ಭಾನುವಾರ, ಏಪ್ರಿಲ್ 9, 2017

ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ದಿವ್ಯ ರಥೋತ್ಸವ

ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಯಾದಾಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ದಿವ್ಯ ರಥೋತ್ಸವವು ದಿನಾಂಕ 12-04-2017ನೇ ಬುಧವಾರದಂದು ಬೆಳಿಗ್ಗೆ 7 ರಿಂದ 8 ಗಂಟೆಯೊಳಗೆ ಸಲ್ಲುವ ಶುಭ ಲಗ್ನದಲ್ಲಿ  ಜರುಗಲಿದೆ.


ಸುಕ್ಷೇತ್ರದ ಪರಿಚಯ : 
ಅರಸೀಕೆರೆಯಿಂದ 6 ಕಿ.ಮೀ.ದೂರವಿರುವ ಯಾದಾಪುರ ಗ್ರಾಮದ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ಕ್ಷೇತ್ರವು ನಾಡಿಗೆ ಪ್ರಸಿದ್ಧಿ ಪಡೆದ ಪುಣ್ಯಕ್ಷೇತ್ರವಾಗಿದೆ. ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರ ಬೆಟ್ಟದ ಮೇಲೆ ತಮ್ಮ 2 ಪಾದಗಳನ್ನು ಮಾತ್ರ ಮೂಡಿಸಿ ಕೆಳಗೆ ಯಾದಾಪುರ ಊರ ಮಧ್ಯಭಾಗದಲ್ಲಿ ಮಲಗಿರುವ ಮುದ್ದು ನಂದಿಯ ರೂಪದಲ್ಲಿ ಉದ್ಭವಿಸಿದ್ದಾರೆ.

ಹಿಂದೆ ಈ ಪ್ರಾಂತ್ಯ ಗೋಂಡಾರಣ್ಯವಾಗಿದ್ದು ಸಿದ್ದರು ಅನೇಕ ವರ್ಷ ತಪಸ್ಸು ಮಾಡಿ ಸಿದ್ಧಿಯಾದ ಸ್ಥಳವೇ ಯಾದಾಪುರವಾಯಿತೆಂದು ಪ್ರಚಲಿತದಲ್ಲಿದೆ. ಹಿಂದೆ ಎತ್ತರವಾದ ಬೆಟ್ಟದಲ್ಲಿ  ಶ್ರೀಯವರ ಸನ್ನಿಧಾನದ ಪಕ್ಕದಲ್ಲಿ ಜೇನುಗೂಡು ಸದಾಕಾಲ ಕಟ್ಟಿರುವುದರಿಂದ ಈ ಕ್ಷೇತ್ರಕ್ಕೆ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರ ಕ್ಷೇತ್ರವೆಂದು ಹೆಸರು ಬಂದಿದೆ.  ಶ್ರೀ ಜೇನುಕಲ್ ಗುರು ಕೃಪೆಯಿಂದ ಹಾಗೂ ಭಕ್ತರ ಸಮೂಹದಿಂದ ಈ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡಿರುತ್ತಾರೆ.

ಈ ಭಾಗದ ಭಕ್ತರು ಯಾವುದೇ ಕಾರ್ಯ ಮಾಡುವ ಮುನ್ನ ಶ್ರೀಯವರ ಸನ್ನಿಧಾನಕ್ಕೆ ಬಂದು ಶ್ರೀಯವರ ಅಪ್ಪಣೆ ತೆಗೆದು ಕಾರ್ಯ ಪ್ರಾರಂಭಿಸುವುದು ವಾಡಿಕೆಯಾಗಿದೆ ಹಾಗೂ ಈ ಕ್ಷೇತ್ರಕ್ಕೆ ಬರುವ ಭಕ್ತರು ಸಹ ಅಪವಿತ್ರವಾಗಿ ಬಂದರೆ ಜೇನುಗೂಡುಗಳು ಎದ್ದು ತೊಂದರೆ ಕೊಡುತ್ತವೆ ಎಂಬ ನಂಬಿಕೆ ಇದೆ ಹಾಗೂ 3 ಹುಣ್ಣಿಮೆಗೆ ಈ ಕ್ಷೇತ್ರಕ್ಕೆ ಬಂದು ಹರಕೆ ಮಾಡಿಕೊಂಡು ಹೋದರೆ ಅವರ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ. ಹೀಗಾಗಿ ಪ್ರತಿ ಹುಣ್ಣಿಮೆ ಹಾಗೂ ಚೈತ್ರಮಾಸದಲ್ಲಿ ನಡೆಯುವ ಗುರುವಿನ ವೈಭವದ ಜಾತ್ರೆಗೆ ಅಸಂಖ್ಯ ಭಕ್ತಸಮೂಹವೇ ಸೇರುತ್ತದೆ.  

ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರ ಉತ್ಸವಮೂರ್ತಿಗೆ ಪ್ರತಿವರ್ಷವೂ ಸಹ ಹಾರನಹಳ್ಳಿ ಗ್ರಾಮದ ಹೆಚ್.ಕೆ.ಮಾದಪ್ಪನವರ ಕುಟುಂಬವರ್ಗ ಹಾಗೂ ಗ್ರಾಮಸ್ಥರು ಶ್ರೀಯವರಿಗೆ ಕಂಕಣಧಾರಣೆ, ಪ್ರಥಮಶಾಸ್ತ್ರ ಮಹಾರುದ್ರಾಭಿಷೇಕ ಸಮಯದಲ್ಲಿ ಕೋಡಿಮಠ ಶ್ರೀಗಳ ಉಪಸ್ಥಿಯಲ್ಲಿ ಪೂಜೆ ಅನಾಧಿಕಾಲದಿಂದಲೂ ನೆಡೆದು ಕೊಂಡು ಬಂದಿದೆ . ಶ್ರೀಯವರ ಮೂಲ ಸನ್ನಿಧಾನಿದಲ್ಲಿ ಯಾದಾಪುರದಲ್ಲಿ ಹುಣ್ಣಿಮೆದಿನ ಬೆಳಗ್ಗೆ ಧ್ವಜಾರೋಹಣ, ಅಂಕುರಾರ್ಪಣೆ, ನೂರೊಂದೆಡೆ ಸೇವೆ ನಡೆದರೆ ಮಧ್ಯಾಹ್ನ ಹಾರನಹಳ್ಳಿ ಗ್ರಾಮದಿಂದ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರನ್ನು ಮದುಮಗನಂತೆ ಶೃಂಗಾರಗೊಳಿಸಿ ಹಾರನಹಳ್ಳಿ ಪುರದಲ್ಲಿ ತಳಿರು ತೋರಣಗಳಿಂದ ಗ್ರಾಮವನ್ನು ಶೃಂಗರಿಸಿ ಶ್ರೀಯವರನ್ನು ಪಲ್ಲಕ್ಕಿ ಉತ್ಸವದಲ್ಲಿ ವಿರಾಜಮಾನರಾಗಿ ಮೂಲಸ್ಥಾನ ಯಾದಾಪುರಕ್ಕೆ ಬಿಂಜಯಂಗೈಯುತ್ತಾರೆ. ಸ್ವಾಮಿಯವರು ಹೋಗುವ ಸಂದರ್ಭದಲ್ಲಿ ಹಾರನಹಳ್ಳಿ ರಸ್ತೆಯ ಉದ್ದಕ್ಕೂ ಕರ್ಪೂರ ಸೇವೆ ಮಾಡುತ್ತಾರೆ.  ಅಣ್ಣಾಯಕನಹಳ್ಳಿ, ಕಬ್ಬೂರಹಳ್ಳಿ, ಮುರುಂಡಿ ಊರುಗಳಲ್ಲಿ  ವಿಶೇಷ ಪೂಜೆ ನೆಡೆನಂತರ ರಾತ್ರಿ ಯಾದಾಪುರದಲ್ಲಿ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಯನ್ನು ಕುಳ್ಳಿರಿಸಿ ಚಂದ್ರನ ಬೆಳಕಿನಲ್ಲಿ ಸಾಮ್ರಾಜ್ಯೋತ್ಸವ ಹುಲಿವಾಹನ ಸೂರ್ಯ ಮಂಡಲೋತ್ಸವ ಬೆಳ್ಳಿ ಪಲ್ಲಕ್ಕಿ ಉತ್ಸವ, ಬಿಲ್ವ ವೃಕ್ಷೋತ್ಸವ, ಹರಕೆ ಬಾಯಿ ಬೀಗಧಾರಣೆ, ಬೆಳಗಿನ ಜಾವ, ಚಂದ್ರ ಮಂಡಲೋತ್ಸವ, ಅಗ್ನಿಕುಂಡ ಸೇವೆ ನಡೆಯಲಿದೆ.  ಸ್ವಾಮಿಯವರ ದೇವಸ್ಥಾನದಲ್ಲಿ ಮಹಾಮಂಗಳಾರತಿ ನಡೆಮುಡಿ ಸೇವೆ, ತೇರು ಮಂಟಪದಲ್ಲಿ ಮಹಾಮಂಗಳಾರತಿ ನಂತರ 7 ರಿಂದ 8 ಗಂಟೆಗೆ ಶ್ರೀಯವರ ಮಹಾರಥೋತ್ಸವ ನಡೆಯಲಿದೆ. ನಂತರ ಶ್ರೀಯವರನ್ನು ಉಯ್ಯಾಲೆಸೇವೆ    ಜಾತ್ರೆಯಾದ ಮರುದಿನ ಜೋಳಿಗೆ ಸೇವೆ ಹಾಗೂ ಇತರೆ ಧಾರ್ಮಿಕ ಸೇವೆಗಳು ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯಲಿದೆ.
ಯಾದಾಪುರಕ್ಕೆ ಜಾತ್ರೆಯ ವಿಶೇಷವಾಗಿ ಅರಸೀಕೆರೆ ಬಸ್ ನಿಲ್ದಾಣದಿಂದ ಪ್ರತಿಹುಣ್ಣಿಮೆದಿನ ಜಾತ್ರೆಯ ಸಂಧರ್ಭದಲ್ಲಿ ರಾತ್ರಿಯಿಂದಲೇ ವಿಶೇಷ ಬಸ್ ಸೌಲಭ್ಯವಿರುತ್ತದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಶೇಷ ಪೊಲೀಸ್ ಭದ್ರತೆ ಇರುತ್ತದೆ.

ಕ್ಷೇತ್ರ ದಿಂದ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು :
ಉಚಿತ ಅನ್ನದಾಸಸೋಹ, ಈ ಕ್ಷೇತ್ರಕ್ಕೆ ದರ್ಶನಾಕಾಂಕ್ಷಿಗಳಾಗಿ ಬರುವ ಯಾತ್ರಿಕರಿಗೆ  ಪ್ರತಿ ನಿತ್ಯಉಚಿತ ದಾಸೋಹ ವ್ಯವಸ್ಥೆ ಮಾಡಿರುತ್ತಾರೆ. ಪ್ರತಿ ತಿಂಗಳ ಹುಣ್ಣಿಮೆಯಲ್ಲಿ ಸಾವಿರಾರು ಭಕ್ತರುಗಳಿಗೆ ದಾಸೋಹದ ವ್ಯವಸ್ಥೆ ಮಾಡಿಕೊಂಡು ಹೋಗುತ್ತಿದ್ದು, ನೂತನವಾಗಿ ಸ್ಟೀಮ್ ವ್ಯವಸ್ಥೆ ಮಾಡಿದು ಅರ್ಥ ಘಂಟೆಗೆ 5 ಕ್ವಿಂಟಾಲ್ ಅನ್ನ ಆಗುತ್ತದೆ. ಭಕ್ತರು ಸರತಿಸಾಲಿನಲ್ಲಿ ಬಂದು ಸ್ವಸಹಾಯವಾಗಿ ಪ್ರಸಾದವನ್ನು ಸ್ವೀಕರಿಸುತ್ತಿದ್ದು, ಸ್ವಚ್ಚವಾಗಿ ದಾಸೋಹ ಕಾರ್ಯಗಳು ನೆಡೆಯುತ್ತಿದೆ.  ಬೇರೆ ಊರುಗಳಿಂದ ಬರುವ ಭಕ್ತರಿಗೆ ಯಾತ್ರಿಕರ ನಿವಾಸದಲ್ಲಿ 80 ರೂಮಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಬೆಟ್ಟದ ಮೇಲ್ಬಾಗಕ್ಕೆ ಹೋಗುವ ಭಕ್ತರಿಗೆ ಯಾವುದೇ ತೊಂದರೆ ಆಗದಹಾಗೆ ಮೆಟ್ಟಿಲಿನಮೇಲೆ ಶೀಟು ಹಾಕಿ ನೆರಳುಮಾಡಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ ವ್ಯವಸ್ಥೆಗಳು ಕಲ್ಪಿಸಲಾಗಿದೆ.  ಜೇನುಕಲ್ ಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜಗೋಪುರ ಕಾಮಗಾರಿಗಳು ಮುಗಿಯುತ್ತಾ ಬಂದಿದೆ. ಈ ಕಾರ್ಯಕ್ಕೆ ಭಕ್ತಾಧಿಗಳು  ಹೆಚ್ಚಿನ ಧನ ಸಹಾಯ ಮಾಡಬೇಕಾಗಿದೆ.   ಭಕ್ತರ ಸಹಕಾರದಿಂದ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಮಂಡಳಿಯವರು  ಕ್ಷೇತ್ರಧ ಅಭಿವೃದ್ಧಿಗೆ ಕಂಕಣ ಬದ್ದರಾಗಿ ಶ್ರೀ ಜೇನುಕಲ್ಲು ಅಜ್ಜಯ್ಯನ ಸೇವೆಗೆ ಮಂದಾಗಿದ್ದಾರೆ.

ಜಾತ್ರೆಯ  ಸಂಧರ್ಭದಲ್ಲಿ ನೆಡೆಯುವ ಉತ್ಸವಗಳು.

ಏಪ್ರಿಲ್ 11 (ಮಂಗಳವಾರ) ರಿಂದ ಏಪ್ರಿಲ್ 13 (ಗುರುವಾರ)ದವರೆಗೆ 3 ದಿನಗಳ ಕಾಲ  ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದಿವ್ಯ ರಥೋತ್ವವದ ಅಂಗವಾಗಿ

ಏಪ್ರಿಲ್ 11 ಮಂಗಳವಾರ 
ಬೆಳಿಗ್ಗೆ 7 ರಿಂದ 8ರವರೆಗೆ ಧ್ವಜಾರೋಹಣ,
ಸಂಜೆ ಬೆಟ್ಟದ ಮೇಲೆ ಅಂಕುರಾರ್ಪಣೆ,ನೂರೂಂದೆಡೆ ಸೇವೆ
7 ರಿಂದ 8 ಬಸವೇಶ್ವರ ಉತ್ಸವ
8 ರಿಂದ 9 ಉಪ್ಪರಿಗೆ ಮಂಟಪದ ಗದ್ದುಗೆಯಲ್ಲಿ ಸಾಮ್ರಾಜ್ಯೋತ್ಸವ
9 ರಿಂದ 10 ಹುಲಿವಾಹನ ಸೂರ್ಯಮಂಡಲೋತ್ಸವ
10 ರಿಂದ 12 ರವರಗೆ ಬೆಳ್ಳಿಪಲ್ಲಕಿ ಉತ್ಸವ
12 ರಿಂದ 2 ರವರಗೆ ಬಿಲ್ವವೃಕ್ಷೋತ್ಸವ ನಂತರ ಚಂದ್ರಮಂಡಲೋತ್ಸವ ಅಗ್ನಿಕುಂಡ ಸೇವೆ ಕೆಂಚಮ್ಮದೇವಾಲಯದಲ್ಲಿ ಗುಗ್ಗುಳಸೇವೆ

ಏಪ್ರಿಲ್ 12 ಬುಧವಾರ
ಬೆಳಿಗ್ಗೆ 6 ರಿಂದ 7 ರವರಗೆ ಸ್ವಾಮಿದೇವಾಲಯದಲ್ಲಿ ಮಹಾಮಂಗಳಾರತಿ ನಡೆಮುಡಿಸೇವೆ ತೇರು ಮಂಟಪದಲ್ಲಿ ಮಂಗಳಾರತಿ ನಂತರ
7 ರಿಂದ 8 ಗಂಟೆಯೊಳಗೆ ಸಲ್ಲುವ ಶುಭ ಲಗ್ನದಲ್ಲಿ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರ “ಮಹಾರಥೋತ್ಸವ”
 ನಂತರ ಉಯ್ಯಾಲೆ ಸೇವೆ ,ಆಂದೂಳಿಕೋತ್ಸವ

ಏಪ್ರಿಲ್ 13 ಗುರುವಾರ 1 ಘಂಟೆಯಿಂದ 3 ಗಂಟೆಯವರೆಗೆ ಪಲ್ಲಕಿ ಉತ್ಸವ ಮತ್ತು ಜೋಳಿಗೆ ಸೇವೆ ಜಾತ್ರಾ ಮಹೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ಯಾದಾಪುರದಲ್ಲಿ ನಡೆಯಲಿದೆ

(ಲೇಖನ : ಚಿನ್ಮಯ್ ಹಾರನಹಳ್ಳಿ)

ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ಮೂಲ ಸನ್ನಿಧಿ

ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ಮೂಲ ಸನ್ನಿಧಿ

ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ಮೂಲ ಸನ್ನಿಧಿಯಲ್ಲಿ ಕಟ್ಟಿರುವ ಜೇನುಗೂಡುಗಳು

ಅರಸೀಕೆರೆ ತಾಲ್ಲೂಕು ಯಾದಾಪುರ ಗ್ರಾಮದ ವಿಹಂಗಮ ನೋಟ

ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಉತ್ಸವಗಳು

ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದಲ್ಲಿ ಪುರಿ-ಬೆಂಡು-ಬತ್ತಾಸುಗಳ ಅಂಗಡಿ

ಜೇನುಕಲ್ ಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜಗೋಪುರ 


Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....