1913 ರಲ್ಲಿ “ಬ್ಯಾಂಕ್ ಆಫ್ ಮೈಸೂರು ಲಿಮಿಟೆಡ್” ಎಂಬ ಹೆಸರಿನಿಂದ ಪ್ರಾರಂಭವಾದ ಬ್ಯಾಂಕಿನ ಯಾತ್ರೆಯು ಕಾಲದಿಂದ ಕಾಲಕ್ಕೆ ಅಭಿವೃದ್ಧಿಯನ್ನು ಹೊಂದುತ್ತಾ ಶತಮಾನ ಪೂರೈಸಿತ್ತು. ಬ್ಯಾಂಕಿಗೆ ಮೂಲ ಬಂಡವಾಳವಾಗಿ ರೂ.20 ಲಕ್ಷ ರುಪಾಯಿಗಳನ್ನು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ನೀಡಿದ್ದರು. ಸೆಪ್ಟೆಂಬರ್ 10, 1959 ರಂದು “ಸ್ಟೇಟ್ ಬ್ಯಾಂಕ್ ಆಫ್ ಮೈಸೂರು” ಎಂದು ನಾಮಕರಣಗೊಂಡು “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ” ದ ಸಹವರ್ತಿ ಬ್ಯಾಂಕ್ ಆಗಿ ಕಾರ್ಯನಿರ್ವಹಣೆ ಪ್ರಾರಂಭಿಸಿತು. 2013 ರಲ್ಲಿ ಶತಮಾನೋತ್ಸವ ವರ್ಷ ಆಚರಿಸಿಕೊಂಡಿತ್ತು.
ಏಪ್ರಿಲ್ 1, 2017 ನೇ ತಾರೀಖಿನಿಂದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರು, ಸ್ಟೇಟ್ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಈ ಐದು ಬ್ಯಾಂಕುಗಳು ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ವಿಲೀನಗೊಳ್ಳಲಿವೆ.
ಬ್ಯಾಂಕುಗಳ ಈ ವಿಲೀನ ಪ್ರಕ್ರಿಯೆಯಿಂದ ಈ ಮೇಲಿನ ಐದು ಬ್ಯಾಂಕಿನಲ್ಲಿ ವ್ಯವಹರಿಸುತ್ತಿರುವ ಗ್ರಾಹಕರುಗಳು ಇನ್ನು ಮುಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾಗಲಿದ್ದಾರೆ. ಏಪ್ರಿಲ್ 24 ರಿಂದ ಬ್ಯಾಂಕಿನ ದಾಖಲೆಗಳ ವಿಲೀನ ಪ್ರಕ್ರಿಯೆ (Data Merger) ನಡೆಯುವುದರಿಂದ ಈ ಗ್ರಾಹಕರುಗಳ ಖಾತೆ ಸಂಖ್ಯೆ ಬದಲಾಗಬಹುದಾದ ಸಾಧ್ಯತೆಗಳಿವೆ, ಜೊತೆಗೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳು ಹಾಗೂ ಬ್ಯಾಂಕ್ ಚೆಕ್ ಬುಕ್ಕುಗಳೂ ಬದಲಾಗಲಿವೆ. ಆನ್ ಲೈನ್ ನಲ್ಲಿ ವ್ಯವಹರಿಸುವವರು ಸಹ ತಮ್ಮ ಲಾಗಿನ್ ಐಡಿ ಗಳನ್ನು ಹೊಸದಾಗಿ ಪಡೆಯಬೇಕಾಗಬಹುದು. ಇವುಗಳಿಂದಾಗಿ ಗ್ರಾಹಕರು ಅಲ್ಪಕಾಲದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಅರಸೀಕೆರೆ ಪಟ್ಟಣದಲ್ಲಿ ಹಾಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮೂರು ಶಾಖೆಯನ್ನು ಹೊಂದಿದ್ದು, ಬಿಹೆಚ್ ರಸ್ತೆಯಲ್ಲಿ ಮುಖ್ಯ ಶಾಖೆ, ಗಣಪತಿ ಪೆಂಡಾಲ್ ರಸ್ತೆಯಲ್ಲಿರುವ ಬಜಾರ್ ಶಾಖೆ ಹಾಗೂ ತಾಲ್ಲೂಕು ಕಛೇರಿಯ ಪಕ್ಕದಲ್ಲಿ ಒಂದು ಶಾಖೆಯನ್ನು ಹೊಂದಿದೆ. ಈಗಿನ ವಿಲೀನ ಪ್ರಕ್ರಿಯೆಯಿಂದಾಗಿ ಅರಸೀಕೆರೆ ಪಟ್ಟಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಒಟ್ಟು ನಾಲ್ಕು ಶಾಖೆಗಳಾಗಲಿದ್ದು, ಇವುಗಳಲ್ಲಿ ಒಂದೆರಡು ಶಾಖೆ ಕಡಿಮೆ ಮಾಡುವ ಸಾಧ್ಯತೆಗಳಿವೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಗಳು ಪ್ರಕಟವಾಗಿಲ್ಲ.
ಕನ್ನಡ ನಾಡಿನ ಜನರೊಂದಿಗೆ ಶತಮಾನಗಳಷ್ಟು ಕಾಲ ಸಂಪರ್ಕ ಹೊಂದಿದ್ದ “ಸ್ಟೇಟ್ ಬ್ಯಾಂಕ್ ಆಫ್ ಮೈಸೂರು” ಇನ್ನು ಮುಂದೆ ನೆನಪು ಮಾತ್ರ..
(ಮಾಹಿತಿಗಳು : ವಿಕಿಪೀಡಿಯಾ ಹಾಗೂ ಇಂಟರ್ ನೆಟ್)
ಅರಸೀಕೆರೆ ಪಟ್ಟಣದ ಬಿಹೆಚ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯಶಾಖೆಯ ನಾಮಫಲಕವನ್ನು ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬದಲಾಯಿಸಲಾಯಿತು |
ಅರಸೀಕೆರೆ ಪಟ್ಟಣದ ಬಿಹೆಚ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯಶಾಖೆಯ ನಾಮಫಲಕವನ್ನು ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬದಲಾಯಿಸಲಾಯಿತು |
1 ಕಾಮೆಂಟ್(ಗಳು) :
ಇಂದು ಮನಸ್ಸಿಗೆ ಯಾಕೋ ಬೇಸರವಾಯಿತು ಯಾಕೆಂದರೆ ನಾನು 8ನೇ ತರಗತಿ ಓದುತ್ತಿದ್ದಾಗ ಕೊಣನೂರಿನ
ಎಸ್ ಬಿ ಎಮ್ ನಲ್ಲಿ ವಿದ್ಯಾರ್ಥಿ ಖಾತೆ ಪ್ರಾರಂಭಿಸಿ ಅದೇ ಖಾತೆ ನೆನ್ನೆಯವರಿಗೆ ಚಾಲ್ತಿಯಲ್ಲಿತ್ತು ಇಂದಿನಿಂದ
ಎಸ್ ಬಿ ಐ ಗೆ ವರ್ಗಾವಣೆ ಆಗಿರುವುದು ಯಾಕೋ ಕಸಿವಿಸಿ ಏನ್ಮಾಡೋಕ್ಕಾಗುತ್ತೆ ಪರಿವರ್ತನೆ ಜಗದ ನಿಯಮ.
ಕಾಮೆಂಟ್ ಪೋಸ್ಟ್ ಮಾಡಿ