜಿ.ರಾಮಚಂದ್ರನ್, ರಾಮಮನೋಹರ ಲೋಹಿಯಾ, ರಾಮಕೃಷ್ಣ ಹೆಗಡೆ, ಎನ್.ಟಿ.ರಾಮರಾವ್, ರಾಮ್‌ವಿಲಾಸ್ ಪಾಸ್ವಾನ್, ಸೀತಾರಾಂ ಯೆಚೂರಿ, ಶ್ರೀರಾಮುಲು, ರಾಮದಾಸ್! ರಾಮಾಯಣವನ್ನು ರೂಪಕ ಸ್ಮೃತಿಯಾಗಿ ಪಡೆದ ಈ ದೇಶದಲ್ಲಿ ಹಾಗಾಗಬೇಕಾದ್ದು ನ್ಯಾಯವೇ!

ರಾಮನನ್ನು ಕುರಿತ ಯಾರದೇ ಯಾವುದೇ ಲೇಖನ ನಮ್ಮ ಕವಿ ಗೋಪಾಲಕೃಷ್ಣ ಅಡಿಗರ 'ಶ್ರೀರಾಮ ನವಮಿಯ ದಿವಸ' ಕವಿತೆಯ ಪ್ರಸ್ತಾಪವಿಲ್ಲದೆ ಪೂರ್ತಿಯಾಗಲಾ(ಬಾ)ರದು. ಅವರು ಚಿತ್ರಿಸಿದ  ಶ್ರೀರಾಮ, 'ಹುತ್ತಗಟ್ಟಿದ ಚಿತ್ತ ಕೆತ್ತಿದ ಪುರುಷೋತ್ತಮನ ರೂಪರೇಖೆ'. ಆತ ಕ್ಷಣದಿಂದ ಕ್ಷಣಕ್ಕೆ, ದಿನದಿಂದ ದಿನಕ್ಕೆ ವಿಕಾಸವಾಗುತ್ತ ಹೋಗುವ ಚೇತನ. ಅಲ್ಲಿ 'ಅಂತರಂಗದ ಸುರುಳಿ ಬಿಚ್ಚಿ ಸರ್ಚ್‌ಲೈಟಲ್ಲಿ ಹೆದ್ದಾರಿ ಹಾಸಿದ್ದ ರಾಮಚರಿತ'ವಿದೆ. ಅಂದರೆ, ಪ್ರತಿಯೊಬ್ಬನ ರಾಮನ ಮೂರ್ತಿಯೂ ಅವನವನ ಅಂತರಂಗದಲ್ಲೇ ರೂಪುಗೊಳ್ಳಬೇಕಾದದ್ದು ಎಂಬರ್ಥ.

ಇದರ ಜತೆಗೇ ನಾವು ನಮ್ಮ ವರ್ತಮಾನದ ಇನ್ನೊಬ್ಬ ಮುಖ್ಯ ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರು ಕಂಡಿರಿಸಿದ 'ಶ್ರೀಸಂಸಾರಿ' ರಾಮನನ್ನೂ ನೋಡಬೇಕು. 'ಶ್ರೀರಾಮನು ತಾನೊಬ್ಬನೆ ಎಲ್ಲೂ ಪೂಜೆಗೊಳ್ಳುವುದು ಕಂಡಿಲ್ಲ...' ಅವರ ರಾಮ ಶ್ರೀ ಸಂಸಾರಿ. ರಾಮನ ಫ್ಯಾಮಿಲಿಯ ಗ್ರೂಪ್ ಫೋಟೋದಲ್ಲಿ ಸಹೋದರರಿಗೆ, ಹೆಂಡತಿ ಮಕ್ಕಳಿಗೆ, ಆಂಜನೇಯನಿಗೆ, ಕೊನೆಗೆ ಅಳಿಲಿಗೂ ಆತನ ಹೆಗಲಲ್ಲಿ ಜಾಗವಿದೆ.

ಆದರೆ ಬಿಜೆಪಿ, ಡಿಎಂಕೆ, ಕಾಂಗ್ರೆಸ್‌ಗಳು ಪ್ರತಿಪಾದಿಸುವ ರಾಮ, ಅಡಿಗರ ರಾಮನಲ್ಲ. ಆತ ಎಚ್‌ಎಸ್‌ವಿಯವರ ರಾಮನೂ ಅಲ್ಲ. ಆತ ಬಿಲ್ಲು ಬಾಣಗಳನ್ನು ಕೈಯಲ್ಲಿ ಹಿಡಿದು ಶತ್ರುಗಳನ್ನು ಸಂಹರಿಸಲು ಸಿದ್ಧನಾಗಿ ನಿಂತ ಕೋದಂಡರಾಮ. ಆತನ ಪಕ್ಕದಲ್ಲಿ ಸೀತೆಗಾದರೂ ಜಾಗವಿದೆಯೋ ಇಲ್ಲವೋ, ನಮಗೆ ತಿಳಿಯದು. ಮೋದಿಯವರ ಕನಸು ನನಸಾಗಿ, ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಗೊಂಡರೆ, ಅದರ ಗರ್ಭಗುಡಿಯಲ್ಲಿ ಅಳಿಲಿಗೂ ಒಂದು ಜಾಗವಿರಲಿ ಎಂದಷ್ಟೇ ನಾವು ಆಶಿಸಬಹುದು.

ರಾಮಾಯಣದ ಶ್ರೀರಾಮ, ಭಾಗವತದ ಕೃಷ್ಣ, ಪುರಾಣದ ಶಿವ ಇವರೆಲ್ಲ ಸುಂದರ ರೂಪಕ, ಕಾವ್ಯಾತ್ಮಕ ಪ್ರತಿಮೆಗಳು. ಇವು ಪ್ರತಿಯೊಬ್ಬ ಓದುಗನ ಅಂತರಾಳದಲ್ಲಿ ಅಧ್ಯಯನದಿಂದ ಮೂಡಬೇಕಾದ ಆದಿ ಪ್ರತಿಮೆಗಳು. ಅವುಗಳನ್ನು ಭಿನ್ನ ಮೂರ್ತಿಗಳನ್ನಾಗಿಸುವ ಕೆಲಸವನ್ನು  ರಾಜಕಾರಣಿಗಳಿಗೆ ಕೊಟ್ಟ ನಾವು ಈಗ ಮಾತ್ರ ಪರಿತಪಿಸುವ ಮಾತಾಡುತ್ತಿದ್ದೇವೆ.‌

ಇದು ಇಲ್ಲಿಗೇ ನಿಲ್ಲಲಾರದು ಎಂದು ನಮಗೆ ಗೊತ್ತು. ಈ ಬೃಹತ್ ರಾಮ ರಥದ ಗಾಲಿಗಳು ನಿಲ್ಲುವಂಥವಲ್ಲ, ನಮ್ಮನ್ನೆಲ್ಲ ನುಗ್ಗುನುರಿ ಮಾಡದೆ ಹೋಗುವುದಿಲ್ಲ ಎಂದೂ ನಮಗೆ ಗೊತ್ತು. ಆದರೆ ಅದನ್ನು ನಿಲ್ಲಿಸಲಾರೆವು. ಯಾಕೆಂದರೆ, ಜಾತಿ ಧರ್ಮ ವರ್ಗಗಳಿಂದ ವಿಚ್ಛಿದ್ರವಾಗಿರುವ ಈ ದೇಶದಲ್ಲಿ, ಅದನ್ನು ನಿಲ್ಲಿಸಲು ಬೇಕಾದ ಬ್ರೇಕುಗಳೇ ಇಲ್ಲ.

ಮತ್ತೆ ಅಡಿಗರ ಪದ್ಯಕ್ಕೆ ಬರುವುದಾದರೆ:

'ಅಥವಾ ಚಕ್ರಾರಪಂಕ್ತಿ: ಚಕಮಕಿ ಕಲ್ಲನುಜ್ಜುತ್ತ
ಕೂತುಕೊಂಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ'.-

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....